ADVERTISEMENT

ದಿನದ ಸೂಕ್ತಿ | ಕತ್ತೆ ಕಾಲು ಹಿಡಿ!

ಎಸ್.ಸೂರ್ಯಪ್ರಕಾಶ ಪಂಡಿತ್
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
   

ಗಣೇಶಃ ಸ್ತೌತಿ ಮಾರ್ಜಾರಂ ಸ್ವವಾಹಸ್ಯಾಭಿರಕ್ಷಣೇ ।
ಮಹಾನಪಿ ಪ್ರಸಂಗೇನ ನೀಚಂ ಸೇವಿತುಮಿಚ್ಛತಿ ।।

ಇದರ ತಾತ್ಪರ್ಯ ಹೀಗೆ:

‘ಗಣೇಶ ತನ್ನ ವಾಹನವಾದ ಇಲಿಯ ರಕ್ಷಣೆಗಾಗಿ ಬೆಕ್ಕನ್ನು ಸ್ತುತಿಸುತ್ತಾನೆ. ದೊಡ್ಡವರೂ ಸಹ ಸಂದರ್ಭವಶಾತ್‌ ನೀಚರನ್ನು ಸೇವಿಸಬೇಕಾಗುತ್ತದೆ.’

ADVERTISEMENT

ನೀವೊಬ್ಬ ದೊಡ್ಡ ಅಧಿಕಾರಿ ಆಗಿದ್ದೀರಿ ಅಥವಾ ಸಮಾಜದಲ್ಲಿ ಗಣ್ಯವ್ಯಕ್ತಿಗಳಲ್ಲಿ ಒಬ್ಬರಾಗಿದ್ದೀರಿ – ಎಂದಿಟ್ಟುಕೊಳ್ಳಿ. ಯಾವುದೋ ಒಂದು ಕಚೇರಿಗೆ ಹೋಗಿದ್ದೀರಿ. ನೀವು ಎಷ್ಟೇ ದೊಡ್ಡವರಾಗಿದ್ದರೂ ಅಲ್ಲಿಯ ಕಾವಲುಗಾರನಿಗೆ ನೀವೊಬ್ಬ ಯಕಶ್ಚಿತ್‌ ಮನುಷ್ಯ ಮಾತ್ರ; ಅಲ್ಲಿ ಆ ಕಾವಲುಗಾರನ ಮಾತು ನಡೆಯುವುದು; ಅವನು ನಿಮ್ಮನ್ನು ಮೊದಲು ಒಳಗೆ ಬಿಡಬೇಕು; ಆ ಬಳಿಕವಷ್ಟೇ ನಿಮ್ಮ ಶಕ್ತಿ–ಪ್ರಭಾವ–ಪ್ರತಾಪಗಳೆಲ್ಲ ನಡೆಯುವುದು. ಹೀಗಾಗಿ ಜಾಣರಾಗಿದ್ದರೆ ಮೊದಲಿಗೆ ನೀವು ಆ ಕಾವಲುಗಾರನನ್ನು ಬುಟ್ಟಿಗೆ ಹಾಕಿಕೊಳ್ಳಲು ಉದ್ಯುಕ್ತರಾಗುತ್ತೀರಿ, ಅಲ್ಲವೆ? ನಿಮ್ಮ ಕಚೇರಿಯಲ್ಲಿ ನೀವು ಎಂಥೆಂಥವರನ್ನೋ ’ಕ್ಯಾರೇ‘ ಎಂದಿರುವುದಿಲ್ಲ; ಆದರೆ ಇನ್ನೊಂದು ಕಚೇರಿಗೆ ಹೋದಾಗ ಮಾತ್ರ ಕಾವಲುಗಾರನ ‘ಕೃಪೆ‘ಗಾಗಿ ನೀವು ಹಾತೊರೆಯುತ್ತೀರಿ. ಇದು ವಾಸ್ತವ.

ಇಂಥ ಸಂದರ್ಭವನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ಗಣೇಶನ ರೂಪವನ್ನು ಮನಸ್ಸಿಗೆ ತಂದುಕೊಳ್ಳಿ. ಅವನದ್ದು ಬೃಹತ್‌ ಶರೀರ; ಡೊಳ್ಳು ಹೊಟ್ಟೆ, ಆನೆಯ ಮುಖ. ಕೈಯಲ್ಲಿ ಪರಶು, ಪಾಶ, ಶೂಲ, ಮುರಿದ ದಂತ; ಹೊಟ್ಟಿಗೆ ಹಾವನ್ನು ಸುತ್ತಿಕೊಂಡಿದ್ದಾನೆ. ಎಲ್ಲ ದೇವರಿಗೂ ಒಂದೊಂದು ವಾಹನ ಇರುವಂತೆ ಗಣೇಶನಿಗೂ ಒಂದು ವಾಹನ ಇದೆ; ಅದೇ ಇಲಿ! ಇದೊಂದು ವಿಸ್ಮಯಕಾರಿ ಸಂಗತಿ. ಗಣೇಶನ ಭಾರೀ ಶರೀರವನ್ನು ಹೊರಲು ಸಿದ್ಧವಾಗಿರುವುದು ಪುಟ್ಟ ಇಲಿ!!

