ಮೈಸೂರು: ಧೋ ಎಂದು ಸುರಿದ ಮಳೆಯ ನಡುವೆ ಕುಗ್ಗದೆ ನಡೆದ ಕಲಾವಿದರ ಮೇಳ, ತೊಯ್ದರೂ ಜಗ್ಗದೆ ಕುಳಿತ ಸಾವಿರಾರು ಜನ ಹಾಗೂ ಭದ್ರತೆಗೆ ಬದ್ಧರಾದ ಪೊಲೀಸರನ್ನು ಕಂಡು ಚದುರಿದ ಮೋಡಗಳ ಮರೆಯಿಂದ ಇಣುಕಿದ ಇಳಿಸಂಜೆಯಲ್ಲಿ ದಸರಾ ಉತ್ಸವದ ಜಂಬೂಸವಾರಿ ಶನಿವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.
ಕೆಲವು ವರ್ಷಗಳ ಹಿಂದೆಯೂ ಇಂಥದ್ದೇ ಜೋರು ಮಳೆಯಲ್ಲೇ ಜಂಬೂಸವಾರಿ ನಡೆದಿತ್ತು ಎಂಬ ನೆನಪಿನೊಂದಿಗೆ ಅಂಬಾವಿಲಾಸ ಅರಮನೆ ಆವರಣವು ವಿಶೇಷ ಅನುಭವಕ್ಕೆ ಸಾಕ್ಷಿಯಾಯಿತು.
ಮಧ್ಯಾಹ್ನ 1.50ಕ್ಕೆ ಅರಮನೆ ಹೊರ ಆವರಣದ ಕೋಟೆ ಆಂಜನೇಯ ಗುಡಿಯ ಮುಂದೆ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಿ, ಸಚಿವರೊಂದಿಗೆ ಅರಮನೆಯೊಳಗೆ ಬಂದ ಬಳಿಕ, ಸ್ತಬ್ಧಚಿತ್ರ ಮತ್ತು ಕಲಾತಂಡಗಳ ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮಳೆ ಶುರುವಾಯಿತು.
ಸುಮಾರು 50 ನಿಮಿಷಗಳ ಕಾಲ ಎಡೆಬಿಡದೆ ಸುರಿದು, ಕೊಡೆ ತಂದಿದ್ದವರನ್ನು ಬಿಟ್ಟು ಎಲ್ಲರನ್ನೂ ತೋಯಿಸಿತು. ಆದರೆ, ಮೆರವಣಿಗೆಯ ಸಂಭ್ರಮ ಮಾತ್ರ ನಿಲ್ಲಲಿಲ್ಲ. ನಂತರ ಮಳೆ ಬಿಡುವು ನೀಡಿತು.
ಮೂರು ಗಂಟೆ ಕಾಲ ನಡೆದ ಆಕರ್ಷಕ ಮೆರವಣಿಗೆಯ ಕೊನೆಗೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ರಾಷ್ಟ್ರಗೀತೆ ಮುಗಿಯುವುದರೊಳಗೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆನೆಗಳು ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿಯು ಮುಂದಕ್ಕೆ ಸಾಗಿತು.
ಅಂಬಾರಿ ಆನೆಯೊಂದಿಗೆ ಕುಮ್ಕಿ ಆನೆಗಳಾಗಿ ‘ಹಿರಣ್ಯಾ’ ಮತ್ತು ‘ಲಕ್ಷ್ಮಿ’ ಹೆಜ್ಜೆ ಹಾಕಿದರೆ, ‘ಧನಂಜಯ’ ನಿಶಾನೆ ಆನೆಯಾಗಿ ಮೆರವಣಿಗೆ ಮುನ್ನಡೆಸಿದ. ನೌಫತ್ ಆನೆಯಾಗಿ ‘ಗೋಪಿ’, ಸಾಲಾನೆಗಳಾಗಿ ‘ಪ್ರಶಾಂತ’, ‘ಸುಗ್ರೀವ’, ‘ಮಹೇಂದ್ರ’, ‘ಏಕಲವ್ಯ’, ‘ಭೀಮ’ ಮತ್ತು ‘ಕಂಜನ್’ ಸಾಗಿದವು. ಆಕರ್ಷಕವಾದ ಸ್ತಬ್ಧಚಿತ್ರಗಳು, ಪೊಲೀಸ್ ಪಡೆ, ಅಶ್ವಾರೋಹಿ ಪಡೆಗಳೊಂದಿಗೆ, ಜಾನಪದ ಕಲಾ ತಂಡಗಳ ನೂರಾರು ಕಲಾವಿದರು ಅನನ್ಯ ಸಾಂಸ್ಕೃತಿಕ ವೈಭವವನ್ನು ಸೃಷ್ಟಿಸಿದರು. ಜಂಬೂಸವಾರಿಯು ರಾಜಪಥವನ್ನು ಪ್ರವೇಶಿಸಿ ಮುಂದೆ ಸಾಗುವಾಗಲೂ ತುಂತುರು ಮಳೆ ಬೀಳುತ್ತಿತ್ತು.
