ADVERTISEMENT

ಮೈಸೂರು ದಸರಾ: ಅರಮನೆಗೆ 20 ಸಾವಿರ ಹೊಸ ಬಲ್ಬ್‌

ನವರಾತ್ರಿಯಲ್ಲಿ ಹೊಂಬಣ್ಣದ ಮೆರುಗು; ಲಕ್ಷ ವಿದ್ಯುತ್‌ ದೀಪಗಳ ಬೆಳಗು

ಮೋಹನ್ ಕುಮಾರ ಸಿ.
Published 18 ಸೆಪ್ಟೆಂಬರ್ 2024, 6:05 IST
Last Updated 18 ಸೆಪ್ಟೆಂಬರ್ 2024, 6:05 IST
<div class="paragraphs"><p>ಮೈಸೂರಿನ ಅರಮನೆಯ ಬಲರಾಮ ದ್ವಾರದಲ್ಲಿ ಮಂಗಳವಾರ ಹಾಳಾಗಿದ್ದ ವಿದ್ಯುತ್‌ ಬಲ್ಬ್‌ಗಳನ್ನು ಬದಲಿಸುತ್ತಿರುವ ಕಾರ್ಮಿಕರು.</p></div>

ಮೈಸೂರಿನ ಅರಮನೆಯ ಬಲರಾಮ ದ್ವಾರದಲ್ಲಿ ಮಂಗಳವಾರ ಹಾಳಾಗಿದ್ದ ವಿದ್ಯುತ್‌ ಬಲ್ಬ್‌ಗಳನ್ನು ಬದಲಿಸುತ್ತಿರುವ ಕಾರ್ಮಿಕರು.

   

ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ನವರಾತ್ರಿಯಲ್ಲಿ ಅರಮನೆಯು ಜಗಮಗಿಸಲು 20 ಸಾವಿರ ಹೊಸ ವಿದ್ಯುತ್‌ ದೀಪಗಳ ಅಳವಡಿಕೆ ಕಾರ್ಯವು ಭರದಿಂದ ಸಾಗಿದೆ.

ADVERTISEMENT

ಅರಮನೆ ಮಂಡಳಿಯ ಎಲೆಕ್ಟ್ರಿಕಲ್‌ ವಿಭಾಗದ 12 ಸಿಬ್ಬಂದಿ, ಮಳೆ– ಗಾಳಿಯಿಂದ ಹಾಳಾದ ವಿದ್ಯುತ್‌ ಬಲ್ಬ್‌ಗಳನ್ನು ತೆರವುಗೊಳಿಸಿ, ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ ಮಂಗಳವಾರ ಮಾಡಿದರು.

ಬಲರಾಮ, ವರಾಹ, ಜಯಮಾರ್ತಾಂಡ ದ್ವಾರಗಳ ಜೊತೆಗೆ ಆವರಣದ ಎಲ್ಲ ದೇಗುಲಗಳು, ಕೋಟೆ ಸೇರಿದಂತೆ ಎಲ್ಲ ಭಾಗಗಳಿಗೂ ವಿದ್ಯುತ್‌ ದೀಪ ಅಳವಡಿಸಲಾಗುತ್ತಿದೆ. ಅರಮನೆಯ ಮುಖ್ಯ ಕಟ್ಟಡ, ಒಳಾಂಗಣಕ್ಕೆ ಬಣ್ಣ ಲೇಪನ ಕಾಮಗಾರಿಯು ಸೋಮವಾರದಿಂದ ನಡೆದಿದೆ. 

