ಮಹಾ ನವರಾತ್ರಿಯ ದುರ್ಗಾಷ್ಟಮಿ - ಶಕ್ತಿ ಪೂಜೆಯನ್ನು ಕೈಗೊಳ್ಳುವ ಮಹತ್ವದ ದಿನವಾಗಿದೆ. ಇದೇ ದಿನ ದುರ್ಗೆಗೆ ದಶ ದೇವರು ತಮ್ಮ ಅಸ್ತ್ರಗಳನ್ನು ಮಹಿಷಾಸುರನ ಅಂತ್ಯಗಾಣಿಸಲು ನೀಡಿದರಂತೆ. ದುರ್ಗಾಷ್ಟಮಿಯ ದುರ್ಗೆಯ ಕೈಯಲ್ಲಿ ಈ ಎಲ್ಲ ಶಸ್ತ್ರಾಸ್ತ್ರಗಳನ್ನೂ ನೋಡಬಹುದಾಗಿದೆ.
ರಾಮಯಾಣದಲ್ಲಿ ಶ್ರೀ ರಾಮನೂ ಸೀತೆಯನ್ನು ಲಂಕೆಯಿಂದ ಕರೆತರುವಾಗ ದುರ್ಗೆಯನ್ನು ಆರಾಧಿಸಿದ ಎಂಬ ನಂಬಿಕೆ ಇದೆ. ಮಹಾಭಾರತದಲ್ಲಿ ನವರಾತ್ರಿ ಹಬ್ಬಕ್ಕೆ ಪಾಂಡವರ ಅಜ್ಞಾತವಾಸ ಮುಗಿಯುವ ಸಂದರ್ಭದೊಂದಿಗೆ ತಳಕು ಹಾಕಲಾಗಿದೆ.
ಕೃಷಿಗೆ ಬೇಕಿರುವ, ಕೊಡಲಿ, ಪಿಕಾಸಿ, ನೇಗಿಲು, ಮಚ್ಚು, ಕುಡ್ಲುಗಳನ್ನೂ, ಒನಕೆ, ರುಬ್ಬುವ ಕಲ್ಲು, ಒಳಕಲ್ಲುಗಳನ್ನೂ, ಭರ್ಜಿ, ಖಡ್ಗಗಳೊಂದಿಗೆ ನೂತನ ಶಸ್ತ್ರಗಳಾಗಿರುವ ಚಾಕು, ಬಾಕು, ಪೆನ್ನುಗಳನ್ನೂ ಪೂಜೆಗೆ ಇರಿಸಲಾಗುತ್ತದೆ.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಮೂರು ದಿನಗಳಿಗೆ ದೀಪಾ ಹಾಕುವ ಸಂಪ್ರದಾಯವಿದೆ. ದೊಡ್ಡದೊಂದು ಪಣತೆಯಲ್ಲಿ ಸಣ್ಣ ಹಗ್ಗದಷ್ಟು ಬತ್ತಿ ಹೊಸೆದು, ದೀಪ ಮುಡಿಸುತ್ತಾರೆ. ಅದು ವಿಜಯದಶಮಿಯ ನಂತರವೇ ಶಾಂತವಾಗಲು ಬಿಡುತ್ತಾರೆ. ಅಲ್ಲಿಯವರೆಗೂ ಎಣ್ಣೆ ಹುಯ್ಯುವ, ಬತ್ತಿ ತೀಡುವ ಕೆಲಸ ನಿರಂತರವಾಗಿರುತ್ತದೆ.
ದುರ್ಗಾಷ್ಟಮಿಯ ದಿನದಂದು, ಘಟ್ಟಸ್ಥಾಪನೆ ಮಾಡಿದವರು ಮನೆ ದೇವರ ಜಗುಲಿಯ ಮೇಲೆ ಬೆಳೆದ ಪೈರಿನ ಮೇಲೊಂದು ಚಟ್ಟ ಕಟ್ಟುತ್ತಾರೆ. ಅದಕ್ಕೆ ಕೋಡುಬಳೆ, ಚಕ್ಕುಲಿ, ಕರಚಿಕಾಯಿ ಮುಂತಾದ ತಿನಿಸುಗಳನ್ನು ದಾರದಿಂದ ಕಟ್ಟಿ ಇಳಿಬಿಡುತ್ತಾರೆ.
ದುಷ್ಟಸಂಹಾರಕ್ಕಾಗಿ ಅವತಾರವೆತ್ತಿದ ದುರ್ಗೆಯ ಆರಾಧನೆಯು ದುಷ್ಟ ಶಕ್ತಿಗಾಗಿ ನಮ್ಮೊಳಗೆ ಮನೋಸ್ಥೈರ್ಯ ನೀಡುತ್ತದೆ. ದುಷ್ಟತನದ ಸಂಹಾರಕ್ಕಾಗಿಯೂ ನವರಾತ್ರಿಯಲ್ಲಿ ದೇವಿ ಆರಾಧನೆ ಸಂಕಲ್ಪ ಮಾಡಿಸುತ್ತದೆ.
