ADVERTISEMENT

ಮೈಸೂರು ಯುವ ದಸರಾ: ರಂಜಿಸಿದ ರೆಹಮಾನ್ ಗಾನ ಗಾರುಡಿ

ಶಿವಪ್ರಸಾದ್ ರೈ
Published 9 ಅಕ್ಟೋಬರ್ 2024, 17:39 IST
Last Updated 9 ಅಕ್ಟೋಬರ್ 2024, 17:39 IST
<div class="paragraphs"><p>ಮೈಸೂರಿನ ಉತ್ತನಹಳ್ಳಿಯಲ್ಲಿ ಬುಧವಾರ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಎ.ಆರ್. ರೆಹಮಾನ್ ತಂಡದವರು ಹಾಡಿದರು</p></div>

ಮೈಸೂರಿನ ಉತ್ತನಹಳ್ಳಿಯಲ್ಲಿ ಬುಧವಾರ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಎ.ಆರ್. ರೆಹಮಾನ್ ತಂಡದವರು ಹಾಡಿದರು

   

– ಪ್ರಜಾವಾಣಿ ಚಿತ್ರ: ಅನೂಪ್‌ರಾಘ ಟಿ.

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಉತ್ತನಹಳ್ಳಿ ಬಳಿ ನಡೆಯುತ್ತಿರುವ ಯುವ ದಸರಾದ 4ನೇ ದಿನವಾದ ಬುಧವಾರ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಡುಗಳ‌ ಮೂಲಕ ರಂಗು ತುಂಬಿದರು. ಕಣ್ಣು ಕುಕ್ಕುವ ಬೆಳಕಿನ ವ್ಯವಸ್ಥೆ, ಅದ್ದೂರಿ ಬ್ಯಾಂಡ್ ತಂಡ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು.

ADVERTISEMENT

ಖ್ಯಾತ ಡ್ರಮ್ಮರ್ ಶಿವಮಣಿ ತಮ್ಮ ಪ್ರತಿಭೆಯ ಮೂಲಕ ಸಂಗೀತದ ಮಾಯಾಲೋಕವನ್ನೇ ಸೃಷ್ಟಿಸಿದರು. ಅರ್ಧ ಗಂಟೆವರೆಗೆ ಕಾರ್ಯಕ್ರಮ ನೀಡಿ ಚಪ್ಪಾಳೆಯ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡರು.

ಬ್ಯಾಂಡ್ ಮೂಲಕ ಸೃಷ್ಟಿಸಿದ ಬೀಟ್ ಹಾಡುಗಳು ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಸಿತು. ರಿದಂಗೆ ಹೊಂದುವ ಬೆಳಕಿನಾಟ ವರ್ಣರಂಜಿತವಾಗಿತ್ತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಅಭಿಮಾನಿಗಳ ಶಿಳ್ಳೆ, ಕೇಕೆ, ಚಪ್ಪಾಳೆಯ ನಡುವೆ ಸಂಗೀತ, ಬೆಳಕಿನಾಟದ ಅಬ್ಬರದೊಂದಿಗೆ ವೇದಿಕೆಗೆ ಬಂದ ರೆಹಮಾನ್‌ ತಮ್ಮ ಬತ್ತಳಿಕೆಯಲ್ಲಿದ್ದ ಹಿಟ್ ಹಾಡುಗಳ ಬಾಣವನ್ನು ಒಂದಾದ ಮೇಲೊಂದರಂತೆ ಪ್ರೇಕ್ಷಕರತ್ತ ಎಸೆದು ಖುಷಿ ಹಂಚಿದರು. ಕಿಕ್ಕಿರಿದ ಅಭಿಮಾನಿಗಳ ಗಟ್ಟಿಧ್ವನಿ ಮುಗಿಲು ಮುಟ್ಟಿತು. ಭಾರತದ ಒಂಬತ್ತು ಖ್ಯಾತ ಗಾಯಕರು ‘ಸ್ಲಂ ಡಾಗ್‌ ಮಿಲೇನಿಯರ್‌’ ಚಿತ್ರದ ‘ಜೈ ಹೋ’ ಹಾಡಿಗೆ ದನಿಯಾದರು; ಶಿವಮಣಿ ಡ್ರಮ್ಸ್‌ ಮೂಲಕ ಜೀವ ತುಂಬಿದರು.

