ವಿದ್ಯೆಯನ್ನು ನಾವು ಹೇಗೆ ಕಲಿಯುತ್ತೇವೆ? ’ಮಹಾಭಾರತ’ದಲ್ಲಿ ಇದರ ಬಗ್ಗೆ ವಿಚಾರಾರ್ಹ ಶ್ಲೋಕವಿದೆ:
ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ ।
ಕಾಲೇನ ಪಾದಮಾದತ್ತೇ ಪಾದಂ ಸಬ್ರಹ್ಮಚಾರಿಭಿಃ ।।
‘ಶಿಷ್ಯನು ಆಚಾರ್ಯನಿಂದ ವಿದ್ಯೆಯ ಕಾಲುಭಾಗವನ್ನು ಗ್ರಹಿಸುತ್ತಾನೆ. ಕಾಲುಭಾಗದಲ್ಲಿ ತನ್ನ ಬುದ್ಧಿಶಕ್ತಿಯಿಂದಲೂ ಕಾಲುಭಾಗವನ್ನು ಜೊತೆಯ ವಿದ್ಯಾರ್ಥಿಗಳಿಂದಲೂ, ಉಳಿದ ಕಾಲುಭಾಗವನ್ನು ಕಾಲಕ್ರಮದಲ್ಲೂ ತಿಳಿದುಕೊಳ್ಳುತ್ತಾರೆ’ ಎನ್ನುವುದು ಈ ಶ್ಲೋಕದ ತಾತ್ಪರ್ಯ.
ನಮ್ಮ ಇಂದಿನ ಶಿಕ್ಷಣಕ್ರಮದ ಮನೋಧರ್ಮ ಹೇಗಿದೆ – ಎನ್ನುವುದನ್ನು ಇಲ್ಲಿ ಅವಲೋಕಿಸಬಹುದು. ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ – ಎಲ್ಲವನ್ನೂ ಕಲಿಸುತ್ತಿದ್ದೇವೆ ಅಥವಾ ಕಲಿಯುತ್ತಿದ್ದೇವೆ ಎಂಬುದು ನಮ್ಮ ಇಂದಿನ ಗ್ರಹಿಕೆ. ನಮ್ಮ ಪುಸ್ತಕಗಳು ಅಥವಾ ನಮ್ಮ ಉಪಾಧ್ಯಾಯರು – ನಮಗೆ ಎಲ್ಲವನ್ನೂ ತಿಳಿಸುವ ‘ಆಕರ’ಗಳು ಎಂದು ಕೂಡ ಭಾವಿಸಿಕೊಂಡಿದ್ದೇವೆ. ಆದರೆ ಮೇಲಣ ಶ್ಲೋಕ ಈ ಎಲ್ಲ ನಂಬಿಕೆಗಳನ್ನು ನಿರಾಕರಿಸಿದೆ; ನಮ್ಮ ಕಲಿಕೆಯ ಹಂತಗಳಿಗೆ ಬೇರೆಯೇ ಆದ ಆಯಾಮವನ್ನು ನೀಡಿದೆ. ನಾವು ನೇರ ಉಪಾಧ್ಯಾಯರಿಂದ ಕಲಿಯುವುದು ಶೇ 25ರಷ್ಟು ಮಾತ್ರ. ಇಲ್ಲಿ ‘ಉಪಾಧ್ಯಾಯ’ ಎನ್ನುವುದರಲ್ಲಿ ಪಠ್ಯಪುಸ್ತಕಗಳೂ ಸೇರುತ್ತವೆ. ಎಂದರೆ ನಾವು ಶಾಲೆಯ ಒಳಗಿನ ಶಿಕ್ಷಣಪದ್ಧತಿಯ ಮೂಲಕ ಕಲಿಯುವುದು ಕಾಲುಭಾಗ ಮಾತ್ರವೇ; ಉಳಿದುದನ್ನು ನಾವು ಬಾಹ್ಯಜಗತ್ತಿನ ಮೂಲಕವೇ ಕಲಿಯುವುದು.
