ದುಷ್ಪ್ರಾಪಂ ಮಕರಾಕರೇ ಕರತಲಾದ್ರತ್ನಂ ನಿಮಗ್ನಂ ಯಥಾ
ಸಂಸಾರೇsತ್ರ ತಥಾ ನರತ್ವಮಥ ತತ್ ಪ್ರಾಪ್ತಂ ಮಯಾ ನಿರ್ಮಲಮ್ ।
ಭ್ರಾತಃ ಪಶ್ಯ ವಿಮೂಢತಾಂ ಮಮ ಹಹಾ ನೀತಂ ಯದೇತನ್ಮುದಾ
ಕಾಮಕ್ರೋಧ–ಕುಬೋಧ–ಮತ್ಸರ–ಕುಧೀಮಾಯಾಮಹಾಮೋಹತಃ ।।
ಇದರ ತಾತ್ಪರ್ಯ ಹೀಗೆ:
‘ಕೈಯಲ್ಲಿರುವ ರತ್ನವು ಸಮುದ್ರದಲ್ಲಿ ಬಿದ್ದುಹೋದರೆ ಅದು ಸಿಗುವುದು ಅಸಾಧ್ಯ. ಹೀಗೆಯೇ ಲೋಕದಲ್ಲಿ ಉತ್ತಮವಾದ ಮನುಷ್ಯಜನ್ಮ ಸಿಗುವುದೂ ದುರ್ಲಭ; ಅದರೂ ಅದು ಹೇಗೋ ಬಂದಿದೆ. ಆದರೆ ತಮ್ಮ, ನನ್ನ ಮೂರ್ಖತನವನ್ನು ನೋಡು: ಅಯ್ಯೋ, ಕಾಮ, ಕ್ರೋಧ, ಮೌಢ್ಯ, ಹೊಟ್ಟೆಕಿಚ್ಚು, ದುರ್ಬುದ್ಧಿಗಳ ಮಾಯೆಗೆ ಸಿಕ್ಕಿ ಈ ನರಜನ್ಮವನ್ನು ಹಾಳುಮಾಡಿಕೊಂಡೆನಲ್ಲ!’
ಮನುಷ್ಯಜನ್ಮವನ್ನು ಸಾರ್ಥಕವಾಗಿಸಿಕೊಳ್ಳಿ ಎಂಬ ಸಂದೇಶವನ್ನು ಸುಭಾಷಿತ ಹೇಳುತ್ತಿದೆ.
ಸೃಷ್ಟಿಯಲ್ಲಿ ಕೇವಲ ಮನುಷ್ಯರು ಮಾತ್ರವೇ ಇಲ್ಲ; ಹಲವು ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಮರ–ಗಿಡಗಳು – ಹೀಗೆ ಹಲವು ರೀತಿಯ ಜೀವವೈವಿಧ್ಯದಿಂದ ಅದು ತುಂಬಿಕೊಂಡಿದೆ. ಆದರೆ ಎಲ್ಲ ಜೀವಿಗಳಿಗೂ ಹೋಲಿಸಿದರೆ ಮನುಷ್ಯನಿಗಿರುವ ಸ್ಥಾನ ವಿಶಿಷ್ಟವಾದುದು. ಸೃಷ್ಟಿಯಲ್ಲಿ ಅವನಿಗೆ ಒದಗಿರುವ ಸೌಲಭ್ಯಗಳು ಉಳಿದ ಜೀವಿಗಳಿಗೆ ದೊರೆತಿಲ್ಲ ಎಂಬುದು ಸ್ಪಷ್ಟ. ಹೀಗೆ ಸೃಷ್ಟಿಯಲ್ಲಿಯೇ ವಿಶಿಷ್ಟತೆಯಿಂದ ಮೆರೆಯುತ್ತಿರುವ ಮನುಷ್ಯ ತನಗೆ ದಕ್ಕಿರುವ ಈ ಪದವಿಯನ್ನು ಮನಗಂಡು, ತನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದು ಸುಭಾಷಿತ ಆಶಿಸುತ್ತಿದೆ.
ನಮ್ಮ ಕೈಯಲ್ಲಿರುವ ರತ್ನವೊಂದು ಸಮುದ್ರದಲ್ಲಿ ಬಿದ್ದುಹೋಯಿತು ಎಂದಿಟ್ಟುಕೊಳ್ಳೋಣ. ಅದು ಮತ್ತೆ ಸುಲಭವಾಗಿ ಸಿಗುವುದೆ? ಹೀಗೆಯೇ ಮನುಷ್ಯಜನ್ಮವೂ ದುರ್ಲಭವಾದುದು; ಒಮ್ಮೆ ಅದನ್ನು ಕಳೆದುಕೊಂಡರೆ ಮತ್ತೆ ಅದು ಸಿಗುವುದೋ ಇಲ್ಲವೋ – ಬಲ್ಲವರು ಯಾರು? ಆದರೆ ನಾವು ಮೂರ್ಖತನದಿಂದಲೇ ನಡೆದುಕೊಳ್ಳುತ್ತಿದ್ದೇವೆ. ನಮ್ಮ ಸಣ್ಣತನಗಳಿಂದ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಸುಭಾಷಿತದ ಅದನ್ನು ಹೇಳಿ ಎಚ್ಚರಿಸುತ್ತಿದೆ. ಕಾಮ, ಕ್ರೋಧ, ತಪ್ಪು ತಿಳಿವಳಿಕೆ, ಮತ್ಸರ, ಕೆಟ್ಟಬುದ್ಧಿಗಳಿಂದ ನಮ್ಮ ಮನಸ್ಸನ್ನು ತುಂಬಿಸಿಕೊಂಡು, ನಮ್ಮ ಬದುಕನ್ನು ಖಾಲಿಮಾಡಿಕೊಳ್ಳುತ್ತಿದ್ದೇವೆ.
ನಮ್ಮ ಜೀವನದ ಸತ್ಯ–ಶಿವ–ಸೌಂದರ್ಯಗಳನ್ನು ಕಂಡುಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳುವ ಬಗ್ಗೆ ದೃಷ್ಟಿಹರಿಸಬೇಕು. ಕಲ್ಮಶಗಳನ್ನು ತುಂಬಿಕೊಂಡು, ಬೇರೆಯವರ ಜೀವನವನ್ನೂ ಹಾಳುಮಾಡಿ, ನಮ್ಮ ಜೀವನವನ್ನೂ ಹಾಳುಮಾಡಿಕೊಳ್ಳುವ ರೋಗಿಷ್ಠ ಮನಃಸ್ಥಿತಿಯಿಂದ ನಾವು ಹೊರಬರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.