ADVERTISEMENT

ಸುಭಾಷಿತ ಎಂಬ ಅರಿವಿನ ಬುಗ್ಗೆ

ಪಶ್ಚಿಮದ ಅರಿವು /ಹಾರಿತಾನಂದ
Published 17 ಆಗಸ್ಟ್ 2018, 19:30 IST
Last Updated 17 ಆಗಸ್ಟ್ 2018, 19:30 IST
   

ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಸಂಸ್ಕೃತಿಯೊಂದರ ಜನಜೀವನ, ಅವರ ಆಚಾರ–ವಿಚಾರ, ಸೋಲು–ಗೆಲುವು, ಮಾನಸಿಕತೆ, ರಸಿಕತೆ, ರಾಗ–ದ್ವೇಷಗಳು, ನೀತಿ–ನಿಯಮಗಳು – ಮುಂತಾದ ಸಂಗತಿಗಳನ್ನು ಹೇಗೆ ಗ್ರಹಿಸುವುದು? ಇದಕ್ಕೆ ಉತ್ತರವಾಗಿ ಆ ಸಂಸ್ಕೃತಿಯಲ್ಲಿ ಹುಟ್ಟಿರುವ ಸಾಹಿತ್ಯ, ಶಾಸನ, ಚಿತ್ರ, ಶಿಲ್ಪ ಮುಂತಾದವನ್ನು ಹೇಳಬಹುದು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇನ್ನೊಂದು ವಿಶೇಷ ಸಂಗತಿಯಿದೆ. ಅದೇ ಸಂಸ್ಕೃತವಾಙ್ಮಯದಲ್ಲಿ ಸಮೃದ್ಧವಾಗಿ ಕಾಣಿಸಿಕೊಂಡಿರುವ ‘ಸುಭಾಷಿತ’ಗಳು.

‘ಸುಭಾಷಿತ’ ಎಂದರೆ ‘ಒಳ್ಳೆಯ ಮಾತು’ ಎಂದು ಸುಲಭವಾಗಿ ಅರ್ಥೈಸಬಹುದು. ಸಂಸ್ಕೃತದಲ್ಲಿ ಹಲವು ಸುಭಾಷಿತಸಂಗ್ರಹಗಳಿವೆ. ಅವುಗಳಲ್ಲಿರುವ ಹಲವು ಸುಭಾಷಿತಗಳು ಕನ್ನಡಕ್ಕೂ ಹಲವರು ಅನುವಾದಿಸಿದ್ದಾರೆ. . ಅಂಥವುಗಳಲ್ಲಿ ಪ್ರಮುಖವಾದ ಅನುವಾದಸಂಗ್ರಹಗಳಲ್ಲಿ ಒಂದು ಪಾ. ವೆಂ. ಆಚಾರ್ಯ ಅವರ ‘ಸುಭಾಷಿತಚಮತ್ಕಾರ’; ಪದ್ಯರೂಪದಲ್ಲಿರುವ ಸೊಗಸಾದ ಅನುವಾದಕೃತಿಯಿದು.

ಸುಭಾಷಿತದ ಬಗ್ಗೆಯೇ ಇರುವ ಸುಭಾಷಿತವನ್ನು ನೋಡಿ:

ADVERTISEMENT

ಪೃಥಿವ್ಯಾಂ ತ್ರೀಣಿ ರತ್ನಾನಿ

ಜಲಮನ್ನಂ ಸುಭಾಷಿತಮ್‌ |

ಮೂಢೈಃ ಪಾಷಾಣಖಂಡೇಷು

ರತ್ನಸಂಜ್ಞಾ ವಿಧೀಯತೇ ||

ಇದರ ಕನ್ನಡ ಅನುವಾದ, ಪದ್ಯರೂಪದಲ್ಲಿ, ಹೀಗೆ ಮಾಡಿದ್ದಾರೆ, ಪಾ. ವೆಂ. ಆಚಾರ್ಯ:

ಬುವಿಯಲಿ ರತ್ನಗಳೆಂಬವು ಮೂರೇ:

ಅನ್ನ, ನೀರು, ಸುಭಾಷಿತ.

