ADVERTISEMENT

ದಿನದ ಸೂಕ್ತಿ | ಮಿತ್ರರೂ ಶತ್ರುಗಳೂ

ಎಸ್.ಸೂರ್ಯಪ್ರಕಾಶ ಪಂಡಿತ್
Published 9 ಜುಲೈ 2020, 19:31 IST
Last Updated 9 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನಹಿ ಕಸ್ಯ ಪ್ರಿಯಃ ಕೋ ವಾ ವಿಪ್ರಿಯೋ ವಾ ಜಗತ್ತ್ರಯೇ ।
ಕಾಲೇ ಕಾರ್ಯವಶಾತ್‌ ಸರ್ವೇ ಭವಂತ್ಯೇವಾಪ್ರಿಯಾಃ ಪ್ರಿಯಾಃ ।।

ಇದರ ತಾತ್ಪರ್ಯ ಹೀಗೆ:

‘ಯಾವುದೋ ನಿಮಿತ್ತದಿಂದ ಯಾವುದೋ ಸಮಯದಲ್ಲಿ ಎಲ್ಲರೂ ಶತ್ರುಗಳೋ ಮಿತ್ರರೋ ಆಗುತ್ತಾರೆ. ಅಷ್ಟೇ ಅಲ್ಲದೆ, ಯಾರೊಬ್ಬರಿಗೂ ಮೂರು ಲೋಕಗಳಲ್ಲೂ ಕೂಡ ಮಿತ್ರ ಅಥವಾ ಶತ್ರು ಎಂಬುವರು ಇಲ್ಲವೇ ಇಲ್ಲ.’

ADVERTISEMENT

ಮೇಲ್ನೋಟಕ್ಕೆ ಈ ಸುಭಾಷಿತ ನಮ್ಮ ಇಂದಿನ ರಾಜಕಾರಣಿಗಳ ಮಾತಿನಂತೆ ಕೇಳಿಸುತ್ತದೆ ಅಲ್ಲವೆ? ’ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ.‘ ಆದರೆ ಈ ಸುಭಾಷಿತಕ್ಕೆ ಇನ್ನೂ ಹೆಚ್ಚಿನ ವ್ಯಾಪ್ತಿ ಇದೆ; ಹೌದು ವಾಸ್ತವವನ್ನು ಇದು ತುಂಬ ಕಟುವಾಗಿ ಹೇಳುತ್ತಿದಿಯೋನೊ – ಎಂದೆನಿಸುತ್ತದೆ; ನಮ್ಮ ಭಾವನೆಗಳು ಪ್ರಾಮಾಣಿಕ ಅಲ್ಲವೆ – ಎಂಬ ಪ್ರಶ್ನೆಯನ್ನೂ ಹುಟ್ಟಿಸುತ್ತದೆ.

ಆದರೆ ಸುಭಾಷಿತ ಇಲ್ಲಿ ಹೇಳುತ್ತಿರುವುದು ಸ್ನೇಹದ ಕಾರಣವನ್ನು, ಜೊತೆಗೆ ಸ್ನೇಹದ ಸೂಕ್ಷ್ಮತೆಯನ್ನು.

ಹೌದು, ಯಾವುದೇ ಕಾರಣವಿಲ್ಲದೆ ಯಾರೊಂದಿಗೂ ನಮಗೆ ಸ್ನೇಹವೂ ಉಂಟಾಗದು, ವೈರವೂ ಉಂಟಾಗದು; ಎರಡಕ್ಕೂ ಕಾರಣಗಳಿರುತ್ತವೆ. ಸುಭಾಷಿತ ಇಷ್ಟು ಮಾತ್ರವನ್ನೇ ಹೇಳುತ್ತಿಲ್ಲ, ಯಾವುದೋ ಕಾರಣದಿಂದ ಒದಗಿದ ಸ್ನೇಹ ಮತ್ತು ವೈರಗಳು ಕೂಡ ಸ್ಥಿರವಾಗಿಲ್ಲ ಎನ್ನುವುದನ್ನೂ ಸೂಚಿಸುತ್ತಿದೆ. ಏಕೆಂದರೆ, ಒದಗಿದ ಸ್ನೇಹವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ನಮ್ಮ ಮನಸ್ಸು ತುಂಬ ಚಂಚಲ; ಸ್ನೇಹಿತನಿಗೆ ನಾವು ಯಾವಾಗ ಬೇಕಾದರೂ ದ್ರೋಹ ಮಾಡುವ ಸಾಧ್ಯತೆಯಿದೆ; ಆಗ ನಮ್ಮ ಸ್ನೇಹಕ್ಕೆ ಭಂಗ ಬಂದೇ ಬರುತ್ತದೆ. ಹೀಗೆಯೇ ಇಂದು ವೈರತ್ವವನ್ನು ಸಾಧಿಸುತ್ತಿರುವವರು ನಾಳೆ ಬದಲಾಗಬಾರದು ಎಂದೇನಿಲ್ಲ; ಅವರೇ ನಾಳೆ ಸ್ನೇಹಿತರೂ ಆಗಬಹುದು. ಮಿತ್ರತ್ವವಾಗಲೀ ಶತ್ರುತ್ವವಾಗಲೀ – ಶಾಶ್ವತವಾಗಿರದು. ಸ್ನೇಹ ಮತ್ತು ವೈರ ಹುಟ್ಟುವುದೇ ಒಂದಾನೊಂದು ಕಾರಣದಿಂದ. ಹೀಗಾಗಿ ಇವೆರಡೂ ಎಂದಿಗೂ ಬದಲಾಗಬಲ್ಲಂಥ ಸೂಕ್ಷ್ಮಸ್ತರದಲ್ಲಿಯೇ ನಿಂತಿರುತ್ತದೆ.

