ADVERTISEMENT

ಕಳೆಗಟ್ಟಿದ ಗ್ರಾಮೀಣ ದಸರಾ ಮಹೋತ್ಸವ

ಮೆರವಣಿಗೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ; ಗಮನ ಸೆಳೆದ ಕಲಾ ತಂಡಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 20:05 IST
Last Updated 17 ಅಕ್ಟೋಬರ್ 2018, 20:05 IST
ಪಿರಿಯಾಪಟ್ಟಣದಲ್ಲಿ ನಡೆದ ಮೆರವಣಿಗೆ ವೇಳೆ ಚಾಮುಂಡೇಶ್ವರಿ ದೇವಿಗೆ ಎಚ್‌.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿದರು
ಪಿರಿಯಾಪಟ್ಟಣದಲ್ಲಿ ನಡೆದ ಮೆರವಣಿಗೆ ವೇಳೆ ಚಾಮುಂಡೇಶ್ವರಿ ದೇವಿಗೆ ಎಚ್‌.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿದರು   

ಪಿರಿಯಾಪಟ್ಟಣ: ಪಟ್ಟಣದಲ್ಲಿ ನಡೆದ ಕಸಬಾ ಹೋಬಳಿಮಟ್ಟದ ಗ್ರಾಮೀಣ ದಸರಾ ಉತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಕೊಡಗಿನ ತಲಕಾವೇರಿಗೆ ಪಿರಿಯಾಪಟ್ಟಣ ಮಾರ್ಗವಾಗಿ ಹೋಗುತ್ತಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ಸವಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮೆರವಣಿಗೆಯನ್ನು ಉದ್ಘಾಟಿಸಿದರು. ಬಳಿಕ, ಕೊಡುಗು ಜಿಲ್ಲೆಯತ್ತ ಸಾಗಿದರು.

ಅಲಂಕೃತಗೊಂಡಿದ್ದ ವಾಹನ ದಲ್ಲಿ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆಯು ಎಪಿಎಂಸಿ ಆವರಣದಿಂದ ವಿವಿಧ ಕಲಾ ತಂಡ ಗಳೊಂದಿಗೆ ಸಾಗಿತು. ಬಿ.ಎಂ.ರಸ್ತೆ, ಗೋಣಿಕೊಪ್ಪ ರಸ್ತೆ ಮೂಲಕ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

ADVERTISEMENT

ಡೊಳ್ಳು ಕುಣಿತದ ಕಲಾವಿದರು ನೀಡಿದ ಪ್ರದರ್ಶನದ ವೇಳೆ ಮಹಿಳೆಯರು, ವೃದ್ಧರಾದಿಯಾಗಿ ಎಲ್ಲರೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಕಾಲೇಜು ಮೈದಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಮಹಿಳೆಯರಿಗಾಗಿ ಭಾವಗೀತೆ, ಜನಪದ ಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲ್ಲೂಕಿನ ವಿವಿಧ ಗಿರಿಜನ ಶಾಲೆಗಳ ಮಕ್ಕಳು ನೃತ್ಯ ಪ್ರದರ್ಶಿಸಿದರು. ಪಟ್ಟಣದ ಗ್ರೀನ್ ಕಿಡ್ಸ್ ನೃತ್ಯ ಶಾಲೆಯ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿ ಕುರಿತ ನೃತ್ಯರೂಪಕ ಪ್ರೇಕ್ಷಕರನ್ನು ರಂಜಿಸಿತು.

ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

‌ಶಾಸಕ ಕೆ.ಮಹದೇವ್, ತಾ.ಪಂ ಅಧ್ಯಕ್ಷೆ ಕೆ.ಆರ್.ನಿರೂಪಾ, ತಹಶೀಲ್ದಾರ್ ಸೂರಜ್‌ಕುಮಾರ್, ಜಿ.ಪಂ ಸದಸ್ಯರಾದ ವಿ.ರಾಜೇಂದ್ರ, ಕೆ.ಸಿ.ಜಯಕುಮಾರ್, ಕೆ.ಎಸ್.ಮಂಜುನಾಥ್, ಎಪಿಎಂಸಿ ಅಧ್ಯಕ್ಷ ರಾಜಯ್ಯ, ತಾ.ಪಂ ಸದಸ್ಯರಾದ ಎಸ್.ರಾಮು, ಟಿ.ಈರಯ್ಯ, ಎ.ಟಿ.ರಂಗಸ್ವಾಮಿ, ಮಲ್ಲಿಕಾರ್ಜುನ, ತಾ.ಪಂ ಇಒ ಡಿ.ಸಿ.ಶ್ರುತಿ, ಮೈಮುಲ್‌ ನಿರ್ದೇಶಕ ಪಿ.ಎಂ.ಪ್ರಸನ್ನ, ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಪುರಸಭೆ ಸದಸ್ಯರಾದ ವಿನೋದ್, ಪಿ.ಸಿ.ಕೃಷ್ಣ, ಮಹೇಶ್, ಮಂಜುನಾಥ್ ಸಿಂಗ್ ಹಾಜರಿದ್ದರು.

ಜೆಡಿಎಸ್‌ ಕಾರ್ಯಕರ್ತರಿಗೆ ನಿರಾಸೆ:ಎಚ್.ಡಿ.ಕುಮಾರಸ್ವಾಮಿ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಪಾಲ್ಗೊಂಡರು.

ಆದರೆ, ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಹೊರಟೇ ಬಿಟ್ಟರು. ವೇದಿಕೆ ಕಾರ್ಯಕ್ರಮದಲ್ಲಿ ಅವರ ಭಾಷಣ ಕೇಳಲು ಬಂದಿದ್ದ ಜೆಡಿಎಸ್‌ ಕಾರ್ಯಕರ್ತರಿಗೆ ನಿರಾಸೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.