ADVERTISEMENT

ಮೈಸೂರು ಯುವ ದಸರಾ: ಇಳೆ ತುಂಬಿದ ‘ರಾಜ’ನಾದ ಲೋಕ

ಶಿವಪ್ರಸಾದ್ ರೈ
Published 10 ಅಕ್ಟೋಬರ್ 2024, 17:21 IST
Last Updated 10 ಅಕ್ಟೋಬರ್ 2024, 17:21 IST
<div class="paragraphs"><p>ಮೈಸೂರಿನ ಉತ್ತನಹಳ್ಳಿ ಬಳಿ ಗುರುವಾರ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಇಳಯರಾಜ ಹಾಗೂ ತಂಡದವರು ಹಾಡಿದರು</p></div>

ಮೈಸೂರಿನ ಉತ್ತನಹಳ್ಳಿ ಬಳಿ ಗುರುವಾರ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಇಳಯರಾಜ ಹಾಗೂ ತಂಡದವರು ಹಾಡಿದರು

   

–ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಮೈಸೂರು: ಹೊರವಲಯದ ಉತ್ತನಹಳ್ಳಿ ಬಳಿ ನಡೆಯತ್ತಿರುವ ‘ಯುವ ದಸರಾ’ದ ಕೊನೆಯ ದಿನವಾದ ಗುರುವಾರ ಹಳೆಯ ಹಾಗೂ ಹೊಸ ಚಿತ್ರಗೀತೆಗಳ ಗಾನಸುಧೆಯಿಂದ ವೇದಿಕೆ‌ ಕಳೆಗಟ್ಟಿತು. ಹಿರಿ–ಕಿರಿಯರ ನೆಚ್ಚಿನ ಸಂಗೀತ ಸಂಯೋಜನೆಯ ‘ರಾಜ’ನನ್ನು ಕಣ್ತುಂಬಿಕೊಳ್ಳಲು ಜನ ಜಮಾಯಿಸಿದ್ದರು. ಮಧುರ ಹಾಡುಗಳಿಗೆ ತಲೆದೂಗಿದರು.

ADVERTISEMENT

ಕಂಸಾಳೆಯ ಮೂಲಕ ಕಲಾವಿದರು ಇಳಯರಾಜ ಅವರನ್ನು ವೇದಿಕೆಗೆ ಸ್ವಾಗತಿಸಿದರು. ‘ಗುರು ಬ್ರಹ್ಮ ಗುರು ವಿಷ್ಣು’ ಮಂತ್ರ ಮೊಳಗುತ್ತಿದ್ದಂತೆ ಬಿಳಿ ವಸ್ತ್ರಧಾರಿಯಾಗಿ ತಮ್ಮ ನೆಚ್ಚಿನ ಹಾರ್ಮೋನಿಯಂ ಮುಂದೆ ಹಾಜರಾದ ಇಳಯರಾಜ, ತಮ್ಮ ಮಾಧುರ್ಯಪೂರ್ಣ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿದರು. ಸಂಗೀತದ ತಂಪನೆರೆದರು. ಕೊಲ್ಲೂರು ಮೂಕಾಂಬಿಕೆಯ ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮ ಸತತವಾಗಿ ಮೂರು ಗಂಟೆಗೂ ಅಧಿಕ ಕಾಲ ಸಂಗೀತದ ಸುಧೆ ಹರಿಸಿತು.

‘1974ರಲ್ಲಿ ಮೈಸೂರಿನ ಪುರಭವನದಲ್ಲಿ ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಅಂದಿನ ಅನೇಕ ದಿಗ್ಗಜ ಕಲಾವಿದರು ಅಲ್ಲಿದ್ದರು. ಅದರಲ್ಲಿ ಕೀ ಬೋರ್ಡ್ ನುಡಿಸಲು ಬಂದಿದ್ದೆ. ಕಾರ್ಯಕ್ರಮ ಮುಗಿಸಿ ಮೂಕಾಂಬಿಕೆ ಸನ್ನಿಧಾನಕ್ಕೆ ತೆರಳಿದ್ದೆ. ಆಕೆಯನ್ನು ನೋಡಿದಾಗ ಸಿಕ್ಕಿದ್ದ ಆನಂದ ಮರೆಯಲಸಾಧ್ಯ. ಆಕೆ ನನ್ನ ಕೈ ಹಿಡಿದಳು’ ಎಂದು ಭಾವುಕರಾದರು.

‘ಆ ಚಾಮುಂಡಿ ತಾಯಿ ನನ್ನನ್ನು ಇಲ್ಲಿಗೆ ಕರೆದಿದ್ದಾಳೆ’ ಎಂದು ಸಂತಸ ವ್ಯಕ್ತಪಡಿಸಿದರು.

ಮೂವತ್ತಕ್ಕಿಂತಲೂ ಹೆಚ್ಚಿನ ಕಲಾವಿದರಿಂದ ತುಂಬಿದ ವೇದಿಕೆಯಿಂದ ಬರುತ್ತಿದ್ದ ಹಾಡುಗಳು ಮನತುಂಬಿದವು. ಇಳಯರಾಜ ತಾವು ಸಂಯೋಜಿಸಿದ ಕನ್ನಡದ ಮೊದಲ ಹಾಡು ‘ಆನಂದ ಕಂಡೆ ನಾನು’ ಹಾಡುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು‌ ಮುಟ್ಟಿತು.

