ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಇಸ್ರೇಲ್ ದೇಶವು ರೋಮನ್ನರ ಆಡಳಿತದಲ್ಲಿತ್ತು. ಹೆರೋದ ಅರಸನಾಗಿದ್ದ. ಚಕ್ರವರ್ತಿ ಆಗಸ್ಟಸ್ ಸೀಜರ್‌ನ ಕಾಲದಲ್ಲಿ ಜನಗಣತಿ ನಡೆದಾಗ, ಜೋಸೆಫ್ ತುಂಬು ಗರ್ಭಿಣಿ ಹೆಂಡತಿ ಮರಿಯಳೊಂದಿಗೆ ಬೆತ್ಲೆಹೇಮ್‌ಗೆ ಬಂದಿರುತ್ತಾನೆ. ತಂಗಲು ಎಲ್ಲೂ ಜಾಗ ಸಿಗದೇ ದನದ ಕೊಟ್ಟಿಗೆಯಲ್ಲಿ ಬಿಡಾರ ಹೂಡುತ್ತಾನೆ. ಅಲ್ಲಿ ಯೇಸುಸ್ವಾಮಿಯ ಜನನವಾಗುತ್ತದೆ.
ದೇವದೂತರ ಸಂದೇಶವನ್ನು ಕೇಳಿ ಕುರುಬರು ಕೂಸು ಯೇಸುವನ್ನು ಕಾಣಲು ಬರುತ್ತಾರೆ. ಹಲವು ಸೂಚಕಗಳನ್ನು ಕಂಡು, ಪೂರ್ವದ ನಾಡಿನ ಪಂಡಿತರು ಬಂದು, ಕೂಸು ಯೇಸುವಿಗೆ ತಮ್ಮ ಗೌರವವನ್ನು ಸಲ್ಲಿಸುತ್ತಾರೆ.
ಈ ಪಂಡಿತರಿಂದ ವಿಷಯ ತಿಳಿದ ಹೆರೋದ ಅರಸ, ತನ್ನ ಸ್ಥಾನಕ್ಕೆ ಚ್ಯುತಿ ಬಂದೀತೆಂದು ಎಳೆಯ ಹಸುಗೂಸುಗಳನ್ನು ಕೊಲ್ಲಿಸಲು ಮುಂದಾಗುತ್ತಾನೆ. ತಂದೆ ಜೋಸೆಫ್ ದೇವದೂತನ ಸೂಚನೆಯಂತೆ, ಮಾತೆ ಮರಿಯವ್ವ, ಕೂಸು ಯೇಸುವನ್ನು ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಪಲಾಯನ ಮಾಡುತ್ತಾನೆ.
‘ಬಿತ್ತುವಾಗ ಬಂದಿದ್ದರು’: ಜೋಸೆಫ್ ಈಜಿಪ್ಟಿಗೆ ಓಡಿಹೋಗುವ ಪ್ರಸಂಗಕ್ಕೆ, ಸೈನಿಕರಿಗೆ ದಾರಿ ತಪ್ಪಿಸುವ ಪ್ರಕರಣದ ಬಾಲವೊಂದನ್ನು ಪೋಣಿಸಿ, ಕನ್ನಡ ನಾಡಿನ ಬಯಲು ಸೀಮೆಯ ಕನ್ನಡ ಕಥೋಲಿಕ ಕ್ರೈಸ್ತ ಜನಪದರು ಸುಂದರ ಕತೆಯನ್ನು ಹೆಣೆದಿದ್ದಾರೆ. ಈಜಿಪ್ಟಿಗೆ ಓಡಿ ಹೊಗುವಾಗ ಜೋಸೆಫ್, ಬಿತ್ತಲು ನಿಂತಿದ್ದ ರೈತರ ಕೈಯಲ್ಲಿನ ಗೋಧಿಯನ್ನು ಹೊಲದಲ್ಲಿ ತೂರುತ್ತಾನೆ. ನೆಲಕ್ಕೆ ಬಿದ್ದ ಬೀಜಗಳು ಮೊಳಕೆಯೊಡೆದು, ಬೆಳೆ ಬೆಳೆದು ನಿಲ್ಲುತ್ತವೆ. ತೆನೆಗಳು ತೊನೆದಾಡುತ್ತವೆ. ಪವಿತ್ರ ಕುಟುಂಬ ಅದರಲ್ಲಿ ಅಡಗಿಕೊಳ್ಳುತ್ತದೆ.
