ಪ್ರಕೃತಿಯ ಪ್ರತಿ ವಿವರವೂ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುವುದಲ್ಲವೆ? ಈಗಲೂ ಹಾಗೆಯೇ ಆಯಿತು. ಕ್ರೌಂಚಪಕ್ಷಿಗಳ ಪ್ರೀತಿಯ ಆಟ ವಾಲ್ಮೀಕಿ ಮಹರ್ಷಿಗಳಿಗೆ ಆನಂದವಾಗಿ ಕಂಡಿತು; ಆದರೆ ಆ ಬೇಡನಿಗೆ ಅದು ಆಹಾರವಾಗಿ ಕಂಡಿತು! ವಾಲ್ಮೀಕಿಗಳು ನೋಡುತ್ತಿದ್ದಂತೆ ಬೇಡ ಆ ಜೋಡಿಹಕ್ಕಿಗಳಲ್ಲಿ ಗಂಡುಹಕ್ಕಿಗೆ ಗುರಿಯಿಟ್ಟು ಬಾಣವನ್ನು ಬಿಟ್ಟ.
ಅಯ್ಯೋ! ಬಾಣ ತಾಗಿದ ಆ ಗಂಡುಹಕ್ಕಿ ರಕ್ತದಿಂದ ತೋಯ್ದುಹೋಗಿ ನೆಲದ ಮೇಲೆ ಬಿದ್ದು ಹೊರಳಾಡತೊಡಗಿತು. ಒಂದು ಕ್ಷಣ, ಏನು ನಡೆಯಿತು ಎಂದು ಹೆಣ್ಣುಹಕ್ಕಿಗೆ ಅರ್ಥವಾಗಲೇ ಇಲ್ಲ. ಜೊತೆಗಾರನಿಗೆ ಒದಗಿದ ಸ್ಥಿತಿ ಈಗ ಅದರ ಅರಿವಿಗೆ ಬಂತು. ದೀನಸ್ವರದಿಂದ ಅದು ಕೂಗಲಾರಂಭಿಸಿತು.
ಆನಂದಮಯವಾಗಿದ್ದ ವನ ಈಗ ಒಂದೇ ಕ್ಷಣದಲ್ಲಿ ಸ್ಮಶಾನದಂತೆ ಬದಲಾಗಿಬಿಟ್ಟಿತು. ಆ ಎರಡು ಹಕ್ಕಿಗಳು ಕಾಮದಾಟದಲ್ಲಿ ಮೈಮರೆತಿದ್ದವು. ಆದರೆ ಈಗ ಗಂಡುಹಕ್ಕಿಯ ಪ್ರಾಣ ಬೇಡನ ಕಾಮಕ್ಕೆ ಬಲಿಯಾಗಿತ್ತು! ಮದುವೆಯ ಮನೆಯೊಂದು ಸಾವಿನ ಮನೆಯಾಗಿ ಬದಲಾದಂತಾಗಿದೆ ಆ ಪರಿಸರ.
ವಾಲ್ಮೀಕಿಗಳು ಕೂಡ ಶೋಕಾಕುಲರಾದರು. ಗಂಡುಹಕ್ಕಿಯ ಸಾವು ಅವರ ಮನಸ್ಸನ್ನು ಹೆಚ್ಚು ಕದಡಿತೋ? ಹೆಣ್ಣುಹಕ್ಕಿಯ ದೀನಸ್ವರ ಹೆಚ್ಚು ಕದಡಿತೋ? ಹೆಣ್ಣುಹಕ್ಕಿಯ ಅಸಹಾಯಕತೆ, ಕೋಪ, ಶೋಕ, ವಿರಹ – ಅಷ್ಟನ್ನೂ ಏಕಕಾಲದಲ್ಲಿ ಅವರು ಅನುಭವಿಸಿದ್ದಿರಬಹುದೆ? ಆ ಬೇಡ ಮಾಡಿದ ಕೆಲಸ ಅಧರ್ಮ ಎಂದು ಅವರಿಗೆ ತೋರಿತು. ರಕ್ತದಿಂದ ತೋಯ್ದಿದ್ದ ಗಂಡುಹಕ್ಕಿಯ ದೇಹವು ಹೆಣ್ಣುಹಕ್ಕಿಯ ದೀನಸ್ವರದ ಹಿನ್ನೆಲೆಯಲ್ಲಿ ಕಂಡ ಮಹರ್ಷಿಗಳು ಕಾರುಣ್ಯದಲ್ಲಿ ಕರಗಿ ಹೋಗಿದ್ದರು. ಅರಿವಿಗೆ ಬರುವ ಮುನ್ನವೇ ಅವರ ಬಾಯಿಂದ ಈ ಮಾತುಗಳು ಹೊರಟವು:
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ |
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
(‘ಎಲೈ ವ್ಯಾಧ! ನೀನು ಬಹಳ ವರ್ಷ ಬದುಕಬಾರದು. ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಕಾಮಮೋಹಿತವಾಗಿದ್ದ ಗಂಡುಹಕ್ಕಿಯನ್ನು ನೀನು ಕೊಂದುಹಾಕಿದ್ದೀಯೆ’.)
