ADVERTISEMENT

ಇಂದು ಆಷಾಢ ಶುಕ್ರವಾರ- ಲಕ್ಷ್ಮೀ: ಅಂತರಂಗದ ಶ್ರೀ

ಎಸ್.ಸೂರ್ಯಪ್ರಕಾಶ ಪಂಡಿತ್
Published 29 ಜುಲೈ 2021, 19:30 IST
Last Updated 29 ಜುಲೈ 2021, 19:30 IST
ಲಕ್ಷ್ಮೀ
ಲಕ್ಷ್ಮೀ   

ಆಷಾಢಮಾಸದ ಶುಕ್ರವಾರಗಳಂದು ಲಕ್ಷ್ಮಿಯನ್ನು ಪೂಜಿಸುವ ವಾಡಿಕೆಯುಂಟು. ಕೆಲವರ ಪಾಲಿಗೆ ಆಷಾಢದಲ್ಲಿ ಯಾವುದೇ ಶುಭಕಾರ್ಯಗಳನ್ನು ನಡೆಸಲು ಹಿಂಜರಿಕೆ. ಆದರೆ ಲಕ್ಷ್ಮಿಪೂಜೆಯನ್ನು ಮಾತ್ರ ಎಲ್ಲರೂ ಧೈರ್ಯವಾಗಿಯೇ ಆಚರಿಸಬಹುದೆನ್ನಿ! ಏಕೆಂದರೆ ಎಲ್ಲರಿಗೂ ಲಕ್ಷ್ಮಿಯ ಅನುಗ್ರಹ ಬೇಕೇ ಬೇಕು, ಅಲ್ಲವೆ?

ನಮ್ಮಲ್ಲಿ ಲಕ್ಷ್ಮೀ ಎಂದ ಕೂಡಲೇ ಗಮನ ಒಂದೇ ಕಡೆಗೆ ಹೋಗುತ್ತದೆ; ಅದೇ ದುಡ್ಡು, ಸಂಪತ್ತು. ಆದರೆ ಲಕ್ಷ್ಮೀ ಎಂದರೆ ಅಷ್ಟು ಮಾತ್ರವೇ ಅಲ್ಲ, ಜೀವನಕ್ಕೆ ಒದಗುವ ಎಲ್ಲ ಬಗೆಯ ಸಂಪತ್ತು ಕೂಡ ಅವಳ ಸ್ವರೂಪವೇ ಹೌದು. ಲಕ್ಷ್ಮೀತತ್ತ್ವವನ್ನು ಈ ಶ್ಲೋಕವೊಂದು ಸೊಗಸಾಗಿ ನಿರೂಪಿಸುತ್ತದೆ:

