ADVERTISEMENT

ಮೈಸೂರು ದಸರಾ | ಹೆಚ್ಚಿದ ಭದ್ರತೆಯ ಹೊರೆ; ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಮನವಿ

ಶಿವಪ್ರಸಾದ್ ರೈ
Published 28 ಸೆಪ್ಟೆಂಬರ್ 2024, 6:39 IST
Last Updated 28 ಸೆಪ್ಟೆಂಬರ್ 2024, 6:39 IST
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಹಾದಿಯಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು (ಸಂಗ್ರಹ ಚಿತ್ರ)
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಹಾದಿಯಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು (ಸಂಗ್ರಹ ಚಿತ್ರ)   

ಮೈಸೂರು: ದಸರಾ ಕಾರ್ಯಕ್ರಮಗಳ ಸಂಖ್ಯೆ ಹಾಗೂ ವ್ಯಾಪ್ತಿ ಹೆಚ್ಚಿರುವುದು ನಗರ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಗೆ ಹೊಸ ಹೊರೆಯಾಗಿ ಪರಿಣಮಿಸಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಭದ್ರತಾ ವ್ಯವಸ್ಥೆಯಲ್ಲಿ ಹೊಸ ಮಾರ್ಪಾಡು ತರುತ್ತಿವೆ.

ಈ ಹಿಂದೆ ದಸರೆಗೆ ಸುಮಾರು ಸಾವಿರ ಮಂದಿ ಪೊಲೀಸರು ಹಾಗೂ ಸಿಬ್ಬಂದಿಯನ್ನು ನಗರದ ಭದ್ರತೆಗೆ ನಿಯೋಜಿಸಲಾಗುತ್ತಿತ್ತು. ಜಂಬೂಸವಾರಿ ದಿನ ಇತರ ಕಡೆಯಿಂದಲೂ ಪೊಲೀಸರನ್ನು ಕರೆಸಿ ಸುಮಾರು 3,500ರಷ್ಟು ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಜಂಬೂಸವಾರಿ ಹೊರತುಪಡಿಸಿದರೆ ಯುವ ದಸರಾ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ ಮೈದಾನ, ಆಹಾರ ಮೇಳದಲ್ಲಿ ಹೆಚ್ಚಿನ ಭದ್ರತೆ ಅವಶ್ಯವಿತ್ತು.

ಈ ಬಾರಿ ದಸರಾ ಕಾರ್ಯಕ್ರಮಗಳ ಸಾಲಿಗೆ ‘ಡ್ರೋನ್‌ ಶೋ’ ಸೇರಿಕೊಂಡಿದೆ. ಪಂಜಿನ ಕವಾಯತು ಮೈದಾನದಲ್ಲಿ ಅ.6, 7, 11 ಮತ್ತು 12ರಂದು ಡ್ರೋನ್‌ ಶೋ ನಡೆಯಲಿದ್ದು, ಅಲ್ಲೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಬೇಕಿದೆ. ದಸರಾ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಈಚೆಗೆ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದು, ಪ್ರತಿ ಬಾರಿಗಿಂತ ಭಿನ್ನವಾಗಿ ಭದ್ರತೆಯ ವ್ಯವಸ್ಥೆ ಮಾಡಿಕೊಳ್ಳಬೇಕು. ನಗರಕ್ಕೆ ಆಗಮಿಸುವವರ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇದರಿಂದಾಗಿ ಹೊಸ ರೂಪುರೇಷೆಗಾಗಿ ಅಧಿಕಾರಿಗಳು ಸುದೀರ್ಘ ಸಭೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಳೆದ ಬಾರಿಗಿಂತ ಈ ಬಾರಿಯ ದಸರೆಗೆ 20 ಸಾವಿರಕ್ಕಿಂತ ಹೆಚ್ಚಿನ ಪ್ರವಾಸಿಗರು ಬರಬಹುದೆಂದು ಅಂದಾಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಸವಾಲು ಪೊಲೀಸ್‌ ಇಲಾಖೆಗಿದೆ. ಇದಕ್ಕಾಗಿಯೇ ಹೆಚ್ಚುವರಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯನ್ನು ಒದಗಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಪೊಲೀಸರಿಗೆ ‘ಯುವ ದಸರಾ’ ಜವಾಬ್ದಾರಿ: ಹೊಸ ಮಾರ್ಪಾಡಿನಲ್ಲಿ ಯುವ ದಸರಾವು ಉತ್ತನಹಳ್ಳಿ ಮೈದಾನದಲ್ಲಿ ನಡೆಯುತ್ತಿದ್ದು, ಇದು ದಕ್ಷಿಣ ಪೊಲೀಸ್‌ ಠಾಣಾ ಸರಹದ್ದಿಗೆ ಬರುವುದರಿಂದ ಇಲ್ಲಿನ ಭದ್ರತೆಯ ಜವಾಬ್ದಾರಿ ಜಿಲ್ಲಾ ಪೊಲೀಸರ ಹೆಗಲೇರಿದೆ. ಮೈದಾನವಷ್ಟೇ ಅಲ್ಲದೆ ವರ್ತುಲ ರಸ್ತೆಯಲ್ಲೂ ಜನರ ಓಡಾಟ ಹೆಚ್ಚಾಗುವುದರಿಂದ ಅಲ್ಲಿಯೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕಿದೆ. ಮಹಾರಾಜ ಕಾಲೇಜಿನಲ್ಲಿ ವಿವಿಧ ಜವಾಬ್ದಾರಿಗೆ 600 ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಇದೀಗ ಉತ್ತನಹಳ್ಳಿ ಮೈದಾನದ ವಿಸ್ತೀರ್ಣ ಹೆಚ್ಚಿರುವುದರಿಂದ ಅದಕ್ಕಿಂತ ಹೆಚ್ಚು ಪೊಲೀಸರ ಅಗತ್ಯವಿದೆ ಎನ್ನುತ್ತವೆ ಮೂಲಗಳು.