ಈ ಮಾತುಗಳೇನೋ ವಾಲ್ಮೀಕಿಗಳಿಂದ ಒಮ್ಮೆಲೆ ಪ್ರಕಟವಾಯಿತು; ಆದರೆ ಆ ಕೂಡಲೇ ಅವರ ಮನಸ್ಸಿನಲ್ಲಿ ಆಲೋಚನೆ
ಯೊಂದು ಹುಟ್ಟಿಕೊಂಡಿತು. ‘ಅರೆ! ಪಕ್ಷಿಯ ದಾರುಣ
ಸ್ಥಿತಿಯನ್ನು ಕಂಡು ಶೋಕದಲ್ಲಿ ಮುಳುಗಿದ್ದ ನಾನು
ಎಂಥ ಮಾತುಗಳನ್ನು ಹೇಳಿಬಿಟ್ಟೆ!!’ (ಶೋಕಾರ್ತೇ
ನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ |)
ಇಡಿಯ ಪ್ರಸಂಗವೇ ರಾಮಾಯಣದ ಹುಟ್ಟನ್ನೂ ಅದರ ಕಥೆಯನ್ನೂ ಸೂಚಿಸುವಂತಿದೆಯಲ್ಲವೆ?
ಶ್ರೀರಾಮ ಕಥೆಯನ್ನು ನಾರದರಿಂದ ವಾಲ್ಮೀಕಿಗಳು ಕೇಳಿದ್ದು; ತಮಸಾನದಿಯ ನೀರು ವಾಲ್ಮೀಕಿಗಳಿಗೆ ತಿಳಿಯಾಗಿ ಕಂಡಿದ್ದು; ಆ ತಿಳಿ
ತನಕ್ಕೂ ಸಜ್ಜನ ಮನುಷ್ಯರಿಗೂ ನಂಟಿನ ಎಳೆ ಅವರಿಗೆ ಹೊಳೆದದ್ದು; ಕ್ರೌಂಚಪಕ್ಷಿಗಳ ಪ್ರಣಯ; ಬೇಡನೊಬ್ಬ ಗಂಡುಹಕ್ಕಿಯನ್ನು ಕೊಂದದ್ದು; ವಾಲ್ಮೀಕಿಗಳ ಶೋಕವು ಬೇಡನನ್ನು ಶಪಿಸುವಂತೆ ಮಾಡಿದ್ದು; ಆ ಶಾಪವಾದರೋ ಶ್ಲೋಕರೂಪದಲ್ಲಿಯೇ ಪ್ರಕಟವಾದದ್ದು – ಇವಿಷ್ಟು ಸಂಗತಿಗಳನ್ನು ಮತ್ತೊಮ್ಮೆ ಇಲ್ಲಿ ಮೆಲುಕು ಹಾಕಿಕೊಳ್ಳಬೇಕೆನಿಸುತ್ತದೆ.
ವಾಲ್ಮೀಕಿಗಳ ಮನಸ್ಸು ಶ್ರೀರಾಮನ ಕಥೆಯನ್ನು ಕೇಳಿ ಕೇವಲ ಪುಳಕಿತವಾಗಿಲ್ಲ; ಮಾತ್ರವಲ್ಲ, ಅವರು ನೆಮ್ಮದಿಯಲ್ಲಿ ನೆಲೆಯಾಗಿದ್ದಾರೆ. ಅವರ ಅಂತರಂಗದಲ್ಲಿ ತಿಳಿತನ ಇರುವುದರಿಂದಲೇ ಅವರು ಎಲ್ಲೆಲ್ಲಿಯೂ ಅದೇ ತಿಳಿತನವನ್ನು ಕಾಣಬಲ್ಲವರಾಗಿದ್ದಾರೆ. ನದಿಯ ನೀರಿನ ತಿಳಿತನವಷ್ಟೇ ಅವರಿಗೆ ಒದಗಲಿಲ್ಲ; ಪಕ್ಷಿಗಳ ಪ್ರೇಮವನ್ನೂ ಅವರು ಅನುಭವಿಸಬಲ್ಲವರಾಗಿದ್ದಾರೆ.
