ADVERTISEMENT

ದಿನದ ಸೂಕ್ತಿ: ಅಲ್ಲೂ ಇಲ್ಲ, ಇಲ್ಲೂ ಇಲ್ಲ!

ಎಸ್.ಸೂರ್ಯಪ್ರಕಾಶ ಪಂಡಿತ್
Published 24 ಆಗಸ್ಟ್ 2020, 19:30 IST
Last Updated 24 ಆಗಸ್ಟ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂಗತಾಃ ।

ತೇ ನರಾಃ ಸುಖಮೇಧಂತೇ ಕ್ಲಿಶ್ಯತ್ಯಂತರಿತೋ ಜನಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಲೋಕದಲ್ಲಿ ಯಾರು ಅತ್ಯಂತ ಮೂಢರೋ ಮತ್ತು ಯಾರೂ ಮಹಾಬುದ್ಧಿಶಾಲಿಗಳೋ ಅವರು ಸುಖವಾಗಿ ಏಳ್ಗೆಯನ್ನು ಹೊಂದುತ್ತಾರೆ; ಮಧ್ಯಮರು ಮಾತ್ರ ಕಷ್ಟಪಡುತ್ತಾರೆ.’

ತುಂಬ ಹಣ ಇದ್ದರೂ ಚಿಂತೆಯಲ್ಲೂ, ಹಣವೇ ಇಲ್ಲದಿದ್ದರೂ ಚಿಂತೆಯಿಲ್ಲ; ಆದರೆ ಅಲ್ಪ ಸ್ವಲ್ಪ ದುಡ್ಡಿದ್ದವರಿಗೆ ಚಿಂತೆಯೋ ಚಿಂತೆ. ಇರುವ ಕಾಸಿನಲ್ಲಿ ಉಪ್ಪಿಗೆ ಕೊಟ್ಟರೆ ಮೆಣಸಿನಕಾಯಿಗೆ ಸಾಲದು, ಮೆಣಸಿನಕಾಯಿಗೆ ಕೊಟ್ಟರೆ ಉಪ್ಪಿಗೆ ಸಾಲದು – ಇದು ಅವರ ಪರಿಸ್ಥಿತಿ; ಹೀಗಾಗಿ ಚಿಂತೆ.

ಸುಭಾಷಿತ ಹೇಳುತ್ತಿರುವುದು ಇನ್ನೊಂದು ವಿಧದ ವಿದ್ಯಮಾನವನ್ನು.

ಯಾರು ಪೂರ್ಣ ದಡ್ಡರೋ ಅವರೂ ಸುಖವಾಗಿರುತ್ತಾರೆ. ಯಾರು ಪೂರ್ಣ ಬುದ್ಧಿವಂತರೋ ಅವರೂ ಸುಖವಾಗಿರುತ್ತಾರೆ. ಆದರೆ ಸ್ವಲ್ಪ ದಡ್ಡತನ, ಸ್ವಲ್ಪ ಬುದ್ಧಿವಂತತನ ಇದ್ದವರು ಮಾತ್ರ – ಎಂದರೆ ಮಧ್ಯಮರು – ತೊಂದರೆಯನ್ನು ಅನುಭವಿಸುತ್ತಿರುತ್ತಾರೆ.

ಇದು ಹೇಗೆ? ಪೂರ್ಣ ದಡ್ಡರಿಗೆ ವಿಷಯವೇ ಗೊತ್ತಿರುವುದಿಲ್ಲ. ಹೀಗಾಗಿ ಅವರು ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ; ಅವರು ನೆಮ್ಮದಿಯನ್ನೂ ಹಾಳುಮಾಡಿಕೊಳ್ಳುವುದಿಲ್ಲ. ಇನ್ನು ಪೂರ್ಣ ಬುದ್ಧಿವಂತರು; ಅವರಿಗೆ ವಿಷಯದ ಪರಿಜ್ಞಾನ ಚೆನ್ನಾಗಿರುತ್ತದೆ. ಆದ್ದರಿಂದ ಅವರು ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಸ್ಪಷ್ಟತೆ ಕೂಡ ಇರುತ್ತದೆ. ಹೀಗಾಗಿ ಇವರೂ ನೆಮ್ಮದಿಯಿಂದ ಇರಬಲ್ಲರು.

