ADVERTISEMENT

ವಿಜಯದಶಮಿ: ಬನ್ನಿ ಕೊಟ್ಟು, ಬಂಗಾರದಂತಿರೋಣ

ಎಸ್.ರಶ್ಮಿ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
   

ಶರನ್ನವರಾತ್ರಿಯ ಮಹಾನವಮಿ ಮತ್ತು ವಿಜಯದಶಮಿ ಎರಡು ದಿನಗಳೂ ಶಕ್ತಿದೇವತೆಯೊಂದಿಗೆ ಗೌರಿಯನ್ನೂ ಪೂಜಿಸುವ ದಿನಗಳಾಗಿವೆ. ಬದುಕು ಬಂಗಾರವೆಂಬ ಸಂದೇಶ ನೀಡುವ ಹಬ್ಬವೂ ಆಗಿದೆ.

ದಕ್ಷಿಣದಲ್ಲಿ ಶಮೀವೃಕ್ಷವನ್ನು ಪೂಜಿಸಿದರೆ, ಉತ್ತರದಲ್ಲಿ ಬನ್ನಿ ಗಿಡವನ್ನು ಪೂಜಿಸಿ, ಬನ್ನಿ ಎಲೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ‘ಬನ್ನಿ ತೊಗೊಂಡು, ಬಂಗಾರದ್ಹಂಗ ಇರಣ’ ಎಂಬ ಸಂದೇಶವನ್ನು ಪ್ರತಿ ಸಲ ಬನ್ನಿ ನೀಡಿದಾಗಲೂ ಪರಸ್ಪರ ಒಪ್ಪಿಸಿಕೊಳ್ಳುತ್ತಾರೆ. 

ಮಹಾನವಮಿಯ ಬೆಳಿಗ್ಗೆ ಶಸ್ತ್ರಾಸ್ತ್ರ ಪೂಜೆಯನ್ನು ಮಾಡಲಾಗುತ್ತದೆ. ಯಂತ್ರಗಳಿಗೆ, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಲಿ ನೀಡುವ ಬದಲು ಕುಂಬಳಕಾಯಿ ಸಿಡಿಸಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ. ಆಯವ್ಯಯದ ವಹಿಗಳು, ಮನೆಯಲ್ಲಿರುವ ಈಳಿಗೆ, ಚಾಕು, ಬಾಕು, ಕುಡ್ಲು, ಕೊಡಲಿ, ಹಾರಿ, ಪಿಕಾಸಿ, ಒನಕೆಗಳನ್ನು ಪೂಜಿಸಲಾಗುತ್ತದೆ. 

ADVERTISEMENT

ಮಹಾನವಮಿದಿನ ಗೌರಿಪೂಜಾ ಮತ್ತು ಭೋಜ್‌ ಸಲ್ಲಿಸುವ ಸಂಪ್ರದಾಯ ಕಲ್ಯಾಣ ಕರ್ನಾಟಕದಲ್ಲಿದೆ. 9 ಜನ ಬಾಲೆಯರಿಗೆ ಕುಮಾರಿ ಪೂಜಾ ಮಾಡಲಾಗುತ್ತದೆ. ಹೆಣ್ಣುಮಕ್ಕಳ ಪಾದ ಪೂಜೆ ಮಾಡಿ, ಪೂರಿ–ಶ್ರೀಖಂಡ, ಪೂರಿ ಹಲ್ವಾ ಅಥವಾ ಪೂರಿ ಖೀರ್‌ ಮುಂತಾದ ಭೋಜ್‌ ಉಣಿಸಲಾಗುತ್ತದೆ. ಸಿಹಿಯುಣಿಸಿ, ದಕ್ಷಿಣೆ ನೀಡಿ, ಸೋಲಾ ಸಿಂಗಾರಕ್ಕೆ (ಷೋಡಷ ಶೃಂಗಾರ) ಅಗತ್ಯ ಇರುವ ಎಲ್ಲವನ್ನೂ ಬಾಗಿಣದಲ್ಲಿ ನೀಡಲಾಗುತ್ತದೆ. ಬಳೆ, ಕ್ಲಿಪ್ಪು, ಟಿಕಳಿ, ಮೆಹೆಂದಿ, ಕರವಸ್ತ್ರ ಮುಂತಾದವು ಈ ಬಾಗಿನದಲ್ಲಿರುತ್ತವೆ. ನವದುರ್ಗೆಯರ ಅವತಾರವೆಂದು ಪರಿಗಣಿಸಿ ಈ ಕಿಶೋರಿಯರಿಗೆ ಪೂಜೆ ಸಲ್ಲಿಸಲಾಗುತ್ತದೆ.

