ADVERTISEMENT

ದಿನದ ಸೂಕ್ತಿ: ಮಾತಿನ ಸಾರ್ಥಕತೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 24 ಜನವರಿ 2021, 6:23 IST
Last Updated 24 ಜನವರಿ 2021, 6:23 IST
ಮಾತು ಮಾತು ಮಾತು
ಮಾತು ಮಾತು ಮಾತು   

ಅನಿರ್ಲೋಡಿತಕಾರ್ಯಸ್ಯ ವಾಗ್‌ಜಾಲಂ ವಾಗ್ಮಿನೋ ವೃಥಾ ।

ನಿಮಿತ್ತಾದಪರಾದ್ಧೇಷೋಃ ಧಾನುಷ್ಯಸ್ಯೇವ ವಲ್ಗಿತಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕಾರ್ಯ ಏನನ್ನೂ ಸಾಧಿಸದೆ ಬಹಳ ಮಾತನಾಡುವ ವಾಗ್ಮಿಯ ವಾಗ್‌ಜಾಲ ವ್ಯರ್ಥವೇ ಸರಿ. ಇದು ಹೇಗೆಂದರೆ, ಗುರಿಗೆ ಬಾಣವನ್ನು ಹೊಡೆದು ಅದನ್ನು ಬೀಳಿಸಲಾಗದ ಬಿಲ್ಲುಗಾರನ ಜಂಭದ ಹಾರಾಟದಂತೆ, ಅಷ್ಟೆ!’

ಮಾತು ಮಾತು ಮಾತು. ಈಗ ಎಲ್ಲೆಲ್ಲೂ ಮಾತಿನದ್ದೇ ಮೇಲಾಟ. ಎಲ್ಲರಿಗೂ ಮಾತನಾಡುವ ಉತ್ಸಾಹ. ಎಲ್ಲರೂ ಮಾತನಾಡಲು ತೊಡಗಿದರೆ ಅದನ್ನು ಕೇಳಿಸಿಕೊಳ್ಳುವವರು ಯಾರು? ಮಾತಿನ ಸಾರ್ಥಕತೆಯ ಬಗ್ಗೆ ಸುಭಾಷಿತ ಮಾತನಾಡುತ್ತಿದೆ.

ಯಾವುದೇ ಸಮಸ್ಯೆ ಬಗ್ಗೆಯೂ ಇಂದು ಮಾತಿನ ಮೂಲಕ ಪರಿಹಾರವಂತೂ ಸಿದ್ಧವಾಗಿರುತ್ತದೆ! ಅದೂ ಒಂದು ಸಮಸ್ಯೆಗೆ ಒಂದು ಪರಿಹಾರವಲ್ಲ, ಹತ್ತಾರು!! ಮಾತಿನಲ್ಲಿ ಎಂಥದು ದಾರಿದ್ರ್ಯ ಅಲ್ಲವೆ?! ಎಲ್ಲರೂ ಮಾತಿನಲ್ಲಿ ಪರಿಹಾರಗಳನ್ನು ಉದುರಿಸುತ್ತಿರುತ್ತಾರೆ. ಮಾತಿನ ಈ ವಿಜೃಂಭಣೆ ಕೇವಲ ರಾಜಕಾರಣಿಗಳಷ್ಟೆ ಸೀಮಿತವಾದುದಲ್ಲ; ಅವರಲ್ಲಿ ಇದೇ ಪ್ರಧಾನಗುಣವಾಗಿರುತ್ತದೆಯೆನ್ನಿ! ಆದರೆ ನಾವೆಲ್ಲರೂ ಮಾತಿನಲ್ಲಿ ಶೂರರೇ ಹೌದು.

ಬರಿಯ ಮಾತುಗಳಿಂದ ಏನೂ ಪ್ರಯೋಜವಿಲ್ಲ ಎನ್ನುತ್ತಿದೆ ಸುಭಾಷಿತ. ಮಾತು ಅದು ಆಚರಣೆಗೆ ಇಳಿಯಬೇಕು, ಕ್ರಿಯೆಯಾಗಿ ಪರಿವರ್ತನೆಯಾಗಬೇಕು. ಆಗಲೇ ಅದರ ಸಾರ್ಥಕತೆ. ಹಸಿವನ್ನು ಹೋಗಲಾಡಿಸುವ ಬಗ್ಗೆ ಸಾವಿರ ಮಾತುಗಳನ್ನು ಆಡುವುದಕ್ಕಿಂತಲೂ ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ಕೊಡುವುದು ಹೆಚ್ಚು ಸಾರ್ಥಕದ ಕೆಲಸ.

ರಾಜಕಾರಣಿಗಳು ದಿನ ಬೆಳಗಾದರೆ ಸಾಕು, ದೇಶವನ್ನು ಕಟ್ಟುವುದರ ಬಗ್ಗೆ, ಸಮಾಜವನ್ನು ಉದ್ಧಾರ ಮಾಡುವ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಲು ಆರಂಭಿಸಿಕೊಳ್ಳುತ್ತಾರೆ. ಆದರೆ ಅವರ ಮಾತುಗಳು ನಿಜವಾಗಿಯೂ ಎಷ್ಟು ಕ್ರಿಯೆಯ ರೂಪಕ್ಕೆ ಪರಿವರ್ತನೆಯಾಗುತ್ತವೆ? ಅವರು ಆಡಿದ್ದೆಲ್ಲ ಮಾಡಿದ್ದರೆ ದೇಶ, ಸಮಾಜ ಹೀಗೆ ಇರುತ್ತಿತ್ತೆ?

ಬಾಣಕ್ಕೊಂದು ಉದ್ದೇಶ ಇರುತ್ತದೆ. ಅದು ಗುರಿಯನ್ನು ಮುಟ್ಟಿ, ಅದನ್ನು ಉರುಳಿಸಬೇಕು. ಆಗಷ್ಟೆ ಬಾಣಕ್ಕೆ ಸಾರ್ಥಕತೆ. ಹೀಗೆಯೇ ಮಾತಿಗೂ ಒಂದು ಗುರಿ ಇರಬೇಕು. ಆ ಗುರಿಯನ್ನು ತಲಪುವುದಕ್ಕಾಗಿ ಮಾತು ಸಾಧನವಾಗಬೇಕೆ ಹೊರತು ಮಾತಷ್ಟೆ ನಮ್ಮ ಗುರಿಯಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.