ಅವರನ್ನು ಹಿಂಬಾಲಿಸಿದ ಹೆರೋದನ ಸೈನಿಕರು, ದಂಪತಿ ಮತ್ತು ಹಸುಗೂಸಿನ ಬಗ್ಗೆ ವಿಚಾರಿಸುತ್ತಾರೆ. ‘ಬಿತ್ತುವಾಗ ಬಂದಿದ್ದರು’ ಎಂಬ ರೈತರ ಮಾತಿನಿಂದ ಸೈನಿಕರು ಹುಡುಕುವ ದಿಕ್ಕು ಬದಲಿಸುತ್ತಾರೆ.
ಈ ಕಥೆಯ ಆಧಾರದಲ್ಲಿ, ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚುಗಳು ಮತ್ತು ಕ್ರೈಸ್ತರ ಮನೆಮನೆಗಳಲ್ಲಿ ಸಜ್ಜುಗೊಳ್ಳುವ ಗೋದಲಿಗಳಿರುವ ಕೊಟ್ಟಿಗೆಗಳ ಪ್ರತಿಕೃತಿಗಳ ಅಲಂಕಾರಕ್ಕೆ ಗೋಧಿ, ರಾಗಿ, ಜೋಳದ ಸಸಿಗಳನ್ನು ಬೆಳೆಯುವ ಸಂಪ್ರದಾಯ ನಾಡಿನ ಕ್ರೈಸ್ತರಲ್ಲಿ ರೂಢಿಗೆ ಬಂದಿದೆ ಎನ್ನಲಾಗುತ್ತದೆ.
ಅಂಕುರಾರ್ಪಣೆಯ ‘ಜಾಗರ’: ಉತ್ಸವದ ಅಂಗವಾಗಿ ಮೊಟ್ಟಮೊದಲು ಧಾನ್ಯಗಳನ್ನು ಮೊಳೆಯ ಹಾಕುವ ಶುಭಕರ್ಮವೇ ಅಂಕುರಾರ್ಪಣ. ಮಂಗಳ ಪ್ರಸಂಗಗಳಲ್ಲಿ ಅಂಕುರಾರ್ಪಣವೆಂಬ ಕರ್ಮದ ಅಂಗವಾಗಿ ಪಾತ್ರೆಗಳಲ್ಲಿ ಬೆಳೆಸುವ ಪೈರಿಗೆ ಜಾಗರ ಎನ್ನುತ್ತಾರೆ ಎಂದು ಅರ್ಥಕೋಶಗಳು ತಿಳಿಸುತ್ತವೆ.
ವಿಷ್ಣು ದೇವಾಲಯಗಳಲ್ಲಿನ ಬ್ರಹ್ಮೋತ್ಸವ, ವರಮಹಾಲಕ್ಷ್ಮಿ ಹಬ್ಬದಲ್ಲಿ ಜಾಗರದ ಬಳಕೆಯಿದೆ. ಉತ್ತರ ಕರ್ನಾಟಕದಲ್ಲಿ ವಿಜಯದಶಮಿಯ ದಿನದಂದು ಎಳೆಯ ಗೋಧಿ ಹುಲ್ಲನ್ನು ಹಂಚಿಕೊಂಡು, ‘ಬಂಗಾರ ತಗೊಂಡ ನಾವು ನೀವು ಬಂಗಾರದಂಗ ಇರೂಣ’ ಎನ್ನುತ್ತಾ ಸಂಭ್ರಮಿಸುತ್ತಾರೆ. ನಾಗರ ಪಂಚಮಿಯಲ್ಲಿ ಜಾಗರ ಬೆಳೆದು, ನಾಗಪ್ಪನಿಗೆ ಏರಿಸುತ್ತಾರೆ. ರೈತಾಪಿ ಜನರು ಗುಳ್ಳವ್ವನ ಹಬ್ಬದಲ್ಲಿ ತಾಟಿನೊಳಗೆ ಗೋಧಿ ಸಸಿ ಬೆಳೆದು, ಗುಡಿಗೆ ಒಯ್ದು ದೇವರಿಗೆ ಏರಿಸುತ್ತಾರೆ. ಮಹಿಳೆಯರು ತಲೆಗೆ ಮುಡಿದುಕೊಳ್ಳುತ್ತಾರೆ. ಲಂಬಾಣಿ ಮಹಿಳೆಯರು, ತಾಂಡಾದ ಸಂತೋಷದ ದಿನಗಳಲ್ಲಿ ಮತ್ತು ದೀಪಾವಳಿಯಲ್ಲಿ ಗೋಧಿಹುಲ್ಲು ಬೆಳೆದು ‘ತೀಜ್’ ಹಬ್ಬವನ್ನು ಆಚರಿಸುತ್ತಾರೆ.
