ಮೈಸೂರು: ರಂಗೇರಿದ ದಸರಾ ಕುಸ್ತಿ ಅಖಾಡದಲ್ಲಿ ಆಕ್ರಮಣಕಾರಿ ಪಟ್ಟುಗಳಿಂದ ಪ್ರಾಬಲ್ಯ ಮೆರೆದ ಬಾಗಲಕೋಟೆ ಪೈಲ್ವಾನ್ ಶಿವಯ್ಯ ಪೂಜಾರಿ ಹಾಗೂ ಮುಧೋಳದ ಸದಾಶಿವ ನಲವಡೆ ದಸರಾ ಕಂಠೀರವ ಹಾಗೂ ದಸರಾ ಕೇಸರಿ ಪ್ರಶಸ್ತಿ ಗೆದ್ದರು.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಬುಧವಾರ ನಡೆದ ದಸರಾ ಕುಸ್ತಿ ಸ್ಪರ್ಧೆಯ 86 ಕೆ.ಜಿ ವಿಭಾಗದ ಹಣಾಹಣಿಯಲ್ಲಿ ಶಿವಯ್ಯ ಅವರು ಮುಧೋಳದ ಪೈಲ್ವಾನ್ ಬಾಪೂ ಸಾಹೇಬ ಶಿಂಧೆ ಅವರನ್ನು ಮಣಿಸಿದರು.
20 ನಿಮಿಷಗಳ ಹೋರಾಟದಲ್ಲಿ ಮದಗಜಗಳಂತೆ ಸೆಣಸಾಟ ನಡೆಸಿದ ಇಬ್ಬರೂ ಕುಸ್ತಿಪ್ರಿಯರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದರು. ಕಡೇ ಕ್ಷಣದಲ್ಲಿ ಪಾರಮ್ಯ ಮೆರೆದ ಶಿವಯ್ಯ, ಬಾಪೂ ಅವರನ್ನು 6–5 ಪಾಯಿಂಟ್ಗಳಿಂದ ರೋಚಕ ಜಯ ಸಾಧಿಸಿದರು.
ದಸರಾ ಕೇಸರಿ: 74–86 ಕೆ.ಜಿ ವಿಭಾಗದಲ್ಲಿ ಮುಧೋಳದ ಸದಾಶಿವ ನಲವಡೆ ಗೆದ್ದರು. ದಾವಣಗೆರೆ ಜಿಲ್ಲೆಯ ಪೈಲ್ವಾನ ಬಸವರಾಜ ಪಾಟೀಲ ಅವರನ್ನು 15–7 ಅಂಕಗಳ ಅಂತರದಲ್ಲಿ ಸೋಲಿಸಿದರು.
‘ದಸರಾ ಕುಮಾರ’ ಪ್ರಶಸ್ತಿಗೆ (74 ಕೆ.ಜಿ) ನಡೆದ 20 ನಿಮಿಷಗಳ ಹೋರಾಟದಲ್ಲಿ ಮಂಡ್ಯದ ಗಿರೀಶ್ ಅವರು ಮೈಸೂರಿನ ಆರ್.ನಿತಿನ್ ಅವರನ್ನು 25–13ರಿಂದ ಮಣಿಸಿದರು.
‘ದಸರಾ ಕಿಶೋರ’ ಪ್ರಶಸ್ತಿಯ 57–62 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಕೊರವರ ಸಂಜೀವ ಅವರು ತಮ್ಮದೇ ಊರಿನ ಮಹೇಶ್ ಪಿ.ಗೌಡ ವಿರುದ್ಧ 6–1 ಪಾಯಿಂಟ್ಗಳಿಂದ ಗೆದ್ದರು.
ಮಹಿಳೆಯರಿಗೆ 2018ರಿಂದ ಆಯೋಜಿಸುತ್ತಿರುವ ‘ದಸರಾ ಕಿಶೋರಿ’ 57– 62 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದಾವಣಗೆರೆ ಕ್ರೀಡಾ ಶಾಲೆಯ ಎಸ್.ಶಾಲಿನಿ ಸಿದ್ಧಿ ಅವರು 10–2 ಪಾಯಿಂಟ್ಗಳಿಂದ ಗಾಯತ್ರಿ ಅವರನ್ನು ಸೋಲಿಸಿ ‘ದಸರಾ ಕಿಶೋರಿ’ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.