ಪ್ರಪಂಚ ನಮಗೆ ಪ್ರತಿಕ್ಷಣವೂ ವಿದ್ಯೆಯನ್ನು ಕಲಿಸಲು ತವಕಿಸುತ್ತಲೇ ಇರುತ್ತದೆ. ಆದರೆ ನಾವು ಮಾತ್ರ ಅದನ್ನು ಗ್ರಹಿಸಲೂ ಕಲಿಯಲೂ ವಿಫಲರಾಗುತ್ತಿರುತ್ತೇವೆ. ವಿಶ್ವಶಿಕ್ಷಣವನ್ನು ಪಡೆಯಬೇಕಾದರೆ ನಮ್ಮಲ್ಲಿ ಬುದ್ಧಿಶಕ್ತಿಯೂ ಇರಬೇಕಷ್ಟೆ! ಈ ಬುದ್ಧಿಶಕ್ತಿಯನ್ನೇ ನಾವು ‘ಸಾಮಾನ್ಯಜ್ಞಾನ’ – ಕಾಮನ್‌ಸೆನ್ಸ್ – ಎಂದು ಕೂಡ ಹೇಳಬಹುದು. ಎಲ್ಲ ಜ್ಞಾನಕ್ಕಿಂತಲೂ ಅಮೂಲ್ಯವೂ, ಆದರೆ ಅತ್ಯಂತ ದುರ್ಲಭ ಎಂದೆನಿಸಿದೆ ಈ ಸಾಮಾನ್ಯಜ್ಞಾನ. ಈ ಜ್ಞಾನವನ್ನು ‘ಹೀಗೆ’ ಎಂದು ಹೇಳಲು ಕಷ್ಟವೆನ್ನುವುದು ದಿಟ; ಆದರೆ ಅದು ನಮ್ಮಲ್ಲಿ ಇದೆಯೋ ಇಲ್ಲವೋ – ಎನ್ನುವುದು ಮಾತ್ರ ಲೋಕಕ್ಕೆ ಸುಲಭವಾಗಿ ತಿಳಿಯುತ್ತದೆಯೆನ್ನಿ! ಈ ಸಾಮಾನ್ಯಜ್ಞಾನದಿಂದಲೇ ನಾವು ಜ್ಞಾನಾರ್ಜನೆಯ ಶೇ 25ರಷ್ಟನ್ನು ಕಲಿಯುತ್ತೇವೆ ಎನ್ನುವುದು ಮಹಾಭಾರತದ ಮಾತು.
ನೂರರಲ್ಲಿ ಐವತ್ತು ಭಾಗವನ್ನು ಈಗ ಕಲಿತಾಯಿತು; ಮುಂದಿನ ಶೇ 25ರಷ್ಟು ಜ್ಞಾನವನ್ನು ನಮ್ಮ ಜೊತೆಗಾರರಿಂದ, ಸ್ನೇಹಿತರಿಂದ ಕಲಿಯುತ್ತೇವೆ. ನಾವು ನಮ್ಮ ಅಕ್ಕಪಕ್ಕದವರೊಂದಿಗೆ ಅಭಿಪ್ರಾಯಗಳನ್ನು, ಆಲೋಚನೆಗಳನ್ನು ಎಷ್ಟು ಹಂಚಿಕೊಳ್ಳುತ್ತೇವೆ; ಅವರೊಂದಿಗೆ ಆರೋಗ್ಯಪೂರ್ಣವಾದ ಚಿಂತನ–ಮಂಥನಗಳಲ್ಲಿ ಎಷ್ಟು ತೊಡಗಿಕೊಳ್ಳುತ್ತೇವೆ ಎನ್ನುವುದು ನಮ್ಮ ಜ್ಞಾನಭಂಡಾರದ ವೃದ್ಧಿಗೆ ನೆರವಾಗುತ್ತವೆ. ನಮ್ಮ ತಿಳಿವಳಿಕೆಯನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಮ್ಮ ಅರಿವು ಪರಿಷ್ಕಾರವಾಗುತ್ತದೆ; ಮಾತ್ರವಲ್ಲ, ನಮ್ಮ ಕಲಿಕೆಯ ಸಾಮರ್ಥ್ಯವೂ ಹೆಚ್ಚುತ್ತದೆ. ಆದುದರಿಂದ ನಮ್ಮ ಸುತ್ತಲಿನ ಜಗತ್ತಿನೊಂದಿಗೆ ನಾವು ನಿರಂತರವಾಗಿ ಸಂವಾದವನ್ನು ನಡೆಸುತ್ತಿರಬೇಕು.
