ADVERTISEMENT

ಗಣೇಶತತ್ತ್ವದ ಹಿಂದಿರುವ ತಾತ್ವಿಕತೆ

ಗಣೇಶನ ಹುಟ್ಟು, ಆಕಾರ, ಪೂಜೆ – ಪ್ರತಿಯೊಂದೂ ಸಂಕೇತಮಯ

ಪಶ್ಚಿಮದ ಅರಿವು /ಹಾರಿತಾನಂದ
Published 29 ಆಗಸ್ಟ್ 2019, 5:09 IST
Last Updated 29 ಆಗಸ್ಟ್ 2019, 5:09 IST
   

ಭಾರತೀಯ ಸಂಸ್ಕೃತಿಯಲ್ಲಿ ಗಣೇಶನಿಗೆ ವಿಶಿಷ್ಟ ಸ್ಥಾನವಿದೆ. ಅವನು ವಿಶ್ವವ್ಯಾಪ್ತಿಯನ್ನು ಪಡೆದಿರುವ ದೇವರು. ಜಾತಿ–ಮತ–ಭಾಷೆಗಳ ಎಲ್ಲೆಯೂ ಅವನಿಗಿಲ್ಲ.

ಗಣೇಶನ ಹುಟ್ಟು, ಆಕಾರ, ಪೂಜೆ – ಪ್ರತಿಯೊಂದೂ ಸಂಕೇತಮಯವೇ ಆಗಿದೆ. ಹೀಗಾಗಿ ಈ ವಿವರಗಳ ಹಿಂದಿರುವ ತಾತ್ವಿಕತೆ ನಮಗೆ ಅರ್ಥವಾಗದಿದ್ದರೆ ಗಣೇಶನ ಕಲ್ಪನೆ ನಮಗೆ ಹಾಸ್ಯಾಸ್ಪದವಾಗಿಯೇ ಕಾಣುವುದೆನ್ನಿ! ವಿಗ್ರಹಾರಾಧನೆ ಎಲ್ಲ ಕಲಾಪಗಳಿಗೂ ಮೂಲವಾಗಿ ಯಾವುದಾದರೊಂದು ಸಂಕೇತ, ರೂಪಕ, ತತ್ತ್ವ ಅಡಕವಾಗಿರುತ್ತದೆ.

ಆದಿದಂಪತಿಯಾದ ಶಿವ–ಪಾರ್ವತಿಯರ ಮಗನೇ ಗಣೇಶ. ಅವನು ಹುಟ್ಟು ಕಾಮಾತೀತತ್ತ್ವಕ್ಕೆ ಸಂಕೇತ. ಗಣೇಶನ ಶರೀರ ತುಂಬ ದೊಡ್ಡದು; ಆದರೆ ಅವನ ವಾಹನ ಪುಟ್ಟ ಇಲಿ. ಅಬಲರೂ ಕೂಡ ಸಬಲರೇ ಹೌದು ಎನ್ನುತ್ತದೆ ಮೂಷಿಕವಾಹನ. ಹೀಗೆ ಅವನ ಒಂದೊಂದು ರೂಪವೂ ಒಂದೊಂದು ತತ್ತ್ವವನ್ನು ಪ್ರತಿನಿಧಿಸುತ್ತದೆ.

ADVERTISEMENT

ಗಣೇಶನಷ್ಟು ಹಾಸ್ಯಪ್ರಿಯ ದೇವತೆಯೂ ಮತ್ತೊಬ್ಬನಿಲ್ಲ. ಅವನ ರೂಪವೇ ಹಾಸ್ಯಕ್ಕೆ ಒಳ್ಳೆಯ ವಸ್ತು.ಪರಹಾಸ್ಯದಲ್ಲಿ ತೊಡಗಿದ ಚಂದ್ರನನ್ನು ಅವನನ್ನು ಶಿಕ್ಷಿಸಿದ. ಇಲ್ಲೂ ಒಂದು ಸಂದೇಶ ಉಂಟು. ಇತರರನ್ನು ಕೀಟಲೆ ಮಾಡುವುದು ಹಾಸ್ಯವಲ್ಲ; ನಮ್ಮನ್ನು ನಾವೇ ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳುವಷ್ಟು ಪ್ರಬುದ್ಧತೆಯನ್ನೂ ನಾವು ಸಂಪಾದಿಸಿಕೊಳ್ಳತಕ್ಕದ್ದು ಎಂದು ಸಾರುತ್ತಿದ್ದಾನೆ. ಅವನು ಹಾಸ್ಯರಸಕ್ಕೆ ಒಡೆಯ.

ವಿದ್ಯೆಗೂ ಗಣೇಶನಿಗೂ ನಂಟಿದೆ. ಬ್ರಹ್ಮಚಾರಿಯಾದ ಅವನಿಗೆ ಸಿದ್ಧಿ–ಬುದ್ಧಿಗಳೆಂಬ ಪತ್ನಿಯರಿದ್ದಾರೆ ಎನ್ನುವುದುಂಟು. ಯಾವುದೇ ವಿದ್ಯೆ ನಮಗೆ ದಕ್ಕುವುದೇ ‘ಸಿದ್ಧಿ’; ಅದನ್ನು ಪಡೆಯಲು ನಮಗೆ ಬೇಕಾದದ್ದು ‘ಬುದ್ಧಿ’. ಈ ದಾರಿಯಲ್ಲಿ ನಮಗೆ ಒದಗುವುದು ಬ್ರಹ್ಮಚರ್ಯ. ದೇಹ–ಇಂದ್ರಿಯಗಳ ನಿಯಂತ್ರಣ–ಏಕಾಗ್ರತೆಗಳೇ ಬ್ರಹ್ಮಚರ್ಯ.

ಗಣೇಶನ ಪೂಜೆಯೂ ಸರಳ. ಅವನು ಭಕ್ತಿಯಿಂದ ಗರಿಕೆಯನ್ನು ಅರ್ಪಿಸಿದರೂ ಒಲಿಯುತ್ತಾನೆ. ತಾಯಿಯ ಜೊತೆಯಲ್ಲಿಯೇ ಬರುವ ಅವನು ಕೌಟುಂಬಿಕ ಸಾಮರಸ್ಯಕ್ಕೂ ಸಂಕೇತವಾಗಿದ್ದಾನೆ. ಪ್ರಥಮಪೂಜೆ ಅವನಿಗೆ ಸಂದಿರುವುದು ಅರ್ಥಪೂರ್ಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.