ADVERTISEMENT

ದಸರಾ ನಾಡಕುಸ್ತಿ: ಸಿದ್ದು ವಿರುದ್ಧ ದೀಕ್ಷಿತ್‌ಗೆ ಜಯ

ಮದಗಜಗಳಂತೆ ಸೆಣಸಿದ ಪೈಲ್ವಾನರು

ಮೋಹನ್ ಕುಮಾರ ಸಿ.
Published 5 ಅಕ್ಟೋಬರ್ 2024, 6:56 IST
Last Updated 5 ಅಕ್ಟೋಬರ್ 2024, 6:56 IST
ದಸರಾ ನಾಡಕುಸ್ತಿಯಲ್ಲಿ ಶುಕ್ರವಾರ ಮೈಸೂರಿನ ನಾಗನಹಳ್ಳಿಯ ಎನ್.ಎಸ್.ಕಿಶನ್‌ಗೌಡ ಮತ್ತು ಬೆಂಗಳೂರಿನ ಶಿವಾಜಿನಗರದ ಕಲೀಲ್ ಖಾನ್ ನಡುವಿನ ಸೆಣಸಾಟದ ರೋಚಕ ದೃಶ್ಯ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ದಸರಾ ನಾಡಕುಸ್ತಿಯಲ್ಲಿ ಶುಕ್ರವಾರ ಮೈಸೂರಿನ ನಾಗನಹಳ್ಳಿಯ ಎನ್.ಎಸ್.ಕಿಶನ್‌ಗೌಡ ಮತ್ತು ಬೆಂಗಳೂರಿನ ಶಿವಾಜಿನಗರದ ಕಲೀಲ್ ಖಾನ್ ನಡುವಿನ ಸೆಣಸಾಟದ ರೋಚಕ ದೃಶ್ಯ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಇಲ್ಲಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಸರಾ ನಾಡಕುಸ್ತಿಯಲ್ಲಿ ಶುಕ್ರವಾರ ಪೈಲ್ವಾನ್ ದೀಕ್ಷಿತ್‌ ಮೈಸೂರಿನವರೇ ಆದ ಸಿದ್ದು ವಿರುದ್ಧ ಜಯಿಸಿದರು.

ಆವೆ ಮಣ್ಣಿನ ಅಂಗಳವು ಪೈಲ್ವಾನರ ‘ದೊಡ್ಡ ಕುಸ್ತಿ’ ಕಾಳಗಕ್ಕೆ ಕಾದ ಹೆಂಚಾಗಿತ್ತು. 30 ನಿಮಿಷಗಳ ಪಂದ್ಯದಲ್ಲಿ ದೀಕ್ಷಿತ್‌ ಹಾಗೂ ಸಿದ್ದು ಮದಗಜಗಳಂತೆ ಪೈಪೋಟಿಯ ಹೋರಾಟ ನಡೆಸಿದರು. 11ನೇ ನಿಮಿಷದಲ್ಲಿ ಆಟವನ್ನು ತಮ್ಮತ್ತ ವಾಲಿಸಿಕೊಂಡ ದೀಕ್ಷಿತ್‌ ಬಿಗಿಪಟ್ಟುಗಳ ಮೂಲಕ ಆಕ್ರಮಣಕಾರಿಯಾಗಿ ಆಡಿ ಕುಸ್ತಿಪ್ರಿಯರನ್ನು ರಂಜಿಸಿದರು. ಪಟ್ಟುಗಳಿಂದ ತಪ್ಪಿಸಿಕೊಳ್ಳಲು ಕಣದಗಲಕ್ಕೂ ಅಡ್ಡಾಡುತ್ತಿದ್ದ ಸಿದ್ದು ಅವರನ್ನು 15ನೇ ನಿಮಿಷದಲ್ಲಿ ದೀಕ್ಷಿತ್ ಕೆಡವಿ ‘ಚಿತ್’ ಮಾಡಿದರು.

ಕನಕಪುರದ ಪೈಲ್ವಾನ್ ಎಚ್‌.ಸಿ.ಸೂರಜ್‌ ಮೈಸೂರಿನ ಹೊಸಹಳ್ಳಿಯ ದರ್ಶನ್‌ ಅವರನ್ನು 5 ನಿಮಿಷ 30 ಸೆಕೆಂಡ್‌ಗಳಲ್ಲಿ ಚಿತ್ ಮಾಡಿದರೆ, ಆಲನಹಳ್ಳಿಯ ಪುಟಾಣಿ ಪೈಲ್ವಾನ್‌ ಕೌಸ್ತುಭ್‌ 1 ನಿಮಿಷ 20 ಸೆಕೆಂಡ್‌ಗಳಲ್ಲಿ ಗೌಸಿಯಾ ನಗರದ ಮೊಹಮ್ಮದ್‌ ನೌಮಾದ್‌ ಅವರನ್ನು ಮಣಿಸಿದರು.

ADVERTISEMENT

ಫಲಿತಾಂಶ:

ಗೆದ್ದವರು: ಶಶಾಂಕ್ ವಿರುದ್ಧ ಮೋಹಿತ್ (2 ನಿಮಿಷ), ರಾಯನ್ ನೂರ್‌ ಇಮ್ರಾನ್ ವಿರುದ್ಧ ಚೇತನ್‌ (3 ನಿಮಿಷ 30 ಸೆಕೆಂಡ್‌), ಪುನೀತ್ ವಿರುದ್ಧ ರವಿಕುಮಾರ್ (40 ಸೆಕೆಂಡ್), ಸರವಣ್‌ ಕುಮಾರ್ ವಿರುದ್ಧ ಮುಬಾರಕ್ ಪಾಷಾ (2 ನಿಮಿಷ 11 ಸೆಕೆಂಡ್‌), ಶ್ರೀನಿವಾಸ್ ವಿರುದ್ಧ ಮೊಹಮ್ಮದ್‌ ಅಜಾನ್ ಖಾನ್ (3 ನಿಮಿಷ), ಮಹದೇವಸ್ವಾಮಿ ವಿರುದ್ಧ ಸುಯೇಂದರ್ ಗೌಡ (20 ಸೆಕೆಂಡ್), ಆರ್.ನಿತಿನ್‌ ವಿರುದ್ಧ ಎನ್‌.ವಿಕಾಸ್ (50 ಸೆಕೆಂಡ್), ಸೋಮಶೇಖರ್ ವಿರುದ್ಧ ಚರಣ್‌ (1 ನಿಮಿಷ 20 ಸೆಕೆಂಡ್), ಖುಷಿ ವಿರುದ್ಧ ಶಿಕ್ಷಾ (40 ಸೆಕೆಂಡ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.