ADVERTISEMENT

ಯುವ ದಸರಾ: ಹಾಡು–ನೃತ್ಯದ ಅಲೆಯಲ್ಲಿ ತೇಲಿದ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 18:05 IST
Last Updated 7 ಅಕ್ಟೋಬರ್ 2024, 18:05 IST
<div class="paragraphs"><p>ಬಾಲಿವುಡ್ ಗಾಯಕಿ ಧ್ವನಿ ಸುಶ್ರಾವ್ಯ</p></div>

ಬಾಲಿವುಡ್ ಗಾಯಕಿ ಧ್ವನಿ ಸುಶ್ರಾವ್ಯ

   

ಮೈಸೂರು: ಯುವ ದಸರಾದ ಎರಡನೇ ದಿನವಾದ ಸೋಮವಾರ ರಾತ್ರಿ ವೇದಿಕೆಯಲ್ಲಿ ಹಾಡು– ಕುಣಿತಗಳು ವಿಜೃಂಭಿಸಿದವು. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಬಾಲಿವುಡ್ ಗಾಯಕಿ ಧ್ವನಿ ಬಾನುಶಾಲಿ ರಿದಂ ಹಾಡುಗಳ ಮೂಲಕ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು.

ಮೊದಲಿಗೆ ಬಾಲಿವುಡ್ ಗಾಯಕಿ ಧ್ವನಿ ಸುಶ್ರಾವ್ಯ ಹಾಡುಗಳಿಂದ ಜನರ ಮನಗೆದ್ದರು. 'ಮುಜ್ ಸೇ ದೂರ್ ಕಹಾ ಜಾ..' ಹಾಡಿನೊಂದಿಗೆ ವೇದಿಕೆಗೆ ಕುಣಿಯುತ್ತಾ ಬಂದ ಅವರು, ಪ್ರೇಕ್ಷಕರು ಕುಳಿತಲ್ಲೇ ಕುಣಿಯುವಂತೆ ಮಾಡಿದರು. 'ದಿಲ್ ಬರ್' ಹಾಡಿಗೆ ಬಾನುಶಾಲಿಯ ಕಂಠಸಿರಿ ಜೊತೆಗೆ ನವಿಲಿನಂತ ನರ್ತನವು ಪಡ್ಡೆ ಹುಡುಗರ ನಿದ್ದೆ ಕೆಡಿಸಿತು.

ADVERTISEMENT

'ಧಮ್‌ ಮಾರೋ ಧಮ್‌’,'ಡಿಸ್ಕೋ ದಿವಾನಿ' ಮೊದಲಾದ ಗೀತೆಗಳು ಬಾಲಿವುಡ್ ಪ್ರಿಯರ ಮನ ತಣಿಸಿದವು. ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಹಾಡಿಗೆ ಯುವತಿಯರು ಹುಕ್ ಸ್ಟೆಪ್ ಹಾಕಿದರು.

‘ಕೆಜಿಎಫ್’ ಸಿನಿಮಾದ ಹಿನ್ನೆಲೆ ಸಂಗೀತ ಹಾಗೂ 'ಸಲಾಂ ರಾಕಿ ಬಾಯ್' ಹಾಡಿನೊಂದಿಗೆ ವೇದಿಕೆಗೆ ರಗಡ್ ರೀತಿಯಲ್ಲಿ ಪ್ರವೇಶ ಕೊಟ್ಟ ರವಿ ಬಸ್ರೂರು ಎರಡು ಗಂಟೆ ಕಾಲ ಕನ್ನಡದ ಜನಪ್ರಿಯ ಗೀತೆಗಳ ರಸದೌತಣ ಉಣಬಡಿಸಿದರು. 'ಉಗ್ರಂ' ಚಿತ್ರದ 'ಉಗ್ರಂ ವೀರಂ' ಹಾಡಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು.

ನಟಿ ಸಾಧ್ವಿಕಾ ‘ಬಸಣ್ಣಿ ಬಾ’ ಹಾಡಿಗೆ ನರ್ತಿಸಿದರು. ವಿಜಯಲಕ್ಷ್ಮಿ ‘ಕಬ್ಜ’ ಚಿತ್ರದ 'ನಮಾಮಿ ನಮಾಮಿ’ ಹಾಡಿನ ಮೂಲಕ ಮನಗೆದ್ದರು. ಐರಾ ಉಡುಪಿ 'ಗೆಳೆಯ ನನ್ನ ಗೆಳೆಯ’ ಹಾಡಿನೊಂದಿಗೆ ಮಿಂಚಿದರು. ಸಂತೋಷ್ ವೆಂಕಿ 'ಮೈಸೂರು ದಸರಾ, ಎಷ್ಟೊಂದು ಸುಂದರ’ ಹಾಡಿನ ಮೂಲಕ ಮನ ಗೆದ್ದರು.

ಜಿಲ್ಲಾ ನೃತ್ಯ ನಿರ್ದೇಶಕರ ಸಂಘದ ಸದಸ್ಯರು ಕನ್ನಡದ ಹಿಟ್ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಪುನೀತ್ ರಾಜಕುಮಾರ್‌ ಸಿನಿಮಾದ ಹಾಡು ಕೇಳಿದ ಕೂಡಲೇ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿತು.

ರವಿ ಬಸ್ರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.