ಮೈಸೂರು: ಭೂಮಿ ನಡುಗುವಂತೆ ಏಳು ಫಿರಂಗಿಗಳಲ್ಲಿ ಸಿಡಿದ ‘ಕುಶಾಲತೋಪಿ’ಗೆ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ‘ಗಜಪಡೆ’ ಕದಲದೆ ಧೈರ್ಯ ಪ್ರದರ್ಶಿಸಿದತು. ಅದನ್ನು ಕಂಡ ಆನೆಪ್ರಿಯರಲ್ಲಿ ಸಂತಸ ಮೂಡಿತ್ತು.
ದಸರಾ ವಸ್ತುಪ್ರದರ್ಶನದ ವಾಹನ ನಿಲ್ದಾಣದ ಅಂಗಳದಲ್ಲಿ ಗುರುವಾರ ಬೆಳಿಗ್ಗೆ 11.30ಕ್ಕೆ ನಡೆದ ಕುಶಾಲತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು.
ಅನುಭವಿಗಳಾದ ‘ಅಭಿಮನ್ಯು’, ‘ಮಹೇಂದ್ರ’, ‘ಪ್ರಶಾಂತ’, ‘ಭೀಮ’, ‘ಧನಂಜಯ’ ಹಾಗೂ ‘ಗೋಪಿ’ ಆನೆಗಳು ‘ಏನೂ ಆಗೇ ಇಲ್ಲವೆಂಬಂತೆ’ ಧ್ಯಾನಸ್ಥ ಸ್ಥಿತಿಯಲ್ಲಿದ್ದವು. ಅಕ್ಕಪಕ್ಕ ನಿಂತಿದ್ದ ಕುಮ್ಕಿ ಹಾಗೂ ಕಿರಿಯ ಆನೆಗಳು ಅವುಗಳನ್ನು ತಾಗಿ ನಿಂತು ಧೈರ್ಯ ತಂದುಕೊಂಡವು.
ಕಿರಿಯ ಆನೆ ‘ರೋಹಿತ್’ ಎಂದಿನಂತೆ ಹಿಂದೆ ತಿರುಗಿದ. ಅವನನ್ನು ಮಾವುತ ಸೈಯದ್ ಉಸ್ಮಾನ್, ಕಾವಾಡಿ ಮಾದು ತಹಬದಿಗೆ ತಂದರು. ದೊಡ್ಡಹರವೆ ಲಕ್ಷ್ಮಿಯೂ ಸ್ವಲ್ಪ ಬೆಚ್ಚಿದಳು.
ಹಿರಿಯ ಆನೆಗಳೊಂದಿಗೆ ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ‘ಏಕಲವ್ಯ’ನೂ ಒಂದು ಹೆಜ್ಜೆ ಹಿಂದಿಡಿಯಿಡದೇ ‘ಅಭಿಮನ್ಯು’ ಜೊತೆ ಗಂಭೀರವಾಗಿ ನಿಂತು ‘ಭವಿಷ್ಯದ ಭರವಸೆಯ ಅಂಬಾರಿ ಆನೆಗಳಲ್ಲಿ ನಾನೂ ಕೂಡ ಒಬ್ಬ’ ಎಂಬುದನ್ನು ಸಾಬೀತುಗೊಳಿಸಿದ!
ನಾಲ್ಕು ದಸರೆ ಕಂಡಿರುವ ‘ಭೀಮ’ನು ಗಜಪಡೆಯ ಬಲ ತುದಿಯಲ್ಲಿ ನಿಂತು ಮಾಸ್ಟರ್ ‘ಅರ್ಜುನ’ನನ್ನು ನೆನಪಿಸಿದ. ಅವನನ್ನು ತಾಗಿಕೊಂಡೆ ನಿಂತ ಈ ಬಾರಿಯ ಪಟ್ಟದಾನೆ ‘ಕಂಜನ್’ಗೆ ಧೈರ್ಯ ತುಂಬಿದ. ಪ್ರಶಾಂತ, ಸುಗ್ರೀವರ ಮಧ್ಯೆ ನಿಂತಿದ್ದ ‘ಹಿರಣ್ಯ’ ಸೊಂಡಿಲೆತ್ತಿ ನಮಿಸುತ್ತಿದ್ದಳು.
