ADVERTISEMENT

ದಿನದ ಸೂಕ್ತಿ: ಇದೇ ಸನಾತನಧರ್ಮ

ಎಸ್.ಸೂರ್ಯಪ್ರಕಾಶ ಪಂಡಿತ್
Published 25 ಆಗಸ್ಟ್ 2020, 16:28 IST
Last Updated 25 ಆಗಸ್ಟ್ 2020, 16:28 IST
ಧ್ಯಾನ–ಪ್ರಾತಿನಿಧಿಕ ಚಿತ್ರ
ಧ್ಯಾನ–ಪ್ರಾತಿನಿಧಿಕ ಚಿತ್ರ   

ಸತ್ಯಂ ಬ್ರೂಯಾತ್‌ ಪ್ರಿಯಂ ಬ್ರೂಯಾತ್‌

ನ ಬ್ರೂಯಾತ್‌ ಸತ್ಯಮಪ್ರಿಯಮ್ ।

ಪ್ರಿಯಂ ಚ ನಾನೃತಂ ಬ್ರೂಯಾತ್‌

ADVERTISEMENT

ಏಷ ಧರ್ಮಃ ಸನಾತನಃ ।।

ಇದರ ತಾತ್ಪರ್ಯ ಹೀಗೆ:

‘ಸತ್ಯವನ್ನು ಹೇಳಬೇಕು. ಪ್ರಿಯವಾದುದನ್ನು ಹೇಳಬೇಕು. ಸತ್ಯವಾದರೂ ಅಪ್ರಿಯವಾದುದನ್ನು ಹೇಳಬಾರದು. ಪ್ರಿಯವಾದುದ್ದಾದರೂ ಸುಳ್ಳನ್ನು ಹೇಳಬಾರದು. ಇದೇ ಸನಾತನಧರ್ಮ.’

ಈ ಶ್ಲೋಕ ನಮಗೆ ಎದುರಾಗಬಹುದಾದ ತುಂಬ ನಾಜೂಕಿನ, ಕಷ್ಟತಮ ಸಂದರ್ಭದ ಬಗ್ಗೆ ಮಾತನಾಡುತ್ತಿದೆ.

ಸತ್ಯವನ್ನೇ ಹೇಳಬೇಕು. ಇದು ನಿಯಮ.

ಸತ್ಯ ಎಂದರೆ ಏನು? ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಸುಲಭವಲ್ಲ. ಯಥಾರ್ಥವನ್ನು ಹೇಳುವುದೇ ಸತ್ಯ ಲಕ್ಷಣೀಕರಿಸಲಾದೀತು. ಒಂದು ವಸ್ತುವನ್ನು ನೋಡುತ್ತೇವೆ; ಅದು ಇರುವಂಥ ಸ್ಥಿತಿ, ಅದರ ದಿಟವಾದ ನೆಲೆ – ಇದೇ ಅದರ ಯಥಾರ್ಥಜ್ಞಾನ. ಈ ಮಾತು ಕ್ರಿಯೆಗೂ ಸಲ್ಲುತ್ತದೆ, ವ್ಯಕ್ತಿಗೂ ಸಲ್ಲುತ್ತದೆ. ಹೀಗೆ ಒಂದು ವಸ್ತುವನ್ನೋ ಘಟನೆಯನ್ನೋ ವ್ಯಕ್ತಿಯನ್ನೋ ಕುರಿತು ಅದರ/ಅವನ ದಿಟವಾದ ವಿವರಗಳನ್ನು ಇದ್ದಂತೆಯೇ ಹೇಳುವುದು ಸತ್ಯ ಎಂದು ಎನಿಸಿಕೊಳ್ಳುತ್ತದೆ.

ಇಲ್ಲಿ ಇನ್ನೊಂದು ಪ್ರಶ್ನೆ ಏಳುತ್ತದೆ. ಯಥಾರ್ಥಜ್ಞಾನವನ್ನು ಕಂಡುಕೊಳ್ಳುವುದು ಅಷ್ಟು ಸುಲಭವೇ? ಸುಲಭವಲ್ಲ; ಹೀಗೆ ಕಂಡುಕೊಳ್ಳುವಾಗ ನಾಲ್ಕಾರು ವಿಧದ ಸಮಸ್ಯೆಗಳು ಎದುರಾಗುತ್ತವೆ. ಸದ್ಯಕ್ಕೆ ನಾವು ಈ ವಿಷಯದ ತಾತ್ತ್ವಿಕ ಜಿಜ್ಞಾಸೆಯನ್ನು ಕೈಬಿಡೋಣ. ನಮ್ಮ ಅನುಭವಕ್ಕೆ ಯಾವುದು ಗೋಚರವಾಗುತ್ತದೆಯೋ ಅದನ್ನೇ ಯಥಾರರ್ಥ ಎಂದು ಸ್ವೀಕರಿಸೋಣ. ಈ ಯಥಾರ್ಥವನ್ನು ಹಾಗೆಯೇ ಹೇಳುವುದನ್ನೇ ಸತ್ಯವನ್ನು ಹೇಳುವುದು, ಸತ್ಯವಚನ ಎಂದು ಹೇಳಬಹುದು.

