ADVERTISEMENT

ಶತಮಾನದ ಹೊಸ್ತಿಲಲ್ಲಿ ಗೊಂಬೆ ಪ್ರದರ್ಶನ!

ಹಳೆಯ ಪರಂಪರೆಯನ್ನು ಜೀವಂತವಿರಿಸಿಕೊಂಡು ಬಂದ ‘ಕುಲಕರ್ಣಿ’ ಮನೆತನ

ಗಣಪತಿ ಹೆಗಡೆ
Published 8 ಅಕ್ಟೋಬರ್ 2024, 5:33 IST
Last Updated 8 ಅಕ್ಟೋಬರ್ 2024, 5:33 IST
ಕಾರವಾರದ ಶಾಂತಾರಾಮ ಕುಲಕರ್ಣಿ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ಶಾಂತಾದುರ್ಗಾ ದೇವಿಗೆ ವಿಶೇಷ ಅಲಂಕಾರ ಮಾಡಿದ ಮಂಟಪದ ಸುತ್ತಮುತ್ತ ಗೊಂಬೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ
ಕಾರವಾರದ ಶಾಂತಾರಾಮ ಕುಲಕರ್ಣಿ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ಶಾಂತಾದುರ್ಗಾ ದೇವಿಗೆ ವಿಶೇಷ ಅಲಂಕಾರ ಮಾಡಿದ ಮಂಟಪದ ಸುತ್ತಮುತ್ತ ಗೊಂಬೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ   

ಕಾರವಾರ: ದಸರಾ ಗೊಂಬೆ ಪ್ರದರ್ಶನ ದಕ್ಷಿಣ ಕರ್ನಾಟಕದ ಮೈಸೂರು ಭಾಗದಲ್ಲಿ ಹೆಚ್ಚು ಪ್ರಸಿದ್ಧಿ. ಆದರೆ, ನಗರದಲ್ಲಿ ಕಳೆದ 99 ವರ್ಷಗಳಿಂದಲೂ ನಿರಂತರವಾಗಿ ನವರಾತ್ರಿ ವೇಳೆ ಗೊಂಬೆಗಳ ಮೂಲಕ ದೇವಿ, ದೇವರ ಅವತಾರಗಳ ಕಥೆಗಳನ್ನು ಸಾರುವ ವಿಶೇಷ ಆಚರಣೆಯನ್ನು ಕುಟುಂಬವೊಂದು ಮುನ್ನಡೆಸುತ್ತ ಬಂದಿದೆ.

ಇಲ್ಲಿನ ಪಿಕಳೆ ರಸ್ತೆಯಲ್ಲಿರುವ ಶಾಂತಾರಾಮ ಸದಾನಂದ ಕುಲಕರ್ಣಿ ಅವರ ಮನೆಯಲ್ಲಿ ಅದ್ದೂರಿ ನವರಾತ್ರಿ ಉತ್ಸವ ಆಚರಿಸಲಾಗುತ್ತದೆ. ಉತ್ಸವದಲ್ಲಿ ಗೊಂಬೆಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. 1920ರ ದಶಕದ ಗೊಂಬೆಗಳನ್ನು ಕುಟುಂಬ ಈವರೆಗೂ ಜೋಪನವಾಗಿಟ್ಟುಕೊಂಡು ಬಂದಿರುವುದು ಇನ್ನೊಂದು ವಿಶೇಷ.

ನಿವೃತ್ತ ಶಿಕ್ಷಕರಾಗಿರುವ ಶಾಂತಾರಾಮ ಅವರ ಕುಟುಂಬ ಗೋವಾದಲ್ಲಿ ನೆಲೆಸಿದೆ. ಆಗಾಗ ಕಾರವಾರದಲ್ಲಿರುವ ತಮ್ಮ ಮೂಲಮನೆಗೆ ಭೇಟಿ ನೀಡುತ್ತಿರುತ್ತಾರೆ. ವರ್ಷದಲ್ಲಿ ಎರಡು ಅವಧಿಯಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ದೇವಿಯ ವಿವಿಧ ಅವತಾರಗಳು ವಿಷ್ಣುವಿನ ವಿವಿಧ ಅವತಾರಗಳು, ಕೃಷ್ಣ, ರಾಮ, ಪರಶುರಾಮ, ಬುದ್ಧ, ಕಲ್ಕಿ ಸೇರಿದಂತೆ ಹಲವು ಗೊಂಬೆಗಳಿವೆ. ಇದಲ್ಲದೆ ಪ್ರಾಣಿಗಳ ಗೊಂಬೆಗಳೂ ಇಲ್ಲಿವೆ.