ಫಲವಂತಿಕೆಯ, ನಿಸರ್ಗಾರಾಧನೆಯ ‘ಜಾಗರ’ ಆಚರಣೆಯು ಒಂದು ನಿರ್ದಿಷ್ಟ ಹಬ್ಬಕ್ಕೆ, ಸಮಯಕ್ಕೆ, ಸಮುದಾಯಕ್ಕೆ ಸೀಮಿತಗೊಂಡಂತಿಲ್ಲ. ಏಷ್ಯಾ ಖಂಡದಲ್ಲಿ ಹುಟ್ಟಿದರೂ, ಯೂರೋಪಿನ ಧರ್ಮ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡಿರುವ ಭಾರತದಲ್ಲಿನ ಕ್ರೈಸ್ತರೂ ಭಾರತೀಯರೇ. ಈ ನೆಲದ ಮಕ್ಕಳಾಗಿರುವ ಅವರ ಹಬ್ಬದಾಚರಣೆಗಳಲ್ಲಿಯೂ ಈ ನೆಲದ ವಾಸನೆ ಸೂಸುವುದು ಅಚ್ಚರಿಯೇನಲ್ಲ.
ಆಕಾಶದಲ್ಲಿ ಹೊಸ ನಕ್ಷತ್ರವನ್ನು ನೋಡಿ, ‘ಯಹೂದಿಗಳು ಶತಮಾನಗಳಿಂದ ಕಾಯುತ್ತಿದ್ದ ಅರಸ ಹುಟ್ಟಿಬರುವ ಗಳಿಗೆ ಬಂದಿದೆ’ ಎಂದು ಲೆಕ್ಕ ಹಾಕಿದ ಪೂರ್ವದ ಮೂವರು ರಾಯರು, ಅದರ ಜಾಡನ್ನು ಹಿಡಿದು ಬೆತ್ಲೆಹೇಮಿಗೆ ಬಂದು ‘ಕೂಸು ಯೇಸುಸ್ವಾಮಿಗೆ ಬಂಗಾರ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ಒಪ್ಪಿಸುತ್ತಾರೆ’. ಇವರನ್ನು ಪೂರ್ವದ ಪಂಡಿತರು, ಜ್ಞಾನಿಗಳು, ಅರಸರು ಅಥವಾ ಜ್ಯೋತಿಷಿಗಳು ಎಂದು ಗುರುತಿಸಲಾಗುತ್ತದೆ.
ಪಂಡಿತರ ಭೇಟಿಯ ಸ್ಮರಣೆಯ ‘ಮೂರು ರಾಯರ ಹಬ್ಬ’ವು, ಕನ್ನಡನಾಡಿನಲ್ಲಿ ಹೊಸ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಸಂಕ್ರಾಂತಿಯ ದನಕರುಗಳ ಪೂಜೆ, ದಸರೆಯ ಆಯುಧ ಪೂಜೆ ಮತ್ತು ಹೋಳಿ ಹುಣ್ಣಿಮೆಯ ಕಾಮನಹಬ್ಬದ ರಂಗಿನಾಟ- ಈ ಮೂರೂ ಸಂಭ್ರಮಗಳು, ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿನ ಈ ಮೂರು ರಾಯರ ಹಬ್ಬದಲ್ಲಿ ಮೇಳೈಸಿವೆ.
