ADVERTISEMENT

ಮೈಸೂರು ದಸರಾ | ಅರಮನೆ ಸೊಬಗಿಗೆ ರಾಗಾಲಾಪದ ‘ರಂಗು’

ಅ.3ರಿಂದ 10ರವರೆಗೆ ವೈವಿಧ್ಯಮಯ ಕಾರ್ಯಕ್ರಮ, ಖ್ಯಾತನಾಮರೂ ಭಾಗಿ

ಎಂ.ಮಹೇಶ
Published 29 ಸೆಪ್ಟೆಂಬರ್ 2024, 6:31 IST
Last Updated 29 ಸೆಪ್ಟೆಂಬರ್ 2024, 6:31 IST
ಮಂಗ್ಲಿ
ಮಂಗ್ಲಿ   

ಮೈಸೂರು: ಖ್ಯಾತ ಗಾಯಕಿ ಮಂಗ್ಲಿ ಮತ್ತು ತಂಡದಿಂದ ಭಾರತೀಯ ಜಾನಪದ ಭಜನೆಗಳ ರಸಾಯನ. ವೈ.ಕೆ. ಮುದ್ದುಕೃಷ್ಣ ಸಾರಥ್ಯದಲ್ಲಿ ಸುಗಮ ಸಂಗೀತದ ಇಂಪು. ಅನುರಾಧಾ ಭಟ್–ಸುಚೇತನ್‌ ರಂಗಸ್ವಾಮಿ ತಂಡದಿಂದ ಭಕ್ತಿ–ಭಾವ ಗಾನ ಸುಧೆ. ಖ್ಯಾತರಾದ ಪಂಡಿತ್ ನರಸಿಂಹಲ ವಡವಾಟಿ–ವಿದ್ವಾನ್ ಕದ್ರಿ ರಮೇಶ್‌ನಾಥ್ ಜೋಡಿಯ ಕ್ಲಾರಿಯೋನೆಟ್– ಸ್ಯಾಕ್ಸೋಫೋನ್, ಉಸ್ತಾದ್ ಫಯಾಜ್‌ ಖಾನ್– ಉಸ್ತಾದ್ ಶಫೀಕ್ ಖಾನ್ ಹಿಂದೂಸ್ತಾನಿ ಗಾಯನ– ಸಿತಾರ್ ಜುಗಲ್‌ಬಂದಿ. ಸಂಗೀತಾ ಕಟ್ಟಿಯ ಗೀತಗಾಯನ ಮೋಡಿ.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅ.3ರಿಂದ 10ರವರೆಗೆ ನಿತ್ಯ ಸಂಜೆ ಇಲ್ಲಿನ ಅಂಬಾವಿಲಾಸ ಅರಮನೆಯ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷಗಳಿವು. ಅ.3ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.

ದಸರಾ ನಗರಿಯ ಸಂಜೆಯನ್ನು ಸಂಗೀತಮವಾಗಿಸಲು ಸಾಂಸ್ಕೃತಿಕ ಉಪ ಸಮಿತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಸಂಗೀತಪ್ರಿಯರನ್ನು ರಂಜಿಸಲು ಮಂಗಳವಾದ್ಯ, ನಾದಸ್ವರ, ತತ್ವಪದ ಗಾಯನ, ಸುಗಮ ಸಂಗೀತ, ಭಜನೆ, ವಿವಿಧ ನೃತ್ಯ, ರಂಗಗೀತೆಗಳ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ADVERTISEMENT

ಖ್ಯಾತನಾಮರನ್ನೂ ಆಹ್ವಾನಿಸಲಾಗಿದೆ. ಕತ್ತಲಾಗುತ್ತಿದ್ದಂತೆ, ರಾಗಾಲಾಪದ ‘ಬೆಳಕು’ ಅರಮನೆ ಆವರಣವನ್ನು  ಆವರಿಸಲಿದೆ. ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುವ ಅಂಬಾವಿಲಾಸ ಅರಮನೆಯ ಮೆರುಗಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗು ತುಂಬಲಿವೆ.

ಉತ್ಸವದಲ್ಲಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ಪ್ರಮುಖವಾದುದು ಅರಮನೆಯ ಆವರಣದ ವೇದಿಕೆ. 51 ಹೆಚ್ಚಿನ ಕಾರ್ಯಕ್ರಮಗಳಿಗೆ ಸಮಯ ನಿಗದಿಪಡಿಸಲಾಗಿದೆ. ಈ ಮೂಲಕ ವಿವಿಧ ಪ್ರದೇಶದ ನೃತ್ಯ ಹಾಗೂ ಗಾಯನ ಸಂಸ್ಕೃತಿಯನ್ನು ಪ್ರಸ್ತುತಪಡಿಸಲು ಯೋಜಿಸಲಾಗಿದೆ. ಸದಭಿರುಚಿಯ ಪ್ರೇಕ್ಷಕರ ಮನತಣಿಸಲು ಉದ್ದೇಶಿಸಲಾಗಿದೆ. ಎಲ್ಲ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಪ್ರಯತ್ನಿಸಲಾಗಿದೆ.

ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯೊಂದಿಗೆ ಬಂದಿರುವ ಮಾವುತರು ಹಾಗೂ ಕಾವಾಡಿಗಳ  ಮಕ್ಕಳು ಅ.9ರಂದು ‘ನೃತ್ಯನವ್ವಾಲೆ’ ಎಂಬ ಕಾರ್ಯಕ್ರಮ ನೀಡಲಿರುವುದು ಈ ಬಾರಿಯ ವಿಶೇಷ. ಬುಡಕಟ್ಟು ವೈಶಿಷ್ಟ್ಯದ ನೃತ್ಯವನ್ನು ನಗರವಾಸಿಗಳಿಗೆ ಪರಿಚಯಿಸುವುದಕ್ಕಾಗಿ ಅವರು ಅಭ್ಯಾಸ ನಡೆಸುತ್ತಿದ್ದಾರೆ.

ಕಾವಾಡಿಗಳು ಹಾಗೂ ಮಾವುತರ ಮಕ್ಕಳ ನೃತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.