ADVERTISEMENT

ಮೈಸೂರು ದಸರಾ: ಡ್ರೋನ್‌ ಶೋಗೆ 2ನೇ ದಿನವೂ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 16:49 IST
Last Updated 7 ಅಕ್ಟೋಬರ್ 2024, 16:49 IST
<div class="paragraphs"><p>ಮೈಸೂರಿನ ಬಾನಂಗಳದಲ್ಲಿ ಡ್ರೋನ್‌ ಮೂಡಿಸಿದ ಸೌರ ಮಂಡಲ</p></div>

ಮೈಸೂರಿನ ಬಾನಂಗಳದಲ್ಲಿ ಡ್ರೋನ್‌ ಮೂಡಿಸಿದ ಸೌರ ಮಂಡಲ

   

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ವತಿಯಿಂದ ಆಯೋಜಿಸಿದ್ದ ಡ್ರೋನ್‌ ಪ್ರದರ್ಶನವು 2ನೇ ದಿನವಾದ ಸೋಮವಾರವೂ ನೋಡುಗರನ್ನು ವಿಸ್ಮಯಗೊಳಿತು.

ಸೆಸ್ಕ್‌ನಿಂದ ರಾಜ್ಯದಲ್ಲೇ ಹಾಗೂ ಮೈಸೂರು ದಸರೆಯಲ್ಲಿ ಮೊದಲ ಬಾರಿಗೆ ನಡೆದ ಅತಿದೊಡ್ಡ ಡ್ರೋನ್ ಪ್ರದರ್ಶನ ಜನರನ್ನು ರಂಜಿಸಿತು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ರಾತ್ರಿ ನಡೆದ ಪ್ರದರ್ಶನದಲ್ಲಿ 1,500 ಡ್ರೋನ್‌ಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ADVERTISEMENT

ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮದ ಲಾಂಛನ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸಲಾಯಿತು.

ವಿಜಯ್‌ ಪ್ರಕಾಶ್‌ ಗಾಯನ ಮೋಡಿ

ಡ್ರೋನ್‌ ಪ್ರದರ್ಶನದ ಅಂಗವಾಗಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನತಣಿಸಿತು. ಖ್ಯಾತ ಹಿನ್ನೆಲೆ ಗಾಯನ ವಿಜಯ ಪ್ರಕಾಶ್ ಸಂಗೀತ ಸುಧೆ ಹರಿಸಿದರು.

‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’, ‘ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು’ ಮೊದಲಾದ ಗೀತೆಗಳನ್ನು ಹಾಡಿ ರಂಜಿಸಿದರು. ಅವರು ದಿವಂಗತ ಪುನೀತ್‌ ರಾಜಕುಮಾರ್‌ ಅವರ ‘ಗೊಂಬೆ ಹೇಳುತೈತೆ’ ಹಾಡುವಾಗ ನೆರೆದಿದ್ದವರು ತಲೆದೂಗಿದರು.

ಶಾಸಕ ಡಿ. ರವಿಶಂಕರ್‌, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ‌ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.