ಈ ಯಥಾರ್ಥ ಹಲವೊಮ್ಮೆ ಹಿತವಾಗಿರುವುದಿಲ್ಲ; ಕಠಿಣವಾಗಿರುತ್ತದೆ, ಕ್ರೂರವಾಗಿರುತ್ತದೆ, ಭಯಂಕರವಾಗಿರುತ್ತದೆ; ಅದನ್ನು ಕೇಳಿ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗಲಾರದು ಎಂದೆನಿಸುವಷ್ಟು ಅಪ್ರಿಯವೂ ಆಗಿರುತ್ತದೆ. ಆಗೇನು ಮಾಡಬೇಕು? ಸತ್ಯವನ್ನೇ ಹೇಳಬೇಕು ಎಂದಲ್ಲವೆ ವಿಧಿ ಇರುವುದು?

ಸತ್ಯವನ್ನಷ್ಟೇ ಹೇಳುವುದಲ್ಲ; ಪ್ರಿಯವಾದುದನ್ನೇ ಹೇಳಬೇಕು. ಹೀಗಾಗಿ ಸತ್ಯವನ್ನು ಹೇಳಬೇಕು ಎಂಬ ಧಾವಂತದಲ್ಲಿ ಅಪ್ರಿಯವಾದುದನ್ನು ಹೇಳಬಾರದು ಎಂಬುದು ಕೂಡ ಶಾಸ್ತ್ರದ ಸ್ಪಷ್ಟ ನಿಲವು.

ಹೀಗಾಗಿ ಸತ್ಯ, ಅದು ಒಂದು ವೇಳೆ ಅಪ್ರಿಯವಾಗಿದ್ದರೆ ಅದನ್ನು ಹೇಳಬಾರದು – ಎಂದು ಶಾಸ್ತ್ರ ಇಲ್ಲಿ ಹೇಳುತ್ತಿರುವುದು. ಹೀಗೆಂದು ಪ್ರಿಯವಾಗಿರುವ ಸುಳ್ಳನ್ನು ಹೇಳಬಹುದೆ? ಪ್ರಿಯವಾಗಿದೆ ಎಂದು ಅಸತ್ಯವನ್ನು ಹೇಳುವಂತಿಲ್ಲ. ಇದು ಕೂಡ ಶಾಸ್ತ್ರದ ಆದೇಶವೇ.

ಸತ್ಯವನ್ನು ಹೇಳುವಾಗಲೂ ಎಷ್ಟೆಲ್ಲ ಎಚ್ಚರವಾಗಿರಬೇಕೆಂದು ಪರಂಪರೆ ಬಯಸುತ್ತಿರುವುದಾದರೂ ನಮ್ಮ ಹಿತದಿಂದಲೇ, ಮನುಷ್ಯರ ಮೇಲಿನ ಕಾಳಜಿಯಿಂದಲೇ – ಎನ್ನುವುದನ್ನು ಮರೆಯುವಂತಿಲ್ಲ. ಸತ್ಯದ ಉದ್ದೇಶವೇ ಮನುಷ್ಯನನ್ನು, ಅವನ ಜೀವನವನ್ನು ಉದ್ಧರಿಸಲು. ಆದರೆ ಅದೇ ಸತ್ಯ ಅವನಿಗೆ ಮಾರಕವಾಗಬಾರದು ಎಂಬುದು ಶಾಸ್ತ್ರದ ಎಚ್ಚರಿಕೆ.

ಹೀಗೆ ಪರಿಸ್ಥಿತಿಯನ್ನು ಸಮಗ್ರವಾಗಿ ಗ್ರಹಿಸಿ, ಸೂಕ್ಷ್ಮವಾಗಿ ನಿರ್ವಹಿಸುವುದೇ ಸನಾತನಧರ್ಮ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.