ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜಿಲ್ಲಾಡಳಿತದಿಂದ ರೂಪಿಸಲಾಗಿರುವ ಅಧಿಕೃತ ಜಾಲತಾಣಕ್ಕೆ (https://www.mysoredasara.gov.in) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೇ ದಿನಗಳಲ್ಲಿ 6,46,651 ‘ಹಿಟ್ಸ್’ ದೊರೆತಿದೆ.
ದಸರೆಗೆ ಕೆಲವೇ ದಿನಗಳು ಇರುವಾಗ ಅಂದರೆ ಸೆ.21ರಂದು ಅನಾವರಣಗೊಳಿಸಲಾಗಿತ್ತು. ಆರಂಭದಲ್ಲಿ ಮಾಹಿತಿ ಕೊರತೆ ಎದ್ದು ಕಾಣುತ್ತಿತ್ತು. ಕ್ರಮೇಣ ಹಲವು ಮಾಹಿತಿ ಅಪ್‌ಡೇಟ್ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಒದಗಿಸಲಾಗುತ್ತಿದ್ದು, ದಸರಾ ಜೊತೆಗೆ ಇಲ್ಲಿನ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಕಿರುಪರಿಚಯವೂ ಇದೆ. ಹೀಗಾಗಿ, ನೆಟ್ಟಿಗರು ಹುಡುಕಾಡುತ್ತಿರುವುದು ಕಂಡುಬಂದಿದೆ.
‘ಅಭಿಮನ್ಯು’ ಸೇರಿದಂತೆ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಪರಿಚಯವನ್ನು ಫೋಟೊಸಹಿತ ನೀಡಲಾಗಿದೆ. ಎಲ್ಲ ಉಪ ಸಮಿತಿಗಳ ವಿವರವಿದೆ. ಏನೇನು ಕಾರ್ಯಕ್ರಮಗಳು ನಡೆಯುತ್ತವೆ ಎಂಬುದರ ಮಾಹಿತಿಯನ್ನೂ ಹಾಕಲಾಗಿದೆ. ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಪಟ್ಟಿಯನ್ನೂ ನೀಡಲಾಗಿದೆ. ಇದರಲ್ಲಿ, ಅ.6ರಂದು ವೈಮಾನಿಕ ಪ್ರದರ್ಶನ ಎಂದು ನಮೂದಿಸಲಾಗಿದೆ. ಆದರೆ, ಈ ಬಾರಿ ವೈಮಾನಿಕ ಪ್ರದರ್ಶನವೇ ಇಲ್ಲ!
ಬುಕ್ಕಿಂಗ್‌ಗಾಗಿ: ಗೋಲ್ಡ್ ಕಾರ್ಡ್ ಹಾಗೂ ವಿವಿಧ ಟಿಕೆಟ್‌ಗಳ ಬುಕ್ಕಿಂಗ್ ವಿಭಾಗ ಇದರಲ್ಲಿದೆ. ಇವುಗಳ ಖರೀದಿಯನ್ನು ಈ ಪೋರ್ಟಲ್ ಮೂಲಕವೇ ಮಾಡಬೇಕಿರುವುದರಿಂದ ಬಹಳ ಮಂದಿ ಇಲ್ಲಿಗೆ ಭೇಟಿ ನೀಡಿ ಜಾಲಾಡಿದ್ದಾರೆ. ಟಿಕೆಟ್ ಖರೀದಿಯನ್ನೂ ಮಾಡಿದ್ದಾರೆ. ಅಗತ್ಯ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.
ದಸರಾ ಮಹೋತ್ಸವಕ್ಕೆ ಹೊರ ರಾಜ್ಯ, ದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಅವರು ಮಾಹಿತಿಗಾಗಿ ಜಾಲತಾಣಗಳನ್ನು ಹುಡುಕುತ್ತಾರೆ. ಅದರಲ್ಲಿ ಸರ್ಕಾರದಿಂದ ರೂಪಿಸಿರುವ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ, ಜಾಲತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿದೆ. ಅದನ್ನು ಅನಾವರಣಗೊಳಿಸಿದ ಕೆಲವೇ ದಿನಗಳಲ್ಲಿ ‘ಹಿಟ್ಸ್’ ಸಂಖ್ಯೆ ಆರಂಕಿಯನ್ನು ದಾಟಿದೆ.
ಪ್ರವಾಸಿ ತಾಣಗಳ ಬಗ್ಗೆ: ವೆಬ್‌ಸೈಟ್‌ನಲ್ಲಿ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನ, ಜಿಲ್ಲೆಯ ಅಧಿಕೃತ ಜಾಲತಾಣ ಹಾಗೂ ಮೃಗಾಲಯದ ಜಾಲತಾಣಗಳ ಲಿಂಕ್‌ಗಳನ್ನು ನೀಡಿ, ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಜಾಲತಾಣ ಅನಾವರಣಗೊಳಿಸಿದಾಗ, ಉದ್ಘಾಟಕರಾದ ಹಂ.ಪ.ನಾಗರಾಜಯ್ಯ ಅವರ ಪರಿಚಯ ಇರಲಿಲ್ಲ. ಬಳಿಕ ಅಪ್‌ಡೇಟ್ ಮಾಡಲಾಗಿದೆ. ಚಿತ್ರಸಂಪುಟದ ವಿಭಾಗದಲ್ಲಿ ಫೋಟೊಗಳನ್ನು ಹಾಕಲಾಗಿದೆ. ಲೈವ್ ಸ್ಟ್ರೀಮಿಂಗ್ ವಿಭಾಗದಲ್ಲಿ ವಿವಿಧ ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ನೇರಪ್ರಸಾರದ ಲಿಂಕ್ ಕೊಡಲಾಗಿದೆ. ಅವುಗಳ ವೀಕ್ಷಣೆಯನ್ನೂ ಜನರು ಮಾಡುತ್ತಿರುವುದು ದಾಖಲಾಗಿದೆ. ಸ್ಥಳಕ್ಕೆ ಬರಲು ಸಾಧ್ಯವಾಗದವರು ಕುಳಿತಲ್ಲೇ ಕಣ್ತುಂಬಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದರು.