ಗಾಯಕ ಹರಿಚರಣ್ ‘ಓಂ ಶಿವೋಹಂ ರುದ್ರನಾಮಂ ಭಜೇಹಂ’ ಹಾಡಿ ಪ್ರೇಕ್ಷಕರಲ್ಲಿ ಭಕ್ತಿಯ ಭಾವನೆಯನ್ನು ತುಂಬಿದರು. ಗಾಯಕಿ ಶ್ವೇತಾ ಮೋಹನ್ ಹಾಡಿದ ಹಳೆಯ ಪ್ರೇಮಗೀತೆಗಳು ಹಿರಿಯಜೀವಗಳನ್ನು ನಾಚಿಸಿತು. ಪ್ರತಿಯೊಂದು ಹಾಡಿನ ಸೃಷ್ಟಿಯ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಇಳಯರಾಜ ಅವರ ಕನ್ನಡದ ಮಾತುಗಳಿಗೆ ಪ್ರೇಕ್ಷಕರು ಮರುಳಾದರು. ‘ಯಾರೇ ಕೂಗಾಡಲಿ...’ ಹಾಡಿನ ಮೂಲಕ ರಾಜ್‌ಕುಮಾರ್ ಅವರನ್ನು ಮೊದಲ ಬಾರಿ ಹಾಡಿಸಿದ್ದು ನಾನೇ ಎಂದು ಇಳಯರಾಜ ಹೆಮ್ಮೆಪಟ್ಟುಕೊಂಡರು.

‘ಕೇಳೆ ಕೋಗಿಲೆ ಇಂಪಾಗಲಾ’, ‘ಜೀವ ಹೂವಾಗಿದೆ ಭಾವ ಜೇನಾಗಿದೆ...’, ‘ಹೃದಯ ರಂಗೋಲಿ ಅಳಿಸುತಿದೆ ಇಂದು’, ‘ಓಂಕಾರದಿ ಕಂಡೆ ಪ್ರೇಮ ರಾಗವ’, ‘ಕೇಳದೆ‌ ನಿಮಗೀಗ ದೂರದಲ್ಲಿ ಯಾರೋ’, ‘ನಗುವಾ ನಯನ ಮಧರಾ ಮೌನ’ ಮೊದಲಾದ ಕನ್ನಡದ ಎವರ್ ಗ್ರೀನ್ ಹಾಡುಗಳಿಗೆ ಗಾಯಕರೊಂದಿಗೆ ಪ್ರೇಕ್ಷಕರೂ ಧ್ವನಿಯಾದರು.

ಮಳೆಯ ಸಿಂಚನ...

ಯುವದಸರಾ ಕೊನೆಯ ದಿನದ ಕಾರ್ಯಕ್ರಮವು ಮಳೆಯ ನಡುವೆಯೇ ಸಮಾರೋಪಗೊಂಡಿತು.

ಆರಂಭಕ್ಕೆ ಕೆಲವು ಗಂಟೆಗಳ ಮೊದಲು ಸುರಿದ ಮಳೆಯಿಂದ ಮೈದಾನ ಕೆಸರುಮಯವಾಗಿತ್ತು. ಕಾರ್ಯಕ್ರಮ ಶುರುವಾದ ಬಳಿಕವೂ ಆಗಾಗ ಮಳೆಯ ಸಿಂಚನವಾಯಿತು. ಇದರಿಂದಾಗಿ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಮಳೆಯನ್ನು ‘ವರುಣ ದೇವನ ಆಶೀರ್ವಾದ’ ಎಂದು ಇಳಯರಾಜ ಸಂಬೋಧಿಸಿದರು.

ಕೆಲವರು, ಕುರ್ಚಿಗಳನ್ನೇ ಬಳಸಿ ಮಳೆಯಿಂದ ರಕ್ಷಣೆ ಪಡೆದುಕೊಂಡರು.

ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ದೇಶಕ ಎಸ್.ನಾರಾಯಣ, ಸಾಹಿತಿ ಕೆ.ಕಲ್ಯಾಣ್‌ ವೇದಿಕೆಯಲ್ಲಿ ಇಳಯರಾಜ ಅವರೊಂದಿಗಿನ ಕೆಲಸದ ಸನ್ನಿವೇಶನಗಳನ್ನು ಹಂಚಿಕೊಂಡರು. ಕನ್ನಡದ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಎಸ್‌ಪಿಬಿ ನೆನಪು...

ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.ಬಿ. ಚರಣ್ ಮಧುರ ಪ್ರೇಮಗೀತೆಗಳ ಮೂಲಕ ನೆರೆದಿದ್ದವರ ಶಿಳ್ಳೆ–ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರು. ‘ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು’ ಹಾಡಿನ ಮೂಲಕ ಎಸ್‌ಪಿಬಿಯ ನೆನಪನ್ನು ತಂದರು.

ರೂಪಾವರಿ ಮತ್ತು ಶರತ್ ಹಾಡಿದ ಮಾತು ತಪ್ಪದ ಮಗು ಚಿತ್ರದ ‘ಆಕಾಶದಿಂದ ಜಾರಿ ಈ ಭೂಮಿಗೆ ಬಂದ ನೋಡಿ’ ಹಾಡುತ್ತಿದ್ದಂತೆ ಮಳೆ ಹನಿಗಳು ಇಳೆಯ ಸ್ಪರ್ಶಿಸಿದವು. ಅನನ್ಯಾ ಭಟ್, ಪ್ರಿಯಾ ತಮ್ಮ ಮಧುರ ಧ್ವನಿಯಿಂದ ಸಂಗೀತ ರಸಿಕರ ಮನ ಗೆದ್ದರು.

‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಹಾಡಿಗೆ ಯುವಜನರು ಕುಣಿದರು. ಮಕ್ಕಳ ಕುಣಿತ ಮಳೆಯನ್ನೂ ನಾಚುವಂತೆ ಮಾಡಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.