ಬಣ್ಣದ ಕಲ್ಲಿನ ಹರಳುಗಳನ್ನು

ರತ್ನಗಳೆಂಬುದು ಮೂಢಮತ.

ಮನುಷ್ಯನ ನೂರಾರು ಸ್ವಭಾವಗಳನ್ನು ಸುಭಾಷಿತಗಳು ತುಂಬ ಮಾರ್ಮಿಕವಾಗಿ ಚಿತ್ರಿಸುತ್ತವೆ.

ಭ್ರಷ್ಟಾಚಾರದ ಬಗ್ಗೆ ಇಂದು ಸಾಕಷ್ಟು ಮಾತನಾಡುತ್ತೇವೆ. ನೂರಾರು ವರ್ಷಗಳ ಹಿಂದೆಯೇ ಸುಭಾಷಿತ ಭ್ರಷ್ಟಾಚಾರವನ್ನು ವರ್ಣಿಸಿರುವ ಪರಿಯನ್ನು ನೋಡಿ. ಅಧಿಕಾರಿಯೊಬ್ಬ ಎಷ್ಟು ಭ್ರಷ್ಟ ಎಂದರೆ ಅವನು ತಾಯಿಯ ಗರ್ಭದಲ್ಲಿದ್ದಾಗಲೇ ಅವನ ದುರಾಚಾರ ಆರಂಭವಾಗಿತ್ತಂತೆ; ಹಾಗಾದರೆ ಅವನು ತಾಯ ಕರುಳನ್ನು ಏಕೆ ತಿನ್ನಲಿಲ್ಲ – ಎಂದರೆ ಅದಕ್ಕೆ ಕಾರಣ ಆಗ ಅವನಿಗೆ ಹಲ್ಲುಗಳು ಇಲ್ಲದಿರುವುದು! ಕನ್ನಡ ಅನುವಾದದಲ್ಲಿ ಈ ಸುಭಾಷಿತ ಹೀಗಿದೆ:

ಗರ್ಭಸ್ಥನಿದ್ದ ಸರಕಾರೀ ಗುಮಾಸ್ತ

ತಾಯ ಕರುಳನ್ನೆ ತಾನೇಕೆ ತಿನಲಿಲ್ಲ?

ಅದಕೆ ಕಾರಣ ನಿರಾಮಿಷದ ವ್ರತವಲ್ಲ,

ಪಾಪ! ಆತನಿಗಾಗ ಹಲ್ಲೆ ಇರಲಿಲ್ಲ.

‘ನನ್ನ ಒಂದು ಕಣ್ಣು ಹೋದರೂ ಸರಿ, ನನ್ನ ವೈರಿಯ ಎರಡು ಕಣ್ಣುಗಳು ನಾಶವಾಗಬೇಕು’ – ಹೀಗೆ ಯೋಚಿಸುವ ಜನರು ಎಷ್ಟಿಲ್ಲ. ಅಂಥ ಕೇಡುತನವನ್ನು ಸುಭಾಷಿತ ವರ್ಣಿಸಿರುವ ಪರಿ ಸ್ವಾರಸ್ಯಕರವಾಗಿದೆ. ದುಷ್ಟನೊಬ್ಬ ಕಾಡಿನಲ್ಲೇ ವಾಸವಿದ್ದನಂತೆ. ಅದೇಕೆ ಹೀಗೆ – ಎಂದರೆ ಅವನನ್ನು ಹುಲಿಯೋ ಸಿಂಹವೋ ತಿನ್ನಬೇಕಂತೆ. ಅದಕ್ಕೆ ನರಮಾಂಸ ಒಗ್ಗಿ ಆ ಬಳಿಕ ಅವು ಎಲ್ಲರನ್ನೂ ಕೊಂದು ತಿನ್ನಬೇಕಂತೆ! ಎಂಥ ಬಯಕೆ ಅವನದ್ದು!!

