ADVERTISEMENT

ದಿನದ ಸೂಕ್ತಿ: ಕನ್ನಡವೆಂದರೆ...

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಅಕ್ಟೋಬರ್ 2021, 6:29 IST
Last Updated 31 ಅಕ್ಟೋಬರ್ 2021, 6:29 IST
ಭಾಷೆ
ಭಾಷೆ   

ಕನ್ನಡವೆಂದರೆ ತಾಯಿಯೆ, ದೇವಿಯೆ?
ನಾನೂ ನೀನೂ ಅವರು;
ಜನಮನದೊಳಗುದಿ ತುಡಿತ ಕಡಿತಗಳ
ಪ್ರತಿಕೃತಿ ಗತಿ ನೂರಾರು.

ಪಂಪಕುಮಾರವ್ಯಾಸರ ದಾಸರ
ಶರಣರ ಜ್ಯೋತಿರ್ಲಿಂಗ
ತಿಮ್ಮನ, ಬೋರನ, ಈರಗಮಾರರ
ಹೃದಯದ ಸಹಜ ತರಂಗ.

ಮನಸ್ಸು ಮಾಗಿದರೇ ಇದೇ ಸುಸ್ವರ,
ಅನುಭವ ತಳೆವ ಶರೀರ:
ಹಿಂದಕೆ ನೋಡುತ ಮುಂದಕೆ ದುಡುಕುವ
ನದಿಯಂತಿದರ ವಿಹಾರ.

ADVERTISEMENT

ಇದು ಗೋಪಾಲಕೃಷ್ಣ ಅಡಿಗ ಅವರ ’ಕನ್ನಡವೆಂದರೆ‘ ಕವಿತೆಯ ಸಾಲುಗಳು.

ಭಾಷೆ ಯಾವಾಗ ಹುಟ್ಟಿತು, ಹೇಗೆ ಹುಟ್ಟಿತು ಎಂದು ಹೇಳುವುದಕ್ಕೆ ಆಗದು. ಪ್ರಪಂಚದಲ್ಲಿ ಎಷ್ಟೋ ಭಾಷೆಗಳು ಹುಟ್ಟಿವೆ. ಎಷ್ಟೋ ಭಾಷೆಗಳು ಮರೆಯಾಗುತ್ತಿವೆ ಕೂಡ.

ನಮ್ಮ ಸಂಸ್ಕೃತಿಯಲ್ಲಂತೂ ಭಾಷೆಗೂ ದೈವತ್ವಕ್ಕೂ ನಂಟನ್ನು ಕಲ್ಪಿಸಿದ್ದೇವೆ. ಗೋಪಾಕೃಷ್ಣ ಅಡಿಗರ ಪದ್ಯದ ಈ ಸಾಲುಗಳಲ್ಲೂ ನಾವು ನೋಡುವುದು ಇದೇ ಭಾವವನ್ನು. ಆದರೆ ಅವರು ಆ ದೈವತ್ವವನ್ನು ಮನುಷ್ಯನ ಅಂತರಂಗದ ಪರಿಪಾಕದಲ್ಲಿ ಸಾಕ್ಷಾತ್ಕಾರವಾಗಬೇಕೆಂದು ಆಶಿಸಿರುವುದು ಮನನೀಯ.

‘ಕನ್ನಡವೆಂದರೆ ತಾಯಿಯೆ, ದೇವಿಯೆ? ನಾನೂ ನೀನೂ ಅವರು‘ – ಈ ಮೊದಲ ಸಾಲುಗಳೇ ಮಾರ್ಮಿಕವಾಗಿವೆ. ಕನ್ನಡವನ್ನು ತಾಯಿ, ದೇವಿ ಎಂದು ಆರಾಧಿಸುವುದು ಸರಿ. ಆದರೆ ಈ ತಾಯ್ತನ, ದೈವಿಕತೆಗಳು ಪ್ರಕಟವಾಗಬೇಕಾದ್ದು ಎಲ್ಲಿ? ಅದು ನಮ್ಮ ನಮ್ಮಲ್ಲಿ ಪ್ರಕಟವಾಗಬೇಕು. ನಾವು ಪರಸ್ಪರ ಸಂವಹಿಸುವ ಮಾತಿನಲ್ಲಿ ಭಾಷೆಯ ಶಕ್ತಿ–ಸೌಂದರ್ಯಗಳು ಪ್ರಕಟವಾಗಬೇಕು. ಎಂದರೆ ಅದು ನಮ್ಮ ವ್ಯಕ್ತಿತ್ವದಲ್ಲಿ ನೆಲೆಗೊಳ್ಳಬೇಕು.

ಮನಸ್ಸು ಮಾಗಿದರೆ ಇದೇ ಸುಸ್ವರ, ಅನುಭವ ತಳೆವ ಶರೀರ – ಈ ಮಾತು ತುಂಬ ಅರ್ಥಗರ್ಭಿತ. ಜೀವನವನ್ನು ಹತ್ತಿರದಿಂದ ಕಂಡು, ಒಳಿತು–ಕೆಡಕುಗಳನ್ನು ಪರಾಮರ್ಶಿಸಿ ಪ್ರಬುದ್ಧತೆಯನ್ನೂ ವಿವೇಕವನ್ನೂ ಸಂಪಾದಿಸಿಕೊಳ್ಳಬೇಕು. ಮನಸ್ಸು ಮಾಗುವುದು ಎಂದರೆ ಇದೇ. ಹೀಗೆ ಮಾಗಿದ ಮನಸ್ಸು ನುಡಿಯುವ ಮಾತೆಲ್ಲವೂ ಸುಸ್ವರವಾಗಿರುತ್ತದೆ. ಭಾಷೆಯೊಂದು ಸಂಸ್ಕೃತಿ ಆಗುವುದು ಎಂದರೆ ಇದೇ. ತಾಯ್ತನ ಎಂದರೂ ಇದೇ. ಕಾಪಾಡುವುದು, ರಕ್ಷಿಸುವುದು, ಬೆಳೆಸುವುದು. ಈ ಕೆಲಸವನ್ನು ನಾವು ನಮ್ಮ ನುಡಿಯಿಂದಲೂ ಮಾಡಬೇಕು. ನಮ್ಮ ನುಡಿಯನ್ನು ರಕ್ಷಿಸುವ, ಕಾಪಾಡುವ, ಬೆಳೆಸುವ ಕೆಲಸವನ್ನೂ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.