ಮೊದಲ ಸುತ್ತಿನ ಕುಶಾಲ ತೋಪಿನಲ್ಲಿ ಬೆಚ್ಚಿದ ಸುಗ್ರೀವ ‘ಗೋಪಿ’ಯನ್ನು ಒತ್ತರಿಸಿಕೊಂಡು ನಿಂತನು. ‘ಮಹೇಂದ್ರ’ ಎಂದಿನಂತೆ ಗಾಂಭಿರ್ಯತೆ ಪ್ರದರ್ಶಿಸಿದನು. ಹುಲಿ ಕಾರ್ಯಾಚರಣೆಯಲ್ಲಿ ಧೈರ್ಯ ತೋರುವ ‘ಧನಂಜಯ’ ಸಿಡಿಮದ್ದಿಗೆ ಸಾಮಾನ್ಯ ಇಷ್ಟು ವರ್ಷದ ದಸರೆಯಲ್ಲಿ ಹೆದರುತ್ತಿದ್ದ. ಇದೇ ಮೊದಲ ಬಾರಿ ತಟಸ್ಥನಾಗಿ ನಿಂತಿದ್ದು, ಆಶ್ಚರ್ಯ ಮೂಡಿಸಿತು.
ಅಭ್ಯಾಸವೇಕೆ:
ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋಪು ಸಿಡಿಸುವಾಗ ಹೊಮ್ಮುವ ಕಿವಿಗಡಚಿಕ್ಕುವ ಶಬ್ದಕ್ಕೆ ಕುದುರೆ, ಆನೆಗಳು ಬೆಚ್ಚದಂತೆ ಮಾಡಲು, ಪೂರ್ವಭ್ಯಾಸ ನೀಡುವುದು ವಾಡಿಕೆ. ಪಂಜಿನ ಕವಾಯತು ನಡೆವಾಗಲೂ ಕುಶಾಲ ತೋಪು ಸಿಡಿಸಲಾಗುತ್ತದೆ. ಅದರಂತೆ ಸಿಡಿಮದ್ದು ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಗಿತ್ತು.
ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವಾರೋಹಿ ದಳದ 35 ಕುದುರೆಗಳು ತಾಲೀಮಿನ ಅಂಗಳದತ್ತ ಹೆಜ್ಜೆ ಹಾಕಿದವು. ಎಲ್ಲ ಆನೆಗಳನ್ನು ಒಂದೇ ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಈ ಮೊದಲು ಬೆಚ್ಚುವ ಆನೆಗಳನ್ನು ಎರಡನೇ ಸಾಲಿನಲ್ಲಿ ನಿಲ್ಲಿಸಲಾಗುತ್ತಿತ್ತು.
ಮೊದಲ ಸುತ್ತಿನ ಸಿಡಿಮದ್ದು ಸ್ಪೋಟಗೊಳ್ಳುತ್ತಿದ್ದಂತೆ ಸ್ವಲ್ಪ ಬೆದರಿದ ಈ ಆನೆಗಳು ಹಿಂದೆ– ಮುಂದೆ ಚಲಿಸಿವು. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಫಿರಂಗಿಯ ನಳಿಕೆಯಿಂದ ಹೊರಹೊಮ್ಮುತ್ತಿದ್ದ ಬೃಹತ್ ಬೆಂಕಿಯುಂಡೆಗಳು, ಅವುಗಳ ಜೊತೆಗೆ ಆವರಿಸುತ್ತಿದ್ದ ದಟ್ಟ ಹೊಗೆಯನ್ನು, ಅಂಬಾರಿ ಹೊರುವ ಅಭಿಮನ್ಯು, ಮಹೇಂದ್ರ ತದೇಕದೃಷ್ಟಿಯಿಂದ ದಿಟ್ಟಿಸುತ್ತಾ ಸೊಂಡಿಲೆತ್ತಿದ್ದು ವಿಶೇಷವಾಗಿತ್ತು. ಆನೆ– ಕುದುರೆಗಳನ್ನು ಪ್ರವಾಸಿಗರು, ನಾಗರಿಕರು ಕಣ್ತುಂಬಿಕೊಂಡರು.
