ಮೈಸೂರು: ಮುಧೋಳದ ಬಾಪೂ ಸಾಹೇಬ ಶಿಂಧೆ ಹಾಗೂ ಬಾಗಲಕೋಟೆಯ ಶಿವಯ್ಯ ಪೂಜಾರಿ ‘ದಸರಾ ಕಂಠೀರವ’ ಪ್ರಶಸ್ತಿಯ ಫೈನಲ್ ಹಣಾಹಣಿಗೆ ಲಗ್ಗೆಯಿಟ್ಟರು.
ಇಲ್ಲಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ದಸರಾ ಕುಸ್ತಿ’ ಸೆಮಿಫೈನಲ್‌ನಲ್ಲಿ ಬಾಪೂ 14-8 ಪಾಯಿಂಟ್‌ನಿಂದ ದಾವಣಗೆರೆಯ ಬಸವರಾಜ ಹುದಲಿ ವಿರುದ್ಧ ಜಯ ಸಾಧಿಸಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಶಿವಯ್ಯ ಪೂಜಾರಿ 3-1ರಿಂದ ಬೆಳಗಾವಿಯ ಬಿ.ನಾಗರಾಜ್ ಅವರನ್ನು ಮಣಿಸಿ ಅಂತಿಮ ಘಟ್ಟ ಪ್ರವೇಶಿಸಿದರು.
‘ದಸರಾ ಕೇಸರಿ’ ಪ್ರಶಸ್ತಿಗಾಗಿ ನಡೆದ ಸೆಮಿಫೈನಲ್ ಕಾದಾಟದಲ್ಲಿ ಮುಧೋಳದ ಸದಾಶಿವ ನಲವಡೆ ಅವರು 19–8 ಪಾಯಿಂಟ್ ಅಂತರದಲ್ಲಿ ಬೆಳಗಾವಿಯ ಮಹೇಶ್‌ಕುಮಾರ್ ವಿರುದ್ಧ ಜಯ ಸಾಧಿಸಿದರು. ಆರಂಭದಲ್ಲಿ ಮಹೇಶ್ 8–0ರಿಂದ ಮುಂದಿದ್ದರು. ಇನ್ನೆರಡು ಅಂಕ ಪಡೆದಿದ್ದರೆ ಗೆಲುವು ಅವರ ಪಾಲಾಗುತ್ತಿತ್ತು. ಪುಟಿದೆದ್ದ ಸದಾಶಿವ ಆಕ್ರಮಣಕಾರಿ ಆಟದ ಮೂಲಕ 12 ಅಂಕ ಪಡೆದು ಮೇಲುಗೈ ಸಾಧಿಸಿದರು. ವಿರಾಮದ ನಂತರ ಮತ್ತೆ 7 ಅಂಕವನ್ನು ವೇಗವಾಗಿ ಕಲೆಹಾಕಿ ಫೈನಲ್ ಪ್ರವೇಶಿಸಿದರು.
ಇದೇ ವಿಭಾಗದ ಮತ್ತೊಂದು ಸೆಮಿಫೈನಲ್‌ನಲ್ಲಿ ದಾವಣಗೆರೆಯ ಬಸವರಾಜ ಪಾಟೀಲ 7-2 ಪಾಯಿಂಟ್‌ನಿಂದ ಧಾರವಾಡದ ಟಿ.ಮಲ್ಲಿಕಾರ್ಜುನ್ ವಿರುದ್ಧ ಜಯ ಸಾಧಿಸಿದರು.
‘ದಸರಾ ಕಿಶೋರ’ ಪ್ರಶಸ್ತಿಗಾಗಿ ನಡೆದ ಸೆಮಿಫೈನಲ್‌ನಲ್ಲಿ ದಾವಣಗೆರೆಯ ಕೊರವರ ಸಂಜೀವ ಅವರು 10-0ರಿಂದ ತಮ್ಮದೇ ಊರಿನ ಖ್ವಾಜಾ ಮೈನುದ್ದೀನ್ ವಿರುದ್ಧ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ದಾವಣಗೆರೆಯ ಮಹೇಶ್ ಪಿ.ಗೌಡ 8-3 ರಿಂದ ಬಾಗಲಕೋಟೆಯ ವೈ.ಸಚಿನ್ ವಿರುದ್ಧ ಗೆಲುವು ದಾಖಲಿಸಿದರು.