ಅನೇಕ ವರ್ಷಗಳ ಸಂಪ್ರದಾಯ ಮುರಿದು ‘ಯುವ ಸಂಭ್ರಮ’ದ ಜಾಗ ಬದಲಾವಣೆ ಮಾಡಿರುವುದರ ಬಗ್ಗೆ ಪರ– ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ಒದಗಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಧಾರ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುವ ಸವಾಲು ಪೊಲೀಸ್‌ ಇಲಾಖೆಗಿದೆ.

ಕಮಿಷನರ್‌ ಎಸ್ಪಿಗೆ ಮೊದಲ ದಸರಾ

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ ತಾವು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ದಸರಾದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಬ್ಬರೂ ಈ ಹಿಂದಿನ ದಸರಾಗಳಲ್ಲಿ ಇತರೆ ಜವಾಬ್ದಾರಿಗಳನ್ನು ನಿರ್ವಹಿಸಿದ್ದರೆಂಬುದು ವಿಶೇಷ. ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಸೀಮಾ ಲಾಟ್ಕರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯದಲ್ಲಿದ್ದು ಭದ್ರತೆಯ ಜೊತೆಗೆ ಯುವ ಸಂಭ್ರಮ ಉಪಸಮಿತಿಯಲ್ಲೂ ಜವಾಬ್ದಾರಿ ನಿರ್ವಹಿಸಿದ್ದರು. ಎನ್‌.ವಿಷ್ಣುವರ್ಧನ್‌ ನಗರ ಪೊಲೀಸ್‌ ಇಲಾಖೆಯಲ್ಲಿ ಎಸಿಪಿಯಾಗಿದ್ದಾಗ ಭದ್ರತಾ ವಿಭಾಗದಲ್ಲಿ ಕೆಲಸ ಮಾಡಿದ್ದರು.

ಯುವ ದಸರಾ ಭದ್ರತೆ ನಿರ್ವಹಣೆಗೆ 2– 3 ದಿನದಲ್ಲಿ ರೂಪುರೇಷೆ ಸಿದ್ಧಪಡಿಸುತ್ತೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗುವುದು.
–ಎನ್‌.ವಿಷ್ಣುವರ್ಧನ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಈ ಬಾರಿ ಅದ್ದೂರಿ ದಸರಾ ಆಯೋಜಿಸಿರುವುದರಿಂದ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದ್ದು ಅದಕ್ಕೆ ಸರಿಯಾಗಿ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.
–ಎಂ.ಮುತ್ತುರಾಜು, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.