ಈಗ ಶೇ 75ರಷ್ಟಾಯಿತು ನಮ್ಮ ಕಲಿಕೆ; ಉಳಿದ ಕಾಲುಭಾಗವನ್ನು ಕಾಲವೇ ಕಲಿಸುತ್ತದೆಯಂತೆ. ಹೌದು, ಈ ಮಾತು ಎಷ್ಟು ನಿಜ ಎಂಬುದು ಕಾಲಕ್ರಮೇಣ ನಮಗೇ ಅರಿವಾಗುತ್ತಹೋಗುತ್ತದೆಯೆನ್ನಿ! ನಾವು ಎಷ್ಟೆಲ್ಲ ಪುಸ್ತಕಗಳನ್ನು ಓದಿದರೂ, ಏನೇನೋ ಪದವಿಗಳನ್ನು ಪಡೆದರೂ, ಹಲವು ವಿದ್ಯೆಗಳನ್ನು ಸಂಪಾದಿಸಿದ್ದೇವೆಂದು ಹೆಮ್ಮೆಪಟ್ಟುಕೊಂಡರೂ – ದಿಟವಾಗಿ ಅವುಗಳ ಅರಿವು ನಮಗೆ ಒದಗುವುದು ಮಾತ್ರ ನಮ್ಮ ಜೀವನದಲ್ಲಿಯೇ. ಅಷ್ಟೇಕೆ, ನಮ್ಮ ಬದುಕಿಗೆ ಯಾವುದು ನೆರವಾಗುವುದಿಲ್ಲವೋ ಅಂಥದ್ದು ವಿದ್ಯೆಯೇ ಅಲ್ಲ – ಎಂದೂ ಹೇಳುವುದುಂಟು. ನಮ್ಮಲ್ಲಿ ವಾಹನ ಇರಬಹುದು, ಡ್ರೈವಿಂಗ್ ಲೈಸೆನ್ಸ್ ಕೂಡ ಇರಬಹುದು, ರಸ್ತೆಯ ನಿಯಮಗಳೂ ತಿಳಿದಿರಬಹುದು, ಜೊತೆಯಲ್ಲಿ ಸ್ನೇಹಿತರೂ ಇರಬಹುದು; ಆದರೆ ನಮ್ಮ ಡ್ರೈವಿಂಗ್ ಕೌಶಲ ಗೊತ್ತಾಗುವುದು ನಾವು ರಸ್ತೆಯ ಮೇಲೆ ವಾಹವನ್ನು ನಡೆಸಿದಾಗಲೇ ಅಲ್ಲವೆ? ಮಾತ್ರವಲ್ಲ, ಅದು ಆಯಾ ಕ್ಷಣ ಸಿದ್ಧವಾಗುತ್ತಹೋಗುತ್ತದೆ – ರಸ್ತೆ ಖಾಲಿ ಇದ್ದಾಗ ಒಂದು ರೀತಿಯಲ್ಲಿ ವಾಹನವನ್ನು ನಡೆಸಬೇಕಾಗುತ್ತದೆ; ಟ್ರಾಫಿಕ್ ಜಾಸ್ತಿ ಇದ್ದಾಗ ಇನ್ನೊಂದು ರೀತಿಯಲ್ಲಿ ನಡೆಸಬೇಕಾಗುತ್ತದೆ; ಎದುರಿಗೆ ಬರುತ್ತಿರುವವರನ್ನು ಗಮನಿಸಿಕೊಂಡು ಮತ್ತೊಂದು ರೀತಿಯಲ್ಲಿ ನಡೆಸಬೇಕಾಗುತ್ತದೆ; ರಾತ್ರಿಯಲ್ಲಿ ಒಂದು ಬಗೆ, ಬೆಳಗ್ಗೆ ಇನ್ನೊಂದು ಬಗೆ; ಮಳೆಯಲ್ಲಿ ಒಂದು ರೀತಿ, ಗಾಳಿಯಲ್ಲಿ ಇನ್ನೊಂದು ರೀತಿ – ಹೀಗೆ ವಾಹನಚಾಲನೆಯ ಪ್ರತಿ ಕ್ಷಣವೂ ಡ್ರೈವಿಂಗ್ ಎಂಬ ವಿದ್ಯೆಯನ್ನು ನಾವು ಕಲಿಯುತ್ತಲೇ ಇರುತ್ತೇವೆ. ನಮ್ಮ ವಯಸ್ಸು, ಲೋಕಾನುಭಾವ ಹೆಚ್ಚಿದಂತೆಲ್ಲ ಡ್ರೈವಿಂಗ್‌ನ ಕಲ್ಪನೆಯೇ ನಮ್ಮಲ್ಲಿ ಬದಲಾಗುತ್ತಲೂ ಇರುತ್ತದೆ.
