ADVERTISEMENT

ದಿನದ ಸೂಕ್ತಿ । ನಮ್ಮ ದುಃಖದ ಮೂಲ ನಾವೇ

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಜೂನ್ 2020, 1:49 IST
Last Updated 5 ಜೂನ್ 2020, 1:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಈರ್ಷ್ಯೀ ಘೃಣೀ ತ್ವಸಂತುಷ್ಟಃ ಕ್ರೋಧನೋ ನಿತ್ಯಶಂಕಿತಃ ।
ಪರಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ ।।

ಇದರ ತಾತ್ಪರ್ಯ: ’ಅಸೂಯಾಳು, ಕನಿಕರವುಳ್ಳವನು, ತೃಪ್ತಿಯೇ ಇಲ್ಲದವನು, ಕೋಪಿಷ್ಠ, ಯಾವಾಗಲೂ ಸಂದೇಹಪಡುವವನು, ಇನ್ನೊಬ್ಬರ ಆಸ್ತಿಯ ಮೇಲೆ ಜೀವನ ನಡೆಸುವವನು – ಈ ಆರು ಜನರು ದುಃಖದಲ್ಲಿಯೇ ಇರುವಂಥವರು.‘

ದುಃಖ ಇಲ್ಲದ ಮನುಷ್ಯರು ಯಾರಿದ್ದಾರು? ಎಲ್ಲರಿಗೂ ಒಂದಲ್ಲ ಒಂದು ವಿಧದ ದುಃಖ ಆವರಿಸಿಕೊಂಡೇ ಇರುತ್ತದೆ. ಅದು ಸರಿ, ಆದರೆ ಈ ದುಃಖದ ಮೂಲವಾದರೂ ಏನು? ಸಾಮಾನ್ಯವಾಗಿ ನಾವು ನಮ್ಮ ದುಃಖಕ್ಕೆ ಬೇರೆಯವರತ್ತ ಬೆರಳು ತೋರಿಸುವುದೇ ಹೆಚ್ಚು. ಆದರೆ ನಾವು ಸ್ವಲ್ಪ ಸಮಾಧಾನದಿಂದ ಸಂದರ್ಭವನ್ನು ವಿಶ್ಲೇಷಿಸಿದರೆ ಸ್ಪಷ್ಟವಾಗುವ ಸಂಗತಿ ಎಂದರೆ, ನಮ್ಮ ದುಃಖಕ್ಕೆ ನಮ್ಮ ವ್ಯಕ್ತಿತ್ವವೇ ಕಾರಣವಾಗಿರುತ್ತದೆ. ಈ ಸಂಗತಿಯನ್ನೇ ಸುಭಾಷಿತ ಇಲ್ಲಿ ಪ್ರತಿಪಾದಿಸುತ್ತಿರುವುದು.

ADVERTISEMENT

ವ್ಯಕ್ತಿತ್ವ ಎಂದರೇನು? ವ್ಯಕ್ತಿಯ ಜೊತೆ ಸೇರಿಕೊಂಡಿರುವ ಗುಣಗಳ ಸಮೂಹವೇ ಆ ವ್ಯಕ್ತಿಯ ’ವ್ಯಕ್ತಿತ್ವ‘ ತಾನೆ? ನಮ್ಮ ವ್ಯಕ್ತಿತ್ವದ ಯಾವೆಲ್ಲ ಗುಣಗಳು ನಮ್ಮ ದುಃಖಕ್ಕೆ ಕಾರಣವಾಗಬಲ್ಲವು ಎಂದು ಸುಭಾಷಿತ ಪಟ್ಟಿ ಮಾಡಿದೆ; ಆರು ಗುಣಗಳು ನಮ್ಮನ್ನು ಸದಾ ದುಃಖದಲ್ಲಿಯೇ ಇರುವಂತೆ ಮಾಡುತ್ತವೆಯಂತೆ. ಹಾಗಾದರೆ ಆ ಆರು ಗುಣಗಳು ಯಾವುವು?