ಬೆಳಿಗ್ಗೆ ಹಬ್ಬದ ಪಾಡು(ಹಾಡು) ಪೂಜೆ ಮುಗಿಯುತ್ತಿದ್ದಂತೆಯೇ, ಕೆಲವು ಊರುಗಳಲ್ಲಿನ ಕ್ರೈಸ್ತರು ತಮ್ಮ ದನಕರುಗಳನ್ನು ಸಿಂಗರಿಸಿಕೊಂಡು ಗುಡಿಯ ಅಂಗಳಕ್ಕೆ ತರುತ್ತಾರೆ. ಅಲ್ಲಿ ಗುರುಗಳು ತೀರ್ಥ ಪ್ರೋಕ್ಷಣೆ ಮಾಡಿ ಆಶೀರ್ವದಿಸುತ್ತಾರೆ. ದಸರೆಯಲ್ಲಿ ಆಯುಧ ಪೂಜೆ ಮಾಡುವಂತೆ, ಕ್ರೈಸ್ತರು ತಮ್ಮ ತಮ್ಮ ವಾಹನಗಳನ್ನು ಗುಡಿಯಂಗಳಕ್ಕೆ ತಂದು ಅವಕ್ಕೂ ಗುರುಗಳಿಂದ `ಅಪಘಾತಗಳು ನಡೆಯದಿರಲಿ’ ಎಂದು ಕೋರಿ ಆಶೀರ್ವಾದ ಪಡೆಯುತ್ತಾರೆ. ನಂತರ ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಾರೆ.
ಮೂರು ರಾಯರ ಹಬ್ಬದ ಕೊನೆಯಲ್ಲಿ ಚರ್ಚು ಮತ್ತು ಮನೆಮನೆಗಳಲ್ಲಿ ನಿರ್ಮಿಸಿದ್ದ ಕೊಟ್ಟಿಗೆಗಳನ್ನು ಬಿಚ್ಚುತ್ತಾರೆ.
ಕೆಲವು ಗ್ರಾಮಗಳಲ್ಲಿನ ಕ್ರೈಸ್ತರು, ವಾಲಗದವರನ್ನು ಗುಡಿ (ಚರ್ಚ್)ಗೆ ಕರೆಸಿ, ಗುಡಿಯ ಜಾಗರವನ್ನು ಊರೆಲ್ಲಾ ಸುತ್ತಾಡಿಸಿ, ಹೊಳೆಗೋ, ಕೆರೆಗೋ ಒಯ್ದು ನೀರಿಗೆ ಒಪ್ಪಿಸುವಂತೆ ಕೋರುತ್ತಿದ್ದರು. ಕೆಲವರು ತಮ್ಮ ಮನೆಗಳಲ್ಲಿನ ಕೊಟ್ಟಿಗೆಯ ಜಾಗರಗಳನ್ನೂ ಅವರಿಗೇ ಒಪ್ಪಿಸುತ್ತಿದ್ದರು.
ಬೇಗೂರಿನಲ್ಲಿನ ಕ್ರೈಸ್ತ ಮಹಿಳೆಯರು, ಜಾಗರದ ಬುಟ್ಟಿ, ಮೊರಗಳನ್ನು ತಲೆಯ ಮೇಲೆ ಹೊತ್ತು, ವಾಲಗದವರೊಂದಿಗೆ ಊರಲ್ಲಿ ಮೆರವಣಿಗೆ ಮಾಡುತ್ತಿದ್ದರು. ಕೊನೆಗೆ ಕೆರೆಯಲ್ಲಿ ಅವನ್ನು ವಿಸರ್ಜಿಸುತ್ತಿದ್ದರು. ಈ ಆಚರಣೆಯು ಗಣೇಶ ಚತುರ್ಥಿಯ ಗಣಪನ ಮತ್ತು ಪಶ್ಚಿಮ ಬಂಗಾಳದ ದೀಪಾವಳಿಯ ಕಾಳಿಮಾತೆಯ ವಿಸರ್ಜನೆಯ ಕ್ರಮವನ್ನು ಹೋಲುತ್ತಿತ್ತು.
