ADVERTISEMENT

ತಪಸ್ಸನ್ನು ತಪಸ್ಸಿನಿಂದಲೇ ಗೆಲ್ಲಬೇಕು!

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಅಕ್ಟೋಬರ್ 2018, 20:00 IST
Last Updated 5 ಅಕ್ಟೋಬರ್ 2018, 20:00 IST
ಚಿತ್ರ: ಬಿ.ಕೆ.ಎಸ್‌. ಶರ್ಮಾ
ಚಿತ್ರ: ಬಿ.ಕೆ.ಎಸ್‌. ಶರ್ಮಾ   

ಕಾಳಿದಾಸನ ಮಹಾಕೃತಿ ‘ಕುಮಾರಸಂಭವ’.‘ಕುಮಾರಸಂಭವ’ ಎಂದರೆ ‘ಕುಮಾರನ ಜನನ’. ಯಾರು ಈ ಕುಮಾರ? ಪರಮೇಶ್ವರನ ಮಗ; ಅವನನ್ನು ಷಣ್ಮುಖ, ಸುಬ್ರಹ್ಮಣ್ಯ, ಕಾರ್ತಿಕೇಯ, ಸ್ಕಂದ, ಶರವಣಭವ, ಕುಮಾರಸ್ವಾಮಿ – ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ಕಾಳಿದಾಸ ತನ್ನ ಮಹಾಕಾವ್ಯದ ವಸ್ತುವನ್ನು ಹಲವು ಮೂಲಗಳಿಂದ ಪಡೆದಿರಬಹುದು. ರಾಮಾಯಣದಲ್ಲಿಯೇ ‘ಕುಮಾರಸಂಭವ’ ಎಂಬ ಮಾತು ಬಂದಿದೆ (ಕುಮಾರಸಂಭವಶ್ಚೈವ ಧನ್ಯಃ ಪುಣ್ಯಸ್ತಥೈವ ಚ). ಕುಮಾರನ ಜನನದ ಬಗ್ಗೆಯೂ ರಾಮಾಯಣದಲ್ಲಿ ಕಥೆಯಿದೆ; ಆದರೆ ಅದು ಕಾಳಿದಾಸನ ‘ಕುಮಾರಸಂಭವ’ಕ್ಕಿಂತಲೂ ಭಿನ್ನವಾಗಿದೆ. (ಈ ಕಥೆಯನ್ನು ಮುಂದೆ ನೋಡೋಣ.) ಕುಮಾರನ ಜನನ, ಅವನು ದೇವತೆಗಳ ಸೇನಾಧಿಪತಿಯಾದದ್ದು, ತಾರಕಾಸುರನನ್ನು ಕೊಂದದ್ದು – ಈ ಕಥಾಭಾಗಗಳು ಹಲವು ಪುರಾಣಗಳಲ್ಲಿ ಹರಡಿಕೊಂಡಿವೆ. ರಾಮಾಯಣ, ಮಹಾಭಾರತ, ಸ್ಕಾಂದಪುರಾಣ, ಮಹಾಶಿವಪುರಾಣ, ಕಾಲಿಕಾಪುರಾಣ, ಬ್ರಹ್ಮಪುರಾಣ, ಸೌರ ಪುರಾಣಗಳಲ್ಲಿದೆ ಈ ಕಥೆ.ಪುರಾಣಗಳಲ್ಲಿರುವ ಕಥೆಯನ್ನು ಅವನು ವರದಿಯಂತೆ ಹೇಳದೆ ತನ್ನ ಮಹಾಪ್ರತಿಭೆಯಿಂದ ಅಪೂರ್ವ ಕಾವ್ಯವನ್ನಾಗಿ ಸೃಷ್ಟಿಸಿದ್ದಾನೆ. ರಾಮಾಯಣ–ಮಹಾಭಾರತಗಳು ಎಲ್ಲ ಪುರಾಣಗಳಿಗಿಂತಲೂ ಪೂರ್ವದ್ದು ಎನ್ನಲಡ್ಡಿಯಿಲ್ಲ. ಹೀಗಾಗಿ ಕಾಳಿದಾಸನನ್ನು ಅನುಸರಿಸಿಯೇ ಪುರಾಣಗಳು ಕಥೆಯನ್ನು ಹೆಣ ದಿದ್ದಿರಬಹುದೆ?