ತಲೆದೂಗಿದರು... ಹೆಜ್ಜೆ ಹಾಕಿದರು: ‘ಕಾದಲನ್ ಚಿತ್ರ’ದ ‘ಮುಕ್ಕಾಲಾ, ಮುಕ್ಕಾಬುಲಾ ಲೈಲಾ’ ಹಾಡಿಗೆ ನೆರದಿದ್ದವರೂ ದನಿಗೂಡಿಸಿದರು. ಮಧುರವಾದ ಹಾಡುಗಳಿಗೆ ತಲೆದೂಗಿದ ಜನರು, ರಾಕ್ ಶೈಲಿಯ ಹಾಡುಗಳಿಗೆ ಹೆಜ್ಜೆ ಹಾಕಿದರು.

‘ದಿಲ್ ಸೇ’ ಚಿತ್ರದ ‘ಜಿಯಾಜಲೇ ಜಾಜಲೇ’ ಹಾಡಿನ ಆರಂಭದ ಹಿನ್ನೆಲೆ ಸಂಗೀತ ಸಮ್ಮೋಹಗೊಳಿಸಿತು. ಹಾಡಿಗೆ ತಕ್ಕಂತೆ ನೃತ್ಯವೂ ಮನ ಗೆದ್ದಿತು. ರೆಹಮಾನ್ ಹಾಡಿದ ‘ಗುರು’ ಚಿತ್ರದ ‘ದಂದರ ದಂದರ ಮಸ್ತ್ ಮಸ್ತ್’ ಹಾಡು ಮಧುರ ಕ್ಷಣಗಳನ್ನು ಸೃಷ್ಟಿಸಿತು. ಆಲಾಪಗಳು ಮೈದಾನದ ಮೂಲೆ, ಮೂಲೆಯನ್ನೂ ಆವರಿಸಿತು.

ಖ್ಯಾತ ಹಿನ್ನೆಲೆ ಗಾಯಕ ಮೈಸೂರಿನವರೇ ಆದ ವಿಜಯ್‌ಪ್ರಕಾಶ್ ಅವರನ್ನು ರೆಹಮಾನ್ ವೇದಿಕೆಗೆ ಕರೆಯುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು.

‘ನಾನು ಅನೇಕ ಕಡೆ ರೆಹಮಾನ್ ತಂಡದೊಂದಿಗೆ ಕಾರ್ಯಕ್ರಮ ನೀಡಿದ್ದೇನೆ. ಆದರೆ, ನಾನು ಹುಟ್ಟಿ ಬೆಳೆದ ಪುಣ್ಯ ಭೂಮಿಯಲ್ಲಿ ಅವರೊಂದಿಗೆ ಪಾಲ್ಗೊಳ್ಳುತ್ತಿರುವುದು ನನ್ನ ಅದೃಷ್ಟ’ ಎಂದು ಪೀಠಿಕೆ ಹಾಕಿದ ವಿಜಯ್‌ ಭಾವುಕರಾದರು. ರೆಹಮಾನ್ ಅವರಿಗಾಗಿ ಪ್ರಥಮ ಬಾರಿ ಹಾಡಿದ ‘ರಾಮ ನನ್ನ ಮನದಲ್ಲಿ, ರಾಮ ನಿನ್ನ ಮನದಲಿ’ ಹಾಡಿನ ಹಿಂದಿ ಅವತರಣಿಕೆಯನ್ನು ಹಾಡಿಗೆ ಪ್ರೇಕ್ಷಕರೂ ಜೊತೆಯಾದರು.

ಹಿಂದಿಯ ‘ರೋಜಾ’ ಸಿನಿಮಾದ ‘ರೋಜಾ ಜಾನೇ‌ ಮನ್’ ಹಾಡನ್ನು ವಿಜಯಪ್ರಕಾಶ್ ಕನ್ನಡಕ್ಕೆ ಅನುವಾದಿಸಿ ಹಾಡಿದಾಗ ಪ್ರೇಕ್ಷಕರು ಮನಸೋತರು. ‘ಎನ್ನ ಸೋ ನಾ ಕ್ಯೂ ರಬ್ನೇ ಬನಾಯ’, ಡೆಲ್ಲಿ6 ಚಿತ್ರದ ‘ಮಸಕ್ಕಲಿ... ಮಸಕ್ಕಲಿ’ ಮೊದಲಾದ ಹಾಡುಗಳು ಸಂಗೀತ ಪ್ರೇಮಿಗಳ ಮನಸೂರೆಗೊಂಡವು.

ಗಾಯಕರಾದ ನಿಶಾ ಶೆಟ್ಟಿ, ಶ್ವೇತಾ ಮೋಹನ್, ಮೈಸೂರಿನ ಪ್ರತಿಭೆ ರಕ್ಷಿತಾ ಸುರೇಶ್, ಹರಿಚರಣ್, ನಕುಲ್, ಅಮಿನ್ ಹಿಂದಿ, ಕನ್ನಡ, ಮಳಯಾಳಂ, ತಮಿಳು ಹಾಡುಗಳನ್ನು ಹಾಡಿ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.