ನಗರೀಕರಣದ ಪ್ರಭಾವ ಮತ್ತು ಪ್ರಗತಿಯ ನಾಗಾಲೋಟದಲ್ಲಿ ನಮ್ಮ ಜನಪದರ ಹಲವಾರು ಸಂಪ್ರದಾಯಗಳು ಮೂಲೆಗುಂಪಾಗಿರುವಂತೆ, ಕ್ರೈಸ್ತ ಜನಪದರ ‘ಜಾಗರ ಮುಳುಗಿಸುವ’ ಆಚರಣೆ ನೇಪಥ್ಯಕ್ಕೆ ಸರಿದಿದೆ. ಗೋದಲಿಯ ಪಕ್ಕ ಜಾಗರ ಬೆಳೆಸುವ ಪದ್ಧತಿ ಗ್ರಾಮಾಂತರ ಪ್ರದೇಶಗಳಲ್ಲಿ, ಸಂಪ್ರದಾಯಸ್ಥ ಮನೆಗಳಲ್ಲಿ ಗುಟುಕು ಜೀವ ಉಳಿಸಿಕೊಂಡಿದೆ. ನೈಸರ್ಗಿಕ ಪುಟಾಣಿ ಕ್ರಿಸ್ಮಸ್ ಗಿಡಗಳ ಬದಲು ಪ್ಲಾಸ್ಟಿಕ್ ಕ್ರಿಸ್ಮಸ್ ಗಿಡಗಳು ಬಂದಂತೆ, ನಿಧಾನವಾಗಿ ಪ್ರಕೃತಿಯಿಂದ ಮಣ್ಣಿನಿಂದ ದೂರ ಸರಿಯುತ್ತಿರುವ ಪಟ್ಟಣಿಗರ ಗೋದಲಿಯ ಸಿಂಗಾರಕ್ಕೆ, ಜಾಗರದ ಬದಲು ಗಲೀಜು ಮಾಡದ ಪ್ಲಾಸ್ಟಿಕ್ ಹುಲ್ಲಿನ ಬಗೆಬಗೆಯ ಹಾಸುಗಳು ಬಂದಿವೆ, ಬರತೊಡಗಿವೆ.
ಕೊಟ್ಟಿಗೆಗಳಲ್ಲಿನ ಗೋದಲಿ (ಚೌಕಾಕಾರದ ಮೇವಿನ ತೊಟ್ಟಿ)ಯಲ್ಲಿ ಕೂಸು ಯೇಸುಸ್ವಾಮಿಯ ಮತ್ತು ಅದರ ಎಡಬಲಕ್ಕೆ ಜೋಸೆಫ ಮತ್ತು ಮರಿಯಳ ಸ್ವರೂಪಗಳನ್ನು, ದೂರದಲ್ಲಿ ಕೂಸು ಯೇಸುವನ್ನು ಕಾಣಲು ಬರುವ ಕುರುಬರ ಮತ್ತು ಮೂಡಣದ ಮೂರು ರಾಯರ (ಪಂಡಿತರ), ದನಕರುಗಳ ಗೊಂಬೆಗಳನ್ನು ಇರಿಸುತ್ತಾರೆ. ಜೊತೆಗೆ ಕುರುಬರಿಗೆ ಮಾಹಿತಿ ನೀಡಿದ ದೇವದೂತನ ಮತ್ತು ಪಂಡಿತರಿಗೆ ದಾರಿ ತೋರಿದ ನಕ್ಷತ್ರದ ಪ್ರತಿಕೃತಿಗಳನ್ನು ತೂಗು ಬಿಡಲಾಗುತ್ತದೆ. ರೂಢಿಯಲ್ಲಿ ಇದನ್ನು ಗೋದಲಿ ಎನ್ನುವರು. ಹಬ್ಬದ ನಂತರದಲ್ಲಿ ಜನವರಿ ಆರರಂದು ಮೂರು ರಾಯರ ಹಬ್ಬದ ದಿನದ ಸಂಜೆ ಹೊತ್ತಿಗೆ ಕ್ರಿಸ್ಮಸ್ ಕೊಟ್ಟಿಗೆಯನ್ನು ಕಳಚಲಾಗುವುದು. ಗೋಧಿ, ರಾಗಿ ಮೊದಲಾದ ಕಾಳುಗಳ ಎಳೆಯ ಸಸಿ ಹುಲ್ಲಿಗೆ ‘ಜಾಗರ’ ಎಂಬ ಹೆಸರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.