ಇರಲಿ. ಕಾಳಿದಾಸನ ‘ಕುಮಾರಸಂಭವ’ದ ಕೆಲವೊಂದು ಸ್ವಾರಸ್ಯಗಳನ್ನು ಇಲ್ಲಿ ನೋಡೋಣ. ಪ್ರಾಚೀನ ಭಾರತದ ಹಲವು ಶ್ರದ್ಧೆಗಳು, ಮಾನಸಿಕತೆಗಳು, ಆದರ್ಶಗಳು, ನಿಲುವುಗಳನ್ನು ಅರಿಯಲು ಆಕರಗಳಂತಿವೆ ಕಾಳಿದಾಸನ ಕೃತಿಗಳು. ತಪಸ್ಸು, ದಾಂಪತ್ಯ, ಸೌಂದರ್ಯದ ಪರಿಕಲ್ಪನೆಗಳನ್ನು ‘ಕುಮಾರಸಂಭವ’ದಲ್ಲಿ ತುಂಬ ಮನೋಹರವಾಗಿ ನಿರೂಪಿತವಾಗಿವೆ.

ADVERTISEMENT

‘ಕುಮಾರಸಂಭವ’ವು ಆರಂಭವಾಗುವುದು ಹಿಮಾಲಯದ ವರ್ಣನೆಯಿಂದ. ಹಿಮಾಲಯದ ಒಡೆಯ ಹಿಮವಂತ; ಅವನ ಪತ್ನಿ ಮೇನಾದೇವಿ. ಮೈನಾಕನು ಅವನ ಮಗ; ಪಾರ್ವತಿ ಮಗಳು.

ಮೇನಾದೇವಿಯನ್ನು ಮುನಿಗಳೂ ಕೂಡ ಗೌರವಿಸುತ್ತಿದ್ದರಂತೆ. ಅಂಥವಳ ಗರ್ಭದಲ್ಲಿ ಜನಿಸಿದವಳು ಪಾರ್ವತಿ. ಅವಳಾದರೂ ಯಾರು? ಹಿಂದಿನ ಜನ್ಮದಲ್ಲಿ ದಕ್ಷನ ಮಗಳು – ಸತೀದೇವಿಯಾಗಿದ್ದವಳು; ತನ್ನ ಪತಿಯಾದ ಶಿವನಿಗೆ ಅವಳ ತಂದೆಯಿಂದ ಅವಮಾನವಾಯಿತು. ಅದರಿಂದ ನೊಂದ ಅವಳು ಯಜ್ಞಕುಂಡದಲ್ಲಿ ಬಿದ್ದು ಶರೀರವನ್ನು ತ್ಯಜಿಸಿದಳು. ಇದು ಅವಳ ಪೂರ್ವಜನ್ಮದ ವೃತ್ತಾಂತ.

ಪಾರ್ವತಿಯ ಜನನದಿಂದ ಹಿಮವಂತನಿಗೆ ಅಪಾರ ಸಂತೋಷವಾಗಿದೆ. ಅಷ್ಟೇಕೆ, ಅವನು ಪಾರ್ವತಿಯನ್ನು ಮಗಳಾಗಿ ಪಡೆದು ಪವಿತ್ರನೇ ಆಗಿದ್ದಾನೆ ಎಂದು ಕಾಳಿದಾಸ ಘೋಷಿಸುತ್ತಾನೆ. ‘ದೀಪವೊಂದು ಕಾಂತಿಯುತವಾದ ಜ್ವಾಲೆಯಿಂದಲೂ, ಸ್ವರ್ಗದ ದಾರಿ ಗಂಗೆಯಿಂದಲೂ, ವಿದ್ವಾಂಸನು ಸಂಸ್ಕಾರಯುತವಾದ ಮಾತಿನಿಂದಲೂ ಪವಿತ್ರವೂ ವಿಭೂಷಿತವೂ ಆಗುವಂತೆ ಹಿಮವಂತನು ಪಾರ್ವತಿಯ ದೆಸೆಯಿಂದ ಪೂತನೂ ವಿಭೂಷಿತನೂ ಆದನಂತೆ.’ (ಕಾಳಿದಾಸನ ಒಂದೊಂದು ಶ್ಲೋಕಕ್ಕೂ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡಬಹುದು. ನಾವಿಲ್ಲಿ ಕೆಲವೇ ಕೆಲವು ಸ್ವಾರಸ್ಯಗಳನ್ನಷ್ಟೆ ನೋಡುವುದಾಗುತ್ತದೆ.)