ಆದರೆ ಸ್ವಲ್ಪ ಬುದ್ಧಿ, ಸ್ವಲ್ಪ ಮೌಢ್ಯ ಇದ್ದವರು ಮಾತ್ರ, ಪಾಪ, ನೆಮ್ಮದಿಯನ್ನು ಕಳೆದುಕೊಂಡು ಸಂಕಟಪಡುತ್ತಿರುತ್ತಾರೆ. ಅವರಿಗೆ ಪೂರ್ಣವಾದ ಮಾಹಿತಿ ಇದೆ ಎನ್ನುವಂತೆಯೂ ಇಲ್ಲ, ಇಲ್ಲ ಎನ್ನುವಂತೆಯೂ ಇಲ್ಲ; ಹೀಗಾಗಿ ಅವರಿಗೆ ಸಂಕಟ ತಪ್ಪಿದ್ದಲ್ಲ.

ಉದಾಹರಣೆಯೊಂದಿಗೆ ಇಲ್ಲಿ ವಿಶ್ಲೇಷಣೆ ನಡೆಸಬಹುದು. ಕೊವಿಡ್‌ ಬಗ್ಗೆ ಪೂರ್ಣವಾದ ಮಾಹಿತಿ ಇರುವವನು ಎಚ್ಚರಿಕೆಯಿಂದ ಇರಬಲ್ಲ; ಅವನಿಗೆ ಆತಂಕ ಇಲ್ಲ. ಏನೂ ಗೊತ್ತಿಲ್ಲದವನು, ಅವನಿಗೆ ಕೋವಿಡ್‌–19 ಎಂಬ ರೋಗ ಇದೆ ಎನ್ನುವ ಸಂಗತಿಯೇ ಗೊತ್ತಿಲ್ಲ. ಹೀಗಾಗಿ ಅವನಿಗೂ ಆತಂಕವಿಲ್ಲ; ಅವನು ನೆಮ್ಮದಿಯನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಕೊವಿಡ್‌ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡನಿಗೆ ಸಂಕಟವೋ ಸಂಕಟ! ಇವನಿಗೆ ಕೈ ಚೆನ್ನಾಗಿ ತೊಳೆದುಕೊಳ್ಳಬೇಕೆಂದು ಗೊತ್ತಿರುತ್ತದೆ. ಆದರೆ ಸೋಪ್‌ನಿಂದ ತೊಳೆದುಕೊಂಡರೆ ಒಳ್ಳೆಯದೋ ಸ್ಯಾನಿಟೈಸರ್‌ನಿಂದ ತೊಳೆದುಕೊಂಡರೆ ಒಳ್ಳೆಯದೋ – ಈ ವಿಷಯದಲ್ಲಿ ಅವನಿಗೆ ಗೊಂದಲ. ಈ ಕಾರಣದಿಂದ ಅವನಿಗೆ ಆತಂಕವೂ ಎದುರಾಗುತ್ತದೆ; ನೆಮ್ಮದಿಯೂ ಹಾಳಾಗುತ್ತದೆ.

ಹಾಗಾದರೆ ನಾವು ಏನು ಮಾಡಬೇಕು? ಪೂರ್ಣವಾದ ಬುದ್ಧಿಯನ್ನು ಸಂಪಾದಿಸುವುದು ಸುಲಭವಲ್ಲ. ಆದುದರಿಂದ ನಾವೆಲ್ಲರೂ ಪರಿಶ್ರಮವನ್ನು ಪಡದೆ ಪೂರ್ಣ ಮೌಢ್ಯದಲ್ಲಿಯೇ ಇದ್ದುಬಿಡೋಣವೆ?

ಸುಭಾಷಿತ ಇಲ್ಲಿ ಅದನ್ನು ಹೇಳುತ್ತಿರುವುದಲ್ಲ. ನಾವು ಚೂರೋ ಪಾರೋ ವಿಷಯವನ್ನು ತಿಳಿದುಕೊಂಡು ಬೃಹಸ್ಪತಿಗಳಂತೆ ವರ್ತಿಸತೊಡಗಿದರೆ, ಅದರಿಂದ ನಮಗೆ ದುಃಖ ತಪ್ಪಿದ್ದಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.