ADVERTISEMENT

ಮೈಸೂರು | ದಸರಾ ‘ಗೋಲ್ಡ್‌ಕಾರ್ಡ್‌’ಗೆ ದಾಖಲೆ ಬೇಡಿಕೆ, ಬೆಲೆಯೂ ಹೆಚ್ಚು

ಎಂ.ಮಹೇಶ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ಮೈಸೂರು ದಸರಾ ಗೋಲ್ಡ್‌ಕಾರ್ಡ್‌ ಮಾದರಿ</p></div>

ಮೈಸೂರು ದಸರಾ ಗೋಲ್ಡ್‌ಕಾರ್ಡ್‌ ಮಾದರಿ

   

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯ ದಶಮಿ ಮೆರವಣಿಗೆ (ಜಂಬೂಸವಾರಿ) ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ನೇರ ಪ್ರವೇಶ ಪಡೆಯಬಹುದಾದ ಗೋಲ್ಡ್‌ಕಾರ್ಡ್‌ಗಳು ಇದೇ ಮೊದಲಿಗೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಜಿಲ್ಲಾಡಳಿತಕ್ಕೆ
ಬುಧವಾರದವರೆಗೆ ₹2 ಕೋಟಿಗೂ ಮೀರಿ ವರಮಾನ ಬಂದಿದೆ.

ಅಕ್ಟೋಬರ್ 12ರಂದು ವಿಜಯ ದಶಮಿ ಮೆರವಣಿಗೆ ನಡೆಯಲಿದ್ದು, ಅಂಬಾವಿಲಾಸ ಅರಮನೆ ಆವರಣದಲ್ಲಿ ವಿಶೇಷ ಆಸನಗಳಲ್ಲಿ ಕುಳಿತು ವೀಕ್ಷಿಸಲು ಬಯಸುವವರಿಗೆಂದು ‘ಗೋಲ್ಡ್‌ಕಾರ್ಡ್‌’ ಮಾರಾಟ ನಡೆದಿದೆ. ಅಂದು ಸಂಜೆ 6ರಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜನೆ ಗೊಂಡಿರುವ ‘ಪಂಜಿನ ಕವಾಯತು’ ಪ್ರದರ್ಶನದ ಟಿಕೆಟ್‌ಗಳು ಸಂಪೂರ್ಣ ಬಿಕರಿಯಾಗಿವೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌)ದಿಂದ ಬರೋಬ್ಬರಿ 1,500 ಡ್ರೋನ್‌ಗಳನ್ನು ಬಳಸಿ ರಾಜ್ಯದಲ್ಲಿ ಹಾಗೂ ದಸರಾದಲ್ಲಿ ಮೊದಲ ಬಾರಿಗೆ ‘ಡ್ರೋನ್‌ ಶೋ’ ನಡೆಸುತ್ತಿರುವುದು ಈ ಬಾರಿಯ ಮತ್ತೊಂದು ಆಕರ್ಷಣೆ. ಜಿಲ್ಲಾಡಳಿತದ ಗುರಿಯಂತೆ ಎಲ್ಲ ಗೋಲ್ಡ್‌ಕಾರ್ಡ್‌ (3,500) ಮಾರಾಟದಿಂದ ₹ 2.27 ಕೋಟಿ
ಸಂಗ್ರಹವಾಗಲಿದ್ದು, ದಾಖಲೆಯ ವರಮಾನವಾಗಲಿದೆ.

ADVERTISEMENT

ಬೆಲೆ ಹೆಚ್ಚಾದರೂ..: ಗೋಲ್ಡ್‌ ಕಾರ್ಡ್‌ಗೆ ₹ 6,500 ದರ ನಿಗದಿಪಡಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ₹ 500 ಹೆಚ್ಚಿಸಲಾಗಿದೆ. ಕಾರ್ಡ್‌ ಉಳ್ಳ ಒಬ್ಬರಿಗೆ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಚಾಮರಾಜೇಂದ್ರ ಮೃಗಾಲಯ ಹಾಗೂ ಅರಮನೆಗೆ ಉಚಿತ ಪ್ರವೇಶವಿದೆ.