ಪಾರ್ವತಿ ಈಗ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದಿದ್ದಾಳೆ. ಅವಳ ಸೌಂದರ್ಯವಾದರೂ ಹೇಗಿದ್ದಿತು? ‘ಯೌವನದಿಂದ ಅವಳ ದೇಹವು ಕುಂಚದಿಂದ ಬಿಡಿಸಿದ ಚಿತ್ರದಂತೆಯೂ, ಸೂರ್ಯನ ಕಿರಣಗಳಿಂದ ಅರಳಿದ ಕಮಲದಂತೆಯೂ ಯಾವುದೇ ಕೊರತೆಗಳೂ ಅತಿರೇಕಗಳೂ ಇಲ್ಲದ ಪೂರ್ಣಸೌಂದರ್ಯವನ್ನು ಪಡೆಯಿತಂತೆ.’ ‘ಸೃಷ್ಟಿಕರ್ತನಾದ ಬ್ರಹ್ಮನಿಗೆ ಸೌಂದರ್ಯದ ಪೂರ್ಣತೆಯನ್ನು ನೋಡಬೇಕೆಂದು ಒಮ್ಮೆ ಬಯಕೆ ಉಂಟಾಯಿತಂತೆ. ಸೌಂದರ್ಯವನ್ನು ವರ್ಣಿಸಲು ಕೆಲವು ಹೋಲಿಕೆಗಳನ್ನು ಬಳಸಲಾಗುತ್ತದೆಯಲ್ಲವೆ? ಉದಾಹರಣೆಗೆ, ಮುಖವನ್ನು ಚಂದ್ರನಿಗೆ ಹೋಲಿಸುವುದು. ಇದೇ ಉಪಮಾನ–ಉಪಮೇಯಗಳ ನಂಟು. ಬ್ರಹ್ಮನು ಸೌಂದರ್ಯದ ಎಲ್ಲ ಉಪಮಾನದ್ರವ್ಯಗಳನ್ನು ಬಳಸಿ ತುಂಬ ಪ್ರಯಾಸಪಟ್ಟು ಪಾರ್ವತಿಯನ್ನು ನಿರ್ಮಿಸಿದ’ – ಎಂದೂ ಕಾಳಿದಾಸ ವರ್ಣಿಸಿದ್ದಾನೆ. (ಇಂಥ ಸೌಂದರ್ಯರಾಶಿಯನ್ನು ಪರಮೇಶ್ವರನು ಹೇಗೆ ಕಂಡ ಎಂಬುದು ಮುಂದೆ ಗೊತ್ತಾಗುತ್ತದೆ!) ಒಮ್ಮೆ ನಾರದನು ರಾಜನಾದ ಹಿಮವಂತನ ಬಳಿಯಲ್ಲಿದ್ದ ಪಾರ್ವತಿಯನ್ನು ನೋಡಿದ; ಅವಳು ಶಿವನ ಶರೀರಾರ್ಧವನ್ನು ಅಲಂಕರಿಸುತ್ತಾಳೆ ಎಂದು ಭವಿಷ್ಯವನ್ನು ನುಡಿದ.