‘ದಸರಾ ಕಿಶೋರಿ’ ಪ್ರಶಸ್ತಿಯ ಫೈನಲ್‌ಗೆ ಹಳಿಯಾಳದ ಶಾಲಿನಾ ಸಿದ್ದಿ ಮತ್ತು ಆರ್.ಎಸ್.ಗಾಯತ್ರಿ ಸುತಾರ್ ಲಗ್ಗೆ ಇಟ್ಟರೆ, ‘ದಸರಾ ಕುಮಾರ’ ಪ್ರಶಸ್ತಿಗೆ ಮೈಸೂರಿನ ಆರ್.ನಿತಿನ್ ಮತ್ತು ಮಂಡ್ಯದ ಪೈ.ಗಿರೀಶ್ ಸೆಣಸಾಟ ನಡೆಸಲಿದ್ದಾರೆ.
ಪ್ರಶಸ್ತಿ ಸುತ್ತಿನ ಎಲ್ಲ ಪಂದ್ಯಗಳು ಅ.9ರಂದು ನಡೆಯಲಿವೆ.
ದಾವಣಗೆರೆ -ಬಾಗಲಕೋಟೆ ಪ್ರಾಬಲ್ಯ
17 ವರ್ಷದೊಳಗಿನ ಬಾಲಕರ ವಿಭಾಗದ ರಾಜ್ಯಮಟ್ಟದ ದಸರಾ ಕುಸ್ತಿ ಟೂರ್ನಿಯಲ್ಲಿ ದಾವಣಗೆರೆ ಬಾಗಲಕೋಟೆ ಹಾಗೂ ಧಾರವಾಡ ಕುಸ್ತಿಪಟುಗಳು ಹೆಚ್ಚು ಪ್ರಶಸ್ತಿ ಗೆದ್ದರು.
ಫಲಿತಾಂಶ: 65 ಕೆ.ಜಿ. ವಿಭಾಗ: ಅರ್ಜುನ್ ಎಂ.ಕೊರವರ (ದಾವಣಗೆರೆ)–1 ಎಂ.ಸತ್ಯರಾಜ್ (ದಾವಣಗೆರೆ)–2 ಸಂಜೀವ್ ಪಿ.ಪೂಜಾರಿ (ಬಾಗಲಕೋಟೆ) ವಿಕಾಸ್ (ಧಾರವಾಡ)–3.
60 ಕೆ.ಜಿ ವಿಭಾಗ: ಖ್ವಾಜಾ ಮೈನುದ್ದೀನ್ (ದಾವಣಗೆರೆ)–1 ಮಲ್ಲಿಕಾರ್ಜುನ (ಹಾವೇರಿ)–2 ಎನ್.ಮಧುಕುಮಾರ್ (ದಾವಣಗೆರೆ) ಕೆ.ಎಂ.ಹರ್ಷಿತ್ (ಧಾರವಾಡ)–3.
55 ಕೆ.ಜಿ. ವಿಭಾಗ: ರಫಿ (ದಾವಣಗೆರೆ)–1 ಸಂಜು ವಿಠಲ್ (ಬೆಳಗಾವಿ)–2 ಲೋಹಿತ್ ನಾಯ್ಕ (ಹಳಿಯಾಳ) ಹನುಮಂತ (ಬಾಗಲಕೋಟೆ)–3.
51 ಕೆ.ಜಿ. ವಿಭಾಗ: ಅಮೋಘ್ (ಧಾರವಾಡ)–1 ಸಿ.ಎನ್.ಸಂಜು (ದಾವಣಗೆರೆ)–2 ಭೂಪತಿ ಬಿ.ಕಮಟಗಿರಿ (ಬೆಳಗಾವಿ)–3.
48 ಕೆ.ಜಿ.: ಮೋಹನ್ ರಾಜ್ (ದಾವಣಗೆರೆ)–1 ಸುದೀಪ್ (ಬಾಗಲಕೋಟೆ)–2 ಶ್ರೇಯಸ್ (ಬೆಳಗಾವಿ) ಎಂ.ಮುತ್ತುರಾಜ್ (ದಾವಣಗೆರೆ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.