ರಾತ್ರಿ ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತಿನಲ್ಲಿ ಮೊದಲ ಬಾರಿಗೆ 1500 ಡ್ರೋನ್‌ಗಳ ಮೂಲಕ ನಡೆದ ಪ್ರದರ್ಶನ ವಿಶೇಷವಾಗಿತ್ತು. ಕವಾಯತವನ್ನು ಸಾವಿರಾರು ಮಂದಿ ವೀಕ್ಷಿಸುವುದರೊಂದಿಗೆ ಉತ್ಸವಕ್ಕೆ ಸಂಭ್ರಮದ ತೆರೆಬಿತ್ತು.
ವಿಜಯದಶಮಿ ಮೆರವಣಿಗೆ ಉದ್ಘಾಟನೆ ವೇಳೆ ರಾಜವಂಶಸ್ಥರು ಪಾಲ್ಗೊಳ್ಳುವುದು ಸಂಪ್ರದಾಯ. ಆದರೆ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಲಿಲಿಲ್ಲ. ಯದುವೀರ್–ತ್ರಿಷಿಕಾ ದಂಪತಿಗೆ 2ನೇ ಗಂಡು ಮಗು ಶುಕ್ರವಾರ ಜನಿಸಿದ್ದು ಸೂತಕದ ಕಾರಣದಿಂದ ಅವರು ದೂರ ಉಳಿದರು ಎನ್ನಲಾಗಿದೆ. ಕೆಲ ವರ್ಷಗಳಿಂದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಕೂಡ ಪುಷ್ಪಾರ್ಚನೆ ವೇಳೆ ಪಾಲ್ಗೊಳ್ಳುತ್ತಿದ್ದರು. ಆದರೆ ಈ ವರ್ಷ ನಿಲಯ್ ವಿಪಿನ್‌ಚಂದ್ರ ಅಂಜಾರಿಯ ಗೈರುಹಾಜರಾದರು. ಅವರಿಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಮಳೆ ನಿಂತ ಬಳಿಕ ನಡೆದ ಮೆರವಣಿಗೆಯಲ್ಲಿ ಅವ್ಯವಸ್ಥೆಯೂ ಎದ್ದು ಕಂಡಿತು. ಸ್ತಬ್ದಚಿತ್ರಗಳು ಹಾಗೂ ಕಲಾವಿದರು ಸಾಗುವಾಗ ಅಶ್ವಾರೋಹಿ ದಳ ಸಶಸ್ತ್ರ ಪೊಲೀಸರೂ ಅವರ ಎದುರಿನಿಂದಲೇ ಸಾಗಿ ಬಂದರು. ಅಂಬಾರಿ ಹಾಗೂ ಕುಮ್ಕಿ ಆನೆ ಹೊರತುಪಡಿಸಿ ಉದ್ದೇಶಿತ ಮಾರ್ಗದಲ್ಲಿ ಇವರಾರೂ ಬರಲಿಲ್ಲ. ಅದರಿಂದ ಮೆರವಣಿಗೆ ಮಾರ್ಗದಲ್ಲಿ ಇಕ್ಕಟ್ಟು ಏರ್ಪಟ್ಟಿತ್ತು. ಅದಲ್ಲದೆ ಸಾಂಸ್ಕೃತಿಕ ಸಮಿತಿಯ ಸದಸ್ಯರು ಪೊಲೀಸರು ಎನ್‌ಸಿಸಿ ಕೆಡೆಟ್‌ಗಳು ಗುಂಪಾಗಿ ನಿಂತು ಮಾತುಕತೆಯಲ್ಲಿ ತೊಡಗಿದ್ದರು ಕೆಲವರು ಫೋಟೊ ತೆಗೆಯುತ್ತಿದ್ದರು.
‘ನಿಮ್ಮ ಬೆನ್ನು ನೋಡಲೆಂದು ಬಂದೆದ್ದೀವೆಯೇ’ ಎಂದು ಗೋಲ್ಡ್ ಕಾರ್ಡ್ ಉಳ್ಳ ಮಂದಿ ವಾಗ್ವಾದಕ್ಕೂ ಇಳಿದಿದ್ದರು. ಕೆಲವರು ತಮ್ಮ ಮುಂದೆ ನಿಂತಿದ್ದವರ ಮೇಲೆ ಬಿಸ್ಕೆಟ್ ಪಾಕೆಟ್ ವಾಟರ್ ಬಾಟಲ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಸಂಜೆ 4ರಿಂದ 4.30ರವರೆಗೆ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ ಆ ಕಾರ್ಯ ನಡೆದಾಗ ಸಂಜೆ 5 ದಾಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.