ರೈತಾಪಿ ವರ್ಗದಲ್ಲಿ ಆಲಸ್ಯತನವನ್ನೇ ದುಷ್ಟಶಕ್ತಿ ಎಂದು ಹೇಳಲಾಗುತ್ತದೆ. ಆಲಸ್ಯತನವನ್ನು ಮೈಕೊಡವಿಕೊಂಡು ಮೈಮುರಿದು ದುಡಿಯಲು ಹಾರಿ, ಪಿಕಾಸಿ, ಕೊಡಲಿ, ಕುರಪಿ ಮುಂತಾದ ಕೃಷಿ ಉಪಕರಣಗಳನ್ನು ಆಯುಧ ಪೂಜೆಗೆ ಇಡಲಾಗುತ್ತದೆ.
ನವರಾತ್ರಿಯಲ್ಲಿ ಸಪ್ತಮಿಗೆ ಶಾರದೆಯನ್ನೂ, ಅಷ್ಟಮಿಗೆ ದುರ್ಗೆಯನ್ನೂ, ನವಮಿಗೆ ಗೌರಿಯನ್ನೂ ಪೂಜಿಸುವ ಸಂಪ್ರದಾಯವಿದೆ. ವಿದ್ಯೆ ವಿವೇಚನೆಯನ್ನು ಪಡೆದು, ದುಷ್ಟತನವನ್ನು ಸಂಹರಿಸಿ, ಮತ್ತೆ ಸೃಷ್ಟಿಸುವ, ಸೃಜಿಸುವ ಶಕ್ತಿ ಸಿಗಲಿ ಎಂದು ಗೌರಿಯನ್ನೂ ಪೂಜೆ ಮಾಡಲಾಗುತ್ತದೆ.
ಈ ಮೂವರು ದೇವಿಯರ ಆರಾಧನೆಯಿಂದಲೇ ವಿಜಯದಶಮಿಯತ್ತ ಹಬ್ಬದ ನಡಿಗೆ ಸಾಗುತ್ತದೆ. ಹುಬ್ಬಳ್ಳಿಯ ದುರ್ಗಾದೇವಿ ಮತ್ತು ಅಂಬಾ ಭವಾನಿ ಗುಡಿಗಳಲ್ಲಿ ವಿಜಯದಶಮಿಯ ನಂತರ ಬರುವ ಮಂಗಳವಾರ ದೇವಿಗೆ ಅರಿಶಿಣ ಬಳಿಯಲಾಗುತ್ತದೆ. ಮಹಿಷಾಸುರ ಮರ್ದನದ ಕಾಳಗದಲ್ಲಿ ದೇವಿಗೆ ಆಗಿರುವ ಗಾಯಗಳಿಗೆ ಅರಿಶಿಣ ಲೇಪಿಸುವ ಈ ಸಂಪ್ರದಾಯ ಇಲ್ಲಿಯ ಸಹಸ್ರಾರ್ಜುನ ಕ್ಷತ್ರಿಯರಲ್ಲಿ ಇದೆ.
ದುಷ್ಟರನ್ನು ಶಿಕ್ಷಿಸುವ ದುರ್ಗೆಯನ್ನು ಆರಾಧಿಸುವುದು, ಪೂಜಿಸುವುದಷ್ಟೇ ಅಲ್ಲ, ದುಷ್ಟತನವನ್ನು ಕೊನೆಗೊಳಿಸುವ ಸ್ಥೈರ್ಯ ಬೆಳೆಸಿಕೊಳ್ಳಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಮುಖ್ಯವಾಗಿ ಪಶ್ಚಿಮಬಂಗಾಳದಲ್ಲಿಯೂ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ದುರ್ಗಾಷ್ಟಮಿಯಂದು ದುರ್ಗೆ ಪೂಜೆಯೊಂದಿಗೆ ವಿಶೇಷ ನೃತ್ಯವನ್ನು ಪ್ರಸ್ತುತ ಪಡಿಸಲಾಗುತ್ತದೆ. ಗುಜರಾತ್, ರಾಜಸ್ಥಾನಗಳಲ್ಲಿ ಗರಬಾ ನೃತ್ಯವನ್ನು ಪ್ರದರ್ಶಿಸಿ, ಜನನ ಮರಣಗಳ ಜೀವನಚಕ್ರದಲ್ಲಿ ಫಲವಂತಿಕೆಯನ್ನು ಪೂಜಿಸಲಾಗುತ್ತದೆ. ಆಸ್ಸಾಂನಲ್ಲಿಯೂ ದುಷ್ಟಸಂಹಾರ, ಶಿಷ್ಟರಕ್ಷಣೆಯ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲುತ್ತದೆ.
ದೇವಿ ಉಪಾಸನೆಯಲ್ಲಿ ತೊಡಗಿಸಿಕೊಂಡ ಭಕ್ತರಲ್ಲಿ ನವಶಕ್ತಿಯನ್ನು ನೀಡುವ ಈ ಹಬ್ಬ ಎಲ್ಲರಿಗೂ ಶುಭವನ್ನೇ ತರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.