ಹೀಗೆ ಶಿಕ್ಷಣ ಎನ್ನುವುದು ಎಂದೋ ಒಂದು ದಿನ, ಯಾರೋ ಒಬ್ಬರು ಶಿಕ್ಷಕರ ಮೂಲಕ, ಒಂದು ಪುಸ್ತಕದ ಮೂಲಕ ಪಡೆಯುವಂಥದ್ದು ಅಲ್ಲ; ಒಂದೊಂದು ಕ್ಷಣವೂ ನಮ್ಮ ಜ್ಞಾನಾರ್ಜನೆಗೆ ಒದಗುವ ಮುಹೂರ್ತಗಳೇ ಹೌದು; ಒಬ್ಬೊಬ್ಬ ವ್ಯಕ್ತಿಯೂ ನಮ್ಮ ಪಾಲಿಗೆ ಗುರುವೇ ಹೌದು.
ಒಬ್ಬ ಅಧ್ಯಾಪಕ ಯಾರಿಗೆಲ್ಲ ವಿದ್ಯೆಯನ್ನು ಹೇಳಿಕೊಡಬೇಕು – ಎಂದು ಹೇಳುವ ಶಾಸ್ತ್ರದ ಮಾತೊಂದು ಹೀಗಿದೆ:
ಆಚಾರ್ಯಪುತ್ರಃ ಶುಶ್ರೂಷುಃ ಜ್ಞಾನದೋ ಧಾರ್ಮಿಕಃ ಶುಚಿಃ ।
ಆಪ್ತಃ ಶಕ್ತೋsರ್ಥದಃ ಸಾಧುಃ ಸ್ವೋsಧ್ಯಾಪ್ಯಾ ದಶ ಧರ್ಮತಃ ।।
ಇದರ ಅರ್ಥ: ‘ಅಧ್ಯಾಪಕನಾದವನು ಈ ಹತ್ತು ಮಂದಿಗೆ ಕರ್ತವ್ಯ ಎಂದು ತಿಳಿದು ಪಾಠವನ್ನು ಹೇಳಿಕೊಡಬೇಕು: ಅವರು ಯಾರೆಂದರೆ – 1. ತನ್ನ ಆಚಾರ್ಯರ ಮಗ, 2. ತನಗೆ ಸೇವೆ ಮಾಡುತ್ತಿರುವವನು, 3. ತನಗೆ ಇನ್ನೊಂದು ವಿದ್ಯೆಯನ್ನು ಹೇಳಿಕೊಡುವವನಿಗೆ, 4. ಧರ್ಮವನ್ನು ತಿಳಿದವನಿಗೆ, 5. ಪ್ರಾಮಾಣಿಕನಾಗಿರುವವನಿಗೆ, 6. ಬಂಧುವಿಗೆ, 7. ಸ್ವತಂತ್ರವಾಗಿ ಆಲೋಚಿಸಬಲ್ಲವನಿಗೆ, 8. ತನಗೆ ಹಣವನ್ನು ಕೊಟ್ಟು ಉಪಕಾರಮಾಡಿದವನಿಗೆ, 9. ತನ್ನ ಹಿತವನ್ನು ಕಾಪಾಡುವವನಿಗೆ, 10. ತನ್ನ ದಾಯಾದಿಗೆ.’
ವಿದ್ಯೆಯನ್ನು ಕಲಿಯಬೇಕಾದ ಆಕರಗಳ ಬಗ್ಗೆಯೂ, ಕಲಿಸಬೇಕಾದ ಅರ್ಹರ ಬಗ್ಗೆಯೂ ಮೇಲಣ ಪಟ್ಟಿ ಅತ್ಯಂತ ಧ್ವನಿಪೂರ್ಣವಾಗಿ ಸೂಚಿಸುತ್ತದೆ.
ಶಿಕ್ಷಣ ಎನ್ನುವುದು ಸಾಮುದಾಯಿಕ ಕರ್ತವ್ಯ–ಹೊಣೆಗಾರಿಕೆ – ಎನ್ನುವುದು ಪ್ರಾಚೀನ ಸಂಸ್ಕೃತಿಯ ತಿಳಿವಳಿಕೆಯಾಗಿದ್ದಿತು ಎನ್ನುವುದನ್ನು ನಾವು ಊಹಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.