ಧನೇನ ಕಿಂ ಯೋ ನ ದದಾತಿ ನಾಶ್ನುತೇ
ಬಲೇನ ಕಿಂ ಯೇನ ರಿಪುಂ ನ ಬಾಧತೇ ।
ಶ್ರುತೇನ ಕಿಂ ಯೇನ ನ ಧರ್ಮಮಾಚರೇತ್
ಕಿಮಾತ್ಮನಾ ಯೋ ನ ಜಿತೇಂದ್ರಿಯೋ ಭವೇತ್ ।।
ಇದರ ತಾತ್ಪರ್ಯ ಹೀಗೆ:
‘ಯಾರು ದಾನಮಾಡುವುದಿಲ್ಲವೋ, ತಾನೂ ಅನುಭವಿಸುವುದಿಲ್ಲವೋ ಅಂಥ ಹಣವನ್ನು ಕಟ್ಟಿಕೊಂಡು ಏನು ಪ್ರಯೋಜನ? ಶತ್ರುಗಳನ್ನು ಹದಕ್ಕೆ ತರಲು ಸಾಧ್ಯವಾಗದ ಬಲದಿಂದ ಏನು ತಾನೆ ಪ್ರಯೋಜನ? ಯಾವುದರಿಂದ ಧರ್ಮವನ್ನು ಆಚರಿಸುವುದಿಲ್ಲವೋ ಅಂಥ ವಿದ್ಯೆಯಿಂದ ಏನು ಪ್ರಯೋಜನ? ಜಿತೇಂದ್ರಿಯನಾಗದೇ ಇರುವ ತನ್ನಿಂದ ತಾನೆ ಏನು ಪ್ರಯೋಜನ?’
ಯಾವುದರ ಸಂಗ್ರಹವೂ ವ್ಯರ್ಥ ಆಗಬಾರದು; ಪ್ರತಿಯೊಂದು ವಸ್ತು, ಗುಣಕ್ಕೂ ಫಲ ಎಂಬುದು ಇರುತ್ತದೆ. ಅದು ಸಾಧಿತವಾಗದೆಹೋದರೆ ಆಗ ಆ ವಸ್ತುವೂ ಗುಣವೂ ವ್ಯಕ್ತಿಯೂ ವ್ಯರ್ಥ ಎಂಬುದನ್ನು ಸುಭಾಷಿತ ಹೇಳುತ್ತಿದೆ.
ಹಣಕ್ಕೆ ಮೂರು ದಾರಿಗಳು ಎಂದು ಇನ್ನೊಂದು ಸುಭಾಷಿತದಲ್ಲಿ ಹೇಳಲಾಗಿದೆ. ದಾನ, ಭೋಗ ಮತ್ತು ನಾಶ – ಇವು ಮೂರು ಆ ದಾರಿಗಳು. ಯಾರು ದಾನಮಾಡುವುದಿಲ್ಲವೋ ಭೋಗಿಸುವುದಿಲ್ಲವೋ ಅವರ ಹಣ ಮೂರನೆಯ ದಾರಿ, ಎಂದರೆ ನಾಶವಾಗುತ್ತದೆ ಎಂದಿದೆ ಆ ಸುಭಾಷಿತ. ಈ ಸುಭಾಷಿತ ಕೂಡ ಅದನ್ನೇ ಹೇಳುತ್ತಿರುವುದು. ಹಣ ಇರುವುದು ನಾವು ಸುಖ ಪಡುವುದಕ್ಕೆ ಅಥವಾ ಇನ್ನೊಬ್ಬರನ್ನು ಸಂತೋಷಪಡಿಸಲಿಕ್ಕೆ. ಈ ಎರಡಕ್ಕೂ ಒಗ್ಗದ ಹಣಸಂಗ್ರಹದಿಂದ ಏನು ತಾನೆ ಪ್ರಯೋಜನ?
ನಮ್ಮ ಬಲವು ಶತ್ರುಗಳಿಗೆ ಹೆದರಿಕೆ ಹುಟ್ಟಿಸಬೇಕು; ಅವರು ನಮ್ಮ ತಂಟೆಗೆ ಬಾರದಂತೆ ತಡೆಯಬೇಕು. ಅದು ಬಿಟ್ಟು ಸುಮ್ಮನೇ ನಾವು ದೇಹವನ್ನು ಬೆಳೆಸುತ್ತಹೋದರೆ ಏನು ತಾನೆ ಪ್ರಯೋಜನ? ಇದು ದೇಶದ ವಿಷಯದಲ್ಲೂ ಸಲ್ಲುವ ಮಾತು. ನಮ್ಮ ಬಲವನ್ನು ಕಂಡು ಶತ್ರುರಾಷ್ಟ್ರ ನಮ್ಮ ತಂಟೆಗೆ ಬರಬಾರದು; ಹಾಗೆ ನಮ್ಮ ದೇಶದ ರಕ್ಷಣವ್ಯವಸ್ಥೆಯನ್ನು ರೂಪಿಸಬೇಕು.
ವಿದ್ಯೆ ನಮಗೆ ವಿವೇಕವನ್ನು ಕೊಡಬೇಕು. ಆ ವಿವೇಕದಿಂದ ಧರ್ಮ ಯಾವುದು, ಅಧರ್ಮ ಯಾವುದು ಎಂಬ ತಿಳಿವಳಿಕೆ ಮೂಡಿ, ನಮ್ಮ ಆಚರಣೆಯನ್ನು ನಿಯಂತ್ರಿಸಬೇಕು. ಹೀಗೆ ನಮ್ಮ ಬಾಳನ್ನು ರೂಪಿಸದ ವಿದ್ಯೆಯಿಂದ ಏನು ತಾನೆ ಪ್ರಯೋಜನ?
ಆಕರ್ಷಣೆಗೆ ಪಕ್ಕಾಗಿ ನಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವಂಥ ಸ್ಥಿತಿಗೆ ನಮ್ಮನ್ನು ನಾವು ತಂದುಕೊಳ್ಳಬಾರದು. ಉದ್ವೇಗಕ್ಕೆ, ಆಮಿಷಗಳಿಗೆ ಸೋತರೆ ಆ ವ್ಯಕ್ತಿಯು ಜೀವನದಲ್ಲಿಯೂ ಸೋತಂತೆಯೇ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.