ADVERTISEMENT

ದಿನದ ಸೂಕ್ತಿ: ಹಣವೇ ಸರ್ವಸ್ವವಲ್ಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 22 ಆಗಸ್ಟ್ 2021, 20:30 IST
Last Updated 22 ಆಗಸ್ಟ್ 2021, 20:30 IST
lakshmi
lakshmi   

ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ ।

ಯಸ್ಯಾರ್ಥಾಃ ಸ ಪುಮಾನ್‌ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ಯಾರ ಬಳಿ ಹಣ ಇರುತ್ತದೆಯೋ ಅವನಿಗೆ ಸ್ನೇಹಿತರೂ ಇರುತ್ತಾರೆ; ಅವನಿಗೆ ಬಂಧುಗಳೂ ಇರುತ್ತಾರೆ. ಅಷ್ಟೇಕೆ, ಲೋಕದಲ್ಲಿ ಅವನು ಗಂಡಸು ಎನಿಸಿಕೊಳ್ಳುತ್ತಾನೆ; ಕೊನೆಗೆ ವಿದ್ವಾಂಸನೂ ಅವನೇ‘.

ಹಣಕ್ಕೆ ನಾವು ನಮ್ಮ ಬದುಕಿನಲ್ಲಿ ತುಂಬ ಮಹತ್ವವನ್ನು ಕೊಡುತ್ತಿರುವುದರಲ್ಲಿ ಸಂದೇಹವೇ ಇಲ್ಲ. ದುಡ್ಡು, ಎಂದರೆ ಸಂಪತ್ತು, ಅದೊಂದಿದ್ದರೆ ಇದ್ದರೆ ಸಾಕು, ಜೀವನದಲ್ಲಿ ಇನ್ನೊಂದು ಬೇಕಿಲ್ಲ; ಏಕೆಂದರೆ ಹಣವನ್ನು ಜಗತ್ತಿನ ಉಳಿದೆಲ್ಲವೂ ಆಶ್ರಯಿಸುತ್ತವೆ ಎಂಬ ನಂಬಿಕೆ ನಮ್ಮದು. ಹಾಗಾದರೆ ಈ ಸಂಪತ್ತಿನ ಮೂಲ ಯಾವುದು? ಶ್ರೀ, ಎಂದರೆ ಲಕ್ಷ್ಮಿಯನ್ನು ಸಂಪತ್ತಿನ ಒಡತಿಯಾಗಿ ನಮ್ಮ ಸಂಸ್ಕೃತಿ ಕಾಣಿಸಿದೆ.

ಆದರೆ ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ನಮ್ಮ ಪಾಲಿಗೆ ಸಂಪತ್ತು ಎಂದರೆ ದುಡ್ಡು, ಐಶ್ವರ್ಯ. ಆದರೆ ‘ಶ್ರೀ’ ಎಂಬುದಕ್ಕೂ ‘ಲಕ್ಷ್ಮೀ’ ಎಂಬುದಕ್ಕೂ ನಮ್ಮ ಸಂಸ್ಕೃತಿಯಲ್ಲಿ ವಿಶಾಲವಾದ ಅರ್ಥವಿದೆ. ಲಕ್ಷ್ಮಿಯನ್ನು ಶ್ರೀಲಕ್ಷ್ಮೀ ಎಂದೂ ಕರೆಯಲಾಗಿದೆ.

