ಮಿತ್ರಾಣಿ ಶತ್ರುತ್ವಮುಪನಾಯಂತೀ
ಮಿತ್ರತ್ವಮರ್ಥಸ್ಯ ವಶಾಚ್ಚ ಶತ್ರೂನ್ ।
ನೀತಿರ್ನಯತ್ಯಸ್ಮೃತ ಪೂರ್ವವೃತ್ತಂ
ಜನ್ಮಾಂತರಂ ಜೀವತ ಏವ ಪುಂಸಃ ।।
ಇದರ ತಾತ್ಪರ್ಯ ಹೀಗೆ:‘ಪ್ರಯೋಜನವೇ ಮುಖ್ಯವಾದಾಗ ಶತ್ರುಗಳೂ ಮಿತ್ರರಾಗುತ್ತಾರೆ; ಮಿತ್ರರೂ ಶತ್ರುಗಳಾಗುತ್ತಾರೆ. ಹೀಗೆ ರಾಜನೀತಿಯು ಹಿಂದಿನ ಘಟನೆಗಳನ್ನು ಮರೆಯಿಸುತ್ತದೆ; ಬದುಕಿರುವಾಗಲೇ ಇನ್ನೊಂದು ಜನ್ಮ ಉಂಟಾದಂತೆ ಮಾಡುತ್ತದೆ.’
ನಮ್ಮ ಇಂದಿನ ರಾಜಕಾರಣಿಗಳನ್ನು ಉದ್ದೇಶದಲ್ಲಿಟ್ಟುಕೊಂಡೇ ಈ ಪದ್ಯವನ್ನು ಬರೆದಂತಿದೆ.
ನಮ್ಮ ಎಲ್ಲ ನಡವಳಿಕೆಗಳ ಹಿನ್ನೆಲೆಯಲ್ಲಿರುವುದು ನಮ್ಮ ಸ್ವಾರ್ಥವೇ. ಏನು ಮಾಡಿದರೆ ನನಗೆ ಹೆಚ್ಚಿನ ಲಾಭ ದಕ್ಕುತ್ತದೆ ಎಂಬ ಲೆಕ್ಕಾಚಾರವೇ ನಮ್ಮ ಎಲ್ಲ ಕ್ರಿಯೆಗಳ ಹಿಂದಿರುವ ಆದರ್ಶವಾಗಿರುತ್ತದೆ. ಈ ಮನೋಧರ್ಮ ನಮ್ಮ ಸ್ನೇಹದಲ್ಲೂ ಸಹಜವಾಗಿಯೇ ಮನೆಮಾಡಿರುತ್ತದೆ.
ನಾವು ಒಬ್ಬರ ಸ್ನೇಹವನ್ನು ಏಕೆ ಬಯಸುತ್ತೇವೆ? ಸ್ನೇಹದ ನಿಜವಾದ ಲಕ್ಷಣ ಏನಾದರೂ ಇರಲಿ, ನಾವು ಸ್ನೇಹವನ್ನು ಬಯಸುವುದು ಮಾತ್ರ ‘ನಮಗೆ ಅವರಿಂದ ಉಪಯೋಗ ಆಗುತ್ತದೆ‘ ಎಂದೇ ಅಲ್ಲವೆ? ಹೀಗಾಗಿ ಅವರ ನಮ್ಮ ಸ್ನೇಹ ಎಷ್ಟು ಕಾಲ ಇರುತ್ತದೆ? ನಮಗೆ ಅವರಿಂದ ಪ್ರಯೋಜನ ದೊರಕುತ್ತಿರುವವರಿಗೂ ಅವರು ನಮ್ಮ ಸ್ನೇಹಿತರಾಗಿರುತ್ತಾರೆ! ಹೀಗೆಯೇ ನಮಗೆ ಯಾರಿಂದ ಪ್ರಯೋಜನ ದೊರೆಯುವುದಿಲ್ಲವೋ ಅಂಥವರು ನಮ್ಮ ಪಾಲಿಗೆ ಶತ್ರುಗಳು ಆಗಿರುತ್ತಾರೆ, ಅಷ್ಟೆ!!
ಇಂದು ಶತ್ರುಗಳಾಗಿರುವವರು ನಾಳೆ ನಮ್ಮ ಮಿತ್ರರೂ ಆಗಬಹುದು. ಹೌದು, ಉಪಯೋಗವೇ ಸ್ನೇಹದ ಆದರ್ಶ ಆದಾಗ ಹೀಗೆ ಆಗುವುದು ಸ್ವಾಭಾವಿಕ. ಇಂದಿನ ಶತ್ರುಗಳಿಂದ ನಾಳೆ ನಮಗೆ ಪ್ರಯೋಜನ ಆಗುತ್ತದೆ ಎಂದಾದಲ್ಲಿ ನಾವು ಅವರನ್ನು ಮಿತ್ರರನ್ನಾಗಿಸಿಕೊಳ್ಳುತ್ತೇವೆ. ಇಂದಿನ ಮಿತ್ರರಿಂದ ಸಿಗುವ ಪ್ರಯೋಜನ ನಿಂತುಹೋಯಿತು ಎಂದಾದರೆ ಅವರು ಈ ಕ್ಷಣದಿಂದಲೇ ನಮ್ಮ ಶತ್ರುಗಳಾಗುತ್ತಾರೆ.
ಈ ಮನೋಧರ್ಮವು ರಾಜಕಾರಣದಲ್ಲಿ ಎದ್ದುಕಾಣುವ ವಿವರ. ನಮಗೆ ಎಲ್ಲಿ ಲಾಭ ಸಿಗುತ್ತದೆಯೊ ಅದೇ ನಮ್ಮ ಪಕ್ಷ. ಅಧಿಕಾರವೇ ನಮ್ಮ ರಾಜಕೀಯಸ್ನೇಹವನ್ನು ನಿರ್ಧರಿಸುವ ಮಹಾತತ್ತ್ವ. ಆದರ್ಶ, ಸಮಾಜಸೇವೆ – ಇವೆಲ್ಲ ಪ್ರಯೋಜನಕ್ಕೆ ಬಾರದ ಸಂಗತಿಗಳು ಎಂದು ಇವನ್ನು ನಮ್ಮ ಇಂದಿನ ರಾಜಕಾರಣಿಗಳು ಶತ್ರುವಿನ ಸ್ಥಾನದಲ್ಲಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.