ಪಂಜಿನ ಕವಾಯತಿನ ಸಾಮಾನ್ಯ ಟಿಕೆಟ್‌ಗೆ ₹1,000 ನಿಗದಿಪಡಿಸಿದ್ದು, ಒಬ್ಬರಿಗೆ ಪ್ರವೇಶವಿದೆ. ಆರಮನೆ ಆವರಣದೊಳಗೆ ಜಂಬೂ ಸವಾರಿ ವೀಕ್ಷಣೆಗೆ ಅವಕಾಶ ಕಲ್ಪಿಸುವ ಮತ್ತೊಂದು ಪ್ರಕಾರದ ಟಿಕೆಟ್‌ಗೆ ₹3,500 ನಿಗದಿ‍ಪಡಿಸಲಾಗಿದೆ. ಅವು ಗಳಲ್ಲಿ ತಲಾ 200 ಟಿಕೆಟ್‌ಗಳಷ್ಟೇ ಉಳಿದಿವೆ. ಅವುಗಳನ್ನು ಖರೀದಿಸಲು ಬಯಸುವವರು ಜಿಲ್ಲಾಡಳಿತದ ಅಧಿಕೃತ ಜಾಲತಾಣ https://www.mysoredasara.gov.in/tickets ಸಂಪರ್ಕಿಸಬಹುದು.

ಉತ್ತಮ ಪ್ರತಿಕ್ರಿಯೆ: ‘ಹಿಂದಿನ ವರ್ಷಗಳಲ್ಲಿ ಹೋಲಿಸಿದರೆ, ಗೋಲ್ಡ್‌ಕಾರ್ಡ್‌ ಹಾಗೂ ಇತರ ಟಿಕೆಟ್‌ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಕ್ಕಿಡಲಾಗಿದೆ. 3,500 ಗೋಲ್ಡ್‌ ಕಾರ್ಡ್‌ ಗಳಲ್ಲಿ ಈಗಾಗಲೇ 3,300ಕ್ಕೂ ಹೆಚ್ಚಿನವು ಮಾರಾಟವಾಗಿವೆ. ₹ 3,500 ಬೆಲೆಯ ಟಿಕೆಟ್‌ಗಳಲ್ಲಿ 200 ಲಭ್ಯವಿದ್ದು, ಖರೀದಿಸಬಹುದಾಗಿದೆ. ಪಂಜಿನ ಕವಾಯತು ಟಿಕೆಟ್‌ಗಳು ಈಗ ಲಭ್ಯವಿಲ್ಲ’ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ‘ಪ್ರಜಾವಾಣಿ’ಗೆ  ತಿಳಿಸಿದರು.

‘ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಹಾಗೂ ಅರಮನೆ ಮಂಡಳಿ ಕಚೇರಿಯಲ್ಲಿ ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಒಬ್ಬರೇ ಬಹಳಷ್ಟು ಟಿಕೆಟ್‌ ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಿ ಅಕ್ರಮ ಎಸಗಿದ್ದ ದೂರುಗಳಿದ್ದವು. ಅದನ್ನು ತಪ್ಪಿಸಲು ಒಬ್ಬರಿಗೆ 4 ಟಿಕೆಟ್‌ಗಳ
ನ್ನಷ್ಟೇ ಒಟಿಪಿ ಆಧರಿಸಿ ಮಾರಲಾಗುತ್ತಿದೆ. ಗೋಲ್ಡ್‌ಕಾರ್ಡ್‌ ಪಡೆದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಟಿಕೆಟ್‌ ಕಾಯ್ದಿರಿಸುವಿಕೆ ಹಾಗೂ ದೃಢೀಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಮಾಹಿತಿಗೆ ಟಿಕೆಟ್‌ಜೀನಿ ಗ್ರಾಹಕ ಸೇವೆಯನ್ನು ಮೊಬೈಲ್ ಸಂಖ್ಯೆ: 82173 95364 ಮೂಲಕ ಪಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಹಿಂದಿನ ವರ್ಷ ಗೋಲ್ಡ್‌ಕಾರ್ಡ್‌ ಹಾಗೂ ಎಲ್ಲ ಮಾದರಿಯ ಟಿಕೆಟ್‌ಗಳ ಮಾರಾಟದಿಂದ ₹ 1.19 ಕೋಟಿ ವರಮಾನ ಬಂದಿತ್ತು ಎಂದು ಜಿಲ್ಲಾಡಳಿತ ತಿಳಿಸಿತ್ತು.

ದಸರಾ ಗೋಲ್ಡ್‌ಕಾರ್ಡ್‌ ಹಾಗೂ ಟಿಕೆಟ್‌ಗಳಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
–ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.