ADVERTISEMENT

ಮೈಸೂರು | ನಾಳೆ ಅದ್ದೂರಿ ಜಂಬೂಸವಾರಿ: ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಎಂ.ಮಹೇಶ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
<div class="paragraphs"><p>ಮೈಸೂರು ದಸರಾ ಅಂಗವಾಗಿ ಶನಿವಾರ ನಡೆಯಲಿರುವ ಜಂಬೂಸವಾರಿ (ವಿಜಯದಶಮಿ ಮೆರವಣಿಗೆಗೆ) ಅರಮನೆ ಆವರಣದಲ್ಲಿ ಕಾರ್ಮಿಕರು ಸಿದ್ಧತೆಯಲ್ಲಿ ತೊಡಗಿದ್ದರು</p></div>

ಮೈಸೂರು ದಸರಾ ಅಂಗವಾಗಿ ಶನಿವಾರ ನಡೆಯಲಿರುವ ಜಂಬೂಸವಾರಿ (ವಿಜಯದಶಮಿ ಮೆರವಣಿಗೆಗೆ) ಅರಮನೆ ಆವರಣದಲ್ಲಿ ಕಾರ್ಮಿಕರು ಸಿದ್ಧತೆಯಲ್ಲಿ ತೊಡಗಿದ್ದರು

   

– ಪ್ರಜಾವಾಣಿ ಚಿತ್ರ:ಅನೂಪ್ ರಾಘ ಟಿ.

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ವಿಜಯದಶಮಿಯ ದಿನವಾದ ಶನಿವಾರ (ಅ.12) ನಡೆಯಲಿದ್ದು, ಜಿಲ್ಲಾಡಳಿತವು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ.

ADVERTISEMENT

‘ರಾಜಪಥ’ದಲ್ಲಿ ಸಾಗಲಿರುವ ‘ಪರಂಪರೆಯ ತೇರು’ ವೀಕ್ಷಿಸಲು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 

ಶನಿವಾರ ಮಧ್ಯಾಹ್ನ 1.41ರಿಂದ 2.10ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜ ಪೂಜೆ ನೆರವೇರಿಸಿ ಚಾಲನೆ ನೀಡುವರು. ಸಂಜೆ 4ರಿಂದ 4.30ರವರೆಗೆ ಅರಮನೆ ಆವರಣದಲ್ಲಿ ‘ಅಭಿಮನ್ಯು’ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವರು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಪಾಲ್ಗೊಳ್ಳಲಿದ್ದಾರೆ. ರಾಜವಂಶಸ್ಥರೇ ಸಂಸದರಾಗಿರುವುದರಿಂದ, ಇದೇ ಮೊದಲಿಗೆ ಸಂಸದರೂ ವೇದಿಕೆಯಲ್ಲೇ ಪಾಲ್ಗೊಂಡಂತಾಗಲಿದೆ.

ಅರಮನೆ ಆವರಣದಲ್ಲಿ ಅತಿ ಗಣ್ಯರು, ಗಣ್ಯರು, ಗೋಲ್ಡ್‌ ಕಾರ್ಡ್ ಹಾಗೂ ಟಿಕೆಟ್ ಹೊಂದಿರುವವರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯು ಐದು ಕಿ.ಮೀ.ವರೆಗೆ ಸಾಗಿ ಬನ್ನಿಮಂಟಪ ತಲುಪಲಿದೆ. ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಗೌರವ ವಂದನೆ ಸ್ವೀಕರಿಸುವರು. ಡ್ರೋನ್‌ ಶೋ ಈ ಬಾರಿಯ ವಿಶೇಷ. ಈ ಕಾರ್ಯಕ್ರಮದೊಂದಿಗೆ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುತ್ತಿರುವ ರಾಜವಂಶಸ್ಥ ಯದುವೀರ್ ಶುಕ್ರವಾರ ಆಯುಧಪೂಜೆ ಹಾಗೂ ಶನಿವಾರ ವಿಜಯದಶಮಿ ಮೆರವಣಿಗೆ ನಡೆಸುವರು. ನಂತರ, ಸರ್ಕಾರಿ ದಸರಾ ಮೆರವಣಿಗೆ ಆರಂಭವಾಗಲಿದೆ.

ಮೈಸೂರು ಅರಮನೆಯಲ್ಲಿ ಮಾವುತರು ಹಾಗೂ ಅವರ ಮಕ್ಕಳು ಗುರುವಾರ ಸ್ನಾನ ಮಾಡಿಸಿದರು– ಪ್ರಜಾವಾಣಿ ಚಿತ್ರ
ಶನಿವಾರ ನಡೆಯಲಿರುವ ವಿಜಯದಶಮಿ ಮೆರವಣಿಗೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಎಲ್ಲವನ್ನೂ ಸಂಪ್ರದಾಯದಂತೆ ನಡೆಸಲಾಗುವುದು
-ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.