ಆದರೆ ಸತಿಯನ್ನು ಕಳೆದುಕೊಂಡ ಪರಮೇಶ್ವರನು ಈಗ ತಪಸ್ಸಿನಲ್ಲಿ ತಲ್ಲೀನನಾಗಿದ್ದಾನೆ. ಶಿವನು ತಪಸ್ಸಿಗೆ ಆರಿಸಿಕೊಂಡ ತಾಣವಾದರೂ ಎಂಥದ್ದು? ಹಿಮಗಿರಿ. ಅಲ್ಲಿಯ ವಾತಾವರಣವಾದರೂ ಹೇಗಿದೆ? ಗಂಗಾಪ್ರವಾಹದಲ್ಲಿ ಸ್ನಾನ ಮಾಡುತ್ತಿರುವ ದೇವದಾರುವೃಕ್ಷಗಳು; ಸುಗಂಧವನ್ನು ಬೀರುವ ಕಸ್ತೂರೀಮೃಗಗಳ ನಿರಂತರ ಸಂಚಾರ; ಅಲ್ಲಿಯೇ ಕಿನ್ನರಿಯರ ಸಂಗೀತದ ಲಹರಿ. ಇಂಥ ಪರಿಸರದಲ್ಲಿ ಗಜಚರ್ಮವನ್ನು ಧರಿಸಿರುವ ಶಿವನು ತಪಸ್ಸಿನಲ್ಲಿ ನಿರತನಾಗಿದ್ದಾನೆ. ಇಷ್ಟಕ್ಕೂ ಅವನು ಏಕಾದರೂ ತಪಸ್ಸಿನಲ್ಲಿ ತೊಡಗಿದ್ದಾನೆ? ಅವನು ತಪಸ್ಸಿನಿಂದ ಬಯಸುತ್ತಿರುವ ಫಲವಾದರೂ ಏನು? ಕಾಳಿದಾಸ ಈ ಸಂದರ್ಭದಲ್ಲಿ ತುಂಬ ಅದ್ಭುತವಾದ ಮಾತನ್ನು ಹೇಳಿದ್ದಾನೆ: ‘ಸ್ವಯಂ ವಿಧಾತಾ ತಪಸಃ ಫಲಾನಾಂ ಕೇನಾಪಿ ಕಾಮೇನ ತಪಶ್ಚಕಾರ’ – ಶಿವನೇ ಎಲ್ಲರ ತಪಸ್ಸಿಗೂ ಫಲವನ್ನು ನೀಡುವವನು; ಹೀಗಿದ್ದರೂ ಅವನು ಯಾವುದೋ ಬಯಕೆಯಿಂದ ತಪಸ್ಸನ್ನು ಆಚರಿಸಿದನಂತೆ! ಶಿವನ ಬಯಕೆಯನ್ನು, ಎಂದರೆ ಅವನ ಅಂತರಂಗವನ್ನು ತಿಳಿಯುವುದು ಸಾಧ್ಯವಿಲ್ಲ ಎನ್ನುವ ಧ್ವನಿಯನ್ನೂ ಇಟ್ಟುಕೊಂಡು ಕಾಳಿದಾಸ ಈ ಮಾತನ್ನು ಹೇಳಿದ್ದಾನೆ. ಹಿಮಗಿರಿಯ ರಾಜ ಹಿಮವಂತನಲ್ಲವೆ? ಈಗ ಶಿವ ತನ್ನ ಮನೆಯಲ್ಲಿಯೇ ತಪಸ್ಸಿಗೆ ಕುಳಿತಿದ್ದಾನೆ. ಹೀಗಾಗಿ ಅವನು ಶಿವನ ಸೇವೆಗಾಗಿ ಪಾರ್ವತಿಯನ್ನು ನಿಯೋಜಿಸಿದನಂತೆ. ಇಲ್ಲೊಂದು