ಅರಮನೆಯ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ತೆರವುಗೊಳಿಸುವ, ವೈರಿಂಗ್‌ ಸರಿಪಡಿಸುವ ಕೆಲಸವನ್ನು ಕಾರ್ಮಿಕರು ಮುಗಿಸಿದ್ದಾರೆ. ಎತ್ತರ ದೀಪದ ಕಂಬಗಳಿಗೆ ಕ್ರೇನ್‌ನ ಅಟ್ಟಣಿಗೆಯಲ್ಲಿ ದುರಸ್ತಿಗೊಳಿಸಲಾಗುತ್ತಿದೆ. ಒಳಾಂಗಣದಲ್ಲಿ ಮಸಿ ತುಂಬಿದ್ದ ಅಲಂಕೃತ ದೀಪಗಳ ಗಾಜುಗಳನ್ನು ಜೋಪಾನವಾಗಿ ಕೆಳಗಿಳಿಸಿ ಮಸಿ ಒರೆಸಿ ಹೊಳೆಯುವಂತೆ ಮಾಡಲಾಗಿದ್ದು, ಈ ಕಾರ್ಯ ಸೋಮವಾರ ಮುಗಿದಿದೆ.

‘ಪ್ರತಿ ವರ್ಷವೂ ಕೆಟ್ಟಿದ್ದ ಬಲ್ಬ್‌ಗಳನ್ನು ಬದಲಿಸಲಾಗುತ್ತದೆ. ಕಳೆದ ವರ್ಷಕ್ಕಿಂತ ನಾಲ್ಕೂವರೆ ಸಾವಿರ ಕಡಿಮೆ ಬಲ್ಬ್‌ ಈ ಬಾರಿ ಹಾಳಾಗಿವೆ. ಎಲ್ಲವನ್ನೂ ಗುರುತಿಸಿರುವ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ಸುಣ್ಣ–ಬಣ್ಣದ ಕೆಲಸವೂ ನಡೆದಿದೆ’ ಎಂದು ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‌

‘ಬಲ್ಪ್‌ಗಳು ಬುರುಡೆ ತಿರುಪಿನವಾಗಿದ್ದು, ಅವುಗಳನ್ನು ಕಳವು ಮಾಡುವುದು ಸಾಧ್ಯವಿಲ್ಲ. ಬಿಗಿಯಾಗಿ ಕೂರುವುದರಿಂದ ಗಾಳಿ– ಮಳೆಗೆ ಅಲ್ಲಾಡುವುದಿಲ್ಲ. ದೆಹಲಿ ಹಾಗೂ ಹೈದರಾಬಾದ್‌ನಿಂದ ಬಲ್ಬ್‌ಗಳನ್ನು ತರಿಸಲಾಗುತ್ತಿದೆ. 15 ವ್ಯಾಟ್‌ ಸಾಮರ್ಥ್ಯವಿದ್ದು, ಮೈಸೂರು ಲ್ಯಾಂಪ್ಸ್‌ ತಯಾರಿಸುತ್ತಿದ್ದ ‘ಎಂ’ ಆಕಾರದಲ್ಲಿಯೇ ಟಂಗ್‌ಸ್ಟನ್‌ ತಂತಿ ವಿನ್ಯಾಸ ಇರುವುದು ವಿಶೇಷ’ ಎಂದು ತಿಳಿಸಿದರು. 

‘ಅರಮನೆ ಆವರಣದ ಬೀದಿಗಳು, ಉದ್ಯಾನಗಳಲ್ಲಿ ಅಲಂಕಾರಿಕ ವಿದ್ಯುತ್‌ ದೀಪಗಳಿಗೆ ಎಲ್‌ಇಡಿ ಬಲ್ಬ್‌ ಬಳಸಲಾಗಿದೆ. ಫೈವ್‌ಲೈಟ್ಸ್‌, ಅರಮನೆಯ ಒಳಗಿನ ತೂಗುವ ದೀಪಗಳಿಗೂ ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಲಾಗುತ್ತದೆ’ ಎಂದರು.

