ದೇವರು ಮನುಷ್ಯನಾಗಿ ಈ ಧರೆಯಲ್ಲಿ ಹುಟ್ಟಿದ ದಿನದ ಆಚರಣೆಯೇ ಕ್ರಿಸ್ಮಸ್. ಕಷ್ಟ, ನೋವು, ಪಾಪ ಇಂತಹ ಹತ್ತುಹಲವು ಅಡಚಣೆಗಳಿಂದ ಮನುಕುಲವನ್ನು ರಕ್ಷಿಸಲು ದೇವರು ಯೇಸುವಿನ ಮುಖಾಂತರ ನರನಾದರು. ‘ಯೇಸು’ ಎಂದರೆ ‘ಜನರನ್ನು ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು’ ಎಂದರ್ಥ.
ಈ ವರ್ಷದ ಕ್ರಿಸ್ಮಸ್ ಪ್ರತಿ ವರ್ಷಕ್ಕಿಂತಲೂ ಭಿನ್ನವಾದುದು. ಯೇಸುವಿನ ಜನ್ಮದ ಕಾಲಘಟ್ಟದ ವಿಷಮ ಪರಿಸ್ಥಿತಿಯಂತೆಯೇ ಇಂದೂ ನಾವು ಸಂಕಟಕಾಲದಲ್ಲಿದ್ದೇವೆ. ಯೇಸು ಹುಟ್ಟಿದಾಗ ದೂತಪರಿವಾರವು ‘ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿಸಮಾಧಾನ‘ ಎಂದು ಹಾಡಿತು (ಲೂಕ 2:14). ಇಂದಿನ ಪರಿಸ್ಥಿತಿಯಲ್ಲಿ ಕ್ರಿಸ್ತಜಯಂತಿಯ ಸಂದೇಶವೇನು? ನಾವು ಮನುಷ್ಯರಾದಾಗ ದೇವರು ನಮ್ಮೊಡನೆ ನೆಲೆ ನಿಲ್ಲುತ್ತಾರೆ ಎಂಬುದು ಕ್ರಿಸ್ಮಸ್ ಹಬ್ಬದ ಮೂಲ ಆಶಯ. ಮನುಷ್ಯರನ್ನು ದೇವರ ಹಂತಕ್ಕೆ ಕೊಂಡೊಯ್ಯಲು ದೇವರು ಮನುಷ್ಯರಾದರು ಎಂಬುದು ಧರ್ಮಸಭೆಯ ಉಪದೇಶ. ನಾವು ದೈವಿಕ ಮಟ್ಟಕ್ಕೆ ಏರುವುದೆಂದರೆ ಪ್ರೀತಿ, ಕ್ಷಮೆ, ತಿಳಿವಳಿಕೆಯಿಂದ ಬಾಳುವುದು. ಅದನ್ನೇ ‘ಇಮ್ಮಾನುವೇಲ್’ ಎನ್ನುತ್ತಾರೆ. ಇದು ಯೇಸುವಿನ ಇನ್ನೊಂದು ಹೆಸರು. ‘ದೇವರು ನಮ್ಮೊಡನೆ ಇದ್ದಾರೆ’ ಎಂಬುದು ಇದರರ್ಥ.
ಕ್ರಿಸ್ತಜಯಂತಿಯು ಮನುಷ್ಯನು ಅನಾಥನಂತೆ ಇದ್ದಾಗ ದೇವರು ಹುಡುಕಿ ಬಂದ ಘಟನೆ. ಅದಕ್ಕೆ ಪ್ರತಿಯಾಗಿ ಮನುಷ್ಯನು ದೇವರನ್ನು ಹುಡುಕಬೇಕು. ಯಾರು ತೆರೆದ ಮನಸ್ಸಿನಿಂದ, ಮನುಷ್ಯತ್ವದಿಂದ, ಪ್ರೀತಿ, ಪ್ರೇಮ, ಪ್ರಾಮಾಣಿಕತೆಯಿಂದ ದೇವರನ್ನು ಹುಡುಕುತ್ತಾರೋ ಅವರಿಗೆ ದೇವರು ಸಿಗುತ್ತಾನೆ. ಮರಿಯ ಹಾಗೂ ಜೋಸೆಫ್ ದಂಪತಿಯ ಬಾಳು ಅದರ್ಶವಾಗಿದ್ದರಿಂದ ಅವರ ಕುಟುಂಬದಲ್ಲಿ ಯೇಸು ಹುಟ್ಟಿದರು. ಅವರು ಯೇಸುವಿಗೆ ಜನ್ಮ ನೀಡಲು ಬೆತ್ಲೆಹೆಮ್ ಊರಿನಲ್ಲಿ ಜಾಗ ಹುಡುಕಿದರು. ಛತ್ರದಲ್ಲಿ ಅವರಿಗೆ ಸ್ಥಳ ಸಿಗದೆ ಇದ್ದುದರಿಂದ ಯೇಸು ಗೋದಲಿಯಲ್ಲಿ ಹುಟ್ಟಬೇಕಾಯಿತು. ಇಂದು ಪ್ರಭು ಯೇಸು ಯಾವುದೋ ಒಂದು ಸ್ಥಳದಲ್ಲಿ ಹುಟ್ಟುವುದಿಲ್ಲ. ಪ್ರೀತಿಯ ಹೃದಯ, ಸಮಾಧಾನದ ಕುಟುಂಬ, ಸ್ಪಂದಿಸುವ ನೆರೆಕರೆ, ಐಕ್ಯತೆಯ ಸಮಾಜ ಮತ್ತು ಸುಂದರ ಪ್ರಕೃತಿಯೇ ಯೇಸುವಿನ ಜನ್ಮಸ್ಥಳ. ನಾನು ಪರರನ್ನು ನನ್ನಂತೆ ಕಂಡಾಗ ದೇವರು ನನ್ನಲ್ಲಿ ಹುಟ್ಟುವರು. ಯೇಸು ಎಲ್ಲವೂ ಇದ್ದ ಕಡೆ ಅಂದರೆ ದಬ್ಬಾಳಿಕೆ, ಅಧಿಕಾರದ ದುರಾಸೆ, ಕೂಡಿಟ್ಟ ಶ್ರೀಮಂತಿಕೆಯಲ್ಲಿ ಹುಟ್ಟುವುದಿಲ್ಲ. ಅವರ ಹುಟ್ಟು, ಕೊರತೆ-ನ್ಯೂನತೆ ಇರುವಲ್ಲಿ ಸಮೃದ್ಧಿ ಮತ್ತು ಪರಿಪೂರ್ಣತೆಯನ್ನು ತರುತ್ತದೆ.
