ಪಾಪನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ನಿಗೂಹೂತಿ ಗುಣಾನ್ ಪ್ರಕಟೀಕರೋತಿ ।
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ ।।
ಇದರ ತಾತ್ಪರ್ಯ ಹೀಗೆ:ನಿಜವಾದ ಸ್ನೇಹಿತ
‘ಪಾಪದ ಕೆಲಸ ಮಾಡುವುದನ್ನು ತಪ್ಪಿಸುತ್ತಾನೆ; ಒಳ್ಳೆಯ ದಾರಿಯಲ್ಲಿಯೇ ನಮ್ಮನ್ನು ನಡೆಸುತ್ತಾನೆ; ನಮ್ಮ ಗುಟ್ಟನ್ನು ಬಚ್ಚಿಡುತ್ತಾನೆ; ಗುಣಗಳನ್ನೇ ಪ್ರಕಟಪಡಿಸುತ್ತಾನೆ; ಕಷ್ಟದಲ್ಲಿರುವಾಗ ನಮ್ಮನ್ನು ಬಿಟ್ಟುಹೋಗುವುದಿಲ್ಲ; ಕಷ್ಟದ ಸಮಯದಲ್ಲಿ ನಮಗೆ ಹಣ ಮುಂತಾದ ಆವಶ್ಯಕತೆಗಳನ್ನು ಒದಗಿಸುತ್ತಾನೆ – ಈ ಗುಣಗಳೇ ಸನ್ಮಿತ್ರನ ಲಕ್ಷಣ.‘
ದಿನದ ಸೂಕ್ತಿ ಕೇಳಿ:
ಮಿತ್ರ ಎಂದರೆ ಯಾರು ಎನ್ನುವುದನ್ನು ಸುಭಾಷಿತ ತುಂಬ ಸೊಗಸಾಗಿ ನಿರೂಪಿಸಿದೆ.
ಸ್ನೇಹ ಎನ್ನುವುದು ಹೊಣೆಗಾರಿಕೆಯೆ ಹೊರತು ಅವಕಾಶವಾದ ಅಲ್ಲ – ಎಂಬ ಮಾತಿದೆ. ಈ ಮಾತನ್ನು ಸುಭಾಷಿತ ಎತ್ತಿಹಿಡಿದಿದೆ.
ಜೀವನದಲ್ಲಿ ನಾವು ಎಡವುತ್ತಲೇ ಇರುತ್ತೇವೆ. ಹೀಗೆ ನಾವು ಎಡವದಂತೆ ನೋಡಿಕೊಳ್ಳುವವನೂ, ಎಡವಿದಾಗ ಬೀಳದಂತೆಯೂ, ಬಿದ್ದಾಗ ಸಂತೈಸುವವನೂ ಯಾರೊ ಅವನೇ ಸ್ನೇಹಿತ. ಇದು ಸುಭಾಷಿತ ಇಲ್ಲಿ ನೀಡಿರುವ ಸೂತ್ರ.
ಪಾಪದ ಕೆಲಸಗಳನ್ನು ಮಾಡಿದಾಗ ನಮ್ಮನ್ನು ಹಾಗೆ ಮಾಡದಂತೆ ತಡೆಯುತ್ತಾನೆ ದಿಟವಾದ ಸ್ನೇಹಿತ. ನಮಗೆ ಯಾರು ಬುದ್ಧಿ ಹೇಳಬಲ್ಲರೋ ಅವರೇ ನಿಜವಾದ ಹಿತೈಷಿಗಳು, ಸ್ನೇಹಿತರು. ಸ್ನೇಹಿತರಲ್ಲದವರು, ಹಿತೈಷಿಗಳಲ್ಲದವರು ನಮಗೆ ಬುದ್ಧಿ ಹೇಳುವುದಿಲ್ಲ. ನಮಗೆ ಯಾರಾದರೂ ಬುದ್ಧಿ ಹೇಳಿದರೆ ಅದನ್ನು ನಾವು ಸುಲಭವಾಗಿ ಸ್ವೀಕರಿಸುವುದಿಲ್ಲ; ಮಾತ್ರವಲ್ಲ, ಅಂಥವರನ್ನು ನಾವು ದೂರಮಾಡುವುದೂ ಉಂಟು. ಹೀಗಾಗಿ ಬುದ್ಧಿ ಹೇಳುವ ಕೆಲಸವನ್ನು ನಮ್ಮ ನಿಜವಾದ ಸ್ನೇಹಿತರು ಮಾತ್ರವೇ ಮಾಡಬಲ್ಲವರು.
