ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ।।
ಇದರ ತಾತ್ಪರ್ಯ ಹೀಗೆ:‘ಕಾವ್ಯ ಎಂಬ ರೆಂಬೆಯ ಮೇಲೆ ಕುಳಿತು, ರಾಮ ರಾಮ ಎಂಬ ಸಿಹಿಯಾದ ಅಕ್ಷರಗಳನ್ನು ನುಡಿಯುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಯನ್ನು ನಮಿಷುತ್ತೇನೆ.’
ನಮ್ಮ ಆದಿಕಾವ್ಯವಾದ ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿಗಳನ್ನು ಈ ಶ್ಲೋಕ ಸೊಗಸಾಗಿ ವರ್ಣಿಸಿದೆ. ರಾಮಾಯಣದ ಪಾರಾಯಣಕ್ಕೂ ಮುನ್ನ ಪಠಿಸುವ ಧ್ಯಾನಶ್ಲೋಕಗಳಲ್ಲಿ ಇದೂ ಸೇರಿದೆ.
ರಾಮಾಯಣ ನಮ್ಮ ಸಂಸ್ಕೃತಿಯ ಮೇಲೆ ಬೀರಿರುವ ಪ್ರಭಾವ ನಮಗೆಲ್ಲ ಗೊತ್ತಿದೆ. ಸಾವಿರಾರು ವರ್ಷಗಳಿಂದ ನಮ್ಮ ಜೀವನವನ್ನು ಶ್ರೀಮಂತಗೊಳಿಸುತ್ತಲೇ ಬರುತ್ತಿದೆ ಈ ಮಹಾಕಾವ್ಯ. ನಮ್ಮ ಜೀವನಕ್ಕೆ ಬೇಕಾದ ಆದರ್ಶಗಳನ್ನು ನಿರಂತರವೂ ಕಟ್ಟಿಕೊಡುತ್ತಿದೆ.
ರಾಮಾಯಣ ಆರಂಭವಾಗುವುದೇ ಹುಡುಕಾಟದಲ್ಲಿ. ಯಾವುದರ ಹುಡುಕಾಟ? ಒಳಿತಿನ ಹುಡುಕಾಟದಲ್ಲಿ, ಸಜ್ಜನನ ಹುಡುಕಾಟದಲ್ಲಿ, ಧರ್ಮವಂತನ ಹುಡುಕಾಟದಲ್ಲಿ. ಈ ಹುಡುಕಾಟ ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುವಂಥದ್ದು. ಈ ಹುಡುಕಾಟಕ್ಕೆ ತೊಡಗಿದವರೇ ವಾಲ್ಮೀಕಿ ಮಹರ್ಷಿಗಳು. ಎಲ್ಲ ಪ್ರಶ್ನೆಗಳಿಗೂ ಅವರು ಕಂಡುಕೊಂಡ ಉತ್ತರವೇ ಶ್ರೀರಾಮ.
ವಾಲ್ಮೀಕಿ ಎಂಬ ಕೋಗಿಲೆ ‘ರಾಮ ರಾಮ’ ಎಂದು ಕೂಗಿದ ಮಧುರವಾದ ಅಕ್ಷರಗಳೇ ರಾಮಾಯಣ ಆಯಿತು. ನಮ್ಮ ಬದುಕಿನ ಎಲ್ಲ ಕಹಿಗಳನ್ನೂ ಕಳೆಯಬಲ್ಲ ಶಕ್ತಿ ರಾಮ ಎಂಬ ಪದದಲ್ಲಿ ಇದೆ. ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದುಕ್ಕೆ ದೊಡ್ಡ ಆದರ್ಶ ಶ್ರೀರಾಮ. ಹೀಗಾಗಿಯೇ ಅವನು ಪುರುಷೋತ್ತಮ. ಅವನನ್ನು ತಮ್ಮ ಕಾವ್ಯದಲ್ಲಿ ಕಂಡರಿಸಿ ಜಗತ್ತಿಗೆ ಉಪಕಾರ ಮಾಡಿದವರು ವಾಲ್ಮೀಕಿ ಮಹರ್ಷಿಗಳು.
ರಾಮ – ಎಂಬ ಪದವೇ ಒಂದು ಮಹಾಕಾವ್ಯ ಎಂದರೆ ತಪ್ಪಾಗದು. ಒಬ್ಬ ಪರಿಪೂರ್ಣ ಮನುಷ್ಯ ಹೇಗಿರುತ್ತಾನೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟ ವಾಲ್ಮೀಕಿ ಮಹರ್ಷಿಗಳು ನಮ್ಮ ಕಾವ್ಯಪರಂಪರೆಯ ದೊಡ್ಡ ಆದರ್ಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.