ADVERTISEMENT

ಬದುಕಿಗೆ ಬೇಕಾದ ಬಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
ದುರ್ಗಾ
ದುರ್ಗಾ   

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ।

ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋsಸ್ತು ತೇ ।।

ನಮಗೆ ಒದಗಿರುವ ಕಷ್ಟಗಳಿಂದ ನಮ್ಮನ್ನು ಪಾರುಮಾಡಿ, ದಣಿದಿರುವ ಬದುಕಿಗೆ ಹೊಸತನವನ್ನು ತುಂಬಬಲ್ಲದ್ದು ನವರಾತ್ರಿ. ಈಗಂತೂ ಇಡಿಯ ಜಗತ್ತಿಗೇ ನವತ್ವ ಬೇಕಿದೆ. ಕೋವಿಡ್‌ನ ಉಪಟಳದಿಂದ ಎಲ್ಲರೂ ದಣಿದಿದ್ದಾರೆ; ಎಲ್ಲರಿಗೂ ಹುರುಪು–ಉತ್ಸಾಹ–ಚೈತನ್ಯಗಳು ಬೇಕಿವೆ.

ADVERTISEMENT

ಪ್ರಕೃತಿ ನಮ್ಮ ಎಲ್ಲ ಶಕ್ತಿಗಳ ಮೂಲಸ್ರೋತ. ಅವಳು ನಮಗೆ ಒಲಿದಾಗಲೇ ನಮ್ಮ ಬದುಕು ಹಗುರ, ಸುಖ, ಸಂತೋಷ, ಸುಂದರ; ಅವಳು ಮುನಿದಾಗ ಬದುಕು ಭಾರ, ನೋವು, ದುಃಖ, ಭಯಂಕರ. ಅವಳನ್ನು ಒಲಿಸಿಕೊಳ್ಳುವುದು ಎಂದರೆ ಶಕ್ತಿಯ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡು, ಅದಕ್ಕೆ ತಕ್ಕಂತೆ ಜೀವನವನ್ನು ರೂಪಿಸಿಕೊಳ್ಳುವುದು.

ನಮ್ಮ ಜೀವನಕ್ಕೆ ಮುಖ್ಯವಾಗಿ ಏನು ಬೇಕು? ಮೊದಲಿಗೆ ಪ್ರಾಣ ಇರಬೇಕು; ಆ ಪ್ರಾಣಕ್ಕೆ ತ್ರಾಣ ಒದಗಬೇಕು. ಪ್ರಾಣ–ತ್ರಾಣಗಳ ಸಂಯೋಗವನ್ನೇ ಬಲ ಎನ್ನಬಹುದು. ಇದು ದೇಹಕ್ಕೆ ಅಸ್ತಿತ್ವವನ್ನು ಒದಗಿಸುವ ಮೊದಲ ಹಂತ. ಈ ಬಲವೊಂದೇ ಇದ್ದರೆ ನಮ್ಮ ಜೀವನಕ್ಕೆ ಸಾಕಾಗದು; ಹಲವು ಬಲಗಳ ಬೆಂಬಲ ನಮಗೆ ಬೇಕಾಗುತ್ತದೆ; ದೈಹಿಕ ಮಾನಸಿಕ ಬೌದ್ಧಿಕ ಬಲಗಳಲ್ಲದೆ, ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಬಲಗಳೂ ಬೇಕಾಗುತ್ತವೆ. ಈ ಎಲ್ಲ ಬಗೆಯ ಬಲಗಳನ್ನೂ ಒಂದಾಗಿ ಸೇರಿಸಿ ‘ಶಕ್ತಿ’ ಎಂದು ಕರೆಯಬಹುದು. ಶಕ್ತಿಯ ವಿವಿಧ ಆಯಾಮಗಳ ಆರಾಧನೆಗೆ ಮೀಸಲಾಗಿರುವ ಹಬ್ಬವೇ ನವರಾತ್ರಿ. ಇದು ಶಕ್ತಿಶಾರದೆಯ ಉತ್ಸವ.

ಇಂದು ಜಗತ್ತು ಅನಾರೋಗ್ಯ, ಅವಿದ್ಯೆ, ದಾರಿದ್ರ್ಯಗಳಿಂದ ಬಳಲುತ್ತಿದೆ. ಇವು ಎಲ್ಲ ಕಾಲದ ಸಮಸ್ಯೆಗಳೂ ಹೌದು. ಈ ಕಷ್ಟಗಳಿಂದ ನಮ್ಮನ್ನು ಕಾಪಾಡಬಲ್ಲದ್ದು ಪ್ರಕೃತಿ. ಇದು ನಮ್ಮ ಒಳಗಿನ ಪ್ರಕೃತಿಯೂ ಹೌದು, ನಮ್ಮ ಹೊರಗಿನ ಪ್ರಕೃತಿಯೂ ಹೌದು. ಇದು ನಮ್ಮ ಅಂತರಂಗದ ಚೈತನ್ಯವೂ ಹೌದು, ಬಹಿರಂಗದ ಚೈತನ್ಯವೂ ಹೌದು. ಹೀಗೆ ನಮ್ಮನ್ನೂ ನಮ್ಮ ಪರಿಸರವನ್ನೂ ನಮ್ಮ ಏಳಿಗೆಗೆ ಒದಗುವಂತೆ, ನಮ್ಮ ಬದುಕನ್ನು ಹೊಸತನ್ನಾಗಿಸಿಕೊಳ್ಳುವಂತೆ ನಡೆಸುವ ಅಂತರಂಗ–ಬಹಿರಂಗದ ಶಕ್ತಿಪೂಜೆಯೇ ‘ನವರಾತ್ರಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.