ADVERTISEMENT

ದಿನದ ಸೂಕ್ತಿ | ಬೆವರೋ ಕಣ್ಣೀರೋ

ಎಸ್.ಸೂರ್ಯಪ್ರಕಾಶ ಪಂಡಿತ್
Published 20 ಜುಲೈ 2020, 19:45 IST
Last Updated 20 ಜುಲೈ 2020, 19:45 IST
   

ಕಷ್ಟಾ ವೇಧವ್ಯಥಾ ಕಷ್ಟೋ ನಿತ್ಯಮುದ್ವಹನಕ್ಲಮಃ ।
ಶ್ರವಣಾನಾಮಲಂಕಾರಃ ಕಪೋಲಸ್ಯ ತು ಕುಂಡಲಮ್ ।।

ಇದರ ತಾತ್ಪರ್ಯ ಹೀಗೆ: ‘ಒಬ್ಬರಿಗೆ ತೊಂದರೆ, ಆಯಾಸ, ಕಷ್ಟ; ಇನ್ನೊಬ್ಬರಿಗೆ ಅದೇ ಅಲಂಕಾರ. ಕಿವಿಗಳು ಚುಚ್ಚಿಸಿಕೊಳ್ಳಬೇಕು, ದಿನವೂ ಹೊರುವ ಕಷ್ಟವನ್ನು ಅನುಭವಿಸಬೇಕು; ಆದರೆ ಕುಂಡಲಗಳು ಕೆನ್ನೆಗೆ ಅಲಂಕಾರವಾಗುತ್ತವೆ.’

ಕನ್ನಡಕವನ್ನು ಹೊರುವುದು ಮೂಗು; ಆದರೆ ಅದರಿಂದ ಪ್ರಯೋಜನ ಮಾತ್ರ ಕಣ್ಣಿಗೆ, ಇನ್ನು ಅದರಿಂದ ಸೌಂದರ್ಯ ಹೆಚ್ಚುವುದು ಮುಖಕ್ಕೆ. ಕೊನೆಗೆ ಮೂಗಿಗೆ ಉಳಿದದ್ದು ಅದನ್ನು ಹೊರುವ ಭಾರ ಮಾತ್ರ, ಪಾಪ!

ADVERTISEMENT

ಸುಭಾಷಿತ ಇಂಥದ್ದೇ ಇನ್ನೊಂದು ಸಂದರ್ಭವನ್ನು ಹೇಳುತ್ತಿದೆ.

ನಾವು – ಈಗ ಗಂಡಸರು ಮತ್ತು ಹೆಂಗಸರು ಇಬ್ಬರೂ – ಕಿವಿಗೆ ಓಲೆಗಳನ್ನು ಧರಿಸುತ್ತೇವೆ. ಅದಕ್ಕೂ ಮೊದಲು ಓಲೆಗಳನ್ನು ಧರಿಸಿಕೊಳ್ಳಲು ಸಾಧ್ಯವಾಗುವುದಕ್ಕಾಗಿ ಕಿವಿಗಳನ್ನು ಚುಚ್ಚಿಸಿಕೊಳ್ಳಬೇಕಷ್ಟೆ! ಓಲೆಗಳಿಂದ ಸೌಂದರ್ಯ ಹೆಚ್ಚುವುದು ಕೆನ್ನೆಗಳಿಗೆ ಮತ್ತು ಮುಖಕ್ಕೆ ತಾನೆ! ಕಿವಿಗಳಿಗೆ ನೋವು, ಕೆನ್ನೆಗಳಿಗೆ ಅಲಂಕಾರ.

ಸುಭಾಷಿತ ಇಲ್ಲಿ ಹೇಳುತ್ತಿರುವುದು ಕೇವಲ ಕಿವಿ ಮತ್ತು ಕೆನ್ನೆಗಳ ವಿಷಯವಷ್ಟೆ ಅಲ್ಲ; ಜೀವನದ, ಸಮಾಜದ ಕಟು ವಾಸ್ತವಗಳ ಬಗ್ಗೆ ನಮ್ಮ ಗಮವನ್ನು ಸೆಳೆಯುತ್ತಿದೆ.

ರೈತ ಕಷ್ಟಪಟ್ಟು ದುಡಿದು ಬೆಳೆಯನ್ನು ಬೆಳೆಯುತ್ತಾನೆ; ಆದರೆ ಅದರ ದಿಟವಾದ ಮೌಲ್ಯ ಅವನಿಗೆ ಸಿಗುತ್ತದೆಯೆ? ಇಲ್ಲ, ಯಾರೋ ಮೂರನೆಯ ವ್ಯಕ್ತಿ ಆ ಬೆಳೆಯಿಂದ ದುಡ್ಡು ಮಾಡಿಕೊಳ್ಳುತ್ತಾನೆ.

