ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವೇತ್ ।
ಏವಂ ಪುರುಷಾಕಾರೇಣ ವಿನಾ ದೈವಂ ನ ಸಿದ್ಧ್ಯತಿ ।।
ಇದರ ತಾತ್ಪರ್ಯ ಹೀಗೆ:
‘ಒಂದೇ ಒಂದು ಚಕ್ರದಿಂದ ರಥ ಚಲಿಸಲಾರದು; ಅಂತೆಯೇ ಪುರುಷಪ್ರಯತ್ನ ಇಲ್ಲದೆ ದೈವವು ಸಿದ್ಧಿಸುವುದಿಲ್ಲ.‘
ಎತ್ತಿನ ಗಾಡಿಯನ್ನು ನಾವು ನೋಡಿರುತ್ತೇವೆ. ಗಾಡಿಗೆ ಎರಡು ಚಕ್ರಗಳು ಇರುತ್ತವೆ. ಎರಡು ಚಕ್ರಗಳು ಇಲ್ಲದಿದ್ದರೆ ಗಾಡಿ ಚಲಿಸಲಾರದು. ಸೈಕಲ್, ಸ್ಕೂಟರ್ – ಹೀಗೆ ಹಲವು ವಾಹನಗಳಿಗೆ ಎರಡು ಚಕ್ರಗಳು ಇರುತ್ತವೆ; ಕಾರು, ಬಸ್ಸು ಮುಂತಾದ ವಾಹನಗಳಿಗೆ ನಾಲ್ಕು ಚಕ್ರಗಳು ಇರುತ್ತವೆ. ಇದರ ಒಟ್ಟು ತಾತ್ಪರ್ಯ ಎಂದರೆ, ಯಾವುದೇ ವಾಹನ ಒಂದೇ ಚಕ್ರದಿಂದ ಚಲಿಸಲಾರದು.
ನಾವೆಲ್ಲರೂ ಹಲವು ಸಂದರ್ಭದಲ್ಲಿ ಅದೃಷ್ಟವನ್ನು ನಂಬುತ್ತೇವೆ. ಇದನ್ನೇ ದೇವರು, ದೈವ ಎಂದೂ ಹೇಳಬಹುದು. ನಮ್ಮ ಕಣ್ಣಿಗೆ ಕಾಣದ, ಆದರೆ ನಮಗಿಂತಲೂ ಶಕ್ತಿಶಾಲಿಯಾದ ತತ್ತ್ವವನ್ನೇ ನಾವು ದೈವ ಎಂದೋ ಅದೃಷ್ಟ ಎಂದೋ ಕರೆಯುತ್ತೇವೆ. ಈ ದೈವ ನಮ್ಮ ಪ್ರಾರ್ಥನೆಯನ್ನು ಕೇಳುತ್ತದೆ; ನಮಗೆ ಬೇಕಾದ ವರವನ್ನು ಅದು ಕೊಡುತ್ತದೆ; ನಮ್ಮನ್ನು ಸಂಕಟಗಳಿಂದ ಪಾರುಮಾಡುತ್ತದೆ ಎಂಬ ನಂಬಿಕೆ ನಮ್ಮದು.
ಬಂಡಿ ಮತ್ತು ದೈವ – ಇವೆರಡನ್ನೂ ಬಳಸಿಕೊಂಡು ಸುಭಾಷಿತ ಇಲ್ಲೊಂದು ಸಂದೇಶವನ್ನು ನಮಗೆ ನೀಡುತ್ತಿದೆ.
ನಾವು ಎಷ್ಟೋ ಸಂದರ್ಭದಲ್ಲಿ ದೈವದ ಮೇಲೆ ಭಾರ ಹಾಕಿ ಸುಮ್ಮನಾಗಿಬಿಡುತ್ತೇವೆ; ನಾವು ಯಾವ ಕರ್ತವ್ಯವನ್ನು ನಿರ್ವಹಿಸಬೇಕೋ, ಯಾವ ಕೆಲಸವನ್ನು ಮಾಡಬೇಕಿತ್ತೋ ಅದರಿಂದ ದೂರ ಉಳಿದು ನಿಷ್ಜ್ರಿಯರಾಗಿಬಿಡುತ್ತೇವೆ. ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದನ್ನೇ: ಹೇಗೆ ಗಾಡಿಯೊಂದು ಒಂದೇ ಚಕ್ರದಿಂದ ಚಲಿಸಲಾರದೋ ಹಾಗೆಯೇ ದೈವದ ಮೇಲಿನ ನಂಬಿಕೆಯೊಂದರಿಂದಲೇ ನಮ್ಮ ಜೀವನರಥವೂ ನಡೆಯದು; ದೈವದ ಮೇಲಿನ ನಂಬಿಕೆಯ ಜೊತೆಗೆ ಪುರುಷಪ್ರಯತ್ನವೂ ಬೇಕು ಎನ್ನುತ್ತಿದೆ ಅದು. ನಮ್ಮ ಪ್ರಯತ್ನವನ್ನು ನಾವು ಮೊದಲಿಗೆ ಮಾಡಬೇಕು. ಆ ಬಳಿಕ ದೈವದ ಮೇಲೆ ಭಾರ ಹಾಕಬೇಕು. ನಾವು ಉತ್ತು, ಬಿತ್ತಿದರೆ, ಆಮೇಲೆಯಷ್ಟೆ ಮಳೆ ಎಂಬ ದೈವದ ಮೇಲೆ ನಂಬಿಕೆ ಇಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.