ಕುರಿಮಂದೆಗಳನ್ನು ಕಾಯುತ್ತಿದ್ದ ಸಾಮಾನ್ಯ ಕುರುಬರಿಗೂ ಬಾಲಯೇಸುವಿನ ದರ್ಶನವಾಯಿತು. ಅವರು ಲೋಕೊದ್ಧಾರಕ ಯೇಸುವನ್ನು ಹುಡುಕಿದರು. ಗೋದಲಿಯಲ್ಲಿ ಪಶುಪ್ರಾಣಿಗಳ ನಡುವೆ ಮಲಗಿದ ಯೇಸುವನ್ನು ಕಂಡು ಆನಂದದಿಂದ ನಲಿದರು. ಪೂರ್ವ ದಿಕ್ಕಿನಿಂದ ನಕ್ಷತ್ರದ ಬೆಳಕನ್ನು ನೋಡುತ್ತಾ ಹುಡುಕುತ್ತಾ ಬಂದ ಪಂಡಿತರು ಮರಿಯಳ ಮಗುವನ್ನು ಕಂಡು ಆರಾಧಿಸಿದರು. ಆದರೆ ಜುದೇಯ ನಾಡಿನ ಅರಸ ಹೆರೋದನಿಗೆ ಮಾತ್ರ ಯೇಸು ಕಾಣಸಿಗಲಿಲ್ಲ ಎಂಬುದು ವಿಪರ್ಯಾಸವೇ ಸರಿ. ಏಕೆಂದರೆ, ಅಧಿಕಾರದ ದರ್ಪ, ಸ್ಥಾನಮಾನದ ನಂಟು ಅವನನ್ನು ಬಿಡಲಿಲ್ಲ. ಅವನ ಲೋಭದಿಂದ ಬೆತ್ಲೆಹೆಮ್ ಸುತ್ತಮುತ್ತಲ ಮುಗ್ಧ ಕೂಸುಗಳ ಕಗ್ಗೊಲೆಯಾಯಿತು. ಯೇಸು ಹುಟ್ಟಿದಾಗ ‘ದೂರ ಉಳಿದವರು’ ಸನಿಹಕ್ಕೆ ಬಂದರು. ಆದರೆ ‘ಹತ್ತಿರದಲ್ಲಿ ಇದ್ದವರು’ ದೂರವಾದರು.
ಕಥೊಲಿಕ್ ಧರ್ಮಸಭೆಯ ಪರಮಗುರು ಪೋಪ್ ಫ್ರಾನ್ಸಿಸ್ ಅಕ್ಟೋಬರ್ 2020ರಲ್ಲಿ, ಭ್ರಾತೃತ್ವ ಹಾಗೂ ಸಾಮಾಜಿಕ ಮೈತ್ರಿಯ ಬಗ್ಗೆ ‘ನಾವೆಲ್ಲರೂ ಸಹೋದರ-ಸಹೋದರಿಯರು’ (ಫ್ರಾತೆಲ್ಲಿ ತುತ್ತಿ) ಎಂಬ ವಿಶ್ವಪತ್ರವನ್ನು ನೀಡಿದ್ದಾರೆ. ಇದರಲ್ಲಿ ನಾವು ನಮ್ಮ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಇವೆಲ್ಲವುಗಳ ಎಲ್ಲೆ ಮೀರಿ ಎಲ್ಲರನ್ನು ಪ್ರೀತಿಸಲು, ದ್ವೇಷ, ಹಗೆತನ, ಭೇದಭಾವ ತೊರೆದು ಸಂವಾದ, ಸಂಪರ್ಕ, ಸಂಬಂಧ ಬೆಳೆಸಲು, ಒಟ್ಟಾಗಿ ಬಾಳಲು, ವಿಶ್ವಮಾನವರಾಗಲು ಕರೆಯಿದೆ.
ದೇವರು ನರನಾಗಿ ಬಂದಾಗ ಜಗತ್ತಿನಲ್ಲಿ ಹೊಸ ಬೆಳಕು ಮೂಡಿತು, ಅಂಧಕಾರವು ತೊಲಗಿತು. ಕ್ರಿಸ್ತ ಜಯಂತಿ ಶಾಂತಿ, ಏಕತೆ, ಭರವಸೆಯ ಬಾಳಿಗೆ ನಾಂದಿಯಾಯಿತು. ಯೇಸುಕ್ರಿಸ್ತನ ಬಾಳು, ಹಿತನುಡಿ ಹಾಗೂ ಕೃಪೆ ಕಷ್ಟ-ಬಾಧೆಯಿಂದ ನರಳುವ ಮನುಕುಲಕ್ಕೆ ಸಂತೋಷದಿಂದ ಇರಲು ಪ್ರೇರೇಪಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.