ಮೊದಲನೆಯದು ಅಸೂಯೆ. ಬೇರೊಬ್ಬರ ಸಂತೋಷವನ್ನೋ ಏಳಿಗೆಯನ್ನೋ ಕಂಡಾಗ ನಮ್ಮ ಮನಸ್ಸು ಸಂಕಟವನ್ನು ಅನುಭವಿಸುತ್ತಿದೆ ಎಂದರೆ ಆಗ ನಮಗೆ ಅಸೂಯೆ ಇದೆ ಎನ್ನುವುದು ಸ್ಪಷ್ಟ. ಬೇರೆಯವರ ಸಂತೋಷವೇ ನಮ್ಮ ನರಳಾಟಕ್ಕೆ ಕಾರಣವಾದರೆ ನಮ್ಮ ಪಾಲಿಗೆ ದುಃಖವಲ್ಲದೆ ಮತ್ತೇನು ತಾನೆ ಉಳಿದೀತು?! ನಾವು ನಮ್ಮ ಬೆಳವಣಿಗೆಯ ಬಗ್ಗೆ ನಮ್ಮ ತಲೆಯನ್ನು ಬಳಸಬೇಕೇ ವಿನಾ ಇನ್ನೊಬ್ಬರ ಬೆಳವಣಿಗೆಯ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.

ಕನಿಕರವುಳ್ಳವನೂ ದುಃಖಕ್ಕೆ ತುತ್ತಾಗುತ್ತಾನೆ ಎನ್ನುತ್ತಿದೆ ಸುಭಾಷಿತ. ಕನಿಕರ ಎಂದರೆ ಇತರರ ಕಷ್ಟವನ್ನು ಕಂಡು ಮರುಗುವ ಗುಣ, ಕರಗುವ ಗುಣ. ಇದು ಒಳ್ಳೆಯದೇ ಅಲ್ಲವೆ? ಹೌದು, ಒಳ್ಳೆಯದೆ. ಆದರೆ ಅದು ಎಲ್ಲಿಯ ತನಕ? ಅತಿಯಾದರೆ ಅಮೃತವೂ ವಿಷವಾಗುತ್ತದೆಯಷ್ಟೆ! ಅಂತೆಯೇ ಬೇರೊಬ್ಬರ ಕಷ್ಟಗಳನ್ನು ನಮ್ಮ ತಲೆಯ ಮೇಲೆ ಹೊತ್ತುಕೊಂಡು ತಿರುಗುತ್ತಿದ್ದರೆ ಅದರಿಂದ ಪ್ರಯೋಜನವಾದರೂ ಏನು? ಕಷ್ಟಗಳನ್ನು ಪರಿಹರಿಸುವ ಶಕ್ತಿ ಇಲ್ಲದಿದ್ದಾಗ ಅತಿಯಾದ ಕನಿಕರಬುದ್ಧಿಯೇ ನಮ್ಮನ್ನು ಕೊರಗುವಂತೆ ಮಾಡುತ್ತದೆ. ಹೀಗೆ ಕೊರಗುವುದರ ಫಲವೇ ದುಃಖ.

ನಮ್ಮ ಬಯಕೆಗಳು ಎಂಬ ಹರಿವಿಗೆ ಕಟ್ಟೆ ಕಟ್ಟದಿದ್ದರೆ ಮನಸ್ಸು ಎಂದಿಗೂ ತುಂಬುವುದೇ ಇಲ್ಲ! ಮನಸ್ಸಿನ ಈ ನಿತ್ಯ ಖಾಲಿತನವೇ ಅತೃಪ್ತಿ. ಎಷ್ಟು ಬಂದರೂ ’ಇನ್ನು ಸಾಕಪ್ಪ‘ ಎಂಬ ಭಾವವೇ ಹುಟ್ಟದಿದ್ದಾಗ ದುಃಖ ಸಹಜ ತಾನೆ? ಎಷ್ಟಿದ್ದರೂ ’ಇನ್ನೂ ಬೇಕು, ಬೇಕು‘ ಎಂಬ ಕೊರಗು ನಿಲ್ಲುವುದೇ ಇಲ್ಲ, ಅಂಥವರಲ್ಲಿ. ಅವರನ್ನು ಸದಾ ತುಂಬಿಕೊಂಡೇ ಇರುವುದು ದುಃಖ ಮಾತ್ರವೇ!