ADVERTISEMENT

‘ನನ್ನ ತಾತ ಶಾಂತಾರಾಮ ಮಂಗೇಶ ಕುಲಕರ್ಣಿ 1925ರಲ್ಲಿ ನವರಾತ್ರಿ ಉತ್ಸವಕ್ಕೆ ಗೊಂಬೆ ಪ್ರದರ್ಶನಕ್ಕೆ ಇಡುವ ಸಂಪ್ರದಾಯ ಆರಂಭಿಸಿದ್ದರು. ಅಂದಿನಿಂದ ಒಂದು ವರ್ಷವೂ ತಪ್ಪದೆ ಪ್ರದರ್ಶನ ನಡೆಸುತ್ತಿದ್ದೇವೆ. ಹಬ್ಬದ ಆಚರಣೆಯ ಧಾರ್ಮಿಕ ಸಂಪ್ರದಾಯದ ಭಾಗವಾಗಿ ಇದು ಇಂದಿಗೂ ಮುಂದುವರೆದಿದೆ’ ಎನ್ನುತ್ತಾರೆ ನಿವೃತ್ತ ಶಿಕ್ಷಕ ಶಾಂತಾರಾಮ ಕುಲಕರ್ಣಿ.

‘ಪ್ರತಿಷ್ಠಿತ ಎನ್‍ಕೆಜಿಎಸ್‍ಬಿ ಬ್ಯಾಂಕ್‍ನ ಸಂಸ್ಥಾಪಕರಾಗಿದ್ದ ತಾತ ಶಾಂತಾರಾಮ ಅವರಿಗೆ ಕಾರವಾರದಲ್ಲಷ್ಟೆ ಅಲ್ಲದೆ ಗೋವಾ, ಮಹಾರಾಷ್ಟ್ರ ಭಾಗದಲ್ಲಿಯೂ ಜನರ ಪರಿಚಯ ಹೆಚ್ಚಿತ್ತು. ಆ ಕಾಲದಲ್ಲಿ ನವರಾತ್ರಿ ಹಬ್ಬದ ವೇಳೆ ಗೊಂಬೆಗಳ ಪ್ರದರ್ಶನ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಮನೆಗೆ ಬರುತ್ತಿದ್ದರು. ಆಗ ಇಡುತ್ತಿದ್ದ ಗೊಂಬೆಗಳನ್ನೇ ಈವರೆಗೂ ಜೋಪಾನವಾಗಿಟ್ಟುಕೊಂಡು ಬರಲಾಗಿದೆ’ ಎಂದು ವಿವರಿಸಿದರು.

‘ನವರಾತ್ರಿಯ ಹೊರತಾಗಿ ಗೋವಾದ ಕವಳಾದಲ್ಲಿನ ಶಾಂತಾದುರ್ಗಾ ದೇವಿ ಜಾತ್ರೆ ನಡೆಯುವ ಮಾಘ ಮಾಸದ ಪಾಡ್ಯದಿಂದ ಪಂಚಮಿವೆಗೆ ಐದು ದಿನಗಳ ಕಾಲವೂ ಮನೆಯಲ್ಲಿ ಗೊಂಬೆ ಪ್ರದರ್ಶನ ಏರ್ಪಡಿಸುತ್ತೇವೆ. ನವರಾತ್ರಿ ವೇಳೆ ಹಿಂದೆಲ್ಲ ಕಾರವಾರದಲ್ಲಿ ದಾಂಡಿಯಾ, ಸಾಮೂಹಿಕ ಆಚರಣೆ ಇರಲಿಲ್ಲ. ಆಗ ನಮ್ಮ ಮನೆಗೆ ನೂರಾರು ಜನರು ಬಂದು ಉತ್ಸವದಲ್ಲಿ ಭಾಗಿಯಾಗುತ್ತಿದ್ದರು. ವೀಕ್ಷಣೆಗೆ ಬರುವವರ ಸಂಖ್ಯೆ ಈಗ ಇಳಿಕೆಯಾಗಿದೆ’ ಎಂದರು.

99 ವರ್ಷಗಳಷ್ಟು ಹಳೆಯದಾಗಿರುವ ದೇವರ ವಿಶೇಷ ಅವತಾರಗಳ ಗೊಂಬೆಗಳು ಪ್ರದರ್ಶನದಲ್ಲಿ ಗಮನಸೆಳೆಯುತ್ತಿವೆ
ಶಾಂತಾರಾಮ ಕುಲಕರ್ಣಿ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ದುರ್ಗೆಯ ವಿವಿಧ ಅವತಾರಗಳ ಗೊಂಬೆಗಳನ್ನು ಪೂಜಿಸಲಾಗುತ್ತಿದೆ

1925ರಿಂದ ಗೊಂಬೆ ಪ್ರದರ್ಶನ ಆರಂಭ ಗೋವಾ, ಮಹಾರಾಷ್ಟ್ರದಿಂದಲೂ ವೀಕ್ಷಣೆಗೆ ಬರುತ್ತಿದ್ದ ಜನ 99 ವರ್ಷದಷ್ಟು ಹಳೆಯ ಗೊಂಬೆಗಳ ಜೋಪಾನ

ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟು ನವರಾತ್ರಿ ಆಚರಿಸುವ ಪರಂಪರೆಗೆ ಮುಂದಿನ ವರ್ಷ 100 ವರ್ಷ ಪೂರೈಸಲಿದೆ. ಹಳೆಯ ಪರಂಪರೆ ಮುಂದುವರೆಸಿಕೊಂಡು ಬಂದಿರುವ ಸಾರ್ಥಕತೆ ತೃಪ್ತಿ ಕೊಡುತ್ತಿದೆ
ಶಾಂತಾರಾಮ ಸದಾನಂದ ಕುಲಕರ್ಣಿ ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.