ಸ್ವಾರಸ್ಯವುಂಟು: ಶಿವನು ತಪಸ್ಸಿಗೆ ಆರಿಸಿಕೊಂಡಿರುವ ಸ್ಥಳ ತುಂಬ ಸುಂದರವಾದುದು; ಅಲ್ಲಿಯ ವಾತಾವರಣ ತಪಸ್ಸಿಗೆ ಸಹಕರಿಸುವುದಕ್ಕಿಂತಲೂ ಅದನ್ನು ಭಂಗಗೊಳಿಸುವುದಕ್ಕೆ ಸಿದ್ಧವಾದಂತಿದೆ; ಏಕಾಗ್ರತೆಯನ್ನು ಕೆಡಿಸಿ ಮನಸ್ಸನ್ನು ವಿಷಯಗಳ ಭೋಗದ ಕಡೆಗೆ ಸೆಳೆಯುವಂತಿದೆ. ಈಗ ಪರಿಸರಕ್ಕೆ ಸಹಕಾರ ನೀಡಲೋ ಎನ್ನುವಂತೆ ಅಪೂರ್ವ ಸೌಂದರ್ಯವತಿಯಾದ ಪಾರ್ವತಿ ಅಲ್ಲಿದ್ದಾಳೆ. ಆದರೆ ಶಿವ ಅವಳ ಶುಶ್ರೂಷೆಗೆ ಅನುಮತಿಯನ್ನು ನೀಡಿದ್ದಾನೆ. ಇಲ್ಲೂ ಕಾಳಿದಾಸನ ಮಾತು ಉಲ್ಲೇಖಾರ್ಹವಾದುದು: ‘ವಿಕಾರಹೇತೌ ಸತಿ ವಿಕ್ರಿಯಂತೇ ಯೇಷಾಂ ನ ಚೇತಾಂಸಿ ತ ಏವ ಧೀರಾಃ’ – ವಿಕಾರಗಳನ್ನು ಉಂಟುಮಾಡಲು ಅವಕಾಶಗಳಿದ್ದರೂ ಯಾರ ಮನಸ್ಸು–ಬುದ್ಧಿಗಳು ವಿಕೃತಿಯನ್ನು ಹೊಂದುವುದಿಲ್ಲವೋ ಅವರೇ ಧೀರರು. ನಾವು ಆರೋಗ್ಯವಾಗಿರುವಾಗ ನಮ್ಮ ರೋಗನಿರೋಧಕಶಕ್ತಿಯ ಪರೀಕ್ಷೆಯಲ್ಲ; ಅನಾರೋಗ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಅದು ನಮ್ಮ ಆರೋಗ್ಯವನ್ನು ಎಷ್ಟು ಎತ್ತಿನಿಲ್ಲಿಸಬಲ್ಲದು ಎಂಬುದೇ ಅಲ್ಲವೆ ಅದರ ಮೌಲ್ಯನಿರ್ಣಯ? ಶೃಂಗಾರಕ್ಕೆ ಪೂರಕವಾದ ವಾತಾವರಣ ಅಲ್ಲಿದ್ದಿರಬಹುದು; ಆದರೆ ಅಲ್ಲಿ ತಪಸ್ಸಿಗೆ ಕುಳಿತ ಸ್ಥಾಣುವಿನ ಸ್ಥಾಯೀಭಾವವು ಧೀರಸವೇ ಹೊರತು ಶೃಂಗಾರರಸವಲ್ಲ ಎನ್ನುವುದನ್ನು ಕಾಳಿದಾಸ ಮನೋಜ್ಞವಾಗಿ ಧ್ವನಿಸಿದ್ದಾನೆ.