ಇಂಥ ಹತ್ತುಹಲವು ಉದಾಹರಣೆಗಳನ್ನು ನಾವು ಕೊಡಬಹುದು. ಮಂಕುತಿಮ್ಮನ ಕಗ್ಗದ ಪದ್ಯವೊಂದು ಇಲ್ಲಿ ಸ್ಮರಣೀಯ:

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ ।
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ।।
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ।
ಜೀರ್ಣಿಸದ ಋಣಶೇಷ – ಮಂಕುತಿಮ್ಮ ।।

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಬಹುದು:

ಇಂದಿನ ಸಮಾಜದ ನಡೆಯನ್ನು ನೋಡಿದರೆ ನಮಗೆ ಹಲವು ಪ್ರಶ್ನೆಗಳು ಎದುರಾಗುತ್ತವೆ. ಸಾವಿನ ಮನೆಯಲ್ಲೂ ನಾವು ನಡೆಸುತ್ತಿರುವ ವ್ಯವಹಾರಗಳೆಲ್ಲವೂ ಅವ್ಯವಹಾರಗಳೇ ಎನಿಸುವಷ್ಟರ ಮಟ್ಟಿಗೆ ಸಮಾಜ ಅವನತಿಯ ಹಾದಿ ಹಿಡಿದಿದೆ ಎನಿಸುವಂತಿದೆ. ನಾವು ಸಂಪಾದಿಸುವ ಒಂದೊಂದು ರೂಪಾಯಿ, ಅದು ನಮ್ಮ ಕಷ್ಟಾರ್ಜಿತವೋ ಅಥವಾ ಭ್ರಷ್ಟಾಚಾರದಿಂದ ಸಂಗ್ರಹಿತವೋ – ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ನಶ್ವರವಾದ ಈ ಪ್ರಪಂಚದಲ್ಲಿ ಹಣ–ಸಂಪತ್ತುಗಳು ಮಾತ್ರ ಶಾಶ್ವತವಾಗಿರಬಲ್ಲವೇ ಎಂಬ ವಿವೇಕ ಮೂಡದ ಹೊರತು ಇಂಥ ಪ್ರಶ್ನೆಗಳಿಗೆ ನಮ್ಮಲ್ಲಿ ಸ್ಥಳ ಇರದು.

ಡಿವಿಜಿಯವರು ಸೊಗಸಾಗಿ ಹೇಳುತ್ತಿದ್ದಾರೆ: ನೀನು ತಿನ್ನುತ್ತಿರುವ ಅನ್ನ ಅದು ನಿನ್ನ ಬೆವರಿನ ಫಲವೋ ಅಥವಾ ಇತರರ ಕಣ್ಣೀರೋ – ಎನ್ನುವುದನ್ನು ಪರೀಕ್ಷಿಸಿಕೋ.

ಪ್ರಜೆಗಳ ಹಣವನ್ನು ಲಪಟಾಯಿಸುವ ಎಲ್ಲ ಭ್ರಷ್ಟರೂ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.

ಕಷ್ಟ ಪಡುವುದು ಜನರು; ಅದರ ಸುಖವನ್ನು ಮೋಸದಿಂದ ಅನುಭವಿಸುವವರು ಪ್ರಭುಗಳು; ’ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ‘ – ಇದೇ ಪ್ರಜಾಪ್ರಭುತ್ವ ಎನ್ನುವಂಥ ದುರಂತ ನಮ್ಮ ಮುಂದೆ ನಿಂತಿದೆ. ಸುಭಾಷಿತ ಇಂಥ ಸಂಕಟದ ಸನ್ನಿವೇಶವನ್ನು ವಿಡಂಬನೆಯಿಂದ ಚಿತ್ರಿಸಿದೆ.

ಡಿವಿಜಿಯವರು ಕೊನೆಗೊಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ:

‘ನೀನು ಜಗತ್ತಿಗೆ ಎಷ್ಟು ಅನ್ನವನ್ನು ಕೊಟ್ಟಿದ್ದೀಯೋ ಅಷ್ಟು ಅನ್ನ ಮಾತ್ರ ನಿನಗೆ ದಕ್ಕುವುದು, ನಿನ್ನ ಶರೀರದಲ್ಲಿ ರಕ್ತವಾಗುವುದು. ನೀನು ಮೋಸದಿಂದ ತಿಂದ ಅನ್ನ ಅದು ಜೀರ್ಣವಾಗದು, ನಿನ್ನ ಹೊಟ್ಟೆನೋವಿಗೂ ಕಾರಣವಾದೀತು, ಎಚ್ಚರಿಕೆ!‘

ನಶ್ವರವಾದ ಜೀವನದಲ್ಲಿ ಶಾಶ್ವತವಾದ ಜೀವನಫಲವನ್ನು ಹೇಗೆ ಬೆಳೆಯಬೇಕು ಎಂಬುದನ್ನು ನಾವು ಕಲಿಯಬೇಕು; ಅದು ಖಂಡಿತವಾಗಿಯೂ ಇನ್ನೊಬ್ಬರ ಕಣ್ಣೀರಿನಿಂದ ಮಾತ್ರ ಆಗಿರಬಾರದು, ನಮ್ಮ ಬೆವರಿನ ಫಲವೇ ಆಗಿರಬೇಕು ಎನ್ನುವುದು ಸುಭಾಷಿತದ ಸಂದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.