ವಕ್ತ್ರಾಬ್ಜೇ ಭಾಗ್ಯಲಕ್ಷ್ಮೀಃ ಕರತಲಕಮಲೇ ಸರ್ವದಾ ಧ್ಯಾನಲಕ್ಷ್ಮೀಃ

ADVERTISEMENT

ದೋರ್ದಂಡೇ ವೀರಲಕ್ಷ್ಮೀಃ ಹೃದಯಸರಸಿಜೇ ಭೂತಕಾರುಣ್ಯಲಕ್ಷ್ಮೀಃ

ಖಡ್ಗಾಗ್ರೇ ಶೌರ್ಯಲಕ್ಷ್ಮೀಃ ನಿಖಿಲಗುಣಗಣಾಡಂಬರೇ ಕೀರ್ತಿಲಕ್ಷ್ಮೀಃ

ಸರ್ವಾಂಗೇ ಸೌಮ್ಯಲಕ್ಷ್ಮೀಃ ಸಪದಿ ಭವತು ಮೇ ಧರ್ಮಮೋಕ್ಷಾರ್ಥಸಿದ್ಧೇ

‘ನನ್ನ ಮುಖಕಮಲವನ್ನು ಭಾಗ್ಯಲಕ್ಷ್ಮಿಯೂ ಕರಕಮಲದಲ್ಲಿ ಧಾನ್ಯಲಕ್ಷ್ಮಿಯೂ ತೋಳುಗಳಲ್ಲಿ ವೀರಲಕ್ಷ್ಮಿಯೂ ಹೃದಯಕಮಲದಲ್ಲಿ ಭೂತದಯಾಲಕ್ಷ್ಮಿಯೂ ಖಡ್ಗದ ತುದಿಯಲ್ಲಿ ಶೌರ್ಯಲಕ್ಷ್ಮಿಯೂ ಎಲ್ಲ ಗುಣಗಳನ್ನು ಅಭಿವ್ಯಕ್ತಿಸುವಾಗ ಕೀರ್ತಿಲಕ್ಷ್ಮಿಯೂ ಎಲ್ಲ ಅಂಗಗಳಲ್ಲಿಯೂ ಸೌಮ್ಯಲಕ್ಷ್ಮಿಯೂ ನನಗೆ ಒಡನೆ ಒದಗಲಿ; ಅಲ್ಲೆಲ್ಲ ಸದಾ ನೆಲಸುವಂತಾಗಲಿ; ಅವುಗಳಿಂದ ಧರ್ಮವೂ ಮೋಕ್ಷವೂ ಸಿದ್ಧಿಸಲಿ‘ ಎಂಬುದು ಈ ಶ್ಲೋಕದ ತಾತ್ಪರ್ಯ.

ನಮ್ಮ ವ್ಯಕ್ತಿತ್ವಕ್ಕೆ ಬೇಕಾದ ಎಲ್ಲ ವಿಧದ ಏಳಿಗೆಯನ್ನೂ ಸಂಪತ್ತನ್ನೂ ಲಕ್ಷ್ಮಿಯಲ್ಲಿ ಕಂಡಿರುವುದು ಇಲ್ಲಿ ಎದ್ದುಕಾಣುವ ವಿವರ. ಇಹಕ್ಕೂ ಪರಕ್ಕೂ ಬೇಕಾದ ಸಂಪತ್ತೆಲ್ಲವನ್ನೂ ನೀಡುವವಳು ಅವಳೇ ಎಂಬುದು ಇಲ್ಲಿಯ ನಿಲವು. ನಮ್ಮ ಎಲ್ಲ ಬಯಕೆಗಳನ್ನು, ಎಂದರೆ ಕಾಮವನ್ನು, ಪೂರೈಸಿಕೊಳ್ಳಲು ಬೇಕಾಗುವ ಸಾಧನಗಳೆಲ್ಲವನ್ನೂ, ಎಂದರೆ ಅರ್ಥವನ್ನು ದಯಪಾಲಿಸುವವಳು ಅವಳೇ; ಅದನ್ನು ಸರಿಯಾದ ದಾರಿಯಲ್ಲಿ ವಿನಿಯೋಗಿಸಿಕೊಳ್ಳುವಂಥ ಬುದ್ಧಿಯನ್ನು, ಎಂದರೆ ಧರ್ಮವನ್ನು ಎಚ್ಚರಿಸುವವಳೂ ಅವಳೇ. ಹೀಗೆ ಅವಳು ಲೌಕಿಕ ಸುಖ–ಸಂತೋಷಗಳಿಗೆ ಮಾತ್ರವೇ ಒಡತಿಯಲ್ಲ; ಅವಳು ಅಲೌಕಿಕ ಆನಂದ, ಎಂದರೆ ಮೋಕ್ಷಕ್ಕೂ ಕಾರಣಳು. ಹೀಗಾಗಿ ನಾವು ಮೊದಲಿಗೆ ಲಕ್ಷ್ಮೀತತ್ತ್ವವನ್ನು ನಮ್ಮ ಸಂಕುಚಿತ ವ್ಯಾಖ್ಯಾನದಿಂದ ಬಿಡುಗಡೆಗೊಳಿಸಬೇಕಾಗಿದೆ!