ಇತ್ತ ತಾರಾಕಾಸುರನ ಉಪಟಳ ಮಿತಿಮೀರಿದೆ. ಯಾವ ದೇವತೆಗೂ ಅವನನ್ನು ನಿಗ್ರಹಿಸಲು ಸಾಧ್ಯವಿಲ್ಲವಾಗಿದೆ. ಅವನ ಮೇಲೆ ಪ್ರಯೋಗಿಸಲ್ಪಟ್ಟ ವಿಷ್ಣುಚಕ್ರವೇ ಅವನ ಕಂಠಾಭರಣವಾಗಿ ಮಾರ್ಪಾಡಾಗಿದೆಯಂತೆ! ಇನ್ನು ಬೇರೆ ದೇವತೆಗಳ ಪಾಡೇನು? ದೇವತೆ
ಗಳೆಲ್ಲರೂ ಬ್ರಹ್ಮನ ಬಳಿಗೆ ಬಂದರು. ತಮಗೆ ಒದಗಿದ ಸಂಕಷ್ಟದಿಂದ ಪಾರುಮಾಡುವಂತೆ ಕೇಳಿಕೊಂಡರು. ‘ಪರಮೇಶ್ವರನ ಮಗನಿಂದಲೇ ತಾರಾಕಾಸುರನ ಸಂಹಾರ ಸಾಧ್ಯ; ಅವನ ಸತಿಯಾಗುವ ಅರ್ಹತೆ ಪಾರ್ವತಿಗೆ ಮಾತ್ರವೇ ಇರುವುದು.ಆದರೆ ಶಿವನು ಈಗ ಘೋರವಾದ ತಪಸ್ಸಿನಲ್ಲಿದ್ದಾನೆ. ಅವನು ಪಾರ್ವತಿಯ ಕಡೆಗೆ ಆಕರ್ಷಿತನಾಗುವಂತೆ ಮಾಡಬೇಕು’ ಎಂದು ಅವನು ದೇವತೆಗಳಿಗೆ ಹೇಳಿ ಕಳುಹಿಸಿದ. ದೇವತೆಗಳು ಆ ಕೆಲಸವನ್ನು ಮನ್ಮಥನಿಗೆ ವಹಿಸಿದರು. ಏಕೆಂದರೆ ಸ್ತ್ರೀ–ಪುರುಷರ ಆಕರ್ಷಣೆಗೆ ಮೂಲಕಾರಣವೇ ರತಿಪತಿಯಾದ ಮನ್ಮಥನ ಹೂಬಾಣದ ಪ್ರಣಯತಾಡನವಲ್ಲವೆ? ಮನ್ಮಥ ಮತ್ತು ಮಹೇಂದ್ರ – ಇವರಿಬ್ಬರ ಮಾತುಗಳನ್ನೂ ಕಾಳಿದಾಸ ತುಂಬ ಸೊಗಸಾಗಿ ನಿರೂಪಿಸಿದ್ದಾನೆ.