ಎಲ್ಲ ಗುಣಗಳೂ ಇದ್ದು ಕೋಪ ಎಂಬ ದುರ್ಗುಣ ಒಂದೇ ಒಂದು ಇದ್ದರೂ ಸಾಕು, ದುಃಖ ನಮ್ಮ ಹೆಗಲೇರಲು. ಕೋಪ ನಮ್ಮ ವಿವೇಚನಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಒಮ್ಮೆ ವಿವೇಚನೆಯನ್ನು ಕಳೆದುಕೊಂಡರೆ ನಮ್ಮ ಮೇಲೆ ನಮಗೇ ಎಚ್ಚರ ಇರುವುದಿಲ್ಲ. ಎಚ್ಚರವಿಲ್ಲದಿದ್ದಾಗ ಅನಾಹುತ ತಪ್ಪದು. ಅನಾಹುತವೇ ಅಲ್ಲವೇ ದುಃಖದ ಆಟದ ಮೈದಾನ?

ಸಂದೇಹ. ಇದರಷ್ಟು ದೊಡ್ಡ ಕಾಯಿಲೆ ಇನ್ನೊಂದಿಲ್ಲ. ನಾಳೆ ಕೋವಿಡ್‌ಗೆ ವ್ಯಾಕ್ಸಿನ್ ಕಂಡುಹಿಡಿಯಬಹುದೇನೋ! ಆದರೆ ಸಂದೇಹ ಎಂಬ ರೋಗದಿಂದ ನರಳುವ ಮನಸ್ಸಿಗೆ ಮಾತ್ರ ಎಂದಿಗೂ ಲಸಿಕೆಯನ್ನು ಕಂಡುಹಿಡಿಯಲಾಗದೆನ್ನಿ! ಸಂದೇಹದ ಅವಾಂತರಗಳು ಸಾವಿರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಯಾರಾದರೂ ನಮ್ಮನ್ನು ನೋಡಿ ನಕ್ಕರೂ ಸಂದೇಹ, ಅತ್ತರೂ ಸಂದೇಹ! ಮಾತನಾಡಿದರೂ ಸಂದೇಹ, ಮೌನವಾದರೂ ಸಂದೇಹ! ಒಟ್ಟಿನಲ್ಲಿ ಸಂದೇಹವಿದ್ದವರು ಸದಾ ದುಃಖದಲ್ಲೇ ನಂಬಿಕೆ ಇಟ್ಟವರಾಗಿರುತ್ತಾರೆ, ಅಷ್ಟೆ!

ಬೇರೊಬ್ಬರ ಆಶ್ರಯದಲ್ಲಿಯೇ ಇರುವಂಥ ಸ್ಥಿತಿ ಎಂದಿಗೂ ಅಪಾಯವೇ. ಬಳ್ಳಿಗೆ ಮರದ ಆಶ್ರಯ ಅನಿವಾರ್ಯ; ಆದರೆ ಮರಕ್ಕೆ ಅಪಾಯ ಬಂದಾಗ ಬಳ್ಳಿಗೂ ಅದರ ಅಪಾಯ ತಪ್ಪದಷ್ಟೆ! ಮಾತ್ರವಲ್ಲ, ಹಂಗಿನ ಅರಮನೆಯೂ ಯಾವುದೋ ಒಂದು ಹಂತದಲ್ಲಿ ಸೆರೆಮನೆಯ ಬಂಧನದಂತಾಗುತ್ತದೆ. ಬಂಧನದಲ್ಲಿರುವ ಮನಸ್ಸು ಸುಖವಾಗಿರಬಲ್ಲದೆ? ಚಿನ್ನದ ಪಂಜರವಾದರೂ ಅದು ಪಂಜರವೇ ಅಲ್ಲವೆ? ಹೀಗಾಗಿ ಬೇರೊಬ್ಬರ ಆಸ್ತಿಯ ಆಧಾರದಲ್ಲಿ ಬದುಕುವುದು ಅಪಾಯ ಮಾತ್ರವೇ ಅಲ್ಲ; ಅದು ಮಾನಹಾನಿಯ ಜೊತೆಗೆ ದುಃಖಕ್ಕೂ ಕಾರಣವಾಗುತ್ತದೆಯೆನ್ನಿ!

ಈಗ ಹೇಳಿ ನಮ್ಮ ದುಃಖಕ್ಕೆ ಕಾರಣ ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.