ಜಾತಮಾತ್ರಂ ನ ಯಃ ಶತ್ರುಂ ವ್ಯಾಧಿಂ ಚ ಪ್ರಶಮಂ ನಯೇತ್ ।
ಮಹಾಬಲೋsಪಿ ತೇನೈವ ವೃದ್ಧಿಂ ಪ್ರಾಪ್ಯ ಸ ಹನ್ಯತೇ ।।
ಇದರ ತಾತ್ಪರ್ಯ ಹೀಗೆ:
‘ಯಾರು ಶತ್ರುವನ್ನೂ ರೋಗವನ್ನೂ ಹುಟ್ಟಿದ ಕೂಡಲೇ ನಾಶಗೊಳಿಸುವುದಿಲ್ಲವೋ ಅಂಥವನು ಎಷ್ಟೇ ಬಲಶಾಲಿಯಾಗಿದ್ದರೂ ವೃದ್ಧಿಹೊಂದಿದ ಅದರಿಂದಲೇ ಅನಂತರದಲ್ಲಿ ಸಾವಿಗೆ ಒಳಗಾಗುತ್ತಾರೆ.’
ನಮ್ಮ ಸದ್ಯದ ಸಂದರ್ಭಕ್ಕೂ ಈ ಸುಭಾಷಿತದ ಎಚ್ಚರಿಕೆ ಚೆನ್ನಾಗಿ ಹೊಂದುತ್ತದೆ.
ಕಳೆಯನ್ನು ಆರಂಭದಲ್ಲಿಯೇ ತೊಲಗಿಸಬೇಕು; ಇಲ್ಲವಾದಲ್ಲಿ ಅದು ಬೆಳೆಯ ಸಾರವನ್ನೆಲ್ಲ ಹೀರಿ ನಮಗೆ ನಷ್ಟವನ್ನು ಉಂಟುಮಾಡುತ್ತದೆ.
ಇಂಥವೇ ಇನ್ನೂ ಹಲವು ವಿದ್ಯಮಾನಗಳನ್ನು ನಮ್ಮ ಜೀವನದಲ್ಲಿ ನೋಡುತ್ತಿರುತ್ತೇವೆ.
ಶತ್ರುಗಳನ್ನು ಆರಂಭದಲ್ಲಿಯೇ ಗುರುತಿಸಿ ಅವರನ್ನು ನಿಗ್ರಹಿಸಬೇಕು ಎಂದು ಸುಭಾಷಿತ ಹೇಳುತ್ತಿದೆ. ಹೀಗೆ ಅವರನ್ನು ಉಪೇಕ್ಷಿಸುತ್ತಬಂದರೆ ಅವರು ಬಲವಾಗಿ ಬೆಳೆಯುತ್ತ ನಮಗೆ ತೊಂದರೆಯನ್ನು ನೀಡುತ್ತಾರೆ; ಕೊನೆಗೆ ಅವರಿಂದ ನಮ್ಮ ಜೀವನಕ್ಕೂ ತೊಂದರೆಯಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ. ಇದು ವ್ಯಕ್ತಿಗಳ ವಿಷಯದಲ್ಲಿ ಮಾತ್ರವೇ ಅಲ್ಲ, ದೇಶದ ವಿಷಯದಲ್ಲೂ ಸಲ್ಲುವಂಥ ಮಾತು. ಪಾಕಿಸ್ತಾನ–ಚೀನಾಗಳನ್ನೇ ಇಲ್ಲಿ ಉದಾಹರಣೆಯಾಗಿ ನೋಡಬಹುದು. ಆರಂಭದಿಂದಲೇ ನಾವು ಆ ದೇಶಗಳನ್ನು ಮಟ್ಟಹಾಕುವಷ್ಟು ಶಕ್ತಿಯನ್ನು ಸಂಪಾದಿಸಿಕೊಂಡು, ನಿಗ್ರಹಿಸಬೇಕಿತ್ತು. ಆದರೆ ಇಂದು ಸಮಸ್ಯೆ ಉಲ್ಬಣವಾಗಿರುವುದು ಸ್ಪಷ್ಟ.
ಇನ್ನು ರೋಗದ ವಿಷಯ. ಇಂದು ಕೊರೊನಾ ಸಮಸ್ಯೆ ನಮ್ಮ ಕೈ ಮೀರಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆರಂಭದಲ್ಲಿ ಜನರು ಸ್ವಲ್ಪ ಕಾಳಜಿಯನ್ನು ವಹಿಸಿದ್ದರು, ನಿಜ. ಆದರೆ ಅನಂತರದಲ್ಲಿ ಜನರೂ ಸರ್ಕಾರವೂ ಈ ಸಮಸ್ಯೆಗೆ ಕೊಡಬೇಕಾದಷ್ಟು ಗಮನವನ್ನು ಕೊಡಲಿಲ್ಲ ಎನ್ನುವುದೂ ಸತ್ಯವೇ. ಇಂದು ಸಮಸ್ಯೆ ವಿಪರೀತವಾಗಿ ಬೆಳೆದಿದೆ; ಅನಾಹುತಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಯಾವುದಾದರೂ ಸಮಸ್ಯೆ ನಮಗೆ ಎದುರಾದರೆ ಅದನ್ನು ಆರಂಭದಲ್ಲಿಯೇ ಕಂಡುಹಿಡಿದು ಅದನ್ನು ನಿವಾರಿಸಲು ಅಗತ್ಯವಾದ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು; ಇಲ್ಲವಾದಲ್ಲಿ ಅದು ಹಂತ ಹಂತವಾಗಿ ಬೆಳೆದು ಕೊನೆಗೆ ನಮಗೆ ವಿಪರೀತವಾದ ತೊಂದರೆಯನ್ನು ನೀಡುತ್ತದೆ.
ಮನೆಯಲ್ಲಿ ನಲ್ಲಿಯೊಂದು ಸೋರಲು ತೊಡಗಿತು ಎಂದಿಟ್ಟುಕೊಳ್ಳೋಣ. ಆರಂಭದಲ್ಲಿಯೇ ಅದನ್ನು ಸರಿಮಾಡದಿದ್ದರೆ ಅನಂತರ ಅದರಿಂದ ಟ್ಯಾಂಕ್‌ನ ನೀರೆಲ್ಲವೂ ವ್ಯರ್ಥವಾಗುವ ಸಂಭವ ಉಂಟು. ಇಂಥ ಹತ್ತಾರು ಉದಾಹರಣೆಗಳನ್ನು ನಮ್ಮ ನಿತ್ಯದ ಜೀವನದಿಂದಲೇ ಕೊಡಬಹುದು.
ಹೀಗಾಗಿ ಸದಾ ನಾವು ಅಪಾಯಗಳಿಂದ ಎಚ್ಚರಿಕೆಯಿಂದ ಇರಬೇಕು; ಎಂದಿಗೂ ಎಚ್ಚರಿಕೆಯಿಂದ ಜಾರದಂತೆ ನಮ್ಮ ಮೈ–ಮನಗಳನ್ನು ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.