ಈಗ ಕಾಮದೇವನಾದ ಮನ್ಮಥನು ತನ್ನ ಮಡದಿಯಾದ ರತಿ ಮತ್ತು ಮಿತ್ರನಾದ ವಸಂತನೊಡನೆ ಮಹಾದೇವನ ತಪಸ್ಸಿನ ಸ್ಥಳಕ್ಕೆ ಬಂದಿದ್ದಾನೆ. ಈ ಪ್ರಸಂಗದಲ್ಲಿರುವ ಒಂದು ಪದದ ಬಗ್ಗೆ ಇಲ್ಲಿ ಸ್ವಲ್ಪ ನೋಡೋಣ. ಮನ್ಮಥನು ಹೋದದ್ದು ‘ಸ್ಥಾಣ್ವಾಶ್ರಮ’ಕ್ಕೆ ಎಂದಿದ್ದಾನಷ್ಟೆ. ಸ್ಥಾಣುವಿನ ಆಶ್ರಮ ಎಂದರೆ ಶಿವನ ಆಶ್ರಮ. ‘ಸ್ಥಾಣು’ ಎನ್ನುವುದು ಶಿವನಿಗೆ ಇರುವ ಹಲವು ಹೆಸರುಗಳಲ್ಲಿ ಒಂದು. ಅಚಲ, ಸ್ಥಿರ, ಶಾಶ್ವತ – ಹೀಗೆಲ್ಲ ಅರ್ಥಗಳೂ ಈ ಪದಕ್ಕೆ ಇವೆ. ವಸಂತನಾಗಲೀ ಕಾಮನಾಗಲೀ ‘ಸ್ಥಾಣು’ವಿಗೆ ಏನೂ ಮಾಡಲಾಗದು ಎನ್ನುವುದು ಇಲ್ಲಿರುವ ತಾತ್ಪರ್ಯ. ವಸಂತನನ್ನು ಕಾಮನು ಜೊತೆಯಲ್ಲಿ ಕರೆದುಕೊಂಡುಬಂದದ್ದಾದರೂ ಏಕೆ? ಶೃಂಗಾರಭಾವಕ್ಕೆ ಒದಗುವಂಥ ಪ್ರಕೃತಿಯನ್ನು ಸೃಷ್ಟಿಸಲು ತಾನೆ? ಅಕಾಲದಲ್ಲಿ ಕಂಗೊಳಿಸಿದ ವಸಂತದ ಚೆಲುವನ್ನು ಕಾಳಿದಾಸ ತುಂಬ ಸುಂದರವಾಗಿ ವರ್ಣಿಸಿದ್ದಾನೆ. ಹಿಮಗಿರಿಯಲ್ಲಿ ತಪಸ್ಸನ್ನಾಚರಿಸಿಸುತ್ತಿದ್ದ ಮುನಿಗಳ ಮನಸ್ಸು ಕ್ಷೋಭೆಗೆ ತುತ್ತಾಗತೊಡಗಿದವಂತೆ. ಸುಂದರಿಯರ ದೋಹದ ಕ್ರಿಯೆಯೇ ಇಲ್ಲದೆ ಅಶೋಕವೃಕ್ಷಗಳು ಚಿಗುರಿನಿಂದ ಕಂಗೊಳಿಸಿದವು; ಮಾವಿನ ಮರಗಳು ಚಿಗುರೊಡೆದು, ಹೂಗೊಂಚಲುಗಳು ತೊನೆಯತೊಡಗಿದವು; ತುಂಬಿಗಳು ಅವನ್ನು ಮುತ್ತಿಕೊಂಡಿವೆ. ಮರಗಿಡಗಳಲ್ಲಿ ಅಕಾಲವಸಂತವು ತುಂಬಿಕೊಂಡು ಇಡಿಯ ವಾತಾವರಣವನ್ನೇ ಬದಲಾಯಿಸಿದೆ; ಪ್ರಣಯಚೇಷ್ಟೆಗೆ ಸಿದ್ಧಗೊಳಿಸಿದೆ. ಆದರೆ ಶಿವನಿರುವ ತಾಣ ಮಾತ್ರ ಇಂಥ ‘ವಿಕಾರ’ದಿಂದ ಮುಕ್ತವಾಗಿದೆ. ‘ಸ್ಥಾಣು’ ಎನ್ನುವುದಕ್ಕೆ ಇನ್ನೊಂದು ಅರ್ಥವನ್ನೂ ಮಾಡಬಹುದು: ‘ರೆಂಬೆಕೊಂಬೆಗಳೇ ಇಲ್ಲದ ಮರದ ಕಾಂಡ’ – ಎಂದರೆ ‘ಬೋಳುಮರ’. ಅಕಾಲವಸಂತವು ಮಹಾದೇವನೆಂಬ ಮಹಾತಪಸ್ವಿಯಲ್ಲಿ ಕಾಮದ ಚಿಗುರನ್ನು ಮೂಡಿಸಲು ವಿಫಲವಾಗುತ್ತದೆ; ಏಕೆಂದರೆ ಅಲ್ಲಿ ಚಿಗುರುಗಳಿಗೆ ಅವಕಾಶ ಕೊಡುವ ರೆಂಬೆಕೊಂಬೆಗಳೇ ಇಲ್ಲ – ಎನ್ನುವುದನ್ನು ಕಾಳಿದಾಸ ಎಷ್ಟೊಂದು ಮಾರ್ಮಿಕವಾಗಿ ಸೂಚಿಸುತ್ತಿದ್ದಾನೆ!

ತಪಸ್ಸನ್ನು ತಪಸ್ಸಿನಿಂದಲೇ ಗೆಲ್ಲಬಹುದಷ್ಟೆ – ಎಂದು ಅರಿತ ಪಾರ್ವತಿ ಕೂಡ ಶಿವನನ್ನು ಒಲಿಸಿಕೊಳ್ಳಲು ಕಠಿಣವಾದ ತಪಸ್ಸಿಗೆ ಅನಂತರದಲ್ಲಿ ತೊಡಗುತ್ತಾಳೆಯೆನ್ನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.