ತಪ್ಪು ಮಾಡಬೇಡ ಎಂದು ಹೇಳಿದರಷ್ಟೆ ಸಾಲದು; ಒಳ್ಳೆಯ ದಾರಿ ಯಾವುದೆಂಬುದನ್ನೂ ತೋರಿಸಬೇಕು. ಸ್ನೇಹಿತ ಈ ಕೆಲಸವನ್ನೂ ಮಾಡುತ್ತಾನೆ.
ನಾವು ನಮ್ಮ ಗುಟ್ಟುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರುತ್ತೇವೆ. ಅಥವಾ ನಮ್ಮೊಂದಿಗೆ ಅವರು ಹೆಚ್ಚಿನ ಸಮಯದಲ್ಲಿ ಇರುತ್ತಾರೆ; ಹೀಗಾಗಿ ಅವರಿಗೆ ನಮ್ಮ ಹಲವು ವಿಷಯಗಳು ಗೊತ್ತಿರುತ್ತವೆ. ಈ ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದೇ ಸ್ನೇಹಿತನ ನಿಜವಾದ ಲಕ್ಷಣ. ನಮ್ಮ ಗುಟ್ಟುಗಳನ್ನು ಬಳಸಿಕೊಂಡು ಅವನು ನಮಗೆ ದ್ರೋಹವನ್ನು ಉಂಟುಮಾಡಲಾರ.
ಸ್ನೇಹಿತನಾದವನು ನಮ್ಮ ಒಳ್ಳೆಯ ಗುಣಗಳನ್ನು ಮಾತ್ರವೇ ಲೋಕದ ಮುಂದೆ ಪ್ರಕಟಪಡಿಸುತ್ತಾನೆ. ಏಕೆಂದರೆ ಅವನು ಸದಾ ನಮ್ಮ ಏಳಿಗೆಯನ್ನೇ ಬಯಸುತ್ತಾನೆ.
ಸ್ನೇಹಿತನ ಇನ್ನೊಂದು ಮುಖ್ಯ ಲಕ್ಷಣ ಎಂದರೆ ನಾವು ಕಷ್ಟದಲ್ಲಿದ್ದಾಗ ಅವನು ನಮ್ಮನ್ನು ಬಿಟ್ಟುಹೋಗುವುದಿಲ್ಲ. ಅಷ್ಟೇ ಅಲ್ಲ, ಆ ಸಮಯದಲ್ಲಿ ನಮಗೆ ಬೇಕಾದ ಸಹಾಯವನ್ನೂ ಮಾಡುತ್ತಾನೆ.
ಸ್ನೇಹಿತನಾದವನು ಹೀಗೆ ಸದಾ ನಮಗೆ ಒಳಿತನ್ನೇ ಬಯಸುವವನೂ ಮಾಡುವವನೂ ಆಗಿರುತ್ತಾನೆ. ಇನ್ನೊಂದು ಸುಭಾಷಿತ ಸ್ನೇಹಿತನ ಬಗ್ಗೆ ಹೀಗೆಂದಿದೆ:
ಕೇನಾಮೃತಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಮ್ ।
ಆಪದಾಂ ಚ ಪರಿತ್ರಾಣಂ ಶೋಕಸಂತಾಪಭೇಷಜಮ್ ।।
ಇದರ ತಾತ್ಪರ್ಯ:
‘ಅಮೃತಪ್ರಾಯವಾದುದೂ, ಕಷ್ಟಗಳಿಂದ ಕಾಪಾಡುವುದೂ, ದುಃಖ–ಸಂತಾಪಗಳಿಗೆ ಔಷಧದಂತೆ ಒದಗುವಂಥದ್ದೂ ಆದ ‘ಮಿತ್ರ‘ ಎಂಬ ಎರಡು ಅಕ್ಷರವನ್ನು ಯಾರು ಸೃಷ್ಟಿಮಾಡಿದರೋ?‘
ಇಂಥ ಆದರ್ಶ ಮಿತ್ರ ನಮಗೆ ಸಿಕ್ಕರೆ ಜೀವನದಲ್ಲಿ ಬೇರೆ ಯಾವ ಸಂಪತ್ತು ತಾನೆ ಬೇಕಾದೀತು, ಅಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.