ಟ್ರಾಫಿಕ್ ಜಾಮ್ ಕಿರಿಕಿರಿ, ವಾಹನ ನಿಲುಗಡೆಯ ತೊಂದರೆಯೇ ಬೇಡ ಎನ್ನುವ ಲಕ್ಷಾಂತರ ಮಂದಿ ತಾವಿದ್ದಲ್ಲಿಯೇ ಕುಳಿತು ಕಾರ್ಯಕ್ರಮಗಳನ್ನು ‘ವರ್ಚುವಲ್’ ಆಗಿ ವೀಕ್ಷಿಸುತ್ತಿದ್ದಾರೆ. ಇದಕ್ಕೆ ಜಾಲತಾಣವನ್ನು ಬಳಸಿಕೊಳ್ಳುತ್ತಿದ್ದಾರೆ. ಬುಧವಾರ ಸಂಜೆ ವೇಳೆಗೆ 6.46 ಲಕ್ಷ ಮಂದಿ ಮಂದಿ ಭೇಟಿ ನೀಡಿದ್ದರು. ಅವರಲ್ಲಿ ಹೊರ ರಾಜ್ಯ ಹಾಗೂ ದೇಶದವರೂ ಹೆಚ್ಚಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸೆ.21ರಂದು ಅನಾವರಣಗೊಂಡಿದ್ದ ಜಾಲತಾಣ ಬುಧವಾರ ಸಂಜೆವರೆಗೆ 6,46,651 ‘ಹಿಟ್ಸ್’ ಹಲವು ವೇದಿಕೆಗಳ ಕಾರ್ಯಕ್ರಮ ನೇರಪ್ರಸಾರ
ಖ್ಯಾತನಾಮರ ಲೈವ್ ‘ಕಡಿತ’!
ಇದೇ ಮೊದಲ ಬಾರಿಗೆ ಉತ್ತನಹಳ್ಳಿ ಬಳಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ವಿವಿಧ ವೇದಿಕೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಆದರೆ ಖ್ಯಾತನಾಮರ ‘ಸಂಗೀತ ಸಂಜೆ’ ಲಭ್ಯವಾಗುತ್ತಿಲ್ಲ. ಇದು ಸಂಗೀತ ಪ್ರಿಯರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಹೀಗೆ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಜನರದಾಗಿದೆ. ಶ್ರೇಯಾ ಘೋಷಾಲ್ ರವಿ ಬಸ್ರೂರ್ ಬಾದ್ ಷಾ ಎ.ಆರ್. ರೆಹಮಾನ್ ಅವರ ಕಾರ್ಯಕ್ರಮ ನೇರಪ್ರಸಾರದ ಹೊತ್ತಿಗೆ ಲೈವ್ ಮಾಡಿರಲಿಲ್ಲ. ‘ಆ ಗಾಯಕರ ಕೋರಿಕೆ ಮೇರೆಗೆ ನೇರಪ್ರಸಾರ ಮಾಡಿರಲಿಲ್ಲ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.
ವರ್ಚುವಲ್ ವೀಕ್ಷಣೆಗೂ ಉತ್ತಮ ಪ್ರತಿಕ್ರಿಯೆ
ಅ.3ರಿಂದ ಆರಂಭವಾಗಿರುವ ಮಹೋತ್ಸವದ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಫೇಸ್‌ಬುಕ್ ಯೂಟ್ಯೂಟ್ ಹಾಗೂ ಅಧಿಕೃತ ಜಾಲತಾಣದ ಲಿಂಕ್‌ಗಳನ್ನು ಬಳಸಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. https://facebook.mysoredasara.gov.in https://youtube.mysoredasara.gov.in ಹಾಗೂ https://mysoredasara.gov.in/ ಈ ಲಿಂಕ್‌ಗಳ ಮೂಲಕ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ಅ.3ರಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ನಾಡಹಬ್ಬಕ್ಕೆ ಸಾಹಿತಿ ಹಂಪನಾ ಚಾಲನೆ ನೀಡಿದ್ದರು. ಆ ಕಾರ್ಯಕ್ರಮದ ನೇರಪ್ರಸಾರವನ್ನೂ ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ. ಅರಮನೆ ವೇದಿಕೆಯಲ್ಲಿ ನಡೆಯುತ್ತಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೇರಪ್ರಸಾರಕ್ಕೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರು ಅಂತರ್ಜಾಲ ಸಂಪರ್ಕವುಳ್ಳ ಸ್ಮಾರ್ಟ್ ಫೋನ್‌ಗಳಲ್ಲಿ ವೀಕ್ಷಿಸುತ್ತಿದ್ದಾರೆ. ‘ಈ ಬಾರಿಯ ದಸರಾ ಕಾರ್ಯಕ್ರಮಗಳ ವಿವರವನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಗ್ರಾಂನಲ್ಲಿ ಪ್ರಚಾರ ಮಾಡಲಾಗಿತ್ತು. ಅದನ್ನೂ ಬಹಳಷ್ಟು ಮಂದಿ ನೋಡಿದ್ದಾರೆ. ಗುಣಮಟ್ಟದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.