ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಆಹಾರ ಮೇಳದ ಸ್ಥಳ ಈ ಬಾರಿ ಬದಲಾಗಿದ್ದು, ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ಬದಲಿಗೆ ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಗೊಂಡಿದೆ.
ಮಹಾರಾಜ ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರಾ ಉತ್ತನಹಳ್ಳಿ ಬಳಿಗೆ ಸ್ಥಳಾಂತರಗೊಂಡಿದೆ. ಇದರಿಂದಾಗಿ ಆ ಮೈದಾನವನ್ನು ಆಹಾರ ಮೇಳಕ್ಕೆ ಬಳಸಲು ನಿರ್ಧರಿಸಲಾಗಿದೆ. ಕಳೆದ ಬಾರಿ 140 ಆಹಾರ ಮಳಿಗೆಗಳಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ 200 ಮಳಿಗೆಗೆ ಅವಕಾಶ ಕೊಡಲು ಉದ್ದೇಶಿಸಲಾಗಿದೆ. ಮಳಿಗೆಗಳ ಸೌಂದರ್ಯಕ್ಕೆ, ಸುರಕ್ಷತೆ ಹಾಗೂ ಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದೆ. ಬೋಲ್ಟ್ ನಟ್ ಬಳಸಿ ನಿರ್ಮಿಸುವ ‘ಅಕ್ಟೋನಮ್ ಸ್ಟಾಲ್ಸ್’ ಬಳಸಲಾಗುತ್ತಿದ್ದು, ಪ್ರಾಯೋಜಕರಿಗೆ ಮಾತ್ರ ನೀಡುತ್ತಿದ್ದ ಜರ್ಮನ್ ಪೆಂಡಾಲ್‌ಗಳ ಮಳಿಗೆಯನ್ನು ಕೆಲವೆಡೆ ಮಾತ್ರವೇ ಅಳವಡಿಸಲು ಚಿಂತನೆ ನಡೆದಿದೆ.
‘ಪ್ರತಿ ಮಳಿಗೆ 10x20 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದ್ದು, ಹಿಂಬದಿಯಲ್ಲಿ ಸ್ಥಳಾವಕಾಶ ನೀಡಲಾಗುತ್ತಿದ್ದು, ಕೊಳಚೆ ನೀರನ್ನು ತೆರವು ಮಾಡುವ ಯಂತ್ರ ಹಾಗೂ ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೈದಾನದ ಎರಡು ದ್ವಾರಗಳಲ್ಲಿ ಒಂದನ್ನು ಸಾರ್ವಜನಿಕರ ಪ್ರವೇಶಕ್ಕೆ ಮತ್ತೊಂದನ್ನು ನಿರ್ಗಮನಕ್ಕೆ ಬಳಸಲಾಗುತ್ತದೆ. ಕಳೆದ ಬಾರಿ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಒಂದೇ ದ್ವಾರದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಿ ಉಂಟಾದ ಗೊಂದಲ ಈ ಬಾರಿ ಆಗುವುದಿಲ್ಲ’ ಎಂದು ಮಳಿಗೆ ನಿರ್ಮಾಣದಲ್ಲಿ ತೊಡಗಿರುವ ಅಧಿಕಾರಿ ಮಾಹಿತಿ ನೀಡಿದರು.
₹1 ಕೋಟಿ ವೆಚ್ಚ: ‘ಕಳೆದ ಬಾರಿಯೇ 140 ಮಳಿಗೆಗಳ ನಿರ್ಮಾಣಕ್ಕೆ ಅಂದಾಜು ₹75 ಲಕ್ಷ ವೆಚ್ಚವಾಗಿತ್ತು. ಈ ಬಾರಿ ಮಳಿಗೆಗಳ ಸಂಖ್ಯೆಯೂ ಹೆಚ್ಚಿದ್ದು, ಉತ್ತಮ ಸೌಕರ್ಯ ನೀಡಲು ಪ್ರಯತ್ನ ನಡೆಸಿದ್ದು, ಒಟ್ಟಾರೆ ನಿರ್ಮಾಣ ವೆಚ್ಚ ₹1 ಕೋಟಿ ತಲುಪಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.