ADVERTISEMENT

ದಿನದ ಸೂಕ್ತಿ | ಸಜ್ಜನರ ಸಂಗ ಇರಲಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 15 ಆಗಸ್ಟ್ 2020, 3:51 IST
Last Updated 15 ಆಗಸ್ಟ್ 2020, 3:51 IST
   

ಸಂಗಃ ಸರ್ವಾತ್ಮನಾ ತ್ಯಾಜ್ಯಃ ಸ ಚೇತ್ತ್ಯುಕ್ತುಂ ನ ಶಕ್ಯತೇ ।
ಸ ಸದ್ಭಿಃ ಸಹ ಕರ್ತವ್ಯಃ ಸತಾಂ ಸಂಗೋ ಹಿ ಭೇಷಜಮ್ ।।

ಇದರ ತಾತ್ಪರ್ಯ ಹೀಗೆ:
’ಸಂಗವನ್ನು ಪೂರ್ಣವಾಗಿ ತ್ಯಜಿಸಬೇಕು. ಹಾಗೆ ತ್ಯಜಿಸುವುದಕ್ಕೆ ಶಕ್ಯವಾಗದೇ ಹೋದರೆ ಸಜ್ಜನರ ಜೊತೆಗೆ ಸೇರಬೇಕು. ಸಜ್ಜನರ ಸಹವಾಸ ಔಷಧವಷ್ಟೆ!‘

ಮನುಷ್ಯ ಸಂಘಜೀವಿ ದಿಟ; ಆದರೆ ಅದೇ ಅವನಿಗೆ ಶಕ್ತಿಯಾಗಿರುವಂತೆ ಮಿತಿಯೂ ಆಗಬಲ್ಲದು. ಅವನು ಗುಂಪಿನಲ್ಲಿದ್ದರೆ ಅವನು ವಿವೇಕವನ್ನು ಕಳೆದುಕೊಳ್ಳುವ ಸಂಭವವೂ ಉಂಟು. ಹೀಗಾಗಿ ಅವನು ಗುಂಪಿನಿಂದ ಆಗಾಗ ದೂರ ಉಳಿದರೆ ಒಳ್ಳೆಯದು ಕೂಡ. ಇಷ್ಟೇ ಅಲ್ಲ, ಆಧ್ಯಾತ್ಮಿಕವಾಗಿಯೂ ಮನುಷ್ಯ ಏಕಾಂತದಲ್ಲಿದ್ದರೆ ಅವನ ಸಾಧನೆಗೆ ನೆರವಾದೀತು ಎಂಬ ಅಭಿಪ್ರಾಯವೂ ಇದೆ. ಏಕಾಂತ ಎನ್ನುವುದು ನಮ್ಮನ್ನು ನಾವು ಆತ್ಮಾವಲೋಕನಕ್ಕೂ ದಾರಿ ಮಾಡಿಕೊಡುತ್ತದೆ. ಹೀಗಾಗಿ ಸಂಗವನ್ನು ಬಿಡಿ, ಎಂದರೆ ಗುಂಪುರಾಜಕೀಯ ಬಿಡಿ, ಎಂದು ಸುಭಾಷಿತ ಹೇಳುತ್ತಿರುವುದು.

ADVERTISEMENT

ಹೀಗಿದ್ದರೂ ಸಂಗವನ್ನು ಬಿಡುವುದಕ್ಕೆ ನಮಗೆ ಸುಲಭವಾಗಿ ಸಾಧ್ಯವಾಗದು. ಅಂಥ ಸಂದರ್ಭದಲ್ಲಿ, ಎಂದರೆ ಸಂಗದಲ್ಲಿಯೇ ಇರಬೇಕು ಎಂದಾದಲ್ಲಿ, ಆಗಸಜ್ಜನರ ಸಂಗವನ್ನು ಮಾಡಿ ಎನ್ನುತ್ತಿದೆ ಸುಭಾಷಿತ. ಏಕೆಂದರೆ ಸಜ್ಜನರ ಸಹವಾಸವೇ ಔಷಧ ಇದ್ದಂತೆ; ಎಂದರೆ ನಮ್ಮ ಮನಸ್ಸಿಗೆ ರೋಗ ಬಂದಾಗ ಸಜ್ಜನರ ಸಂಗವೇ ನಮಗೆ ಔಷಧವಾಗಿ ಒದಗುತ್ತದೆ.