ವಿಜಯದಶಮಿಯಂದು, ಮನೆ ಮಂದಿಯೆಲ್ಲ ಶಮೀವೃಕ್ಷದ ಪೂಜೆ ನೆರವೇರಿಸಿ, ಊರ ಹೊರಗಿರುವ ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ. ಊರೊಳಗಿನ ಅಂಬಾ ಭವಾನಿ, ದುರ್ಗಾದೇವಿ ಮುಂತಾದ ಹೆಣ್ಣುದೇವತೆಗಳ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯ ಮುಂದೆ ಲೇಝಿಮ್‌, ಕೋಲಾಟಗಳನ್ನೂ ಪ್ರದರ್ಶಿಸಲಾಗುತ್ತದೆ.

ಬೀದರ್‌ ಹಾಗೂ ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ರಾಮಲೀಲಾ ನಡೆಸುತ್ತಾರೆ. ನವರಾತ್ರಿ ಶುರುವಾದಾಗಿಂದ ರಾಮಾಯಣದ ನಾಟಕವನ್ನು ಆಡಲಾಗುತ್ತದೆ. ವಿಜಯದಶಮಿಯ ದಿವಸ ರಾಮ ರಾವಣನನ್ನು ಸೋಲಿಸಿದಂತೆ, ರಾವಣ, ಮೇಘದೂತ, ಇಂದ್ರಜಿತ್‌ ಅವರ ಪ್ರತಿಮೆಗಳನ್ನು ಮಾಡಿ, ಹೊಟ್ಟೆಯಲ್ಲಿ ಬಿರುಸುಬಾಣಗಳನ್ನು ತುಂಬಿರುತ್ತಾರೆ. ರಾವಣ ದಹನ ಮಾಡುವುದು ವಿಜಯದ ಸಂಕೇತವೆಂದು ಸಂಭ್ರಮಿಸಲಾಗುತ್ತದೆ. 

ನಾಡಹಬ್ಬ ದಸರಾದಲ್ಲಿ ಚಾಮುಂಡೇಶ್ವರಿಯ ಮೆರವಣಿಗೆಯಾದಂತೆಯೇ ಉಳಿದೆಲ್ಲೆಡೆಯೂ ಊರ ದೇವರ ಮೆರವಣಿಗೆ ಮಾಡುತ್ತಾರೆ.  

ಸಂಜೆಯ ನಂತರ ಆಪ್ತರು, ನೆಂಟರನ್ನು ಭೇಟಿ ಮಾಡಿ, ಬನ್ನಿ ಹಂಚುತ್ತಾರೆ. ‘ಬನ್ನಿ ತಗೊಂಡು ಬಂಗಾರದ್ಹಂಗ ಇರೂನು, ಸಿಕ್ಕಿರುವ ಬದುಕನ್ನು ಬಂಗಾರದಂತೆ ಕಳೆಯೋಣ’ ಎನ್ನುತ್ತಾರೆ. ಹಿರಿಯರಿಗೆ ಬನ್ನಿ ನೀಡಿ ಪಾದಸ್ಪರ್ಶ ಮಾಡಿದ ಕಿರಿಯರಿಗೆ ಹಿರಿಯರು ಬನ್ನಿಯೊಂದಿಗೆ ನಾಣ್ಯಗಳನ್ನೂ ಆಶೀರ್ವಾದ ರೂಪದಲ್ಲಿ ನೀಡುತ್ತಾರೆ.

ಸಂತಸವನ್ನು ಕೊಡುಕೊಳ್ಳುವ ಈ ಹಬ್ಬದಲ್ಲಿ ದುಷ್ಟತನದ ಮೇಲೆ ನಿಯಂತ್ರಣ ಸಾಧಿಸುತ್ತ, ಬದುಕು ಬಂಗಾರವಾಗಿಸುವ ಪಾಠ ನೀಡುತ್ತದೆ. ಓದುಗರೆಲ್ಲರ ಬದುಕು ಬಂಗಾರವಾಗಲಿ. ಮಹಾನವಮಿ ಹಾಗೂ ವಿಜಯದಶಮಿಯ ಶುಭಾಶಯಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.