ADVERTISEMENT

ದಿನದ ಸೂಕ್ತಿ: ಜೀವನದಲ್ಲಿ ಸತ್ಯವಾದದ್ದು ಏನು?

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಆಗಸ್ಟ್ 2021, 6:28 IST
Last Updated 5 ಆಗಸ್ಟ್ 2021, 6:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ ಕಾಲಸ್ಯ ಪ್ರಿಯಃ ಕಶ್ಚಿನ್ನ ದ್ವೇಷ್ಯಃ ಕುರುಸತ್ತಮ ।

ನ ಮಧ್ಯಸ್ಥಃ ಕ್ವಚಿತ್‌ ಕಾಲಃ ಸರ್ವಂ ಕಾಲಃ ಪ್ರಕರ್ಷತಿ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕಾಲನಿಗೆ ಪ್ರಿಯನೂ ಇಲ್ಲ, ವೈರಿಯೂ ಇಲ್ಲ. ಅವನು ಎಂದಿಗೂ ಮಧ್ಯಸ್ಥನೂ ಅಲ್ಲ. ಕಾಲನು ಸರ್ವರನ್ನೂ ಎಳೆದುಕೊಂಡು ಹೋಗುತ್ತಾನೆ.’

ಇದು ಮಹಾಭಾರತದ ಮಾತು, ಯುಧಿಷ್ಠಿರನಿಗೆ ಹೇಳಿದ್ದು.

ಇಲ್ಲಿ ಕಾಲ ಎಂದರೆ ಯಮ, ಮೃತ್ಯು. ಎಲ್ಲರಿಗೂ ಮೃತ್ಯು ಬಂದೇ ಬರುತ್ತದೆ. ಈ ಆತ್ಯಂತಿಕ ಸತ್ಯವನ್ನು ಕುರಿತು ಈ ಶ್ಲೋಕ ಮಾತನಾಡುತ್ತಿದೆ.

ನಾವೆಲ್ಲರೂ ನಮ್ಮ ಜೀವನವನ್ನು ತಾರತಮ್ಯದಲ್ಲಿಯೇ ನಡೆಸುತ್ತಿರುತ್ತೇವೆ. ಇವರು ನಮಗೆ ಇಷ್ಟ, ಅವರು ನಮಗೆ ಇಷ್ಟವಿಲ್ಲ; ಅವರು ನಮ್ಮ ಮಿತ್ರರು, ಇವರು ನಮ್ಮ ಶತ್ರುಗಳು – ಹೀಗೆ ಏನೋನೋ ಭೇದಗಳನ್ನು ಸೃಷ್ಟಿಸಿಕೊಂಡು ಜೀವನವನ್ನು ಏರುಪೇರುಮಾಡಿಕೊಳ್ಳುತ್ತಿರುತ್ತೇವೆ. ನಾವು ಈ ಒಡಕುಗಳನ್ನು ಸತ್ಯ, ಶಾಶ್ವತ ಎಂದೇ ತಿಳಿದುಕೊಳ್ಳುತ್ತೇವೆ. ಆದರೆ ನಾವು ಸೃಷ್ಟಿಯ ‘ನಿಜವಾದ‘ ಸತ್ಯವನ್ನು ಮರೆತು ವ್ಯವಹರಿಸುತ್ತಿದ್ದೇವೆ ಎಂಬುದನ್ನು ಸುಭಾಷಿತ ನೆನಪಿಸುತ್ತಿದೆ. ನಾವು ಜೀವನದಲ್ಲಿ ಕೃತಕವಾಗಿ ಏನೋನೋ ಭೇದಗಳನ್ನು ಸೃಷ್ಟಿಸಿಕೊಳ್ಳಬಹುದು. ಆದರೆ ಹೀಗೆ ಯಾವುದೇ ಭೇದಗಳನ್ನು ಎಣಿಸದೆ ಒಂದು ತತ್ತ್ವ ನಮ್ಮೆಲ್ಲರ ಜೀವನದಲ್ಲಿ ಕ್ರಿಯಾಶೀಲವಾಗಿದೆ; ಅದೇ ಸಾವು ಎನ್ನುತ್ತಿದೆ ಮಹಾಭಾರತ. ನಾವು ನಮ್ಮ ಸ್ನೇಹಿತರನ್ನು ಪ್ರೀತಿಯಿಂದ ಕಾಣುತ್ತೇವೆ, ನಮಗೆ ಆಗದವರ ಬಗ್ಗೆ ನಮಗೆ ಅಸಹನೆ–ಕೋಪಗಳು ಇರುತ್ತವೆ. ಆದರೆ ಮೃತ್ಯವಿಗೆ ಯಾರೂ ಪ್ರಿಯರೂ ಅಲ್ಲ, ಶತ್ರುಗಳೂ ಅಲ್ಲ; ಅದು ಎಲ್ಲರನ್ನೂ ಸಮನಾಗಿ ನೋಡುತ್ತದೆ ಎನ್ನುತ್ತಿದೆ.

ಮೃತ್ಯು ಮಧ್ಯಸ್ಥನೂ ಅಲ್ಲ ಎಂದಿರುವುದು ಸ್ವಾರಸ್ಯಕರವಾಗಿದೆ. ನಾವು ಜೀವನದಲ್ಲಿ ಏನಾದರೊಂದು ವ್ಯವಹಾರವನ್ನು ಕುದುರಿಸುವಾಗ ಮಧ್ಯಸ್ಥನೊಬ್ಬನನ್ನು ನೇಮಕ ಮಾಡಿಕೊಳ್ಳುತ್ತೇವೆ. ಅವನು ನಮ್ಮ ಮತ್ತು ನಮ್ಮ ಪ್ರತಿಕಕ್ಷಿಯ ನಡುವೆ ಸೇತುವೆಯಾಗಿ, ಇಬ್ಬರ ಹಿತವನ್ನೂ ಕಾಪಾಡುವಂತೆ ನಡೆದುಕೊಳ್ಳುತ್ತಾನೆ ಎಂಬ ವಿಶ್ವಾಸ ನಮ್ಮದು. ಆದರೆ ಮೃತ್ಯು ಹೀಗೆ ಯಾರೊಂದಿಗೂ ಕುಳಿತು ವ್ಯವಹಾರವನ್ನು ಕುದುರಿಸಿಕೊಡುವ ಲಾಭ–ನಷ್ಟಗಳ ವ್ಯವಹಾರ ಅಲ್ಲ. ಅದು ಬಂದಾಗ ಅದರದ್ದೇ ಕೊನೆಯ ತೀರ್ಮಾನ ಆಗಿರುತ್ತದೆ.

ಹೌದು, ಹುಟ್ಟಿರುವ ಎಲ್ಲರಿಗೂ ಸಾವು ಬಂದೇ ಬರುತ್ತದೆ. ಇದೇ ಸತ್ಯ. ಈ ವಾಸ್ತವದ ನಡುವೆ ನಾವು ನಮ್ಮ ಜೀವನವನ್ನು ಹೇಗೆ ಸಾರ್ಥಕ ಮಾಡಿಕೊಳ್ಳುತ್ತೇವೆ ಎಂಬುದೇ ನಮ್ಮ ಮುಂದಿರುವ ನಿಜವಾದ ಸವಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.