ADVERTISEMENT

ಯುವ ದಸರಾ ಸಂಭ್ರಮದಲ್ಲಿ ‘ಅಭಿಮಾನ’ದ ಹೊಳೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 18:02 IST
Last Updated 25 ಸೆಪ್ಟೆಂಬರ್ 2024, 18:02 IST
   

ಮೈಸೂರು: ಯುವ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ಮಾನಸಗಂಗೋತ್ರಿಯ ಬಯಲು ರಂಗಮಂದಿರವು 2ನೇ ದಿನವಾದ ಬುಧವಾರವೂ ನೃತ್ಯ ವೈಭವಕ್ಕೆ ಸಾಕ್ಷಿಯಾಯಿತು.

ಸಂಜೆ ತುಂತುರು ಮಳೆ ಹನಿಯೊಂದಿಗೆ ಆರಂಭವಾದ ಕಾರ್ಯಕ್ರಮವು ಕನ್ನಡ ಸಂಭ್ರಮ, ದೇಶ ಭಕ್ತಿ, ರೈತ ಪ್ರೇಮ, ಜಾನಪದ ಕಲಾಕರ್ಷಣೆ, ಸಿನಿಮಾ ನಟರ ಅಭಿಮಾನ, ಅರ್ಜುನ ಆನೆಯ ಸ್ಮರಣೆಯ ಹಾಡು, ನೃತ್ಯಗಳ ಮೂಲಕ ಅಭಿಮಾನದ ಹೊಳೆ ಹರಿಸಿತು.

ಮಂಡ್ಯದ ಪಾಂಡವಪುರದ ಶಂಭುಲಿಂಗೇಶ್ವರ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ‘ಅಂಬಾರಿ’ ಹೊರುತ್ತಿದ್ದ ಅರ್ಜುನನ ಆನೆಯ ನೆನಪನ್ನು ‘ಭೂಮಿಯ ತೂಕವ ಮೆರೆದವನು...’ ಹಾಗೂ ‘ಊರೇ ಹೆತ್ತ ಮಗ, ನಿಂದು ಎಂಥ ತ್ಯಾಗ..’ ಹಾಡುಗಳ ಮೂಲಕ ಕಟ್ಟಿಕೊಟ್ಟರು. ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದರು. ಪ್ರೇಕ್ಷಕರು ಮೊಬೈಲ್‌ ಫೋನ್‌ ಟಾರ್ಚ್‌ ಲೈಟ್‌ ಬೆಳಗಿ ಅರ್ಜುನನನ್ನು ಸ್ಮರಿಸಿದರು.

ADVERTISEMENT

ಗಾಂಧಿನಗರದ ಶಿವಯೋಗಿ ಸ್ವಾಮಿ ಸಂಯುಕ್ತ ಪಿಯು ಕಾಲೇಜು, ತಿ.ನರಸೀಪುರ ಜ್ಞಾನೋದಯ ಸಂಸ್ಥೆ, ಮಂಡ್ಯ ಕಿರುಗಾವಲು ಭಾರತಿ ಪಿಯು ಕಾಲೇಜು, ವಿದ್ಯಾವರ್ಧಕ ಕೈಗಾರಿಕಾ ತರಬೇತಿ ಸಂಸ್ಥೆಯ ತಂಡದವರು ಕನ್ನಡ ನೆಲ, ಜಲ ಭಾಷೆ ಅಭಿಮಾನ ಉದ್ದೀಪಿಸುವ ನೃತ್ಯ ಪ್ರದರ್ಶಿಸಿದರು.

ಸಮರ್ಥನಂ ವಿಶೇಷ ಶಾಲೆ ಮಕ್ಕಳು ಹುಲಿ ವೇಷತೊಟ್ಟು ಪ್ರದರ್ಶಿಸಿದ ಕನ್ನಡ ಹಾಡುಗಳ ನೃತ್ಯಕ್ಕೆ, ಜೆಎಸ್ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆ ಮಕ್ಕಳ ಆರ್ಜುನ ಆನೆ ಹಾಡಿಗೆ ಪ್ರೇಕ್ಷಕರು ಮೊಬೈಲ್‌ ಫೋನ್‌ ಟಾರ್ಚ್ ಲೈಟ್‌ ಬೆಳಗಿಸಿ ಮೆಚ್ಚುಗೆ ಸೂಚಿಸಿದರು.

ಕೊಡಗಿನ ಕೊಡ್ಲಿಪೇಟೆ ಕಾಲೇಜು ತಂಡ ಜಾನಪದ ಕಲಾಪ್ರಕಾರಗಳ ನೃತ್ಯ ಪ್ರದರ್ಶನ ನೀಡಿದರೆ, ಚಾಮರಾಜನಗರ ನಿಸರ್ಗ ಪಿಯು ಕಾಲೇಜು ತಂಡ ವಂದೇಮಾತರಂ ಸಂದೇಶ ಸಾರಿತು. ಅನುಗ್ರಹ ಪಿಯು ಕಾಲೇಜು, ದೇವಲಾಪುರ ಜೆಎಸ್‌ಎಸ್‌ ಪಿಯು ಕಾಲೇಜು ತಂಡ ದೇವ ಗಣೇಶನನ್ನು, ಮಹಾರಾಜ ತಾಂತ್ರಿಕ ಕಾಲೇಜಿನವರು ಆಂಜನೇಯನನ್ನು ಸ್ಮರಿಸಿದರು. ‘ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ’ ಹಾಡಿಗೆ ಯುವಜನರ ಜೈಕಾರವೂ ಸೇರಿತು.

ಎಚ್.ಡಿ.ಕೋಟೆ ಆದಿಚುಂಚನಗಿರಿ ಪಿಯು ಕಾಲೇಜು ತಂಡದವರು, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಖಂಡಿಸಿ, ಹೆಣ್ಣು ಶಕ್ತಿ ಸ್ವರೂಪ ಎಂಬುದನ್ನು ನೃತ್ಯ ಕಲೆಯ ಮೂಲಕ ಮನಮುಟ್ಟುವಂತೆ ತಿಳಿಸಿದರು. ಸಪ್ತಗಿರಿ ಪಿಯು ಕಾಲೇಜು ವಿದ್ಯಾರ್ಥಿಗಳು ನಟ ದರ್ಶನ್ ಫೋಟೊ ಬಳಸಿ ನೃತ್ಯ ಮಾಡಿದರು. ದೇವರಾಜ ಅರಸು ಸರ್ಕಾರಿ ಕಾಲೇಜು ಮಕ್ಕಳು ಸೈನಿಕರನ್ನು, ಎಸ್‌ಎನ್‌ಜಿ ಪಿಯು ಕಾಲೇಜು ತಂಡ ರೈತರನ್ನು ಸ್ಮರಿಸಿತು.

ತಂಡಗಳಿಗೆ ವೇದಿಕೆಯಲ್ಲೇ ಪ್ರೋತ್ಸಾಹ ಧನದ ಚೆಕ್, ಪ್ರಮಾಣಪತ್ರ ಹಾಗೂ ಯುವ ಸಂಭ್ರಮದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.