ವೈರಿಗಳು ಬದಲಾಗಿ ಮಿತ್ರರಾದರೆ, ಅದು ಒಳ್ಳೆಯದೇ. ಅದರೆ ಮಿತ್ರರು ಶತ್ರುಗಳಾದರೆ? ಮಿತ್ರರು ಶತ್ರುರಾಗದಂತೆ ನೋಡಿಕೊಳ್ಳುವ ಪ್ರಾಮಾಣಿಕತೆ ನಮ್ಮದಾಗಬೇಕು; ಸ್ನೇಹಕ್ಕೆ ಧಕ್ಕೆ ಆಗದಂತೆ ನಾವು ನಮ್ಮ ವ್ಯಕ್ತಿತ್ವವನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕು.

ಸ್ನೇಹದ ವಿಶೇಷವಾದರೂ ಏನು? ಇಲ್ಲೊಂದು ಸುಭಾಷಿತ ಇದೆ ನೋಡಿ:

ಶೋಕಾರ್ತಿಭಯಸಂತ್ರಾಣಂ ಪ್ರೀತಿವಿಶ್ರಂಭಭಾಜನಮ್ ।
ಕೇನ ರತ್ನಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಮ್‌ ।।

’ದುಃಖ, ನೋವು ಮತ್ತು ಭಯಗಳಿಂದ ಕಾಪಾಡುವುದೂ, ಪ್ರೀತಿ ಮತ್ತು ನಂಬಿಕೆಗೆ ಪಾತ್ರವಾದುದೂ ಆದ ಎರಡಕ್ಷರದ ಈ ’ಮಿತ್ರ‘ ಎಂಬ ರತ್ನವನ್ನು ಸೃಷ್ಟಿಸಿದವನು ಯಾರು?‘

ಸ್ನೇಹದ ಲಕ್ಷಣವನ್ನು ಈ ಶ್ಲೋಕ ಸೊಗಸಾಗಿ ಕಟ್ಟಿಕೊಟ್ಟಿದೆ.

ಸ್ನೇಹ ಹೇಗೆ ಉಂಟಾಗುತ್ತದೆ? ಯಾರು ನಮ್ಮನ್ನು ದುಃಖ, ನೋವು ಭಯಗಳಿಂದ ಕಾಪಾಡುತ್ತಾರೋ ಅಂಥವರು ನಮಗೆ ಮಿತ್ರರಾಗುತ್ತಾರೆ. ಈ ಮಿತ್ರತ್ವವನ್ನು ಯಾವುದು ಕಾಪಾಡುತ್ತದೆ? ಪ್ರೀತಿ.

ಸರಿ, ಹಾಗಾದರೆ ಸ್ನೇಹವನ್ನು ಯಾವುದು ನಾಶ ಮಾಡುತ್ತದೆ? ಹೌದು, ನಂಬಿಕೆಯನ್ನು ಉಳಿಸಿಕೊಳ್ಳದಿದ್ದರೆ ಎಂಥ ಸ್ನೇಹವೂ ಉಳಿಯದು.

ಹೀಗಾಗಿ ಪರಸ್ಪರ ನಂಬಿಕೆಯೇ ಸ್ನೇಹದ ಅಡಿಪಾಯ; ಅದು ಅಲುಗಾಡಿ, ಸ್ನೇಹದ ಕಟ್ಟಡ ಬಿರುಕೆಗೆ ತುತ್ತಾಗದಂತೆ ನೋಡಿಕೊಳ್ಳಬೇಕಾದವರು ಯಾರು?

ಸ್ನೇಹ ಬೇಕು ಎನ್ನುವ ನಾವೇ ಅಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.