ಯಾದಗಿರಿ: ‘ಎರಡು ತಿಂಗಳಿಂದ ಪಗಾರ ಕೊಟ್ಟಿಲ್ಲ. ಇಂಥಾ ಸಂದರ್ಭದಲ್ಲಿ ದಸರಾ ಹಬ್ಬ ಬಂದಿದೆ. ಈ ಎರಡು ತಿಂಗಳ ಕಾಲ ಅಂಗಡಿಯಿಂದ ಉದ್ರಿ ತಂದು ಸಂಸಾರ ಸಾಗಿಸಿದ್ದೇವೆ. ಈಗ ಹಬ್ಬಕ್ಕೆ ಅಂಗಡಿಯವರು ಉದ್ರಿ ಕೊಡಲು ತಕರಾರು ತೆಗೆದಿದ್ದಾರೆ. ಏನು ಮಾಡುವುದು ಎಂಬುದೇ ತೋಚುತ್ತಿಲ್ಲ..’
ವೇತನ ವಿಳಂಬದಿಂದಾಗಿ ಸಂಸಾರದ ಸಾಗಿಸಲು ಸಂಕಷ್ಟಪಡುತ್ತಿರುವ ಇಲ್ಲಿನ ನಗರಸಭೆ ಪೌರಕಾರ್ಮಿಕರ ಅಳಲು ಇದು.
‘ನಗರದ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಸತಾಯಿಸಲಾಗುತ್ತಿದೆ. ಸರ್ಕಾರ ನೀಡಿದರೂ ಅಧಿಕಾರಿಗಳು ಮಾತ್ರ ಸಕಾಲದಲ್ಲಿ ಪೌರಕಾರ್ಮಿಕರಿಗೆ ವೇತನ ವಿತರಣೆ ಮಾಡುತ್ತಿಲ್ಲ’ ಎಂದು ಪೌರಕಾರ್ಮಿಕರು ಮಂಗಳವಾರ ‘ಪ್ರಜಾವಾಣಿ’ ಯೊಂದಿಗೆ ಗೋಳು ತೋಡಿಕೊಂಡರು.
ನಗರದಲ್ಲಿ ಜನರು ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಇಲ್ಲಿನ ಪೌರಕಾರ್ಮಿಕರು ಮಾತ್ರ ಬರಿಗೈಯಲ್ಲಿ ಸಂಭ್ರಮಿಸುತ್ತಿರುವವರನ್ನು ನೋಡಿಕೊಂಡು ಇರಬೇಕಾದ ಸ್ಥಿತಿ ತಲೆದೋರಿದೆ.
‘ಕಿರಾಣಿ ಅಂಗಡಿ ಮಾಲೀಕರಿಗೆ ದಿನಾ ಸುಳ್ಳು ಹೇಳುವಂತಾಗಿದೆ. ಇನ್ನೊಂದಿಷ್ಟು ಉದ್ರಿ ಕೊಡ್ರಿ ಅಂದ್ರ ನಮ್ಮತ್ತ ತಿರುಗಿಯೂ ನೋಡ್ತಿಲ್ಲ. ಮೈ ಹರಕೊಂಡು ದುಡಿದು ಉಪವಾಸ ಇರುವ ಸ್ಥಿತಿ ಬಂದೈತಿ ನೋಡ್ರಿ’ ಎಂದು ಹೆಸರು ಹೇಳಲಿಚ್ಛಸದ ಪೌರಕಾರ್ಮಿಕರೊಬ್ಬರು ನೋವು ತೋಡಿಕೊಂಡರು.
ಸರ್ಕಾರದ ಆದೇಶದ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಯಾದಗಿರಿ ನಗರಸಭೆಗೆ 72 ಮಂದಿ ಕಾಯಂ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಆದರೆ, 12 ಮಂದಿ ಮಾತ್ರ ಕಾಯಂ ಪೌರಕಾರ್ಮಿಕರು ಇದ್ದಾರೆ. ಉಳಿದವರು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಕೆಲವರಿಗೆ ₹6 ಸಾವಿರ ನೀಡಿದರೆ, ಹಲವರಿಗೆ ₹7ಸಾವಿರ, ಇಲ್ಲವೇ ₹8 ಸಾವಿರ ಪಗಾರ ನೀಡುತ್ತಿದ್ದಾರೆ. ಆದರೆ, ಪೌರಕಾರ್ಮಿಕ ಕಾಯ್ದೆ ಪ್ರಕಾರ ಪ್ರತಿ ಕಾರ್ಮಿಕನಿಗೆ ತಿಂಗಳ ₹11 ಸಾವಿರದಿಂದ ₹13 ಸಾವಿರದವರೆಗೆ ಕನಿಷ್ಠ ವೇತನ ನೀಡಬೇಕು. ಆದರೆ, ಆ ನಿಯಮ ಇಲ್ಲಿ ಪಾಲನೆ ಆಗುತ್ತಿಲ್ಲ’ ಎಂಬುದಾಗಿ ಪೌರಕಾರ್ಮಿಕರು ದೂರುತ್ತಾರೆ.
ಸೂರ್ಯೋದಯಕ್ಕೂ ಮುಂಚೆ ಎದ್ದು ನಗರದ ಬೀದಿಗಳನ್ನು ಗುಡಿಸುವ ಇಲ್ಲಿನ ಪೌರಕಾರ್ಮಿಕರು ಬಹುತೇಕ ಅನಕ್ಷರಸ್ಥರಾಗಿದ್ದಾರೆ. ಕಾರ್ಮಿಕರಿಗೆ ಲಭಿಸಬೇಕಾದ ಸೌಲಭ್ಯ, ಕನಿಷ್ಠ ವೇತನ, ಬಳಕೆ ಸಾಮಗ್ರಿ ಹೀಗೆ ಯಾವೊಂದು ಅರಿವು ಅವರಿಗೆ ಇಲ್ಲ. ಹಾಗಾಗಿ, ಪೌರಕಾರ್ಮಿಕರ ಸಂಘಟನೆಯನ್ನು ನಾಮಕಾವಸ್ಥೆ ಎಂಬಂತೆ ರಚನೆಯಾಗಿದೆ. ಇದುವರೆಗೂ ಸಂಘಟನೆ ಪೌರಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ. ಅವರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ತುಟಿಬಿಚ್ಚಿಲ್ಲ. ಹೋರಾಟದ ಧ್ವನಿ ಎತ್ತಿಲ್ಲ’ ಎಂಬುದಾಗಿ ಮಹಿಳಾ ಪೌರಕಾರ್ಮಿಕರು ಆರೋಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.