ಸತ್‌, ಚಿತ್‌ ಮತ್ತು ಆನಂದಗಳ ಸ್ವರೂಪವೇ ‘ಶ್ರೀ’ ಎಂದು ಶಾಸ್ತ್ರಗಳು ಘೋಷಿಸಿವೆ. ‘ಲಕ್ಷ್ಮೀ‘ ಎಂದರೆ ಎಲ್ಲವನ್ನೂ ಸದಾ ನೋಡುತ್ತಿರುವವಳು ಎಂದು ಅರ್ಥಮಾಡಬಹುದು. ಈ ಎರಡು ನೆಲೆಗಳಲ್ಲಿ ಶ್ರೀಲಕ್ಷ್ಮಿಯ ತತ್ತ್ವವನ್ನು ಅನುಸಂಧಾನ ಮಾಡಬೇಕಿದೆ. ನಮ್ಮ ಇರವನ್ನೂ ಅರಿವನ್ನೂ ನಲಿವನ್ನೂ ಪ್ರತಿನಿಧಿಸುವ ತತ್ತ್ವವೇ ಶ್ರೀತತ್ತ್ವ. ನಾವು ಈ ಮೂರನ್ನೂ ಕೇವಲ ಹಣದಲ್ಲಿ ಮಾತ್ರವೇ ನೋಡುತ್ತಿದ್ದೇವೆ; ಆದರೆ ವಾಸ್ತವವಾಗಿ ನಮ್ಮ ಬದುಕಿನಲ್ಲಿ ಹಣದ ಪಾತ್ರ ತುಂಬ ಕಡಿಮೆ. ಕೇವಲ ಹಣ ಇದ್ದ ಮಾತ್ರಕ್ಕೆ ನಮ್ಮ ಅಸ್ತಿತ್ವಕ್ಕೆ ಬೆಲೆ ಒದಗದು, ನಮಗೆ ಬೇಕಾದ ಜ್ಞಾನ ದಕ್ಕದು, ನೆಮ್ಮದಿಯೂ ಸಿಗದು. ಹಣ ಇಲ್ಲದಿದ್ದರೂ ನಮಗೆ ಆನಂದ ದೊರೆಯಬಹುದು, ಬದುಕಿಗೆ ಬೇಕಾದ ತಿಳಿವಳಿಕೆಯೂ ದಕ್ಕಬಹುದು, ನಮ್ಮ ನೆಲೆಯನ್ನೂ ಸ್ಥಾಪಿಸಿಕೊಳ್ಳಬಹುದು.

ಹೀಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೂ ಸಂತೋಷಿಸುವುದಕ್ಕೂ ಏನೆಲ್ಲ ವಿವರಗಳು ನಮಗೆ ಒದಗುತ್ತವೆಯೋ ಅವೆಲ್ಲವೂ ‘ಶ್ರೀ’. ನಮ್ಮ ಬದುಕನ್ನು ಪೂರ್ಣವಾಗಿ ನೋಡಬಲ್ಲಂಥ, ಕಾಪಾಡಬಲ್ಲಂಥ ಶಕ್ತಿಗಳೆಲ್ಲವೂ ‘ಲಕ್ಷ್ಮೀ’. ತ್ರಿಮೂರ್ತಿಗಳಲ್ಲಿ ಶ್ರೀಮಹಾವಿಷ್ಣುವು ‘ಸ್ಥಿತಿ’ಯನ್ನು ಪ್ರತಿನಿಧಿಸುತ್ತಾನೆ; ಎಂದರೆ ಈ ಕ್ಷಣದಲ್ಲಿ ನಮ್ಮನ್ನು ಕಾಪಾಡುವವನು ಅವನು. ವಿಷ್ಣುವಿನ ಮಡದಿಯೇ ಶ್ರೀಮಹಾಲಕ್ಷ್ಮೀ. ಆದುದರಿಂದ ಶ್ರೀಲಕ್ಷ್ಮೀ ಎಂದರೆ ಕೇವಲ ದುಡ್ಡು ಮಾತ್ರವೇ ಅಲ್ಲ; ಬದುಕನ್ನು ಎತ್ತಿನಿಲ್ಲಿಸಬಲ್ಲ, ಕಾಪಾಡಬಲ್ಲ ವಿವರಗಳೆಲ್ಲವೂ ಶ್ರೀಲಕ್ಷ್ಮಿಯನ್ನೇ ಪ್ರತಿನಿಧಿಸುತ್ತವೆ. ಲಕ್ಷ್ಮಿಯ ಬೇರೆ ಬೇರೆ ಸ್ವರೂಪಗಳಾದ ವಿದ್ಯಾಲಕ್ಷ್ಮೀ, ಧನಲಕ್ಷ್ಮೀ, ಸಂತಾನಲಕ್ಷ್ಮೀ, ಕೀರ್ತಿಲಕ್ಷ್ಮೀ, ಶೌರ್ಯಲಕ್ಷ್ಮೀ, ಸೌಮ್ಯಲಕ್ಷ್ಮೀ, ಮೋಕ್ಷಲಕ್ಷ್ಮೀ ಮುಂತಾದ ತತ್ತ್ವಗಳು ಜೀವನದ ಸಮಗ್ರತೆಯನ್ನೇ ಸೂಚಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.