‘ನವರಾತ್ರಿ ವೇಳೆ ಅರಮನೆಯಲ್ಲಿ ವಾಡಿಕೆಯಂತೆ ಸಂಜೆ 7ರಿಂದ ರಾತ್ರಿ 10ರವೆರೆಗೆ ವಿದ್ಯುತ್‌ ದೀಪಾಲಂಕಾರ ಜಗಮಗಿಸಲಿದೆ. ಉಳಿದ ತಿಂಗಳಲ್ಲಿ ವಿದ್ಯುತ್‌ ಬಿಲ್‌ ವೆಚ್ಚ ₹ 12 ಲಕ್ಷವಿದ್ದರೆ, ದಸರೆ ವೇಳೆ ₹ 17 ಲಕ್ಷ ದಾಟುತ್ತದೆ. ವಿದ್ಯುತ್‌ ದರ ಪರಿಷ್ಕರಣೆ ಆಗಿರುವುದರಿಂದ ಈ ಬಾರಿ ದರ ಹೆಚ್ಚಾಗಲಿದೆ. ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮವನ್ನು ಅರಮನೆಯ ವಿದ್ಯುತ್‌ ವಿಭಾಗ ವಹಿಸಿದೆ’ ಎಂದು ತಿಳಿಸಿದರು.

ಮರದ ಅಂಬಾರಿ ತಾಲೀಮು

ಇಂದಿನಿಂದ‌ ಅಂಬಾರಿ ಆನೆ ‘ಅಭಿಮನ್ಯು’ವಿಗೆ ಮರದ ಅಂಬಾರಿ ತಾಲೀಮು ಬುಧವಾರದಿಂದ ಆರಂಭವಾಗಲಿದ್ದು ಸಂಜೆ 4ಕ್ಕೆ ಅಂಬಾರಿ ಕಟ್ಟಲಾಗುತ್ತಿದೆ. ‘ಅಭಿಮನ್ಯು ಜೊತೆ ಭವಿಷ್ಯದ ಅಂಬಾರಿ ಆನೆಗಳಾಗಿ ತಯಾರು ಮಾಡಲು ಧನಂಜಯ ಮಹೇಂದ್ರ ಗೋಪಿ ಮರದ ಅಂಬಾರಿ ಹೊರಿಸಲಾಗುವುದು. ಏಕಲವ್ಯ ಆನೆಯೂ ಅಚ್ಚರಿಯ ರೀತಿಯಲ್ಲಿ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು 325 ಕೆ.ಜಿ ಭಾರ ಹೊರಿಸುವ ತಾಲೀಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ. ಅವನಿಗೂ ತಾಲೀಮು ನೀಡುವ ಆಲೋಚನೆ ಮಾಡಲಾಗಿದೆ’ ಎಂದು ಡಿಸಿಎಫ್‌ ಐ.ಬಿ.ಪ್ರಭುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಎಲ್ಲ ಆನೆಗಳು ಆರೋಗ್ಯವಾಗಿದ್ದು ಹಿರಿಯ ಆನೆಗಳ ಅನುಭವ ಕಿರಿಯ ಆನೆಗಳಿಗೆ ಸಿಗುತ್ತಿದೆ. ವರಲಕ್ಷ್ಮಿಗೆ 68 ವರ್ಷವಾಗಿದ್ದು 12 ವರ್ಷದ ದಸರೆಯ ಅನುಭವವಿದೆ. ಆರೋಗ್ಯವಾಗಿದ್ದು ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಶ್ರೀರಂಗಪಟ್ಟಣ ದಸರಾಗೆ ಆಯ್ಕೆ ಮಾಡಿರುವ ಆನೆಗಳ ಆಯ್ಕೆ ‍ಪಟ್ಟಿ ಕಳುಹಿಸಿದ್ದು ಮೇಲಧಿಕಾರಿಗಳು ನಿರ್ಧರಿಸಲಿದ್ದಾರೆ’ ಎಂದರು. 