ಹಾಗಾದರೆ ಸಜ್ಜನರು ಎಂದರೆ ಯಾರು?
ಇಲ್ಲೊಂದು ಸುಭಾಷಿತ ಇದೆ, ನೋಡಿ:

ಸ್ವಭಾವಂ ನೈವ ಮುಂಚಂತಿ ಸಂತಃ ಸಂಸರ್ಗತೋsಸತಾಮ್ ।
ನ ತ್ಯಜಂತಿ ರುತಂ ಮಂಜು ಕಾಕಸಂಸರ್ಗತಃ ಪಿಕಾಃ ।।

’ಸಜ್ಜನರು ದುಷ್ಟರ ಸಹವಾಸದಲ್ಲಿದ್ದರೂ ತಮ್ಮ ಸ್ವಭಾವವನ್ನು ಬಿಡುವುದಿಲ್ಲ; ಕಾಗೆಗಳ ಜೊತೆ ಇದ್ದರೂ ಕೋಗಿಲೆಗಳು ಇಂಪಾದ ಧ್ವನಿಯನ್ನು ತ್ಯಜಿಸುವುದಿಲ್ಲ‘ – ಎನ್ನುವುದು ಈ ಶ್ಲೋಕದ ತಾತ್ಪರ್ಯ.

ಸಜ್ಜನರು ಎಂಥ ಸಮಯದಲ್ಲೂ ತಮ್ಮ ವ್ಯಕ್ತಿತ್ವದ ಅಖಂಡತೆಯನ್ನು ಕಳೆದುಕೊಳ್ಳುವುದಿಲ್ಲ. ಇದಕ್ಕೆ ಸುಭಾಷಿತ ಉದಾಹರಣೆಯಾಗಿ ನೀಡಿರುವುದು ಕೂಡ ಸೊಗಸಾಗಿದೆ. ಕಾಗೆಗಳ ಗುಂಪಿನಲ್ಲಿದ್ದ ಮಾತ್ರಕ್ಕೆ ಕೋಗಿಲೆ ತನ್ನ ಮಧುರಸ್ವರವನ್ನು ಕಳೆದುಕೊಳ್ಳುವುದೆ? ಅಂತೆಯೇ ಸಜ್ಜನರು ಎಲ್ಲಿದ್ದರೂ ಸಜ್ಜನರೇ. ಅವರು ಯಾವ ಪಕ್ಷದಲ್ಲಿದ್ದರೂ ಪಕ್ಷರಾಜಕೀಯವನ್ನು ಮೀರಿ ಸಜ್ಜನಿಕೆಯನ್ನೂ ವಿವೇಕವನ್ನೂ ಪ್ರಾಮಾಣಿಕತೆಯನ್ನೂ ಉಳಿಸಿಕೊಂಡಿರುತ್ತಾರೆ.

ಇಷ್ಟೇ ಅಲ್ಲ, ಸಜ್ಜನರನ್ನು ನಾವು ಎಂದಿಗೂ ನಂಬಬಹುದು. ಅವರು ನಮ್ಮ ಶತ್ರುಗಳ ನಡುವೆ ಇದ್ದರೂ ನಮ್ಮ ವಿರುದ್ಧ ಷಡ್ಯಂತ್ರವನ್ನು ರೂಪಿಸುವುದಿಲ್ಲ; ನಮ್ಮ ಬೆನ್ನಿಗೆ ಚೂರಿ ಹಾಕುವುದಿಲ್ಲ. ಹೀಗಾಗಿ ಸಜ್ಜನರು ನಮ್ಮನ್ನು ಎಂಥ ಸಂದರ್ಭದಲ್ಲಿಯೂ ಮೋಸ ಮಾಡುವುದಿಲ್ಲ.

ಸಜ್ಜನರನ್ನು ಹುಡುಕಿ, ಅವರ ಸ್ನೇಹವನ್ನು ಸಂಪಾದಿಸಿಕೊಳ್ಳಬೇಕಾದವರು ಯಾರು? ನಾವೇ ಅಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.