‘ಯಾರು ತಾವು?’ ‘ದುರ್ಜನ ಶ್ರೇಷ್ಠರು’

‘ಇಲ್ಲೇಕೆ ವಸತಿ ತಮದು?’

‘ಈ ಘೋರವನದ ಹುಲಿ ಸಿಂಹ ಶಾರ್ದೂಲ

ನಮ್ಮ ತಿನಲಿ ಎಂದು.’

‘ಏನು ಸಂಕಷ್ಟ?’ ‘ಕಷ್ಟವಿಲ್ಲ, ನಮ್ಮನ್ನು

ತಿಂದು ಅವಕೆ

ನರಮಾಂಶವೊಗ್ಗಿ ಕಂಡವರ ಹಿಡಿದು

ಕೊಲುತಿರಲಿ ಎಂದು ಬಯಕೆ!’

ಅತಿಯಾಸೆಯನ್ನು ಹೀಗೆ ವಿಡಂಬಿಸಲಾಗಿದೆ:

ಆಶಾಯ ಯೇ ದಾಸಾ–

ಸ್ತೇ ದಾಸಾ ಸರ್ವಲೋಕಸ್ಯ |

ಆಶಾ ಯೇಷಾಂ ದಾಸೀ

ತೇಷಂ ದಾಸಾಯತೇ ಲೋಕಃ ||

ಅದು ಅನುವಾದದಲ್ಲಿ ಹೀಗಾಗಿದೆ:

ಆಸೆಗಾಳಾದವನು

ಲೋಕಕ್ಕೆ ಆಳು;

ಆಸೆಯನ್ನಾಳುವಗೆ

ಲೋಕವೇ ಆಳು.

ಎಷ್ಟೋ ಸಂದರ್ಭಗಳಲ್ಲಿ ಅಮಾಯಕರು, ಬಡಪಾಯಿಗಳು ಅನಗತ್ಯವಾದ ತೊಂದರೆಗೆ ಒಳಗಾಗುತ್ತಿರುತ್ತಾರೆ. ಈ ಸಂದರ್ಭವನ್ನು ಸುಭಾಷಿತವು ಲೋಕವ್ಯವಹಾರದ ಮೂಲಕ ವರ್ಣಿಸಿರುವ ರೀತಿ ಮನೋಜ್ಞವಾಗಿದೆ:

ಅಶ್ವಂ ನೈವ ಗಜಂ ನೈವ

ವ್ಯಾಘ್ರಂ ನೈವ ಚ ನೈವ ಚ |

ಅಜಾಪುತ್ರಂ ಬಲಿಂ ದದ್ಯಾತ್‌

ದೇವೋ ದುರ್ಬಲಘಾತಕಃ ||

ಬೇಡದು ಕುದುರೆಯ, ಆನೆಯ ಬೇಡದು,

ಬೇಡಲೆ ಬೇಡದಲಾ ಹುಲಿಯ–

ದೈವ ಕೊಲುವುದೂ ದುರ್ಬಲನನ್ನೇ–

ಆಡಿನ ಮಗನನು ಕೊಡು ಬಲಿಯ!

ವ್ಯಂಗ್ಯ, ಕಟುಮಾತು, ಹಾಸ್ಯ, ನೇರನುಡಿ, ಅನ್ಯೋಕ್ತಿ, ಉಪಮೆ, ಲೋಕವ್ಯವಹಾರ, ಒಗಟು – ಹೀಗೆ ಹಲವು ದಾರಿಗಳ ಮೂಲಕ ಮನುಷ್ಯಸ್ವಭಾವಗಳ ವಿಶ್ವರೂಪವನ್ನು ಮಾಡಿಸಬಲ್ಲ ಸುಭಾಷಿತಗಳು ಭಾರತೀಯ ಸಂಸ್ಕೃತಿಯ ಅರಿವಿನ ಸಾಗರದ ಅಕ್ಷರತರಂಗಗಳೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.