ಪುಟ್ಟ ಇಲಿಯೊಂದು ಅಷ್ಟು ಗಾತ್ರದ ಗಣೇಶನನ್ನು ಹೊರಲು ಸಾಧ್ಯವೆ? ಇಂಥ ಪ್ರಶ್ನೆಗಳನ್ನು ಕೇಳುವುದು ಬಾಲಿಶತನವಾಗುತ್ತದೆ. ನಮ್ಮ ದೇವರ ಕಲ್ಪನೆಯಲ್ಲಿರುವ ಸಾಂಕೇತಿಕತೆ ಅರ್ಥವಾದವರಿಗೆ ಇಂಥ ಪ್ರಶ್ನೆಗಳು ಹುಟ್ಟುವುದಿಲ್ಲವೆನ್ನಿ!

ಇರಲಿ, ಇಲ್ಲಿ ಪ್ರಶ್ನೆ ಇರುವುದು ಗಣೇಶತತ್ತ್ವದ ಸಾಂಕೇತಿಕತೆಯ ಬಗ್ಗೆ ಅಲ್ಲ; ಆ ಕಲ್ಪನೆಯನ್ನು ಲೌಕಿಕ ವಿದ್ಯಮಾನವೊಂದಕ್ಕೆ ಹೋಲಿಸಿ ಅರ್ಥೈಸಿರುವುದು ಸ್ವಾರಸ್ಯಕರವಾಗಿದೆ.

ಇಲಿಗೂ ಬೆಕ್ಕಿಗೂ ನೈಸರ್ಗಿಕವಾದ ಶತ್ರುತ್ವ ಇದೆ. ಇಲಿ ಗಣಪತಿಯ ವಾಹನ ಇರಬಹುದು; ಆದರೆ ಅದರಿಂದ ಬೆಕ್ಕು–ಇಲಿಗಳ ಶತ್ರುತ್ವವನ್ನು ವ್ಯತ್ಯಾಸ ಮಾಡದು; ಇಲಿಯನ್ನು ಕಂಡಕೋಡಲೇ ಬೆಕ್ಕು ಅದರ ಮೇಲೆ ದಾಳಿ ಮಾಡುತ್ತದೆ; ಇಲಿಗೂ ಬೆಕ್ಕನ್ನು ಕಂಡಕೂಡಲೇ ಭಯ ಆರಂಭವಾಗಿ, ಅದು ಓಡಲು ತೊಡಗುತ್ತದೆ. ಆಗ ಗಣಪತಿಯ ಪರಿಸ್ಥಿತಿ ಏನು? ಪಾಪ! ಅವನೂ ತನ್ನ ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬೇಕಾಗುತ್ತದೆಯಷ್ಟೆ! ಈ ಅಪಾಯದಿಂದ ತಪ್ಪಿಸಿಕೊಳ್ಳಲು ಅವನು ಏನು ಮಾಡಬೇಕು? ಸುಭಾಷಿತ ಹೇಳುತ್ತಿದೆ: ಬೆಕ್ಕನ್ನು ಕುರಿತು ಗಣೇಶ ಸ್ತುತಿಮಾಡುತ್ತಾನಂತೆ, ಹೊಗಳಲು ತೊಡಗುತ್ತಾನಂತೆ!

ಇದರ ತಾತ್ಪರ್ಯ: ದೇವರು ಕೂಡ ಕೆಲವೊಂದು ಸಂದರ್ಭಗಳ ಒತ್ತಡದಲ್ಲಿ ನೀಚರನ್ನು ಹೊಗಳಬೇಕಾಗುತ್ತದೆಯಂತೆ!

ದೇವರ ಪರಿಸ್ಥಿತಿಯೇ ಹೀಗಿರುವಾಗ ನಮ್ಮಂಥ ಸಾಮಾನ್ಯರ ಪಾಡೇನು?

ಕೆಲವು ಸಂದರ್ಭಗಳು ನಮ್ಮ ಜೀವನದಲ್ಲೂ ಎದುರಾಗುತ್ತಲೇ ಇರುತ್ತವೆ – ನಾವು ಅಂಥ ಸಂದರ್ಭಗಳಲ್ಲಿ ನೀಚರ ಮುಂದೆ ಹಲ್ಲು ಕಿರಿದುಕೊಂಡು ನಿಲ್ಲಬೇಕಾಗುತ್ತದೆ; ಅವರನ್ನು ಓಲೈಸಿಕೊಳ್ಳಲು ಅವರ ಮುಂದೆ ಕೈ ಕಟ್ಟಿ ನಿಲ್ಲಬೇಕಾಗುತ್ತದೆ. ಏಕೆಂದರೆ ಈ ನೀಚರನ್ನು ದಾಟಿ ಹೋಗದ ಹೊರತು ನಮ್ಮ ಮುಂದಿನ ಕೆಲಸ ಸಾಧ್ಯವಾಗದಂಥ ವಿಷಮ ಸಂದರ್ಭದಲ್ಲಿ ನಾವಿರುತ್ತೇವೆ. ಇಂಥ ಸಂದರ್ಭವನ್ನು ಕುರಿತೇ ಹೇಳಿರುವುದು: ’ಕಾರ್ಯವಾಸಿ ಕತ್ತೆ ಕಾಲು ಹಿಡಿ.'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.