ಅಷ್ಟಲಕ್ಷ್ಮಿಗಳು ಎಂಬ ಎಣಿಕೆಯೂ ಉಂಟು; ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿದ್ಯಾಲಕ್ಷ್ಮೀ, ಶೌರ್ಯಲಕ್ಷ್ಮೀ, ಕೀರ್ತಿಲಕ್ಷ್ಮೀ, ಸೌಮ್ಯಲಕ್ಷ್ಮೀ ಮತ್ತು ವಿಜಯಲಕ್ಷ್ಮೀ. ಇಲ್ಲೂ ಕೂಡ ಲಕ್ಷ್ಮೀತತ್ತ್ವದ ವೈಶಾಲ್ಯವೇ ಅಡಗಿರುವಂಥಧ್ದು. ವಿದ್ಯೆಗೂ ಅವಳೇ ದೇವತೆ; ಕೀರ್ತಿಗೂ ಅವಳೇ ದೇವತೆ. ಹೀಗೆಲ್ಲ ಸೂಚಿಸುವುದರಲ್ಲೂ ಸ್ವಾರಸ್ಯವುಂಟು. ನಾವು ಕೇವಲ ‘ಹಣ’ವನ್ನು ಮಾತ್ರವೇ ಸಂಪತ್ತು, ಲಕ್ಷ್ಮೀ ಎಂದು ತಿಳಿದುಕೊಂಡಿರುತ್ತೇವೆ. ಆದರೆ ನಮ್ಮ ವಿದ್ಯೆ, ಶೌರ್ಯ, ಕೀರ್ತಿ, ನೆಮ್ಮದಿ – ಇವೆಲ್ಲವೂ ಸಂಪತ್ತುಗಳೇ ಹೌದು. ಸಂತಾನವನ್ನೂ ಲಕ್ಷ್ಮೀ ಎಂದೇ ಇಲ್ಲಿ ಸಮೀಕರಿಸಲಾಗಿದೆ. ನಮ್ಮ ಒಳ್ಳೆಯ ಮಕ್ಕಳು ನಮಗೆ ಸಂಪತ್ತು ಅಲ್ಲದೆ ಮತ್ತೇನು?

‘ಲಕ್ಷ್ಮೀ’ ಎಂದರೆ ಎಲ್ಲವನ್ನೂ ಯಾವಾಗಲೂ ನೋಡುತ್ತಿರುವವಳು ಎಂದು ಅರ್ಥಮಾಡುತ್ತಾರೆ, ವಿದ್ವಾಂಸರು (ಲಕ್ಷಯತಿ ಸರ್ವಂ ಸದಾ ಇತಿ ಲಕ್ಷ್ಮೀಃ). ನಮ್ಮ ಜೀವನದ ಪ್ರತಿ ಕ್ಷಣವೂ ಲಕ್ಷ್ಮಿಯ ನೋಟದ ವ್ಯಾಪ್ತಿಯಲ್ಲೇ ಇದೆ ಎಂದಾಯಿತು. ಹೀಗಾಗಿ ಪ್ರತಿ ಕ್ಷಣವೂ ನಾವು ಎಚ್ಚರದಿಂದ ಹೆಜ್ಜೆ ಇಡಬೇಕು; ಧರ್ಮಮಾರ್ಗದಲ್ಲಿ ನಡೆಯಬೇಕು; ಈ ಮಾರ್ಗದಲ್ಲಿ ನಮ್ಮ ವಿದ್ಯೆ–ವಿನಯಗಳನ್ನೂ ಮನೆ–ಮಕ್ಕಳನ್ನೂ ದೇಹ–ಬುದ್ಧಿಗಳನ್ನೂ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬೇಕು. ಆಗ ಅವಳ ನೋಟ ನಮ್ಮ ಕಡೆಗೆ ಪ್ರಸನ್ನವಾಗುತ್ತದೆ; ಅವಳ ನೋಟದಿಂದ ನಮ್ಮ ಜೀವನವೇ ಸಂತೋಷ–ನೆಮ್ಮದಿಗಳ ಸಂಪತ್ತಿನಿಂದ ತುಂಬುತ್ತದೆ. ಹೀಗಾಗಿ ನಮ್ಮ ಅಂತರಂಗದಲ್ಲಿ ಲಕ್ಷ್ಮೀತತ್ತ್ವ ನೆಲೆಗೊಂಡರೆ ಆಗ ನಮ್ಮ ಬಾಹ್ಯಪ್ರಪಂಚದ ಎಲ್ಲ ಕಡೆಗಳಲ್ಲೂ ಅವಳೇ ಕಾಣಿಸಿಕೊಳ್ಳುತ್ತಾಳೆ. ಇಂದು ಜಗತ್ತಿಗೇ ಬೇಕಾದ ಸಂಪತ್ತು ಎಂದರೆ ಅದು ಆರೋಗ್ಯವೇ ಹೌದು. ಅದಕ್ಕೂ ಒಡತಿ ಲಕ್ಷ್ಮೀಯೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.