ಹೆಣ್ಣು ಹಕ್ಕಿಯ ವಿರಹದ ಆರ್ತನಾದ ಅದು ಕೇವಲ ಪಕ್ಷಿಯ ರೋದನವಾಗಿ ಕೇಳಿಸಿಲ್ಲ; ಅಲ್ಲಿ ಸೀತೆಯ ಪಾಡೂ ರಾಮನ ಪಾಡೂ ಕಂಡಿದೆ; ಆ ಸಂದರ್ಭದಲ್ಲಿ ಅವರ ಮನಸ್ಸಿನ ಭಿತ್ತಿಯಲ್ಲಿ ಇಡಿಯ ರಾಮಾಯಣವೇ ಹಾದು ಹೋಗಿದೆ. ‘For great books there must be great readers'. ಇದು ವಿಕ್ಟರ್ ಹ್ಯೂಗೋನ ಮಾತು.
‘ಮಹಾಕೃತಿಯ ಓದುಗ ಕೂಡ ಮಹಾತ್ಮನೇ ಆಗಿರಬೇಕು’. ಹೇಗೆ ಒಬ್ಬ ಸಜ್ಜನ ಮಾತ್ರವೇ ಇನ್ನೊಬ್ಬನ ಸಜ್ಜನಿಕೆಯನ್ನು ಕಾಣಬಲ್ಲನೋ ಹಾಗೆಯೇ ದಿಟವಾದ ಸಹೃದಯನಷ್ಟೆ ದಿಟವಾದ ಕಲೆಯನ್ನು ಗುರುತಿಸಬಲ್ಲ, ಸವಿಯಬಲ್ಲ. ಭಾರತೀಯ ಕಲಾಮೀಮಾಂಸೆಯಲ್ಲಿ ಕಾರಯಿತ್ರೀ ಪ್ರತಿಭೆಯನ್ನೂ ಭಾವಯಿತ್ರೀ ಪ್ರತಿಭೆಯನ್ನೂ ಒಂದಾಗಿಯೇ ಎಣಿಸಲಾಗಿದೆ.
ಕವಿಯ ಕರ್ಮಕ್ಕೆ ಕಾರಯಿತ್ರೀ ಪ್ರತಿಭೆ ಎಂಬ ಹೆಸರು; ಅದನ್ನು ಸವಿಯುವ ರಸಿಕನ ಮಾನಸಿಕ ವ್ಯಾಪಾರವೇ ಭಾವಯಿತ್ರೀ ಪ್ರತಿಭೆ ಎನಿಸಿಕೊಳ್ಳುತ್ತದೆ. ಇವೆರಡು ಅದರ ಹೊರಗಿನ ಅಭಿವ್ಯಕ್ತಿಯಲ್ಲಿ ಬೇರೆ ಬೇರೆಯಾಗಿ ಕಂಡರೂ ಅನುಭವದ ಸ್ತರದಲ್ಲಿ ಒಂದೇ ಗುಣವುಳ್ಳದ್ದು. ಇದು ಭಾರತೀಯ ಕವಿ–ಸಹೃದಯತತ್ತ್ವದ ತಿರುಳು. ವಾಲ್ಮೀಕಿಗಳು ನಾರದರಿಂದ ಶ್ರೀರಾಮ ಕಥೆಯನ್ನು ಕೇಳುವಾಗ ಸಹೃದಯರಾಗಿ
ದ್ದವರು, ಎಂದರೆ ತಿಳಿತನವನ್ನು ಗುರುತಿಸಬಲ್ಲವರಾಗಿದ್ದರು. ಈಗ ಅವರೇ ತಿಳಿತನದ ಮೂರ್ತರೂಪವಾಗಿ ಶ್ರೀರಾಮನ ಚರಿತೆಯಾದ ರಾಮಾಯಣದ ರಚನೆಗೆ ಸಿದ್ಧವಾಗಿದ್ದಾರೆ, ಎಂದರೆ ಕವಿಯಾಗುತ್ತಿದ್ದಾರೆ – ಎಂಬ ಸುಳಿವನ್ನು ಮೇಲಿನ ಕ್ರೌಂಚಪಕ್ಷಿಗಳ ಪ್ರಕರಣ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.