30 ಮಂದಿ ಸಿಎಆರ್ ಪೊಲೀಸರು ಸಿಡಿಮದ್ದು ಸಿಡಿಸುವಲ್ಲಿ ನಿರತರಾಗಿದ್ದರು. ಮೂರನೇ ಸುತ್ತಿನ ಕುಶಾಲತೋಪು ಸಿಡಿಯುತ್ತಿದ್ದಾಗ ಫಿರಂಗಿ ಬಳಿಗೆ ಸಾಗಿ ನಾವು ಯಾವುದಕ್ಕೂ ಹೆದರುವುದಿಲ್ಲವೆಂದು ಎಲ್ಲ ಆನೆಗಳು ಸಾಬೀತು ಮಾಡಿದವು.
ಡಿಸಿಎಫ್‌ಗಳಾದ ಐ.ಬಿ.ಪ್ರಭುಗೌಡ, ಕೆ.ಎನ್.ಬಸವರಾಜ್, ಡಿಸಿಪಿ ಎಂ.ಮುತ್ತುರಾಜ್, ಆರ್‌ಎಫ್‌ಒ ಸಂತೋಷ್ ಹೂಗಾರ್, ವೈದ್ಯ ಮುಜೀಬ್ ರೆಹಮಾನ್ ಹಾಜರಿದ್ದರು.
‘ಶ್ರೀರಂಗಪಟ್ಟಣ ದಸರೆಗೆ ಮಹೇಂದ್ರ’
ಮೈಸೂರು: ‘ಗಜಪಡೆ ಅನುಭವಿ ಆನೆ ‘ಮಹೇಂದ್ರ’, ಶ್ರೀರಂಗಪಟ್ಟಣ ದಸರೆಗೆ ಆಯ್ಕೆಯಾಗಿದ್ದು, ಅವನೊಂದಿಗೆ ಕುಮ್ಕಿ ಆನೆಗಳಾಗಿ ‘ಹಿರಣ್ಯ’, ‘ಲಕ್ಷ್ಮಿ’ ಹೆಜ್ಜೆ ಹಾಕಲಿವೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ತಿಳಿಸಿದರು.
ನಗರದಲ್ಲಿ ಕುಶಾಲತೋಪು ತಾಲೀಮು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೂರು ಆನೆಗಳ ಹೆಸರನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದ್ದು, ಸಿಸಿಎಫ್ ಸಹಿ ಹಾಕಲಿದ್ದಾರೆ. ಮಹೇಂದ್ರ ಆನೆಯೂ ಕಳೆದ ಬಾರಿ ಶ್ರೀರಂಗಪಟ್ಟಣ ದಸರೆಯ ಅಂಬಾರಿ ಹೊತ್ತಿತ್ತು’ ಎಂದು ಹೇಳಿದರು.
‘ಎಲ್ಲ ಆನೆಗಳೂ ಕುಶಾಲತೋಪು ತಾಲೀಮಿನಲ್ಲಿ ಪಾಲ್ಗೊಂಡು ಧೈರ್ಯ ಪ್ರದರ್ಶಿಸಿವೆ. ಇದೇ ಮೊದಲ ಬಾರಿ ಬಂದಿರುವ, ಕಾಡಿನಲ್ಲಿ ಸೆರೆಸಿಕ್ಕ ಕೇವಲ ಒಂದೂವರೆ ವರ್ಷದೊಳಗೆ ಪಳಗಿರುವ ‘ಏಕಲವ್ಯ’ ಭರವಸೆ ಮೂಡಿಸಿದ್ದಾನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.