ಕುಶಾಲತೋಪು ಸಿಡಿಸುವ ಅಭ್ಯಾಸ

ಅರಮನೆ ಆವರಣದಲ್ಲಿ ಕುಶಾಲತೋಪು ಸಿಡಿಸುವ ತಾಲೀಮಿಗಾಗಿ ಮಂಗಳವಾರ ಅಭ್ಯಾಸ ನಡೆಯಿತು. ಸಶಸ್ತ್ರ ಮೀಸಲು ಪಡೆಯ ‘ಫಿರಂಗಿ ದಳ’ದ 35 ಸಿಬ್ಬಂದಿ ಕುಶಾಲತೋಪು ಸಿಡಿಸುವ ಅಭ್ಯಾಸದಲ್ಲಿ ಭಾಗವಹಿಸಿದರು. ಆನೆಗಳು ಹಾಗೂ ಕುದುರೆಗಳು ಕುಶಾಲತೋಪು ಸಿಡಿಸುವ ವೇಳೆ ಬೆಚ್ಚದಂತೆ ತಾಲೀಮು ನೀಡಲಾಗುತ್ತದೆ. ಆದರೆ ದಿನ ಇನ್ನೂ ನಿಗದಿಯಾಗಿಲ್ಲ. ಸಿಡಿಮದ್ದಿನ (ಗನ್‌ಪೌಡರ್) ಪುಡಿಯನ್ನು ಒಣಗಿಸಲಾಗುತ್ತಿದೆ. ಈಗ ಸಿಬ್ಬಂದಿ ಫಿರಂಗಿ ನಿರ್ವಹಣೆಯ ತಾಲೀಮಿನಲ್ಲಿ ನಿರತರಾಗಿದ್ದಾರೆ.

ತಾಲೀಮು ಹೇಗೆ?:

ಕುಶಾಲತೋಪು ಒಮ್ಮೆ ಸಿಡಿದ ನಂತರ ಮಿಂಚಿನ ವೇಗದಲ್ಲಿ ‘ಸಿಂಬ’ವನ್ನು ಬ್ಯಾರಲ್‌ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ತೆಗೆಯಬೇಕಿದೆ. ವಿಜಯದಶಮಿ ದಿನ ರಾಷ್ಟ್ರಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ 21 ಬಾರಿ ಕುಶಾಲತೋಪು ಸಿಡಿಸಬೇಕಿದೆ. ಇಷ್ಟು ಕಡಿಮೆ ಸೆಕೆಂಡುಗಳಲ್ಲಿ ಬ್ಯಾರಲ್‌ ಅನ್ನು 21 ಬಾರಿ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಇದಕ್ಕಾಗಿ ನಿತ್ಯ ತಾಲೀಮು ನಡೆಯುತ್ತಿದೆ.‌‌ ಕೆಲ ದಿನಗಳ ಬಳಿಕ ಆನೆಗಳು ಕುದುರೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ನೀಡಲಾಗುತ್ತದೆ.

ಸಯ್ಯಾಜಿರಾವ್‌ ರಸ್ತೆಯಲ್ಲಿ ದೀಪಾಲಂಕಾರ ಸಿದ್ಧತೆಯು ಬಿರುಸಿನಿಂದ ಸಾಗಿದ್ದು ಕಾರ್ಮಿಕರೊಬ್ಬರು ಬಲ್ಬ್‌ ಅಳವಡಿಸುತ್ತಿರುವ ದೃಶ್ಯ 
ಬನ್ನಿಮಂಟಪದಲ್ಲಿ ಮರದ ಅಂಬಾರಿ ಇಳಿಸಲು ಹಗ್ಗ ಸುತ್ತುವ ಯಂತ್ರವನ್ನು ಮಂಗಳವಾರ ಅಳವಡಿಸಲಾಯಿತು. ಎಸಿಪಿ ಚಂದ್ರಶೇಖರ್ ಇನ್‌ಸ್ಪೆಕ್ಟರ್ ಆನಂದಕುಮಾರ್ ಅಕ್ರಮ್ ಪಾಲ್ಗೊಂಡಿದ್ದರು
ಅರಮನೆ ಆವರಣದಲ್ಲಿ ಮಜ್ಜನದ ಖುಷಿಯಲ್ಲಿದ್ದ ಆನೆಗಳನ್ನು ನಾಗರಿಕರು ನೋಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.