ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಬುದ್ಧಿಗೆ ಬೇಕು ಉತ್ತಮ ವಿಚಾರ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 18 ಸೆಪ್ಟೆಂಬರ್ 2020, 18:37 IST
Last Updated 18 ಸೆಪ್ಟೆಂಬರ್ 2020, 18:37 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಸಮಾಜದಲ್ಲಿ ಬಹುತೇಕ ಜನ ನಾವು ಸರಿಯಾಗಿದ್ದೀವಿ, ಬೇರೆಯವರು ಸರಿ ಇಲ್ಲ – ಎಂಬ ಭಾವನೆಯನ್ನು ಬಲವಾಗಿ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿರುತ್ತಾರೆ. ಇದನ್ನು ಆತ್ಮವಿಶ್ವಾಸದ ಪ್ರತೀಕ ಅಂತ ಭಾವಿಸಿದರೆ ತಪ್ಪಾಗುತ್ತದೆ. ಆತ್ಮವಿಶ್ವಾಸ-ನಂಬಿಕೆಗಳು ಬಲಗೊಳ್ಳುವುದು ಪರರ ಸಲಹೆಗಳನ್ನು ತಾಳ್ಮೆಯಿಂದ ಸ್ವೀಕರಿಸಿದಾಗ ಮಾತ್ರ. ಮನಸ್ಸು ಹೊರಗಿನಿಂದ ಏನನ್ನೂ ಸ್ವೀಕರಿಸುತ್ತಿಲ್ಲ ಎಂದರೆ ಅದು ರೋಗಗ್ರಸ್ತವಾಗಿದೆ ಎಂದರ್ಥ.

ದೇಹ ಮತ್ತು ಮನಸ್ಸು ಬದುಕುವುದೇ ಬಾಹ್ಯ ಸ್ವೀಕಾರದಿಂದ. ದೇಹ ಆಹಾರ ಸ್ವೀಕಾರ ನಿಲ್ಲಿಸಿದರೆ ಹೇಗೆ ಅಸ್ವಸ್ಥವಾಗುತ್ತದೆಯೋ, ಮನಸ್ಸು ಸಹ ನಿತ್ಯ ವಿಚಾರ-ಮಂಥನಗಳ ಸ್ವೀಕಾರ ಮಾಡದಿದ್ದರೆ ರೋಗಗ್ರಸ್ತವಾಗುತ್ತದೆ. ಮನಸ್ಸು ಹೊರಗಿನ ವಿಚಾರಕ್ಕೆ ಸ್ಪಂದಿಸದಿದ್ದರೆ, ಮನದೊಳಗೆ ಇರುವ ಏಕವಿಚಾರ ವಿಕಾರರೂಪ ತಾಳಿ ಹುಚ್ಚು ಹಿಡಿಸಬಹುದು. ಇದಕ್ಕಾಗಿಯೇ ದೇಹಾರೋಗ್ಯಕ್ಕೆ ನಿತ್ಯ ಉತ್ತಮ ಆಹಾರ ಹೊತ್ತೊತ್ತಿಗೆ ಹೇಗೆ ಸೇವಿಸಬೇಕೋ, ಹಾಗೆಯೆ ಮನಸ್ಸಿಗೂ ಸಾತ್ವಿಕ ವಿಚಾರಗಳ ಗ್ರಹಣೆ ಮಾಡಿಸುತ್ತಾ, ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು.

ಯಾರ ಮನಸ್ಸು ತಾನು ಮಾಡಿದ ತಪ್ಪಿಗೆ ಪರರಲ್ಲಿ ಕ್ಷಮೆಯಾಚಿಸುವುದಿಲ್ಲವೊ, ಆ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಳ್ಳುವುದಿಲ್ಲವೊ, ಆತ ಮಾನಸಿಕ ದುರ್ಬಲನೆನಿಸುತ್ತಾನೆ. ಶತ್ರುವೆಂದು ಪರಿಗಣಿಸಿದ ವ್ಯಕ್ತಿ ಮಿತ್ರನಾಗಿ ಸ್ನೇಹದ ಹಸ್ತ ನೀಡಿದಾಗ ತಕ್ಷಣ ಯಾವುದೇ ಮುಜುಗರವಿಲ್ಲದೆ ತನ್ನ ಹಸ್ತ ನೀಡಿ ಆ ಬೆಚ್ಚನೆಯ ಸ್ಪರ್ಶದ ಹಿತ ತಿಳಿಯದ ವ್ಯಕ್ತಿಯ ಮನಸ್ಸು ರೋಗಗ್ರಸ್ತವಾಗಿರುತ್ತೆ. ನಿಮ್ಮ ಸ್ನೇಹ ಬಳಗದ ಹತ್ತು ಮಂದಿಯಲ್ಲಿ ಐವರೊಂದಿಗೆ ಮನಸ್ತಾಪ ಬೆಳೆಸಿಕೊಂಡಿದ್ದೀರೆಂದರೆ, ನಿಮ್ಮ ಮನಸ್ಸು ರೋಗದ ಗೂಡಾಗುತ್ತಿದೆ ಎಂದೇ ಅರ್ಥ.

ADVERTISEMENT

ನಿಮ್ಮ ಸುತ್ತಲಿನ ವ್ಯಕ್ತಿಗಳ ಬಗ್ಗೆ ಹೆಚ್ಚು ವಿಚಾರಗಳನ್ನು ಕಲೆ ಹಾಕದೆ, ನಸುನಗೆಯೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಹೋಗುವುದು ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳುವ ಸರಳ ವಿಧಾನ. ದುರಂತ ಎಂದರೆ ಬಹಳಷ್ಟು ಜನ ಪರರ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಅವರ ವೈಯಕ್ತಿಕ ವಿಷಯ ಸಂಗ್ರಹಿಸಲು, ನಡೆ-ನುಡಿ ವಿಶ್ಲೇಷಿಸಲು ಯೋಚಿಸುತ್ತಾರೆ. ಇದು ಸಕಾರಣವಾಗಿ ಅವರ ಮನಸ್ಸಿಗೆ ಹೊಂದದಿದ್ದಾಗ ಮುನಿಸು ಸೋಗೆ ಹಾಕುತ್ತೆ. ಅದಕ್ಕೊಂದಿಷ್ಟು ಅಕ್ಕ-ಪಕ್ಕದವರಿಂದ ಕಿ(ವಿ)ಡಿ ಚುಚ್ಚಿದರೆ ಜ್ವಾಲಾಗ್ನಿ ಚಟಪಟನೆ ಉರಿದುಬಿಡುತ್ತದೆ. ‘ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ’ ಎಂಬಂತೆಯೆ ಸಂಬಂಧದ ಹುಟ್ಟು ಮತ್ತು ಸಾವು.

ಒಂದು ಮರ ಬೆಳೆಯಲು ಸಾಕಷ್ಟು ವರ್ಷ ಬೇಕು, ಕಡಿಯಲು ಒಂದೇ ನಿಮಿಷ ಸಾಕು. ಮನುಷ್ಯ ಜೀವವಾಗಿ ತಳೆಯಲು ಒಂಬತ್ತು ತಿಂಗಳು ಬೇಕು; ಸಾಯಿಸಲು ಒಂಬತ್ತು ಕ್ಷಣವೂ ಬೇಕಾಗುವುದಿಲ್ಲ. ಅಂದರೆ ಒಳ್ಳೆಯದಕ್ಕೆ ದೀರ್ಘ ಕಾಲ ಬೇಕು. ಕೆಟ್ಟದ್ದಕ್ಕೆ ಅಲ್ಪ ಕಾಲ ಸಾಕು. ಪುಣ್ಯಸಂಪಾದನೆಯೂ ಹಾಗೇ, ಬಹಳ ಕಠಿಣ; ಪಾಪ ಮಾಡೋದು ಬಹಳ ಸುಲಭ. ಪ್ರಪಂಚದಲ್ಲಿ ಕೆಟ್ಟವರು ಸುಲಭವಾಗಿ ವಿಜೃಂಭಿಸುವಷ್ಟು, ಒಳ್ಳೆಯವರು ವಿಜೃಂಭಿಸುವುದಿಲ್ಲ. ಏಕೆಂದರೆ, ಭಗವಂತ ಒಳ್ಳೆಯದನ್ನು ಸುಲಭಕ್ಕೆ ಬಿಕರಿಗಿಟ್ಟಿಲ್ಲ. ಅದನ್ನು ಪಡೆಯಲು ಶ್ರದ್ಧೆ-ಭಕ್ತಿ ಎಂಬ ಕಠಿಣ ಸ್ಥಳದಲ್ಲಿಟ್ಟಿ ದ್ದಾನೆ. ಇವನ್ನು ರೂಢಿಸಿಕೊಳ್ಳಲು ಸಾತ್ವಿಕ ಮನಸ್ಸು ಬೇಕು. ಸಾತ್ವಿಕ ಮನಸ್ಸು ರೂಪುಗೊಳ್ಳಲೆಂದೇ ಧರ್ಮಗಳು ಹುಟ್ಟಿವೆ. ಧರ್ಮಶಾಲೆಯಲ್ಲಿ ಸನ್ಮಾರ್ಗದ ಶಿಕ್ಷಣ ಕಲಿತರೆ, ಮನಸ್ಸು ಸಾತ್ವಿಕವಾಗುತ್ತೆ. ಇಂಥ ಹದವಾದ ಮನಸಿನಲ್ಲಿ ಸದ್ಭಾವ ಮೂಡಿದರೆ ಒಳ್ಳೆಯತನ ಸಾಕಾರಗೊಳ್ಳುತ್ತೆ. ಇದೇ ಸಚ್ಚಿದಾನಂದ ಸಾಕ್ಷಾತ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.